ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಲುಗಿದ್ದ ಮಾದರಿ ಶಾಲೆ ಬದಲಾಯಿತು

ಸಮಾಜಘಾತುಕ ಶಕ್ತಿಗಳ `ಅತಿಕ್ರಮಣ'ಕ್ಕೆ ಬೀಗ
Last Updated 3 ಜುಲೈ 2013, 5:56 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಶಾಲೆಯ ಕೊಠಡಿಗಳಲ್ಲಿ ಗಲೀಜು ಮಾಡುತ್ತಿದ್ದ ಸಮಾಜಘಾತುಕ ಶಕ್ತಿಯ ಉಪಟಳದಿಂದ ರೋಸಿ ಹೋಗಿದ್ದ ಈ ಶಾಲೆಯ ಸಿಬ್ಬಂದಿ ಕೆಲಸಕ್ಕೆ ಬರುವುದಕ್ಕೇ ಅಸಹ್ಯಪಡುತ್ತಿದ್ದ ಕಾಲವೊಂದಿತ್ತು. ಶಿಕ್ಷಕರು ಮುಂಜಾನೆ ಬಂದು ಪುಸ್ತಕ ತೆರೆಯುವ ಮೊದಲು ಕೊಠಡಿಯೊಳಗಿನ ಮಲ-ಮೂತ್ರ ತೆಗೆದು ಸ್ವಚ್ಛಗೊಳಿಸಬೇಕಿತ್ತು. ಶಾಲೆಯ ಈ ದುಃಸ್ಥಿತಿಯನ್ನು ಕಂಡು ಅವರು ಬೇಸರಗೊಂಡಿದ್ದರು. ಮಕ್ಕಳಂತೂ ಮೂಗು ಮುಚ್ಚಿಕೊಂಡೇ ಒಳಗೆ ಬಂದು ಕುಳಿತುಕೊಳ್ಳುತ್ತಿದ್ದರು.

ಶಾಲಾ ಕೊಠಡಿಗಳಲ್ಲಿ ಇಸ್ಪೀಟ್ ಆಡಿ, ಸಿಗರೇಟ್ ಸೇದಿ ಅಲ್ಲೇ ಮಲ-ಮೂತ್ರ ವಿಸರ್ಜಿಸಿ ಹೋಗುತ್ತ್ದ್ದಿದ ಪುಂಡರ ಕಾಟದಿಂದ ದನದ ದೊಡ್ಡಿಯಂತಾಗಿದ್ದ ಉಣಕಲ್‌ನ ಶಾಸಕರ ಸರ್ಕಾರಿ ಕನ್ನಡ ಮಾದರಿ ಶಾಲೆಯಲ್ಲಿ ಈಗ ಹೊಸತನದ ಹೂ ಅರಳಿದೆ. ಸಮಸ್ಯೆಗಳೇ ತುಂಬಿದ್ದ ಶಾಲೆಯಲ್ಲಿ ಸಿಬ್ಬಂದಿ ಮತ್ತು ಶಾಲಾ ಅಭಿವೃದ್ಧಿ ಸಮಿತಿಯವರು ಕೈಗೊಂಡ ದಿಟ್ಟ ಕ್ರಮಗಳಿಂದಾಗಿ ಈಗ ಕಲಿಕೆ ಸುಗಮವಾಗಿ ನಡೆಯುತ್ತಿದೆ. ಸುತ್ತಮುತ್ತಲ ಶಿಕ್ಷಣ ಪ್ರೇಮಿಗಳ ಬೆಂಬಲವೂ ಸಿಕ್ಕಿದ್ದರಿಂದ ಶಾಲೆಯು ಅಭಿವೃದ್ಧಿ ಪಥದಲ್ಲಿ ಹೆಜ್ಜೆ ಇಟ್ಟಿದೆ.

ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಶಾಸಕ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರ ಅನುದಾನದಲ್ಲಿ ಕೈಗೆತ್ತಿಕೊಂಡಿರುವ ಮಾದರಿ ಶಾಲೆ ಇದು. ಶತಮಾನ ಕಂಡಿರುವ ಶಾಲೆ ಉಣಕಲ್‌ನ ಗ್ರಾಮ ಕೇಂದ್ರ, ಸಿದ್ಧಪ್ಪಜ್ಜನ ಗುಡಿ ಮತ್ತಿತರ ಕಡೆಗಳಲ್ಲಿ ಇತ್ತು. ಕೊನೆಗೆ ಮುಖ್ಯ ರಸ್ತೆಯಲ್ಲಿರುವ ಸುಂದರ ಪ್ರದೇಶಕ್ಕೆ ಸ್ಥಳಾಂತರಗೊಂಡಿತ್ತು.

ಆರಂಭದಲ್ಲಿ ಎಲ್ಲವೂ ಸರಿ ಇದ್ದ ಈ ಶಾಲೆಯಲ್ಲಿ ನಂತರ ಕಾಣದ ಕೈಗಳ ಕಾಟ ಆರಂಭವಾಯಿತು. ರಾತ್ರಿಯಾದರೆ ಸಾಕು, ಪುಂಡ-ಪೋಕರಿಗಳು ಲಗ್ಗೆ ಇಟ್ಟು ಆಸ್ತಿ ಹಾಳು ಮಾಡತೊಡಗಿದರು. ಶಾಲೆಯ ಕಿಟಕಿ-ಬಾಗಿಲು ಗಳನ್ನು ಸುಟ್ಟು ಹಾಕುವ ಮಟ್ಟಕ್ಕೆ ಬೆಳೆದಿತ್ತು ಅವರ `ಶೌರ್ಯ'. ಶಾಲಾಭಿವೃದ್ಧಿ ಸಮಿತಿ ಸಹಯೋಗದಲ್ಲಿ ಹಮ್ಮಿಕೊಂಡ ವಿವಿಧ ಕಾರ್ಯಕ್ರಮಗಳ ಫಲವಾಗಿ ಈಗ ಶಾಲೆಯ ವಾತಾವರಣ ಸಂಪೂರ್ಣ ಬದಲಾಗಿದೆ.

ಎದ್ದು ನಿಂತ ಕಾಂಪೌಂಡ್: ಪುಂಡರನ್ನು ನಿಯಂತ್ರಿಸಲು ಕಾಂಪೌಂಡ್ ಅತ್ಯವಶ್ಯ ಎಂದು ಅರಿತುಕೊಂಡ  ಶಾಲಾಭಿವೃದ್ಧಿ ಸಮಿತಿ ಮತ್ತು ಸಿಬ್ಬಂದಿ ಇದನ್ನು ಸಾಕಾರ ಮಾಡಲು  ಶಾಸಕರ ಅನುದಾನದ ಮೊರೆ ಹೋದರು. ಹಣ ಬಂದ ಕೂಡಲೇ ಎತ್ತರದ ಗೋಡೆ ನಿರ್ಮಿಸಿ ಅದರ ಮೇಲೆ ತಂತಿ ಬೇಲಿ ಹಾಕಿಸಿದರು. ಬೃಹತ್ ಗೇಟ್ ಜೋಡಿಸಿದರು. ಹೀಗೆ ಶಿಕ್ಷಣ ದ್ವೇಷಿಗಳ ಮುಖ್ಯ ದಾರಿಯನ್ನು ಮೊದಲು ಮುಚ್ಚಲಾಯಿತು. ನಂತರ ಗ್ರಾಮಸ್ಥರ ಸಹಕಾರ ಕೋರಲಾಯಿತು.

`ಮನೆ ಮನೆಗೆ ತೆರಳಿ ಶಾಲೆಯನ್ನು ಉಳಿಸುವ ಸಾಹಸಕ್ಕೆ ಬೆಂಬಲ ನೀಡಬೇಕೆಂದು ಕೋರಿದೆವು. ಜನರೂ ಒಪ್ಪಿದರು. ಕೆಲವರು ಧನ ಸಹಾಯ ಮಾಡಲು ಮುಂದಾದರೆ ಇನ್ನೊಂದಿಷ್ಟು ಮಂದಿ ಊಟದ ತಾಟುಗಳನ್ನು ಕೊಡುಗೆಯಾಗಿ ನೀಡಿದರು. ಮತ್ತೆ ಕೆಲವರು ಕೊಳವೆ ಬಾವಿಗೆ ಜೋಡಿಸಿದ ಪಂಪ್ ವಿದ್ಯುತ್ ಬಿಲ್ ತುಂಬುವ ಮನಸ್ಸು ಮಾಡಿದರು; ಪೈಪ್‌ಗಳಿಗೆ ನಳ ಜೋಡಿಸಿಕೊಡುವುದಾಗಿ ಸಂಘಟನೆಯೊಂದು ಭರವಸೆ ನೀಡಿತು. ಬಾಗಿಲುಗಳಿಗೆ ಗಟ್ಟಿಯಾದ ಬೀಗ ಬಂತು, ಸಾಕಷ್ಟು ಶೌಚಾಲಯಗಳು ನಿರ್ಮಾಣಗೊಂಡವು. ಹೊಸ ಕೊಠಡಿಗಳನ್ನು ನಿರ್ಮಿಸುವ ಪ್ರಸ್ತಾವಕ್ಕೆ ಪೂರಕ ಪ್ರತಿಕ್ರಿಯೆ ಸಿಕ್ಕಿತು' ಎಂದು ಮುಖ್ಯ ಶಿಕ್ಷಕ ಪಿ.ಎಸ್. ಲಗಮಣ್ಣವರ `ಪ್ರಜಾವಾಣಿ'ಗೆ ತಿಳಿಸಿದರು.

`ಆಗಬೇಕಾದ ಕೆಲಸ ಇನ್ನೂ ಇದೆ. ಕೆಲವು ವಿಭಾಗಗಳಿಗೆ ಶೌಚಾಲಯಗಳ ಅಗತ್ಯ ಇದ್ದು ಅದನ್ನು ಬೇಗ ನಿರ್ಮಿಸಬೇಕಾಗಿದೆ. ಹನ್ನೊಂದು ಕೊಠಡಿಗಳು ಸೋರುತ್ತಿದ್ದು ದುರಸ್ತಿ ಮಾಡಿಸಬೇಕಾಗಿದೆ. ಶಾಲೆಯ ಆವರಣದಲ್ಲೇ ಇರುವ ಕ್ಷೇತ್ರ ಸಂಪನ್ಮೂಲ ಕೇಂದ್ರದ ಕಟ್ಟಡವನ್ನು ನವೀಕರಿಸಿ ವಿವಿಧೋದ್ದೇಶಕ್ಕೆ ಬಳಸಲು ಅನುಕೂಲ ಮಾಡಲಾಗುವುದು' ಎಂದರು.

`ಇದು ಹಳೆಯ ಶಾಲೆ. ಈ ಭಾಗದ ಬಡ ಮಕ್ಕಳ ಜ್ಞಾನದೇಗುಲ. ಇದನ್ನು ಉಳಿಸಬೇಕಾದುದು ನಮ್ಮ ಕರ್ತವ್ಯ. ಅದರಲ್ಲಿ ನಾವು ಸಫಲರಾಗಿದ್ದೇವೆ. ಅಭಿವೃದ್ಧಿಯ ಕಡೆ ಇಟ್ಟ ಈ ದಿಟ್ಟ ಶ್ರಮ ಹೀಗೇ ಮುಂದುವರಿಯಲಿದೆ' ಎಂಬುದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಾಮನಗೌಡ ಹನುಮಂತಗೌಡರ ಭರವಸೆಯ ಮಾತು.

`ಇದು ಊರ ಜನರ ಶಾಲೆ, ಅವರ ಮಕ್ಕಳ ಭವಿಷ್ಯ ಬೆಳಗುವ ಜಾಗ. ಶಾಲೆಯನ್ನು ಉಳಿಸುವ ಕೆಲಸಕ್ಕೆ ಅವರ ಬೆಂಬಲ ಮುಖ್ಯವಾಗಿತ್ತು. ಅದನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದೇವೆ. ಅವರ ಸಹಕಾರದಿಂದ ಈಗ ಎಲ್ಲವೂ ಸುಸೂತ್ರವಾಗಿ ಸಾಗುತ್ತಿದೆ' ಎಂದು ಹಿರಿಯ ಶಿಕ್ಷಕಿ ಎನ್.ಜಿ.ನಾಯಕ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT