ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರ್ಸಿಂಗ್ ಹೋಂನಲ್ಲಿ ಔಷಧಿ ಖರೀದಿಸಿದರೂ ಗ್ರಾಹಕನೇ

Last Updated 4 ಫೆಬ್ರುವರಿ 2011, 16:55 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ):  ನರ್ಸಿಂಗ್ ಹೋಂನಲ್ಲಿ ಉಚಿತ ಚಿಕಿತ್ಸೆ ಪಡೆದು ಅಲ್ಲಿಯ ಔಷಧಿ  ಅಂಗಡಿಯಲ್ಲಿ ಔಷಧಿ ಖರೀದಿಸಿದ್ದರೆ ರೋಗಿಯನ್ನು ಆ ನರ್ಸಿಂಗ್ ಹೋಂ ಗ್ರಾಹಕ ಎಂದೇ ಪರಿಗಣಿಸಬೇಕಾಗುತ್ತದೆ ಮತ್ತು ಆತನಿಗೆ ಗ್ರಾಹಕ ರಕ್ಷಣೆ ಕಾಯ್ದೆಯಡಿ ನೀಡಬೇಕಾದ ಸೌಲಭ್ಯವನ್ನು ಒದಗಿಸಬೇಕಾಗುತ್ತದೆ ಎಂದು ರಾಷ್ಟ್ರೀಯ ಗ್ರಾಹಕರ ವಿವಾದ ಪರಿಹಾರ ಆಯೋಗವು ತೀರ್ಪು ನೀಡಿದೆ.

ನರ್ಸಿಂಗ್ ಹೋಂನ ವೈದ್ಯಕೀಯ ನಿರ್ಲಕ್ಷ್ಯದಿಂದ ಸತ್ತ 16 ವರ್ಷದ ಬಾಲಕನ ಪಾಲಕರಿಗೆ 11 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಆದೇಶಿಸಿರುವ ಆಯೋಗವು, ಉಚಿತ ಚಿಕಿತ್ಸೆ ನೀಡಿದ್ದರೂ ಅದೇ ನರ್ಸಿಂಗ್ ಹೋಂನ ಅಂಗಡಿಯಲ್ಲಿ ಔಷಧಿ ಖರೀದಿಸಿರುವುದರಿಂದ ಗ್ರಾಹಕನಲ್ಲ ಎಂಬ ವಾದ ಸರಿಯಲ್ಲ ಎಂದು ಸ್ಪಷ್ಟಪಡಿಸಿದೆ.

ರೋಗಿಯಿಂದ ಅಥವಾ ಪಾಲಕರಿಂದ ಚಿಕಿತ್ಸೆಗಾಗಿ ಒಂದು ರೂಪಾಯನ್ನೂ ತೆಗೆದುಕೊಂಡಿಲ್ಲ. ಆದ್ದರಿಂದ ಮೃತ ರೋಗಿಯನ್ನು ಗ್ರಾಹಕರ ರಕ್ಷಣಾ ಕಾಯ್ದೆಯಡಿ ‘ಗ್ರಾಹಕ’ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂಬ ವೈದ್ಯರ ಮತ್ತು ನರ್ಸಿಂಗ್ ಹೋಂನ ವಾದವನ್ನು ಆಯೋಗವು ತಳ್ಳಿ ಹಾಕಿದೆ.

ನರ್ಸಿಂಗ್ ಹೋಂ ಮತ್ತು ಔಷಧಿ ಅಂಗಡಿಯನ್ನು ಒಂದೇ ಕುಟುಂಬವು ಆಸ್ಪತ್ರೆಯಲ್ಲಿ ಏಕ ಘಟಕ ವ್ಯವಸ್ಥೆಯಾಗಿ ನಿರ್ವಹಣೆ ಮಾಡುತ್ತಿರುವುದರಿಂದ ಮತ್ತು ಔಷಧಿಯನ್ನು ಹಣ ಕೊಟ್ಟು ಖರೀದಿಸಿರುವುದರಿಂದ ರೋಗಿ ಗ್ರಾಹಕನಾಗುತ್ತಾನೆ ಎಂದು ನ್ಯಾಯಮೂರ್ತಿ ಆರ್.ಕೆ.ಬಾತ್ರಾ ಮತ್ತು ಸದಸ್ಯ ವಿನಯ್ ಕುಮಾರ್ ಅವರನ್ನು ಒಳಗೊಂಡ ಆಯೋಗದ ಪೀಠವು ಅಭಿಪ್ರಾಯಪಟ್ಟಿದೆ.

ಹಿನ್ನೆಲೆ: 1996ರಲ್ಲಿ ಝಾನ್ಸಿಯ ನಿವಾಸಿಗಳಾದ ಅಶೋಕ ಮತ್ತು ಶಶಿ ದಂಪತಿ ತಮ್ಮ ಪುತ್ರ ರಾಹುಲ್‌ನನ್ನು ಚಿಕಿತ್ಸೆಗಾಗಿ ಝಾನ್ಸಿಯ ನಿರ್ಮಲ್ ಆಸ್ಪತ್ರೆಗೆ ಸೇರಿಸಿದ್ದರು. ಆಸ್ಪತ್ರೆಯ ಮಾಲೀಕರಾದ ಡಾ. ಡಿ.ಎನ್.ಮಿಶ್ರಾ ಬಾಲಕನಿಗೆ ಹೊರರೋಗಿಯಾಗಿ ಚಿಕಿತ್ಸೆ ನೀಡಿದ್ದರು.

ಡಿಸೆಂಬರ್ 16ರಿಂದ 21ರ ವರೆಗೂ ಹೊರರೋಗಿಯಾಗಿಯೇ ಆತನಿಗೆ ಚಿಕಿತ್ಸೆ ನೀಡಲಾಯಿತು. ಬಾಲಕನ ಆರೋಗ್ಯ ಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದ್ದರೂ ಆಸ್ಪತ್ರೆಯಲ್ಲಿ ದಾಖಲಿಕೊಳ್ಳಲಿಲ್ಲ. ಅಲ್ಲದೇ ಯಾವುದೇ ರೀತಿ ವೈದ್ಯಕೀಯ ಪರೀಕ್ಷೆಗೂ ಒಳಪಡಿಸಲಿಲ್ಲ. ಕೊನೇ ಗಳಿಗೆಯಲ್ಲಿ ಆಸ್ಪತ್ರೆಗೆ ಸೇರಿಸಿಕೊಳ್ಳಲಾಯಿತಾದರೂ ಕಾಲ ಮಿಂಚಿತ್ತು. ಬಾಲಕ ಆಸ್ಪತ್ರೆಯಲ್ಲಿ ಕೊನೆಯುಸಿ ರೆಳೆದಿದ್ದ.

ವೈದ್ಯರು ನಿರ್ಲಕ್ಷ್ಯ ತಾಳಿದ್ದರು ಎಂಬುದು ಆಸ್ಪತ್ರೆಯ ದಾಖಲೆಗಳಿಂದ ತಿಳಿದು ಬಂದಿದೆ ಎಂಬ ಅಭಿಪ್ರಾಯಕ್ಕೆ ಬಂದ ಆಯೋಗವು ಆಸ್ಪತ್ರೆಯ ಮತ್ತು ವೈದ್ಯರ ಎಲ್ಲಾ ವಾದವನ್ನು ತಳ್ಳಿಹಾಕಿ ಪಾಲಕರಿಗೆ 11 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಆದೇಶಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT