ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಯಾಮೊಹಲ್ಲಾದಲ್ಲಿ ನೋವಿನ ಮಡುವು

Last Updated 20 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಗುಲ್ಬರ್ಗ: ಈ ದೋಣಿ ದುರಂತ ಸಂಭವಿಸದೆ ಇದ್ದರೆ ಇನ್ನೆರಡು ತಿಂಗಳಲ್ಲಿ ಸನಾ ಮತ್ತು ಶಮಾ ನಿಖಾ ಮುಗಿಸಿ ನಸುನಗುತ್ತಲೇ ಪತಿ ಮನೆ ಸೇರುತ್ತಿದ್ದರು. ಅರ್ಧ ಶತಮಾನದಿಂದ ಗುಲ್ಬರ್ಗದ ಹಲವು ಕುಟುಂಬಗಳನ್ನು ಸುರಕ್ಷಿತವಾಗಿ ಮನೆ ಸೇರಿಸುತ್ತಿರುವ ಟಾಂಗಾವಾಲಾ ಶರ್ಫೋದ್ದೀನ್ ತನ್ನಿಬ್ಬರು ಹೆಣ್ಣು ಮಕ್ಕಳು ಹಾಗೂ ಮೂರನೇ ಮಗಳ ಗಂಡನನ್ನು ಕಳೆದುಕೊಳ್ಳುತ್ತಿರಲಿಲ್ಲ.

ಗುಲ್ಬರ್ಗ ಹೊರವಲಯದ ಖಾಜಾ ಕೋಟನೂರ ಕೆರೆಯಲ್ಲಿ ವಿಹಾರ ನಡೆಸುತ್ತಿದ್ದ ವೇಳೆ ಸಣ್ಣ ದೋಣಿ ಮುಳುಗಿ ಮೃತಪಟ್ಟ 9 ಸಮೀಪದ ಸಂಬಂಧಿಗಳ ನೆಲೆಯಾದ ಮೋಮಿನ್‌ಪುರದ ನಯಾ ಮೊಹಲ್ಲಾದ ಬಡಾವಣೆಯಲ್ಲಿ ಶನಿವಾರ ದುಃಖ ಮಡುಗಟ್ಟಿತ್ತು. ಇಲ್ಲಿನ ಕುಟುಂಬಗಳು ರಜೆ ಇದ್ದಾಗ ವಿಹಾರಕ್ಕೆ ಹೋಗುವುದು ಸಾಮಾನ್ಯ. ಆದರೆ ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ಬುತ್ತಿಕಟ್ಟಿಕೊಂಡು ತಮ್ಮದೇ ರಿಕ್ಷಾ-ಟ್ಯಾಕ್ಸಿ ಏರಿದ ಹಲವರು ಮರಳಿ ಮನೆಗೆ ಬರಲೇ ಇಲ್ಲ. 

ಆರು ವರ್ಷಗಳಷ್ಟು ಹಿಂದೆಯೇ ಸೂಪರ್ ಮಾರ್ಕೆಟ್‌ನಲ್ಲಿ ನಡೆದ ಅಪಘಾತದಲ್ಲಿ ಚಾಲಕ ಸೊಹೈಲ್ ಮೃತಪಟ್ಟಿದ್ದರು. ಅವರ ಪತ್ನಿ ಉರುನ್ನೀಸಾ ಬೇಗಂ ದುರಂತದಲ್ಲಿ ಮಡಿದ ಕಾರಣ ಮುದ್ದು ಮಗಳು ಅನಾಥಳಾಗಿದ್ದಳು. ಬದುಕಿನ ಕಷ್ಟಗಳ ನಡುವೆಯೂ ಮದುವೆ, ನಿಶ್ಚಿತಾರ್ಥ, ಬರಲಿದ್ದ ಬಕ್ರೀದ್, ಉರುಸ್...  ಸಂಭ್ರಮದಲ್ಲಿ ಇರುತ್ತಿದ್ದ ಗುಲ್ಬರ್ಗದ ಮೋಮಿನ್‌ಪುರ ನಯಾ ಮೊಹಲ್ಲಾದ `ಟಾಂಗಾವಾಲಾ~ ಕುಟುಂಬಗಳು ಶನಿವಾರ ನೋವಿನ ಮಡುವಿನಲ್ಲಿ ಮುಳುಗಿದ್ದವು. `ಚಾಲನಾ ವೃತ್ತಿ~ಯನ್ನೇ ಜೀವನಕ್ಕೆ ಅವಲಂಬಿಸಿದ ಕುಟುಂಬಗಳ ಈ ಬಡಾವಣೆಯಲ್ಲಿ ಇಂದು `ಚಲನೆ~ಯೇ ನಿಂತು ಹೋದಂತಿತ್ತು.

ಮೃತರು: ಶರ್ಫೋದ್ದೀನ್ ಮಗಳಂದಿರಾದ ಅನೀಸಾ ಬೇಗಂ (25) ಮತ್ತು ಬಿಲ್ಕೀಸ್ ಭಾನು (24), ಅಳಿಯ ನಾಸೀರ್ ಖಾನ್ (35), ನಿಶ್ಚಿತಾರ್ಥ ನಡೆದಿದ್ದ ಸನಾ ಫಾತಿಮಾ (18) ಮತ್ತು ಶಮಾ (18) ಅವರಲ್ಲದೆ ಉರುನ್ನೀಸಾ (40), ರೆಹನಾ ಬೇಗಂ (40), ಅಸ್ರಾ ಬೇಗಂ (14) ಮತ್ತು ಮದ್ಹಮ್ ಖಾಮಿಯಾ (4) ದುರಂತದಲ್ಲಿ ಮೃತಪಟ್ಟವರು. ಮೃತರ ಕುಟುಂಬಕ್ಕೆ ಸರ್ಕಾರ ತಲಾ 1.5 ಲಕ್ಷ ರೂಪಾಯಿ ಘೋಷಿಸಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT