ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರಗುಂದ, ಅಥಣಿ ಬಂದ್: ಮೈಸೂರು, ಮಂಗಳೂರಿನಲ್ಲಿ ಆಕ್ರೋಶ

Last Updated 8 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಸದನದಲ್ಲಿ ಮಂಗಳವಾರ ಕಲಾಪ ನಡೆದಾಗ ಸಚಿವರಾದ ಲಕ್ಷ್ಮಣ ಸವದಿ ಮತ್ತು ಸಿ.ಸಿ. ಪಾಟೀಲ ಅಶ್ಲೀಲ ಚಿತ್ರ ವೀಕ್ಷಿಸಿದ್ದನ್ನು ಖಂಡಿಸಿ ಧಾರವಾಡ, ಬೆಳಗಾವಿ, ಗದಗ, ವಿಜಾಪುರ, ಬಾಗಲಕೋಟೆ, ಹಾವೇರಿ ಉ.ಕ. ಜಿಲ್ಲೆ ಮತ್ತು ಬಳ್ಳಾರಿ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಬುಧವಾರ ಸರಣಿ ಪ್ರತಿಭಟನೆ ನಡೆಸಿ, ಪ್ರತಿಕೃತಿ ದಹನ ನಡೆಸಲಾಯಿತು.

ಲಕ್ಷ್ಮಣ ಸವದಿ ಅವರ ತವರು ಅಥಣಿ ಮತ್ತು ಸಿ.ಸಿ. ಪಾಟೀಲ ಅವರ ಕ್ಷೇತ್ರ ನರಗುಂದದಲ್ಲಿ ಬಂದ್ ಆಚರಿಸಲಾಗಿದೆ. ಗದಗದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮಾಜಿ ಸಚಿವ ಸಿ.ಸಿ. ಪಾಟೀಲ ಅವರ
ಕಚೇರಿ ಬಳಿಯ ನಾಮಫಲಕಕ್ಕೆ ಮಸಿ ಬಳಿಯಲು ಕೆಲವರು ಪ್ರಯತ್ನಿಸಿದರು. ಕೆಲವು ಪೋಸ್ಟರ್‌ಗಳನ್ನು ಕಿತ್ತುಹಾಕಿದರಲ್ಲದೇ ನಾಮಫಲಕವನ್ನೂ ಒಡೆದುಹಾಕಿದರು.

ನರಗುಂದದಲ್ಲಿ ಮಾಜಿ ಸಚಿವ ಬಿ.ಆರ್. ಯಾವಗಲ್‌ರವರ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಟೈರ್‌ಗೆ ಬೆಂಕಿ ಹಚ್ಚಿ, ಮಾಜಿ ಸಚಿವ ಸಿ.ಸಿ.ಪಾಟೀಲರ ಭಾವಚಿತ್ರ ಹಾಕಿ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು. ಶಾಸಕ ಸ್ಥಾನಕ್ಕೂ ಅವರು ರಾಜೀನಾಮೆ ನೀಡಬೇಕು ಎಂದು ಯಾವಗಲ್ ಆಗ್ರಹಿಸಿದರು.

ಅಥಣಿ ಬಂದ್ ಯಶಸ್ವಿ
ಲಕ್ಷ್ಮಣ ಸವದಿ ಸೇರಿದಂತೆ ಮೂವರೂ ಮಾಜಿ ಸಚಿವರ ಶಾಸಕತ್ವ ರದ್ದುಗೊಳಿಸುವಂತೆ ಆಗ್ರಹಿಸಿ ಕಾಂಗ್ರೆಸ್ ಹಾಗೂ ಜೆಡಿಎಸ್‌ನವರು ಬುಧವಾರ ಕರೆ ನೀಡಿದ್ದ ಅಥಣಿ ಬಂದ್ ಯಶಸ್ವಿಯಾಗಿದೆ. ಜೊತೆಗೆ ಜಿಲ್ಲೆಯ ವಿವಿಧೆಡೆ ಪ್ರತಿಭಟನೆಗಳು ನಡೆದಿವೆ.

ಲಕ್ಷ್ಮಣ ಸವದಿ ಕ್ಷೇತ್ರವಾದ ಅಥಣಿಯಲ್ಲಿ ಬೆಳಿಗ್ಗೆಯಿಂದಲೇ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು. ಅಂಗಡಿ ಬಂದ್ ಮಾಡುವುದಕ್ಕೆ ಸಂಬಂಧಿಸಿದಂತೆ ಪ್ರತಿಭಟನಾಕಾರರು ಹಾಗೂ ಪೊಲೀಸರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಕೆಲ ಶಾಲೆಗಳು ರಜೆ ಘೋಷಿಸಿದ್ದವು. ಬಸ್ ಸಂಚಾರ ಎಂದಿನಂತಿದ್ದರೂ ಜನ ಸಂಚಾರ ವಿರಳವಾಗಿತ್ತು. ಬೆಳಗಾವಿ ನಗರದ್ಲ್ಲಲೂ ಯುವ ಕಾಂಗ್ರೆಸ್ ಹಾಗೂ ಶ್ರೀರಾಮ ಸೇನೆ ಕಾರ್ಯಕರ್ತರು ಪ್ರತಿಭಟನಾ ರ‌್ಯಾಲಿ ನಡೆಸಿದರು.

ಕಾಂಗ್ರೆಸ್, ಜೆಡಿಎಸ್ ಮತ್ತು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಎಲ್ಲ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಹುಬ್ಬಳ್ಳಿ ಸೇರಿದಂತೆ ಹಲವೆಡೆ ಮಾಜಿ ಸಚಿವರ ಪ್ರತಿಕೃತಿಯನ್ನು  ದಹಿಸಿ ತಮ್ಮ ಆಕ್ರೋಶವನ್ನು ಪ್ರತಿಭಟನಾಕಾರರು ವ್ಯಕ್ತಪಡಿಸಿದರು. ಕೆಲವೆಡೆ ರಸ್ತೆತಡೆಯನ್ನೂ ನಡೆಸಲಾಯಿತು.

ಮಂಗಳೂರು ವರದಿ: ವಿಧಾನಸಭೆಯಲ್ಲಿ ಸಚಿವರು ಮೊಬೈಲ್‌ನಲ್ಲಿ ಅಶ್ಲೀಲ ವೀಡಿಯೊ ವೀಕ್ಷಿಸಿದ ಘಟನೆ ಖಂಡಿಸಿ ದಕ್ಷಿಣ ಕನ್ನಡ, ಉಡುಪಿ ಮತ್ತು ಚಿಕ್ಕಮಗಳೂರಿನಲ್ಲಿ ಬುಧವಾರ ದಿನವಿಡೀ ಪ್ರತಿಭಟನೆಗಳ ಸರಣಿಯೇ ನಡೆಯಿತು.
ಮಂಗಳೂರಿನಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಬೆಳಿಗ್ಗೆಯಿಂದ ಸಂಜೆವರೆಗೂ ಪ್ರತ್ಯೇಕ ಪ್ರತಿಭಟನೆ ನಡೆದವು.
ಕಾಂಗ್ರೆಸ್ ಜಿಲ್ಲಾ ಘಟಕ, ಸಿಪಿಎಂ, ಸಿಪಿಐ, ಎಸ್‌ಡಿಪಿಐ, ಎಸ್‌ಎಫ್‌ಐ ಹಾಗೂ ಜಮಾತೆ ಇಸ್ಲಾಮಿ ಹಿಂದ್ ಮುಖಂಡರು, ಕಾರ್ಯಕರ್ತರು ಪ್ರತಿಭಟಿಸಿದರು. ಸಚಿವ ಹುದ್ದೆಗಷ್ಟೇ ಅಲ್ಲ, ಮೂವರೂ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಇದೇ ವೇಳೆ, ಹಿರಿಯ ಬಿಜೆಪಿ ನಾಯಕ ಉರಿಮಜಲು ರಾಮ ಭಟ್, `ಹೇಗಾದರೂ ಮಾಡಿ ಗೆಲ್ಲಲೇಬೇಕು ಎಂಬ ಒಂದೇ ಕಾರಣಕ್ಕೆ ಅನರ್ಹ ಅಭ್ಯರ್ಥಿಗಳನ್ನು ಸ್ಪರ್ಧೆಗೆ ಇಳಿಸಿ ಗೆಲ್ಲಿಸಿದ್ದರ ಫಲ ಇದು~ ಎಂಬ ಕಟುವಾಗಿ ಪ್ರತಿಕ್ರಿಯಿಸಿದ್ದಾರೆ.

ಪಿತೂರಿ ಶಂಕೆ: `ಇಡೀ ಪ್ರಕರಣ ನೋಡಿದರೆ ಸದಾನಂದ ಗೌಡ ಅವರು ಬಜೆಟ್ ಮಂಡಿಸಬಾರದು. ಮತ್ತೊಂದು ಹಗರಣದ ಮೂಲಕ ಅವರ ಸರ್ಕಾರ ಬಿದ್ದು ಹೋಗಬೇಕು ಎಂದು ಕೆಲವರು ಪಿತೂರಿ ನಡೆಸಿದಂತಿದೆ.
ತವರು ಜಿಲ್ಲೆ ಸಚಿವರೇ ಆರೋಪಕ್ಕೊಳಗಾಗಿದ್ದಾರೆ. ಹೀಗಾಗಿ ಮುಖ್ಯಮಂತ್ರಿಯಾಗಿ ಮುಂದುವರಿಯುವ ನೈತಿಕ ಹಕ್ಕು ಡಿ.ವಿ.ಎಸ್.ಗೆ ಇಲ್ಲ ಎಂಬುದನ್ನು ಬಿಂಬಿಸುವುದೂ ವಿರೋಧಿಗಳ ತಂತ್ರವಾಗಿರುವಂತಿದೆ~ ಎಂದು ಬಿಜೆಪಿ ರಾಜ್ಯ ಅಲ್ಪಸಂಖ್ಯಾತ ಮೋರ್ಚಾ ಉಪಾಧ್ಯಕ್ಷ ಫ್ರಾಂಕ್ಲಿನ್ ಮೊಂತೆರೊ ಹೇಳಿದ್ದಾರೆ.

ಆಘಾತದಲ್ಲಿ ದ.ಕ. ಬಿಜೆಪಿ ಘಟಕ
ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಪಾಲೆಮಾರ್ ತಲೆದಂಡವಾಗಿರುವುದರಿಂದ ಬಿಜೆಪಿ ಜಿಲ್ಲಾ ಘಟಕ ಆಘಾತಕ್ಕೊಳಗಾಗಿದೆ. ಪಕ್ಷದ ಜಿಲ್ಲಾ ಕಚೇರಿಯಲ್ಲಿ ಬುಧವಾರ ವಿಷಾದದ ವಾತಾವರಣ ನೆಲೆಸಿದ್ದು, ಸ್ಥಳೀಯ ಮುಖಂಡರು ಸಚಿವರ ವರ್ತನೆಯನ್ನು ಸಮರ್ಥಿಸಲೂ ಆಗದೆ, ವಿರೋಧಿಸಲೂ ಆಗದೆ ಇಕ್ಕಟ್ಟಿನ ಸ್ಥಿತಿಯಲ್ಲಿದ್ದಾರೆ. ನಿತ್ಯ ಕಾಣಸಿಗುತ್ತಿದ್ದ ಬಹಳಷ್ಟು ನಾಯಕರು ಕಚೇರಿಯತ್ತ ತಲೆಹಾಕಿರಲಿಲ್ಲ. ಚಿಕ್ಕಮಗಳೂರು ನಗರದಲ್ಲಿಯೂ ವಿವಿಧ ಸಂಘಟನೆಗಳು, ಪಕ್ಷಗಳ ವತಿಯಿಂದ ಒಟ್ಟು 10 ಪ್ರತಿಭಟನೆಗಳು ನಡೆದಿವೆ.

ಶಾಸಕ ಸ್ಥಾನದಿಂದ ಅನರ್ಹಗೊಳಿಸಿ
ಮೈಸೂರು:
ವಿಧಾನಸಭೆಯಲ್ಲಿ ಸೆಕ್ಸ್‌ಫಿಲಂ ತುಣುಕುಗಳನ್ನು ವೀಕ್ಷಿಸುವ ಸಂದರ್ಭದಲ್ಲಿ ಸಿಕ್ಕಿಬಿದ್ದ ಲಕ್ಷ್ಮಣ ಸವದಿ, ಸಿ.ಸಿ.ಪಾಟೀಲ್ ಹಾಗೂ ಕೃಷ್ಣ ಪಾಲೆಮಾರ್ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ಒತ್ತಾಯಿಸಿ ವಿರೋಧ ಪಕ್ಷಗಳ ಕಾರ್ಯಕರ್ತರು ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು, ಹಾಸನ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸಿದರು.

ನೆಲ ತೊಳೆದು ಪ್ರತಿಭಟನೆ
ಗುಲ್ಬರ್ಗ:
ಲಕ್ಷ್ಮಣ ಸವದಿ, ಸಿ.ಸಿ ಪಾಟೀಲ್ ಹಾಗೂ ಕೃಷ್ಣಾ ಪಾಲೇಮಾರ್ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ಒತ್ತಾಯಿಸಿ ಹೈದರಾಬಾದ್ ಕರ್ನಾಟಕ ಪ್ರದೇಶದ ವಿವಿಧ ಸಂಘಟನೆಗಳು ಬುಧವಾರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದವು.

ಗುಲ್ಬರ್ಗದ ವಿವಿಧೆಡೆ ಪ್ರತಿಭಟನೆ ನಡೆಸಿ ಪ್ರತಿಕೃತಿ ದಹಿಸಲಾಯಿತು. ಬೀದರ್‌ನಲ್ಲಿ ನೆಲ ತೊಳೆದು ಪ್ರತಿಭಟಿಸಿದರೆ,  ರಾಯಚೂರು, ಕೊಪ್ಪಳ, ಯಾದಗಿರಿಯಲ್ಲೂ ಹಲವು ಸಂಘಟನೆಗಳಿಂದ ಪ್ರತಿಭಟನೆ ನಡೆಯಿತು.

ಹೇಳಿದ್ದು, ಕೇಳಿಸಿದ್ದು...

ಸಚಿವರ ಕೃತ್ಯ ಅಸಹ್ಯ
ಮದ್ದೂರು: `ಸಚಿವರು ಸದನದಲ್ಲಿ ಸೆಕ್ಸ್‌ಫಿಲಂ ವೀಕ್ಷಿಸುತ್ತಿದ್ದ ಪ್ರಕರಣ ಸಂಬಂಧ ನಮ್ಮಂತವರು ಮಾತನಾಡುವುದು ಸರಿಯಲ್ಲ~ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಬುಧವಾರ ಪ್ರತಿಕ್ರಿಯಿಸಿದರು.

ಸಮೀಪದ ಹುಳಗನಹಳ್ಳಿ ಮಂಚಮ್ಮದೇವಿ ದೇಗುಲಕ್ಕೆ ಭೇಟಿ ನೀಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

`ಇದು ಅಸಹ್ಯದ ವಿಷಯ. ಆ ಬಗ್ಗೆ ಈಗ ಚರ್ಚೆ ಬೇಡ. ಕಳಂಕಿತ ಸಚಿವರು ರಾಜೀನಾಮೆ ನೀಡಿದ್ದಾರೆ. ರಾಜ್ಯದ ಜನತೆ ಇದನ್ನು ಗಮನಿಸುತ್ತಿದ್ದಾರೆ. ಅವರೇ ಸರಿಯಾದ ಉತ್ತರ ನೀಡಲಿದ್ದಾರೆ~ ಎಂದರು.

ಮಾಡಬಾರದ್ದನ್ನು ಮಾಡಿಲ್ಲ

ಬೆಂಗಳೂರು: `ಬ್ಲೂಫಿಲಂ ನೋಡಿದ ತಪ್ಪಿಗೆ ತಲೆದಂಡ ತೆತ್ತಿರುವ ಸಿ.ಸಿ.ಪಾಟೀಲ, ಲಕ್ಷ್ಮಣ ಸವದಿ, ಕೃಷ್ಣ ಪಾಲೆಮಾರ್ ಅವರು ಮಾಡಬಾರದ್ದನ್ನು ಮಾಡಿಲ್ಲ~ ಎಂದು ಅಬಕಾರಿ ಸಚಿವ ಎಂ.ಪಿ.ರೇಣುಕಾಚಾರ್ಯ ಸಮರ್ಥಿಸಿಕೊಂಡರು.

ವಿಧಾನಸಭೆಯಲ್ಲಿ ಬುಧವಾರ ಈ ವಿಷಯ ಪ್ರಸ್ತಾಪವಾಗಿ ಕೋಲಾಹಲದ ವಾತಾವರಣ ಉಂಟಾದಾಗ, `ಎಲ್ಲರೂ ಮಾಡುವುದನ್ನೇ ಆ ಮೂವರು ಮಾಡಿದ್ದಾರೆ. ನೀವೇನು ಸತ್ಯಹರಿಶ್ಚಂದ್ರರೇ...~ ಎಂದು ರೇಣುಕಾಚಾರ್ಯ ಆಡಿದ ಮಾತು ಪ್ರತಿಪಕ್ಷಗಳ ಸದಸ್ಯರನ್ನು ಕೆರಳಿಸಿತು.

ಇದೇ ವಿಷಯದಲ್ಲಿ ಜೆಡಿಎಸ್‌ನ ಜಮೀರ್ ಅಹ್ಮದ್ ಮತ್ತು ರೇಣುಕಾಚಾರ್ಯ ನಡುವೆ ಸ್ವಲ್ಪ ಹೊತ್ತು ಮಾತಿನ ಚಕಮಕಿ, ಪರಸ್ಪರ ಆರೋಪ-ಪ್ರತ್ಯಾರೋಪ ನಡೆಯಿತು. ಪ್ರತಿಪಕ್ಷಗಳ ಉಳಿದ ಸದಸ್ಯರು ಮತ್ತು ಆಡಳಿತ ಪಕ್ಷದವರ ಗದ್ದಲವೂ ಜೋರಾಗಿದ್ದ ಕಾರಣ, ಇವರಿಬ್ಬರು ಬಳಸಿದ ಅವಾಚ್ಯ ಶಬ್ದಗಳು ಸ್ಪಷ್ಟವಾಗಿ ಕೇಳಿಸಲಿಲ್ಲ.

 ತಕ್ಷಣ ಅಮಾನತು ಮಾಡಬೇಕಿತ್ತು

ಮಂಗಳೂರು: ವಿಧಾನಸಭೆಯಲ್ಲಿ ಸಚಿವರು ಮೊಬೈಲ್‌ನಲ್ಲಿ ಅಶ್ಲೀಲ ವೀಡಿಯೊ ವೀಕ್ಷಿಸಿದ ಘಟನೆಯಿಂದ ಪ್ರಜಾಪ್ರಭುತ್ವದ ಘನತೆಗೆ ಭಾರಿ ಧಕ್ಕೆಯಾಗಿದೆ. ವಿಷಯ ಬಹಿರಂಗವಾದ ತಕ್ಷಣ ಸ್ಪೀಕರ್ ಮಂಗಳವಾರವೇ ಮೂವರು ಸಚಿವರನ್ನು ಅಮಾನತುಗೊಳಿಸಬೇಕಿತ್ತು ಎಂದು ಕೇಂದ್ರದ ಕಂಪೆನಿ ವ್ಯವಹಾರಗಳ ಸಚಿವ ಎಂ.ವೀರಪ್ಪ ಮೊಯಿಲಿ ಹೇಳಿದರು.

ಕಳಂಕಿತರ ಉಚ್ಚಾಟನೆಗೆ ಅಣ್ಣಾ ಆಗ್ರಹ
ಬೆಂಗಳೂರು:
ವಿಧಾನಸಭೆಯಲ್ಲಿ ಅಶ್ಲೀಲ ಚಿತ್ರಗಳನ್ನು ವೀಕ್ಷಿಸಿ ಸಿಕ್ಕಿಬಿದ್ದ ಹಿನ್ನೆಲೆಯಲ್ಲಿ ರಾಜೀನಾಮೆ ಸಲ್ಲಿಸಿರುವ ಕರ್ನಾಟಕದ ಮೂವರು ಕಳಂಕಿತ ಮಾಜಿ ಸಚಿವರನ್ನು ಸದನದಿಂದ ಉಚ್ಚಾಟಿಸಬೇಕೆಂದು ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಬುಧವಾರ ಇಲ್ಲಿ ಆಗ್ರಹಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT