ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರಕಾಸುರನ ಸಂಹಾರ

Last Updated 23 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ದೀಪಾವಳಿ ಹಬ್ಬಕ್ಕೆ ಅನೇಕ ಪೌರಾಣಿಕ ಹಿನ್ನೆಲೆಗಳು ಇವೆ. ಅವುಗಳಲ್ಲಿ ಶ್ರೀಕೃಷ್ಣ ನರಕಾಸುರನನ್ನು ಸಂಹರಿಸಿದ ಘಳಿಗೆಯೂ ಪ್ರಮುಖವಾದದು.

 ಶ್ರೀಮನ್ನಾರಾಯಣನು ವರಹಾವತಾರವನ್ನೆತ್ತಿ ಭೂಮಿಯನ್ನು ಉದ್ಧರಿಸಿದ ಬಳಿಕ ಅವನ ಶರೀರದಿಂದ ಬಿದ್ದ ಒಂದು ತೊಟ್ಟು ಬೆವರು ಅಸುರಾಕೃತಿ ಪಡೆಯಿತು. ಅದೇ ನರಕಾಸುರನಂತೆ.

ಆತ ಪ್ರಾಗ್ಜೋತಿಷಪುರವೆಂಬ ಪಟ್ಟಣಕ್ಕೆ ದೊರೆಯಾಗಿ ದೇವತೆಗಳಿಗೆ ತೊಂದರೆ ಕೊಡಲು ಆರಂಭಿಸಿದ. ವರುಣನ ಛತ್ರವನ್ನು ಅಪಹರಿಸಿ, ಅಲ್ಲಿಗೆ ಸಹಸ್ರಾರು ದೇವ, ಸಿದ್ಧ, ಅಪ್ಸರೆಯರನ್ನು, ಬ್ರಹ್ಮನ ಮಗಳಾದ ಚತುದರ್ಶಿಯನ್ನು ಕರೆದೊಯ್ದ. ಲೋಕಕ್ಷೇಮಕ್ಕಾಗಿ ಅವತರಿಸಿದ ಶ್ರೀಕೃಷ್ಣ ಇವನ ಉಪಟಳವನ್ನು ಕೊನೆಗಾಣಿಸುತ್ತಾನೆ.

ನರಕಾಸುರನನ್ನು ಕೊಂದಿದ್ದು ಅಶ್ವಯುಜ ಕೃಷ್ಣ ಚತುದರ್ಶಿಯ ಕಗ್ಗತ್ತಲಿನಲ್ಲಿ.  ನರಕಾಸುರನ ತಾಯಿಯ ಕೋರಿಕೆ ಮೇರೆಗೆ ನರಕಾಸುರನನ್ನು ಎಲ್ಲರೂ ನೆನಪಿಸಿಕೊಳ್ಳಲಿ ಎಂದು ಶ್ರೀಕೃಷ್ಣ ಈ ಹಬ್ಬವನ್ನು ಸ್ಥಾಯಿಗೊಳಿಸಿದ ಎಂಬ ಪ್ರತೀತಿ ಇದೆ. ಅಂದು ನರಕಾಸುರನ ಆತ್ಮಕ್ಕೆ ಶಾಂತಿ ಕೋರಿ ದೀಪ ಹಚ್ಚಲಾಗುತ್ತದೆ. ಆ ದಿನದ ನೆನಪೇ ನರಕ ಚತುದರ್ಶಿ.

ಪುರಾಣಗಳಲ್ಲಿ ಬರುವ ಈ ನರಕಾಸುರನ ಕಥೆ ಧ್ವನಿಸುವ ಅರ್ಥ ಗಹನವಾಗಿದೆ. ನರಕಾಸುರನೆಂದರೆ ನರಕಕ್ಕೆ ಎಳೆದೊಯ್ಯುವ ರಕ್ಕಸ ಪ್ರವೃತ್ತಿ ಎಂದು. ನೈತಿಕ ಭಯವಿಲ್ಲದಿದ್ದರೆ ನರಕವೇ ಗತಿ.
 
ಚತುದರ್ಶಿಯೆಂದರೆ ವಿದ್ಯೆ ಎಂಬ ಅರ್ಥವುಂಟು.  ಮುಂಗಾರು ಬೆಳೆ ಕೊಯ್ಲಿಗೆ ಬರುವ ಕಾಲಕ್ಕೆ, ಅಶ್ವಯುಜ ಮಾಸದ ಕೊನೆಯ ಎರಡು ದಿನಗಳು ಅಥವಾ ಕಾರ್ತೀಕ ಮಾಸದ ಮೊದಲ ದಿನ ಹಬ್ಬ ಆಚರಿಸಲಾಗುತ್ತದೆ.

ದೀಪಾವಳಿಯ ಅಮಾವಾಸ್ಯೆಯನ್ನು ದೀವಳಿಗೆ ಅಮಾವಾಸ್ಯೆ ಎಂದೂ ಕರೆಯುತ್ತಾರೆ. ಆ ದಿನ ಪಿತೃಗಳಿಗೆ ತರ್ಪಣವನ್ನಿತ್ತು, ಶ್ರಾದ್ಧವಿಧಿಗಳನ್ನು ತೀರಿಸಿ ಜನರು ತಮ್ಮನ್ನು ಅಗಲಿದ ಹಿರಿಯರಿಗೆ ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸುವ ಪರಿಪಾಠವಿದೆ.

ಇನ್ನು ಬೆಂಗಳೂರು ನಗರದಲ್ಲಿ ದೀಪಾವಳಿ ಹಬ್ಬವನ್ನು ಅತ್ಯಂತ ಸಡಗರದಿಂದ ಆಚರಿಸುತ್ತಾರೆ. ಹೊಸಬಟ್ಟೆ ಧರಿಸಿದ ಮಕ್ಕಳು, ಮನೆಮಂದಿ ಹಾಗೂ ಸ್ನೇಹಿತರೊಂದಿಗೆ ಪಟಾಕಿ ಹೊಡೆದು ಸಂಭ್ರಮಿಸುತ್ತಾರೆ. ಮನೆಯಲ್ಲಿ ಲಕ್ಷ್ಮಿಯನ್ನು ಪೂಜಿಸುವುದು ಈ ಹಬ್ಬದ ಮತ್ತೊಂದು ವೈಶಿಷ್ಟ್ಯ.

ಇದು ಮನೆಯ ಮನದ ಕತ್ತಲೆಯನ್ನು ಹೋಗಲಾಡಿಸಿ ಬೆಳಕನ್ನು ಹಚ್ಚುವ ಹಬ್ಬ. ಮನೆ ಮನೆಗಳಲ್ಲಿ ಸದಾ ನೆಲೆಸಿರುವಂತೆ ಕೇಳಿಕೊಂಡು ಲಕ್ಷ್ಮಿಯನ್ನು ಆರಾಧಿಸುವ ಸಂಪ್ರದಾಯವಿದೆ. ಮನೆಯ ಅಂಗಳದಲ್ಲಿ ಹಚ್ಚುವ ದೀಪಗಳ ಸಾಲು ಆ ಧನಲಕ್ಷ್ಮಿಗೆ ಸ್ವಾಗತ ಕೋರುತ್ತದೆ ಎಂಬ ನಂಬಿಕೆ ಜನರಲ್ಲಿದೆ.

ಜೈನಧರ್ಮಿಯರಿಗೂ ದೀಪಾವಳಿ ವಿಶೇಷ ಹಬ್ಬವಾಗಿದೆ. ಭಗವಾನ್ ಮಹಾವೀರರು ನಿರ್ವಾಣ ಹೊಂದಿದ್ದು ಕಾರ್ತೀಕ ಬಹುಳ ಚತುರ್ದಶಿ ರಾತ್ರಿ ಕೊನೆಯಾಗುತ್ತಿರುವಲ್ಲಿ ಸ್ವಾತಿ ನಕ್ಷತ್ರದಲ್ಲಿ. ಶಾಲಿವಾಹನ ಶಕೆಯ ಮಾಸಗಳ ಗಣನೆಯ ಆಧಾರದಂತೆ ಈ ಸಮಯ ಆಶ್ವಯುಜ ಬಹುಳ ತಿಥಿ ಕಳೆದ ಬೆಳಗಿನ ಜಾವದೊಡನೆ ಕೂಡಿ ಬರುತ್ತದೆ.

ಸುಮಾರು 30ವರ್ಷಗಳ ಕಾಲ ತನ್ನ ಜ್ಞಾನಜ್ಯೋತಿಯಿಂದ ಲೋಕದ ಅಜ್ಞಾನವೆಂಬ ಕತ್ತಲೆಯನ್ನು ನಿವಾರಣೆ ಮಾಡಿದ ಈ ತೀರ್ಥಂಕರನ ಸ್ಮರಣೆ ನಿಮಿತ್ತವಾಗಿ ಈ ದಿನ ದೀಪಗಳನ್ನು ಹತ್ತಿಸುತ್ತಾರೆ. ಉಳಿದಂತೆ ವಿಶೇಷ ಪೂಜೆ ಸಲ್ಲಿಸಿ ಹಬ್ಬ ಆಚರಿಸುತ್ತಾರೆ.

ಹೀಗೆ ದೀಪಾವಳಿ ಆಚರಣೆ ಆಯಾ ಸಮುದಾಯ, ಸ್ಥಳಗಳಲ್ಲಿ ವಿಶಿಷ್ಟವಾಗಿ ತಮ್ಮ ತಮ್ಮ ನಂಬಿಕೆಯಂತೆ ನಡೆಯುತ್ತದೆ. ಮನಸ್ಸನ್ನು ಆವರಿಸಿರುವ ಕತ್ತಲೆಯನ್ನು ದೂರವಿರಿಸಲು ನಾವು ಹಚ್ಚುವ ದೀಪ ನಮ್ಮ ಬಾಳಿನುದ್ದಕ್ಕೂ ಬೆಳಕು ಚೆಲ್ಲುತ್ತದೆಯೆಂಬ ನಂಬಿಕೆ ನಮ್ಮದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT