ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರಕ ಜೀವನಕ್ಕೆ ಮುಕ್ತಿ ತಂದ ಶಿಬಿರ

Last Updated 16 ಫೆಬ್ರುವರಿ 2011, 19:35 IST
ಅಕ್ಷರ ಗಾತ್ರ

ಬೆಂಗಳೂರು:  ಸುಟ್ಟ ಗಾಯಗಳಿಂದ ನರಕ ಜೀವನ ಅನುಭವಿಸುತ್ತಿದ್ದ ಹಲವು ಜೀವಗಳಿಗೆ ಮರುಜೀವ ನೀಡಿದ ಅಪೂರ್ವ ಕ್ಷಣವದು. ನಗರದ ಫ್ರೆಂಡ್ ವೆಲ್‌ಫೇರ್ ಆರ್ಗನೈಸೇಷನ್ ಸಂಸ್ಥೆಯು ಜರ್ಮನಿಯ ಇಂಟರ್ ಪ್ಲಾಸ್ಟ್ ಸಂಸ್ಥೆಯ ಜೊತೆಗೂಡಿ ಆಯೋಜಿಸಿದ್ದ  ಹತ್ತು ದಿನಗಳ ಉಚಿತ ಶಿಬಿರದಲ್ಲಿ ಇಂತಹ ಹಲವು ಕ್ಷಣಗಳು ಕಂಡುಬಂದವು. ಸುಟ್ಟಗಾಯಗಳಲ್ಲದೇ, ಸೀಳುತುಟಿಯಿಂದ ಬಳಲುತ್ತಿದ್ದವರಿಗೂ ಉಚಿತವಾಗಿ ಶಸ್ತ್ರಚಿಕಿತ್ಸೆ ನೆರವೇರಿಸಲಾಯಿತು.

ಶಿಬಿರಕ್ಕೆ ಸಹಕಾರ ನೀಡಿದ ಜರ್ಮನಿ ವೈದ್ಯರಿಗೆ ಫ್ರೆಂಡ್ ವೆಲ್‌ಫೇರ್ ಆರ್ಗನೈಸೇಷನ್ ಸಂಸ್ಥೆಯು ಬುಧವಾರ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಂಡಿತ್ತು. ಸಮಾರಂಭದಲ್ಲಿ ಮಾತನಾಡಿದ ಸಂಸ್ಥೆಯ ಜಿತೇಂದ್ರ ಮರಡಿಯರ್, ‘2002ರಿಂದ ಜರ್ಮನ್ ವೈದ್ಯರ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗುತ್ತಿರುವ ಶಿಬಿರ ಅಪಾರ ಜನಮನ್ನಣೆ ಗಳಿಸಿದೆ’ ಎಂದರು.
‘ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸಿದ ನೂರಕ್ಕೂ ಹೆಚ್ಚು ರೋಗಿಗಳಿಗೆ ಸೀಳುತುಟಿ ಹಾಗೂ ಸುಟ್ಟಗಾಯಗಳಿಗೆ ಚಿಕಿತ್ಸೆ ನೀಡಲಾಯಿತು.ಒಂದು ವರ್ಷದ ಮಗುವಿನಿಂದ ಹಿಡಿದು ಮಧ್ಯವಯಸ್ಕರರೂ ಇದರ ಪ್ರಯೋಜನ ಪಡೆದುಕೊಂಡರು. ಬಹುತೇಕ ರೋಗಿಗಳು ಬಡಕುಟುಂಬಗಳಿಗೆ ಸೇರಿದವರು’ ಎಂದರು. 

ಎಲ್ಲವೂ ಉಚಿತ: ‘ಶಸ್ತ್ರಚಿಕಿತ್ಸೆ ಅಷ್ಟೇ ಅಲ್ಲದೇ, ಶಿಬಿರದಲ್ಲಿ ಇರುವಷ್ಟು ದಿನಗಳವರೆಗೆ ಊಟ, ವಸತಿ, ಔಷಧಿ ಎಲ್ಲವನ್ನೂ ಉಚಿತವಾಗಿ ನೀಡಲಾಯಿತು. ಸಂಸ್ಥೆಯು ಶಿಬಿರ ನಡೆಸುತ್ತಿರುವುದು ಇದು 16ನೇ ಬಾರಿ’ ಎಂದು ಅವರು ಹೇಳಿದರು.

ಲಕ್ಷಾಂತರ ರೂಪಾಯಿ: ‘ಸುಟ್ಟಗಾಯಗಳಿಗೆ ಪ್ಲಾಸ್ಟಿಕ್ ಸರ್ಜರಿಗೆ ರೂ 40,000ದಿಂದ ಒಂದೂವರೆ ಲಕ್ಷವರೆಗೆ ವೆಚ್ಚ ತಗಲುತ್ತದೆ.  ಸೀಳುತುಟಿಗೆ ಶಸ್ತ್ರಚಿಕಿತ್ಸೆಯಾದರೆ ಕನಿಷ್ಠ ರೂ 25,000. ಇಷ್ಟೊಂದು ಹಣವನ್ನು ಬಡವರಿಗೆ ಭರಿಸಲಾಗದೆ ಹಾಗೆಯೇ ಉಳಿದುಬಿಡುತ್ತಾರೆ. ಇದರಿಂದಾಗಿ ಅವರು ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಹಿನ್ನಡೆ ಅನುಭವಿಸುತ್ತಾರೆ’ ಎಂದು ಫ್ರೆಂಡ್ ವೆಲ್‌ಫೇರ್ ಆರ್ಗನೈಸೇಷನ್ ಸಂಸ್ಥೆಯ ಪದಾಧಿಕಾರಿ ಶರತ್ ಶಹಾ ಹೇಳಿದರು.

ಸ್ಟೌ ಸ್ಫೋಟದಿಂದ ಗಾಯಗೊಂಡ ಬೆಂಗಳೂರಿನ ಕೆಂಗೇರಿ ನಿವಾಸಿ 21 ವರ್ಷದ ವಸಂತ ಕುಮಾರಿ, ಜಾತ್ರೆಯಲ್ಲಿ ನಡೆದ ಆಕಸ್ಮಿಕವೊಂದರಲ್ಲಿ ಗಾಯಗೊಂಡ ಚಿಕ್ಕಮಗಳೂರಿನ ಪ್ರೇಮಾ, ಬಿಸಿನೀರಿನಲ್ಲಿ ಬಿದ್ದು ತೀವ್ರವಾಗಿ ಗಾಯಗೊಂಡ ಬನಹಟ್ಟಿಯ 13 ವರ್ಷದ ಕೀರ್ತಿ ಹೊಸಮನಿ, ಸೇರಿದಂತೆ ಹುಟ್ಟಿನಿಂದಲೇ ಸೀಳುತುಟಿ ಹೊಂದಿದ ಹಲವು ಜನರು ಶಿಬಿರದ ಪ್ರಯೋಜನ ಪಡೆದುಕೊಂಡಿದ್ದಾರೆ.

ಪ್ಲಾಸ್ಟಿಕ್ ಸರ್ಜರಿ: ಜರ್ಮನಿಯಲ್ಲಿ ಎಲ್ಲರೂ ಆರೋಗ್ಯ ವಿಮೆ ಮಾಡಿಸಿರುವುದರಿಂದ ಉತ್ತಮ ಆರೋಗ್ಯ ಸೇವೆ ಪಡೆದುಕೊಳ್ಳುತ್ತಾರೆ. ಸುಟ್ಟಗಾಯದಿಂದ ಚರ್ಮ ಸುಕ್ಕು ಕಟ್ಟಿರುವ ಪ್ರಕರಣಗಳು ಕಾಣುವುದೇ ಇಲ್ಲ. ಸುಟ್ಟಗಾಯಗಳಾದರೆ ತಕ್ಷಣ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಳ್ಳುತ್ತಾರೆ. ಆದರೆ, ಭಾರತದಲ್ಲಿ ಬಡವರು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಹಾಗೂ ಆರೋಗ್ಯ ವಿಮಾ ಸೌಲಭ್ಯವನ್ನು ಪಡೆಯದಿರುವುದರಿಂದ ಇಂತಹ ಪ್ರಕರಣಗಳು ಹೆಚ್ಚಾಗಿ ಕಾಣಿಸುತ್ತವೆ’ ಎಂದು ಜರ್ಮನಿಯ ತಜ್ಞ ಡಾ. ಹುಬರ್‌ಟಸ್ ಟಿಲ್ಕೊರ್ನ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT