ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರ ವಿಕಾರಕ್ಕೆ ಆಯುರ್ವೇದ ಚಿಕಿತ್ಸೆ

Last Updated 23 ಮಾರ್ಚ್ 2011, 19:30 IST
ಅಕ್ಷರ ಗಾತ್ರ

ಕಾರವಾರ: ನೋವಿನ ನರಕಯಾತನೆಯಿಂದ ಅವರಿಗೆ ಬದುಕೇ ಸಾಕಾಗಿ ಹೋಗಿತ್ತು. ಒಂದೊಂದು ಹೆಜ್ಜೆ ಇಟ್ಟಾಗಲೂ ಸಹಿಸಲಸಾಧ್ಯ ನೋವು ಅವರ ಜೀವವನ್ನು ಹಿಂಡಿ ಹಿಪ್ಪೆ ಮಾಡಿತ್ತು. ಸ್ನಾಯು ವಿಕಾರ (ಪ್ರೊಗ್ರೆಸಿವ್ ನ್ಯೂರೊ ಮಸ್ಕ್ಯೂಲರ್ ಡಿಸೀಸ್) ಕಾಯಿಲೆಯಿಂದ ಸಾಗರದ ಸಾಗರ ಗಂಗೋತ್ರಿ ಬಿಇಡಿ ಕಾಲೇಜಿನ ಪ್ರಾಚಾರ್ಯ ಎ.ಪಿ. ನಾರಾಯಣಪ್ಪ ಅನುಭವಿಸಿದ ಯಾತನೆ ಅಷ್ಟಿಷ್ಟಲ್ಲ.

ಇದ್ದಕ್ಕಿದ್ದಂತೆ ನಾರಾಯಣಪ್ಪ ಅವರಲ್ಲಿ ಈ ಕಾಯಿಲೆ ಕಂಡುಬಂತು. ಸ್ಥಳೀಯ ವೈದ್ಯರ ಬಳಿ ಚಿಕಿತ್ಸೆಗೆ ಹೋದರು. ಕಾಯಿಲೆ ಯಾವುದು ಎನ್ನುವುದು ಸರಿಯಾಗಿ ಪತ್ತೆ ಆಗದೇ ಇದ್ದಿದ್ದರಿಂದ ಅವರ ಚಿಕಿತ್ಸೆ ಫಲಕಾರಿಯಾಗಿರಲಿಲ್ಲ. ನೋವು ಮತ್ತಷ್ಟು ಜಾಸ್ತಿಯಾಗ ತೊಡಗಿತು. ನಂತರ ಶಿವಮೊಗ್ಗದ ನರರೋಗ ತಜ್ಞರ ಬಳಿ ಬಂದು ಚಿಕಿತ್ಸೆ ಪಡೆದರು. ಆದರೂ ದೇಹಸ್ಥಿತಿಯಲ್ಲಿ ಯಾವುದೇ ಬದಲಾವಣೆ ಕಂಡುಬರಲಿಲ್ಲ. ದಿನಕಳೆದಂತೆ ನೋವು ಜಾಸ್ತಿಯಾಗುತ್ತಿತ್ತು. ನೈಸರ್ಗಿಕ ಚಟುವಟಿಕೆಗಳಿಗೂ ಬೇರೆಯವರನ್ನು ಅವಲಂಬಿಸುವ ಸ್ಥಿತಿ ನಿರ್ಮಾಣವಾಯಿತು.ಮಾಂಸಖಂಡಗಳೆಲ್ಲ ಸವೆಯುತ್ತಿತ್ತು. ಸಂಪೂರ್ಣ ನಿತ್ರಾಣ ಸ್ಥಿತಿಗೆ ಅವರು ತಲುಪಿದ್ದರು. ತಮಗೆ ಬಂದ ಸ್ಥಿತಿಯನ್ನು ನೋಡಿ ಕಂಗಾಲಾದರು.

ಚಿಕಿತ್ಸೆ ಪಡೆಯಲು ಬೆಂಗಳೂರಿಗೆ ಹೆಸರಾಂತ ನರರೋಗ ತಜ್ಞರ ಬಳಿ ಹೋದರು. ಎಮ್‌ಆರ್‌ಐ ಸ್ಕ್ಯಾನಿಂಗ್ ಮಾಡಿ ಕಾಯಿಲೆಯ ಸ್ವರೂಪವನ್ನು ವೈದ್ಯರು ಪತ್ತೆ ಮಾಡಿ ಆಪರೇಷನ್ ಮಾಡಬೇಕು ಎನ್ನುವ ಸಲಹೆ ನೀಡಿದರು. ಈ ಆಪರೇಷನ್‌ನಿಂದ ಕಾಲುಗಳು ಸ್ವಾಧೀನ ಕಳೆದುಕೊಳ್ಳುವ ಸಾಧ್ಯತೆಯೂ ಇತ್ತು. ಒಟ್ಟಿನಲ್ಲಿ ನಾರಾಯಣಪ್ಪ ಅವರಿಗೆ ಕಾಣಿಸಿಕೊಂಡ ‘ನರ ವಿಕಾರ’ ಕಾಯಿಲೆಗೆ ಅಲೋಪಥಿಯಲ್ಲಿ ಪರಿಹಾರವೇ ಸಿಗಲಿಲ್ಲ.

‘ನಿಮಗೆ ಕಾಣಸಿಕೊಂಡ ಕಾಯಿಲೆಗೆ ಔಷಧವಿಲ್ಲ. ಮಾಂಸಖಂಡಗಳ ಸವಕಳಿ ಪ್ರಮಾಣ ಹೆಚ್ಚಾಗದಂತೆ ನೋಡಿಕೊಳ್ಳಿ’ ಎಂದು ನರರೋಗ ತಜ್ಞರು ಕೆಲವು ಸಲಹೆಗಳನ್ನು ನೀಡಿದರು. ಇದರಿಂದ ನಾರಾಯಣಪ್ಪ ಅವರು ಮತ್ತಷ್ಟು ಚಿಂತೆಗೊಳಗಾದರು. ನೋವು ಅನುಭವಿಸುವುದು ಬಿಟ್ಟರೆ ಬೇರೆ ದಾರಿಯೇ ಅವರಿಗಿರಲಿಲ್ಲ. ನಾರಾಯಣಪ್ಪ ಅವರ ದಯನೀಯ ಸ್ಥಿತಿಯಲ್ಲಿ ನೆರವಿಗೆ ಬಂದವರು ಕಾರವಾರ ಸರ್ಕಾರಿ ಆಯುರ್ವೇದ ಆಸ್ಪತ್ರೆಯ ವೈದ್ಯಾಧಿಕಾರಿ ಜಗದೀಶ ಯಾಜಿ. ಸಾಗರದಲ್ಲಿ ನಡೆದ ಆಯುರ್ವೇದ ಶಿಬಿರದಲ್ಲಿ ಪಾಲ್ಗೊಂಡಾಗ ನಾರಾಯಣಪ್ಪ ಶಿಬಿರಕ್ಕೆ ಬಂದು ತೊಂದರೆಯನ್ನು ಹೇಳಿಕೊಂಡಿದ್ದರು.

ಸ್ನಾಯು ಸವಕಳಿ ತುಂಬಾ ಆಗಿರುವುದರಿಂದ ತಕ್ಷಣವೇ ಚಿಕಿತ್ಸೆ ಅಗತ್ಯವಿದೆ ಎಂದು ಕಾರವಾರಕ್ಕೆ ಕರೆತಂದು ಯೋಗಬಸ್ತಿ ಪಂಚಕರ್ಮ, ನವರಕಿ, ಶ್ವೇಧಾ, ನಶ್ಯ ಹಾಗೂ ಧಾರಾ ಚಿಕಿತ್ಸೆ ನೀಡಿದರು. ಈ ಚಿಕಿತ್ಸೆ ಪಡೆದ ಮೂರೇ ತಿಂಗಳಲ್ಲಿ ನಾರಾಯಣಪ್ಪ ‘ನರ ವಿಕಾರ’ ಕಾಯಿಲೆಯಿಂದ ಚೇತರಿಸಿಕೊಂಡರು.ನೋವಿನಿಂದ ಮುಕ್ತಿ ಪಡೆದ ನಾರಾಯಣಪ್ಪ ಈಗ ಮೊದಲಿನಂತಾಗಿದ್ದಾರೆ. ಯಾರ ಸಹಾಯ ಇಲ್ಲದೆ ನಡೆಯುತ್ತಾರೆ. ಒಂದು ರೀತಿಯಲ್ಲಿ ಸಾವೇ ಗೆದ್ದ ಖುಷಿ ನಾರಾಯಣಪ್ಪ ಅವರದ್ದು.

‘ನರ ವಿಕಾರಕ್ಕೆ ಅಲೋಪಥಿಯಲ್ಲಿ ಇಲ್ಲದ ಚಿಕಿತ್ಸೆ ಆಯುರ್ವೇದದಿಂದ ಸಿಕ್ಕಿದೆ. ಇದರಿಂದಾಗಿ ನನ್ನ ಬಾಳಲ್ಲಿ ಹೊಸ ಚೈತನ್ಯ ಮೂಡಿದೆ. ನೋವು ನಿವಾರಕ ಮಾತ್ರೆಗಳನ್ನು ನುಂಗಿ ಸಾಕಾಗಿ ಹೋಗಿತ್ತು. ಆಯುರ್ವೇದ ನನಗೆ ಪುನರ್ಜನ್ಮ ನೀಡಿದೆ’ ಎಂದು ನಾರಾಯಣ ‘ಪ್ರಜಾವಾಣಿ’ಯೊಂದಿಗೆ ಸಂತಸ ಹಂಚಿಕೊಂಡರು. ‘ಕಾಯಿಲೆಗಳಲ್ಲಿ ಆಯುರ್ವೇದ ಚಿಕಿತ್ಸೆ ಇಲ್ಲ ಎನ್ನುವಂತಿಲ್ಲ. ಆಯುರ್ವೇದ ವೈದ್ಯರು ಪರಿಣಾಮಕಾರಿ ಚಿಕಿತ್ಸೆ ನೀಡಿದರೆ ಜನರು ಬರುತ್ತಾರೆ. ಆಯುರ್ವೇದ ಓದಿದವರು ಅಲೋಪಥಿ ಚಿಕಿತ್ಸೆ ನೀಡುವುದು ಸರಿಯಲ್ಲ’ ಎನ್ನುತ್ತಾರೆ ಡಾ. ಜಗದೀಶ ಯಾಜಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT