ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರ್ಮ್: ಭಾರಿ ಅವ್ಯವಹಾರ ಶಂಕೆ

Last Updated 17 ಸೆಪ್ಟೆಂಬರ್ 2011, 19:40 IST
ಅಕ್ಷರ ಗಾತ್ರ

ಬೆಂಗಳೂರು: ರಾಜಧಾನಿಯ ಜನತೆಗೆ ಉತ್ತಮ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ `ಜವಾಹರಲಾಲ್ ನೆಹರು ನಗರ ಪುನರುಜ್ಜೀವನ ಮಿಷನ್~ (ನರ್ಮ್) ಯೋಜನೆಯಡಿ ನಗರದಲ್ಲಿ ಕೈಗೊಂಡ ಕೆಲವು ಪ್ರಮುಖ ಯೋಜನೆಗಳ ಅನುದಾನ ಬಳಕೆಯಲ್ಲಿ ಭಾರಿ ಅವ್ಯವಹಾರ ನಡೆದಿರುವ ಶಂಕೆ ವ್ಯಕ್ತವಾಗಿದೆ.

ಕೇಂದ್ರ ನಗರಾಭಿವೃದ್ಧಿ ಸಚಿವಾಲಯವು `ನರ್ಮ್~ ಯೋಜನೆಯಡಿ ಅನುಷ್ಠಾನಗೊಂಡ ಯೋಜನೆಗಳನ್ನು  ಪರಾಮರ್ಶಿಸಲು ಹಾಗೂ ಮೇಲ್ವಿಚಾರಣೆ ನಡೆಸಲು ರಚಿಸಿರುವ ಸಮಿತಿಯು ಮಳೆ ನೀರು ಕಾಲುವೆಗಳ ಪುನರ್‌ವಿನ್ಯಾಸಗೊಳಿಸುವ ನಾಲ್ಕು ಯೋಜನೆಗಳಲ್ಲಿ ಸಾಕಷ್ಟು ಲೋಪ ಉಂಟಾಗಿರುವುದನ್ನು ಪತ್ತೆ ಹಚ್ಚಿದೆ.

ನಗರದಲ್ಲಿ ಕೈಗೆತ್ತಿಕೊಂಡಿರುವ 53 ಯೋಜನೆಗಳಿಗೆ ವಿನಿಯೋಗಿಸಲಾಗುತ್ತಿರುವ ಒಟ್ಟು ರೂ 3,475 ಕೋಟಿಯಲ್ಲಿ ಕೇಂದ್ರ ಸರ್ಕಾರ ಶೇ 35ರಷ್ಟು ಪಾಲನ್ನು ಭರಿಸುತ್ತಿದೆ. ಕೇಂದ್ರವು ದೊಡ್ಡ ಮೊತ್ತದ ಅನುದಾನ ನೀಡುತ್ತಿರುವ ಹಿನ್ನೆಲೆಯಲ್ಲಿ ನಗರಾಭಿವೃದ್ಧಿ ಸಚಿವಾಲಯವು ಸ್ವತಂತ್ರ ಸಂಸ್ಥೆಯಿಂದ ಯೋಜನೆಗಳ ಮರು ಮೌಲ್ಯಮಾಪನ ನಡೆಸುತ್ತಿದೆ.

ಹೈದರಾಬಾದ್ ಮೂಲದ ರಾಷ್ಟ್ರೀಯ ಯೋಜನಾ ಮತ್ತು ಎಂಜಿನಿಯರಿಂಗ್ ಸಂಸ್ಥೆಯು (ಎನ್‌ಸಿಪಿಇ) ಕಳೆದ ಮೇ ತಿಂಗಳಲ್ಲಿ ಈ ಸಂಬಂಧ ವರದಿ ಸಲ್ಲಿಸಿದೆ. ಈ ನಾಲ್ಕು ಯೋಜನೆಗಳಿಗೆ ಮಂಜೂರಾದ ಒಟ್ಟು ರೂ 643 ಕೋಟಿ ಮೊತ್ತದಲ್ಲಿ ಬಿಬಿಎಂಪಿ ಈವರೆಗೆ ರೂ 415 ಕೋಟಿ ವೆಚ್ಚ ಮಾಡಿದ್ದು, ಅದರಲ್ಲಿ ಟೆಂಡರ್ ದಾಖಲೆಗಳಲ್ಲಿ ಸಾಕಷ್ಟು ಲೋಪಗಳಿವೆ ಎಂದು ವರದಿಯಲ್ಲಿ ತಿಳಿಸಿದೆ.

ಇದೀಗ ಪಾಲಿಕೆಯು ಯೋಜನೆಗಳ ಮೊತ್ತವನ್ನು ಪರಿಷ್ಕರಿಸಿ ರೂ 951 ಕೋಟಿಗೆ ಏರಿಕೆ ಮಾಡಿರುವುದು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ನಾಲ್ಕು ಯೋಜನೆಗಳು: ಹೆಬ್ಬಾಳ, ವೃಷಭಾವತಿ, ಕೋರಮಂಗಲ ಹಾಗೂ ಚಲ್ಲಘಟ್ಟ ನಾಲೆಗಳನ್ನು ಪುನರ್‌ವಿನ್ಯಾಸಗೊಳಿಸುವ ಯೋಜನೆಗಳಲ್ಲಿ ಅವ್ಯವಹಾರ ನಡೆದಿರುವ ಸಂಶಯ ವ್ಯಕ್ತವಾಗಿದೆ. ಈ ನಾಲ್ಕೂ ಯೋಜನೆಗಳ ಜಾರಿ ಹಿನ್ನೆಲೆಯಲ್ಲಿ ರೂಪಿಸಲಾಗಿರುವ 15 ಪ್ಯಾಕೇಜ್‌ಗಳಿಗೆ ಸಂಬಂಧಪಟ್ಟಂತೆ ಗುತ್ತಿಗೆದಾರರೊಂದಿಗೆ ಮಾಡಿಕೊಂಡ ಒಪ್ಪಂದದಲ್ಲಿ ಸಾಕಷ್ಟು ದೋಷಗಳಿದ್ದು, ಅಪೂರ್ಣವಾಗಿವೆ ಎಂದು ವರದಿ ತಿಳಿಸಿದೆ.

ಅಧಿಕೃತ ಒಪ್ಪಂದದ ದಾಖಲೆಗಳನ್ನು ಪರಿಶೀಲಿಸಿದಾಗ ಅನಗತ್ಯ ಮಾಹಿತಿಗಳು ಕಂಡು ಬಂದಿದ್ದು, ದಾಖಲೆಗಳ ಸತ್ಯಾಸತ್ಯತೆಯ ಬಗ್ಗೆಯೇ ಶಂಕೆ ವ್ಯಕ್ತವಾಗಿದೆ. ಅಲ್ಲದೇ ದಾಖಲೆಗಳಲ್ಲಿ ಆಗಾಗ್ಗೆ `ನಮೂದಿಸಿರುವ ದರ~ ಹಾಗೂ `ಚೌಕಾಸಿ ಬಳಿಕ ನಮೂದಿಸಲಾದ ದರ~ ಎಂಬ ಪದಗಳ ಬಳಕೆ ಬಗ್ಗೆಯೂ ಸಮಿತಿ ಅನುಮಾನ ವ್ಯಕ್ತಪಡಿಸಿದೆ.

ಎನ್‌ಸಿಪಿಇ ಸಲ್ಲಿಸಿದ ವರದಿ (2011, ಮೇ 9) ಪ್ರತಿಯನ್ನು ಕರ್ನಾಟಕ ನಗರ ಮೂಲಸೌಕರ್ಯ ಮತ್ತು ಹಣಕಾಸು ಸಂಸ್ಥೆ (ಕೆಯುಐಡಿಎಫ್‌ಸಿ)ಯಿಂದ `ಪ್ರಜಾವಾಣಿ~ಯು ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದುಕೊಂಡಿದೆ. ಈ ವರದಿಯಂತೆ, 2006ರಲ್ಲಿ ಮಾಡಿಕೊಂಡ ಒಪ್ಪಂದ ಕುರಿತು ನಾಲ್ಕು ವರ್ಷಗಳ ಬಳಿಕ ಅಂದರೆ 2010ರ ಮಾರ್ಚ್ 12ರಂದು ಚರ್ಚೆ ನಡೆಸಲು ಮುಂದಾದ ಪಾಲಿಕೆ ಕ್ರಮ ಸರಿಯಲ್ಲ ಎಂದು ಆಕ್ಷೇಪಿಸಲಾಗಿದೆ. ಅಲ್ಲದೇ ಒಪ್ಪಂದಕ್ಕೆ ಸಂಬಂಧಪಟ್ಟ ದಾಖಲೆಗಳು ಸಮರ್ಪಕವಾಗಿಲ್ಲ. ಅನುಕ್ರಮ ಸಂಖ್ಯೆಯೂ ಸರಿಯಾಗಿಲ್ಲ ಎಂಬುದನ್ನು ಪತ್ತೆ ಮಾಡಿದೆ.

ಬಿಬಿಎಂಪಿ 2006ರಲ್ಲಿ ಒಟ್ಟು ರೂ 496 ಕೋಟಿ ಮೊತ್ತದ ಯೋಜನೆಗಳಿಗೆ ಟೆಂಡರ್ ಆಹ್ವಾನಿಸಿತ್ತು. 4 ಕಾಲುವೆಗಳ ಪುನರ್ ವಿನ್ಯಾಸಗೊಳಿಸಲು 15 ಪ್ಯಾಕೇಜ್ ರೂಪಿಸಲಾಗಿತ್ತು. ಆದರೆ 2011ರ ಜನವರಿ ಹೊತ್ತಿಗೆ ರೂ 415 ಕೋಟಿಯನ್ನಷ್ಟೇ ವೆಚ್ಚ ಮಾಡಲಾಗಿದೆ. ಬಳಿಕ ಪರಿಷ್ಕೃತ ಸಮಗ್ರ ಯೋಜನಾ ವರದಿಯನ್ನು ಪಾಲಿಕೆ ಸಿದ್ಧಪಡಿಸಿದೆ.

ಕಾಲುವೆ ಪ್ರದೇಶದ ಒತ್ತುವರಿ, ಅಗತ್ಯವಿರುವೆಡೆ ಭೂಮಿ ಖರೀದಿ ಪ್ರಕ್ರಿಯೆ ತಡವಾಗಿದ್ದರಿಂದ ಕಾಮಗಾರಿ ವಿಳಂಬವಾಯಿತು ಎಂದು ಪಾಲಿಕೆ ತಿಳಿಸಿತ್ತು. ಯೋಜನೆಗೆ ಸಂಬಂಧಪಟ್ಟಂತೆ ಬಿಬಿಎಂಪಿ ಬಳಿ ಇರಲೇಬೇಕಿದ್ದ ಕೆಲವು ಅಧಿಕೃತ ಕಡತಗಳು `ಕಾಣೆಯಾಗಿವೆ~ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

 ಕಾಮಗಾರಿ ಪೂರ್ಣಗೊಳ್ಳುವುದಕ್ಕೆ ಮುಂಚೆಯೇ ಹಲವಾರು ಗುತ್ತಿಗೆದಾರರು ತಮ್ಮ ಬಿಲ್‌ಗಳನ್ನು ಪಡೆದುಕೊಂಡಿದ್ದಾರೆ. ಇವರಿಗೆ ನೀತಿ-ನಿಯಮಗಳನ್ನು ಗಾಳಿಗೆ ತೂರಿ ಗುತ್ತಿಗೆ ನೀಡಲಾಗಿತ್ತು ಎಂದೂ ತಿಳಿದು ಬಂದಿದೆ.

ಎನ್‌ಸಿಪಿಇಯ ನಿರಂತರ ಮನವಿ ನಡುವೆಯೂ, ಬಿಬಿಎಂಪಿ ಇನ್ನು ಮೇಲಷ್ಟೇ ಯೋಜನೆಗೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಬೇಕಿದೆ. ಇದರಿಂದ ಬೇಸತ್ತ ಕೆಯುಐಡಿಎಫ್‌ಸಿ ಬಿಬಿಎಂಪಿ ಕಾರ್ಯವೈಖರಿ ವಿರುದ್ಧ ರಾಜ್ಯ ಸರ್ಕಾರಕ್ಕೆ ದೂರು ನೀಡಿತ್ತು. ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್ ಅಧ್ಯಕ್ಷತೆಯಲ್ಲಿ ಏ. 30ರಂದು ನಡೆದ ಉನ್ನತ ಮಟ್ಟದ ಸಭೆಯಲ್ಲೂ ಪಾಲಿಕೆ ಕಾಮಗಾರಿ ಕೈಗೊಳ್ಳುವಲ್ಲಿ ನಿಯಮ ಉಲ್ಲಂಘಿಸಿರುವುದನ್ನು ಕೆಯುಐಡಿಎಫ್‌ಸಿ ಗಮನಕ್ಕೆ ತಂದಿತ್ತು.

 ಈ ದೂರಿನ ಹಿನ್ನೆಲೆಯಲ್ಲಿ ರಂಗನಾಥ್ ಅವರು, ಈ ಬಗ್ಗೆ ಸಮಗ್ರ ವರದಿ ನೀಡುವಂತೆ ಎನ್‌ಸಿಪಿಇಗೆ ಸೂಚಿಸಿದ್ದರು. ಜತೆಗೆ ಈ ಅವ್ಯವಹಾರಗಳಿಗೆ ಕಾರಣರಾದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪಾಲಿಕೆ ಆಯುಕ್ತರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಮಹಾಲೇಖಪಾಲರು ಕೂಡ ಸದ್ಯದಲ್ಲೇ ಈ ನಾಲ್ಕು ಯೋಜನೆಗಳ ಬಗ್ಗೆ ಪರಿಶೋಧನೆ ನಡೆಸಲಿದ್ದು, ಇದರಿಂದ ಬಿಬಿಎಂಪಿ ಇನ್ನಷ್ಟು ಸಮಸ್ಯೆಗಳಿಗೆ ಸಿಲುಕಿಕೊಳ್ಳುವ ಸಂಭವವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT