ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರಸಿಂಹರಾಜಪುರದಲ್ಲಿ ತುಂಬಿ ಹರಿದ ಹಳ್ಳಕೊಳ್ಳ

Last Updated 4 ಜುಲೈ 2013, 9:51 IST
ಅಕ್ಷರ ಗಾತ್ರ

ನರಸಿಂಹರಾಜಪುರ: ತಾಲ್ಲೂಕಿನಾದ್ಯಂತ ಮಂಗಳವಾರ ರಾತ್ರಿಯಿಂದ ಮಳೆ ಪ್ರಾರಂಭವಾಗಿ ಬುಧವಾರ ಭಾರಿ ಪ್ರಮಾಣದಲ್ಲಿ ಸುರಿದಿದ್ದು ಕೆರೆಕಟ್ಟೆಗಳು ತುಂಬಿ ಹರಿದು ಕೆಲವು ಕಡೆ ಸಂಪರ್ಕ ಕಡಿತಗೊಂಡಿದೆ.

ಮಂಗಳವಾರ ರಾತ್ರಿಯೆಲ್ಲ ಭಾರಿ ಪ್ರಮಾಣದಲ್ಲಿ ಮಳೆಸುರಿದು ಬುಧವಾರ ಬೆಳಗಿನವರೆಗೆ 105 ಮಿ.ಮೀ ಮಳೆ ಸುರಿದಿದೆ. ಬುಧವಾರ ಬೆಳಿಗ್ಗೆಯಿಂದ ಸಂಜೆಯಾದರೂ ಸಹ ಒಂದೇ ಸಮನೆ ಭಾರಿ ಪ್ರಮಾಣದಲ್ಲಿ ಮಳೆ ಸುರಿಯುತ್ತಲೇ ಇದೆ.

ಭಾರಿ ಪ್ರಮಾಣದ ಮಳೆ ಸುರಿದ ಪರಿಣಾಮ ತಾಲ್ಲೂಕಿನ ಮುತ್ತಿನಕೊಪ್ಪ ಮತ್ತು ಮುಡುಬ ಗ್ರಾಮದ ನಡುವಿನ ಸೇತುವೆ ತುಂಬಾ ನೀರು ಉಕ್ಕಿ ಹರಿದ ಪರಿಣಾಮ ಈ ಗ್ರಾಮಗಳ ನಡುವೆ ಸಂಪರ್ಕ ಕಡಿತಗೊಂಡಿದೆ. ತಾಲ್ಲೂಕಿನ ಕಾನೂರು ಗ್ರಾಮಕ್ಕೆ ಹೋಗುವ ಮಾರ್ಗವಾದ ಕುದುರೆಗುಂಡಿಯ ಬಳಿ ರಸ್ತೆ ತುಂಬಾ ನೀರು ಉಕ್ಕಿಹರಿದಿದೆ.

ಕಡಹಿನಬೈಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೆರಲೆಕೊಪ್ಪ ಗ್ರಾಮಕ್ಕೆ ಹೋಗುವ ಸೇತುವೆಯ ಬಳಿ ಪ್ರವಾಹಕ್ಕೆ ಮಣ್ಣು ಕೊಚ್ಚಿ ಕೊಂಡು ಹೋಗಿದ್ದು ಶೆಟ್ಟಿಕೊಪ್ಪ ಮತ್ತು ನೆರಲೆಕೊಪ್ಪ ಗ್ರಾಮದ ನಡುವೆ ಸಂಪರ್ಕ ಕಡಿತಗೊಂಡಿದೆ.ಮಳಲಿ ಗ್ರಾಮದ ಮಂಜುನಾಥ್ ಎಂಬುವರ ಗದ್ದೆಯಲ್ಲಿ ನಾಟಿ ಮಾಡಿದ್ದ ಬತ್ತದ ಸಸಿ ಮಳೆಯ ಪ್ರವಾಹಕ್ಕೆ ಸಂಪೂರ್ಣ ಕೊಚ್ಚಿಕೊಂಡು ಹೋಗಿದೆ.

ಭಾರಿ ಪ್ರಮಾಣದ ಮಳೆ ಸುರಿಯುತ್ತಿದ್ದುದರಿಂದ ಬುಧವಾರ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಬುಧವಾರ ಸಂಜೆಯಿಂದ ಪುನಃ ಮಳೆ ಸುರಿಯಲು ಆರಂಭಿಸಿದೆ.

ಕಡೂರು: ಉತ್ತಮ ಮಳೆ
ಕಡೂರು:
ತಾಲ್ಲೂಕಿನ ಬಹುತೇಕ ಕಡೆ ಮಳೆ ಚುರುಕುಗೊಂಡಿದ್ದು ಕೃಷಿ ಚಟುವಟಿಕೆಗಳು ಕೂಡಾ ಭರದಿಂದ ಸಾಗಿವೆ.
ಮಂಗಳವಾರ ರಾತ್ರಿ ಆರಂಭಗೊಂಡ ಮಳೆ ಬುಧವಾರ ಬೆಳಗಿನವರೆಗೂ ಸುರಿದು ಉತ್ತಮ ಮಳೆಗಾಲದ ಭರವಸೆ ಮೂಡಿಸಿದೆ.

ತಾಲ್ಲೂಕಿನ ಮಳೆ ಮಾಪನಾ ಕೇಂದ್ರಗಳ ವರದಿಯಂತೆ ಬುಧವಾರ ಬೆಳಗಿನವರೆಗೆ ಕಡೂರು ಪಟ್ಟಣದಲ್ಲಿ 14ಮಿ.ಮೀ, ಯಗಟಿಯಲ್ಲಿ 14.2, ಸಖರಾಯಪಟ್ಟಣ 12.4, ಗಿರಿಯಾಪುರ 18, ಬೀರೂರು 18.2 ಮತ್ತು ಎಮ್ಮೆದೊಡ್ಡಿಯಲ್ಲಿ 22ಮಿ.ಮೀ ಮಳೆಯಾಗಿದೆ.

ಇದರಿಂದ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಶಾಲೆಗೆ ತೆರಳಬೇಕಿದ್ದ ಮಕ್ಕಳು ಬಹಳ ಸಮಯದ ವರೆಗೆ ಕಾಯಬೇಕಾಯಿತು.
ಪಂಚನಹಳ್ಳಿ, ಹಿರೇನಲ್ಲೂರು ಮತ್ತು ಚೌಳ ಹಿರಿಯೂರುಗಳಲ್ಲಿ ಅಲ್ಪಪ್ರಮಾಣದ ಮಳೆ ಸುರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT