ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವ ವಸಾಹತುಶಾಹಿ ಕಪಿಮುಷ್ಟಿಯಲ್ಲಿ ಪ್ರಜಾ-ಪ್ರಭುತ್ವ

Last Updated 13 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ನಮ್ಮ ಸರ್ಕಾರ ಅಷ್ಟೊಂದು ಜನವಿರೋಧಿ ಆಗಿದೆಯೇ ? ಅಥವಾ ಜನರೇ ಸರ್ಕಾರದ ವಿರುದ್ಧ ಆ ಪರಿ ಅಸಹನೆ ಹೊಂದಿದ್ದಾರೆಯೇ ? ಜನರು ಮತ್ತು ಸರ್ಕಾರದ ನಡುವಿನ ಸಂಬಂಧ ದಿನೇ ದಿನೇ ಯಾಕೆ ಇಷ್ಟೊಂದು ಅಪನಂಬಿಕೆಯನ್ನು ಬೆಳೆಸಿಕೊಳ್ಳುತ್ತಾ ಹೊರಟಿದೆ? ಅಷ್ಟಕ್ಕೂ ಈ ನಂಬಿಕೆಯ ಕೊರತೆಗೆ ಇರುವ ಮೂಲ ಕಾರಣಗಳಾದರೂ ಎಂತಹವುಗಳು ?

ಸಂಶಯವೇ ಬೇಡ. ಇದಕ್ಕೆಲ್ಲಾ ಕಾರಣ ನಮ್ಮನ್ನಾಳುವ ಪ್ರಭುಗಳು ಹಾಗೂ ಅದೇ ಪುರಾತನ ಪದ್ಧತಿಯ ಆಡಳಿತಶಾಹಿ ವ್ಯವಸ್ಥೆ. ಸ್ವಾತಂತ್ರ್ಯಕ್ಕೂ ಮುನ್ನ ಸರಿಸುಮಾರು 200 ವರ್ಷಗಳ ಕಾಲ ನಮ್ಮ ನೆಲದಲ್ಲಿ ವಸಾಹತುಶಾಹಿ ವ್ಯವಸ್ಥೆ ಬಲವಾಗಿ ಬೇರೂರಿತ್ತು. ಈ ಕೀಚಕ ವ್ಯವಸ್ಥೆ ಜನರು ಯಾವಾಗಲೂ ತಮ್ಮ ಸೇವಕರು ಎಂದೇ ನಂಬಿ ನಡೆದಿತ್ತು.

ಅವು ಕರಾಳ ಅಧ್ಯಾಯಗಳ ಇತಿಹಾಸವನ್ನು ಹೊದ್ದು, ಉಂಡು, ಹಾಸಿ ಮಲಗಿ ಎದ್ದು ಬದುಕಿದ ದಿನಗಳು. ಅಂತಹ ದುಃಸ್ವಪ್ನಗಳ ಜೀವನ ಕ್ರಮದಿಂದ ನಮ್ಮ ಭಾರತೀಯ ಸಮಾಜಕ್ಕೆ ಇನ್ನೂ ಹೊರಬರಲು ಸಾಧ್ಯವೇ ಆಗಿಲ್ಲ. ಹಾಗಾಗಿಯೇ ಇವತ್ತಿನ ಸರ್ಕಾರ ಮತ್ತು ಜನರ ನಡುವಿನ ಸಂಘರ್ಷಕ್ಕೆ ಈ ಇತಿಹಾಸದ ಕರಿನೆರಳು ದಟ್ಟವಾಗಿ ಕಾಡುತ್ತಲೇ ಇದೆ. ಇಬ್ಬರ ನಡುವಿನ ನಿರಂತರ ಕದನಕ್ಕೆ ಕಾರಣೀಭೂತವಾಗಿದೆ.

 

ಪರಂಗಿಯವರ ವಸಾಹತುಶಾಹಿ ವ್ಯವಸ್ಥೆ ತತ್ವಾಧಾರಿತ ಶೋಷಣೆ ಹೊಂದಿತ್ತು. ಜನರು ಮತ್ತು ಭೂಮಿಯನ್ನು ಅವರು ಸದಾ ತಮ್ಮ ಅಡಿಯಾಳಾಗಿರುವಂತೆಯೇ ನೋಡಿಕೊಂಡಿದ್ದರು. ಅವರೆಂದೂ ಜನರ ಕಲ್ಯಾಣ ತಮ್ಮ ಜವಾಬ್ದಾರಿ ಎಂದು ಅರಿತಿರಲೇ ಇಲ್ಲ. ಇಲ್ಲಿನ ಸಂಪತ್ತನ್ನು ಲೂಟಿ ಮಾಡುವುದೇ ಏಕೈಕ ಕಾಯಕ ಎಂದು ಬಗೆದಿದ್ದರು. ಜನರು ಎಂದರೆ ಅವರು ಯಾವತ್ತಿದ್ದರೂ ಕೂಲಿ ಕಾರ್ಮಿಕರು ಎಂದೇ ಎಣಿಸಿದ್ದರು.

ವಸಾಹತು ಶಾಹಿ ವ್ಯವಸ್ಥೆಗೂ ಮುನ್ನ ನಾವು ಚಕ್ರಾಧಿಪತ್ಯಗಳ ಸಾಮ್ರಾಜ್ಯವನ್ನೂ ಕಂಡುಂಡವರು. ಆಗಿನ ರಾಜರಿಗೆ ಜನರ ಬಗ್ಗೆ ಕನಿಷ್ಠ ಕರುಣೆಯಾದರೂ ಇರುತ್ತಿತ್ತು. ರಾಜ ಸದಾ ಜನರ ಜವಾಬ್ದಾರಿಯನ್ನು ಆಲೋಚಿಸುವಂತಹ ಧೋರಣೆ ಹೊಂದಿದ್ದ. ಹಾಗೆಂದಾಕ್ಷಣ ಆವತ್ತಿನ ದಿನಗಳಲ್ಲಿ ಶೋಷಣೆ ಇರಲೇ ಇಲ್ಲ ಎಂದೇನಿಲ್ಲ. ಅರಸನ ಅರಮನೆಯ ಮೆಟ್ಟಿಲುಗಳಾದ ವರ್ಗಗಳು ಸಾಕಷ್ಟು ಇದ್ದುವಾದರೂ ವಸಾಹತು ಕಲ್ಪನೆಯ ಮಟ್ಟಕ್ಕೆ ಇರಲಿಲ್ಲ.

ಇಂದಿನ ಪ್ರಜಾಪ್ರಭುತ್ವ ಸರ್ಕಾರಗಳಿಗೆ ಜನರ ಕಲ್ಯಾಣವೇ ಮಂತ್ರವಾಗಿದ್ದರೂ ಪರಿಸ್ಥಿತಿ ಮಾತ್ರ ಅದೇ ಬ್ರಿಟಿಷರ ದಿನಮಾನಗಳಲ್ಲಿ ಕುಂಟುತ್ತಾ ಸಾಗಿದೆ. ಸರ್ಕಾರಗಳು ಬೊಗಳೆ ಬಿಡುತ್ತಾ ಆಷಾಢಭೂತಿತನ ಪ್ರದರ್ಶಿಸುತ್ತಿವೆ.

ಸ್ವಜನರ ಹಿತಾಸಕ್ತಿಯೇ ಉದ್ಧಾರದ ಮಂತ್ರವೆಂದು ಜಪಿಸುತ್ತಿವೆ. ಹೀಗಾಗಿ ಈ ಸರ್ಕಾರಗಳ ಮೇಲೆ ಜನರ ರೊಚ್ಚು ಮತ್ತು ಅಸಹನೆ ಪುಟಿದು ಪುಟಿದು ಬೀದಿಗೆ ಬರುತ್ತಿದೆ.

ಈ ಮಾತಿಗೆ ಇತ್ತೀಚಿನ ಎರಡು ಉದಾಹರಣೆಗಳೇ ಸಾಕು. ಬದುಕಲು ಹೆಣಗುವ ದನಿಯಿಲ್ಲದ, ಕಸುವಿಲ್ಲದ ಜನರು ಸರ್ಕಾರದ ಅವಕೃಪೆಗೆ ಒಂದೇ ಸಮ ಒಳಗಾಗುತ್ತಲೇ ಬಂದಿದ್ದಾರೆ. ಇವರ ಬಗ್ಗೆ ಸರ್ಕಾರದ ನಿರ್ಲಕ್ಷ್ಯ ಮೇರೆ ಮೀರಿದೆ. ಇವರೆಲ್ಲಾ ತಮ್ಮ ಒಡಲೊಳಗಿನ ಬಡಬಾಗ್ನಿಯನ್ನು ರಸ್ತೆಗೆ ತಂದು ಸುರುವಿ ನಿಂತಿದ್ದಾರೆ. ಸಾತ್ವಿಕ ರೂಪದಲ್ಲೇ ಅತ್ಯಂತ ಅಚ್ಚರಿಯ ಹೋರಾಟಗಳಿಗೆ ಪ್ರೇರಣೆಯಾಗಿದ್ದಾರೆ.

ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯ ಓಂಕಾರೇಶ್ವರ ಅಣೆಕಟ್ಟು ವಿವಾದ ಇದಕ್ಕೊಂದು ಜ್ವಲಂತ ನಿದರ್ಶನ. ಅಣೆಕಟ್ಟು ಪ್ರದೇಶದ ನಿರ್ವಸತಿಗರ ಸಿಟ್ಟು ಅವರನ್ನೆಲ್ಲಾ ರಾತ್ರೋರಾತ್ರಿ ನರ್ಮದಾ ನದಿಯ ನೀರಿಗಿಳಿಸಿತು.

ಸಂತ್ರಸ್ತ ಗ್ರಾಮಗಳ ಜನರು 17 ದಿನ ನೀರಲ್ಲಿ ನಿಂತು ಅಖಂಡ ಸತ್ಯಾಗ್ರಹ ನಡೆಸಿದರು. 51ಕ್ಕೂ ಹೆಚ್ಚು ಹಿರಿಯ ನಾಗರಿಕರು ಅಷ್ಟೂ ದಿನಗಳ ಕಾಲ ನೀರಿನಲ್ಲೇ ನಿಂತದ್ದನ್ನು ನೋಡಿ ಇಡೀ ದೇಶ ನಿಬ್ಬೆರಗಾಯಿತು. ನೀರಿನಲ್ಲಿ ನಿಂತೂ ನಿಂತು ಅವರ ಪಾದಗಳೆಲ್ಲಾ ಸೆಲೆತು ಹೋಗಿದ್ದವು. ಅವರು ಅಷ್ಟು ದಿನ ಹೇಗೆ ನೀರಿನಲ್ಲಿ ನಿಂತಿದ್ದರು ಎಂಬುದನ್ನು ಕಲ್ಪಿಸಿಕೊಳ್ಳುವುದಕ್ಕೇ ಮನಸ್ಸು ಅಳುಕುವಂತಹ ಸ್ಥಿತಿ ಅದು.

ಪುನರ್ವಸತಿ ವಿಷಯದಲ್ಲಿ ತಮಗಾಗುತ್ತಿರುವ ಅನ್ಯಾಯ, ಕಳೆದುಕೊಳ್ಳುತ್ತಿರುವ ಭೂಮಿ, ತಿನ್ನಲು ಕೂಳಿಲ್ಲದಂತಾಗುವ ಭೀಷಣ ಭವಿಷ್ಯವನ್ನು ಹೊರಜಗತ್ತಿಗೆ ಸಾರಲು ಅವರು ಇಂತಹ ಅಪರೂಪದ ಅನಿವಾರ್ಯ ಹೋರಾಟಕ್ಕೆ ಅಣಿಯಾಗಿದ್ದರು. ಆ ಹಾದಿಯನ್ನು ತುಳಿದು ತಮ್ಮ ಹಕ್ಕುಗಳಿಗಾಗಿ ದನಿಯೆತ್ತಿದರು.

ಇದೇ ರೀತಿ ಭೂ ಸುಧಾರಣೆಗೆ ಆಗ್ರಹಿಸಿ ಗ್ವಾಲಿಯರ್‌ನಿಂದ ದೆಹಲಿಗೆ ಹೊರಟ 50 ಸಾವಿರ ಜನರ ಪಾದಯಾತ್ರೆ. 350 ಕಿಲೋ ಮೀಟರ್ ದೂರದ ರಾಜಧಾನಿಗೆ ಅಕ್ಟೋಬರ್ 3ರಿಂದ ಹೊರಟ ಈ ಯಾತ್ರೆಯ ಮೂಲ ಉದ್ದೇಶ ಭೂ ರಹಿತರಿಗೆ ಸರ್ಕಾರ ಭೂಮಿ ಹಂಚಬೇಕು ಎಂಬುದು.

ಯಾತ್ರೆ ದೆಹಲಿ ತಲುಪುವ ಮುನ್ನವೇ ಎಚ್ಚೆತ್ತುಕೊಂಡ ಸರ್ಕಾರ ಯಾತ್ರೆಯ 9ನೇ ದಿನ ಏಕ್ತಾ ಪರಿಷತ್ ನಾಯಕರ ಜೊತೆ ಮಾತುಕತೆ ನಡೆಸಿ ಅವರು ದೆಹಲಿ ತಲುಪದಂತೆ ನೋಡಿಕೊಂಡಿತು. ಅವರ ಬೇಡಿಕೆ ಈಡೇರಿಸಲು ಆರು ತಿಂಗಳ ಸಮಯ ಪಡೆಯಿತು.

ಪರಿಷದ್ ಮುಂದಿಟ್ಟಿರುವ ನಾಗರಿಕರ ಸನ್ನದುಗಳ ಅಂಶಗಳನ್ನು ಗಂಭೀರವಾಗಿ ಪರಿಶೀಲಿಸುತ್ತೇನೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಜೈರಾಮ್ ರಮೇಶ್ ಸಂಧಾನ ನಡೆಸಿ ಅವರನ್ನೆಲ್ಲಾ ಸಮಾಧಾನಪಡಿಸಿದರು. ಇಂತಹ ಒಂದು ಶಾಂತಿಯುತ ಚಳವಳಿಯ ಅಂತಃಸತ್ವ ಮತ್ತು ಧೈರ್ಯವನ್ನು ನಾವು ಮೆಚ್ಚಲೇಬೇಕು.

ಈ ಹೋರಾಟಗಳನ್ನು ಗಮನಿಸಿದಾಗ ನಮ್ಮ ಸರ್ಕಾರಗಳು ವಸಾಹತುಶಾಹಿ ವ್ಯವಸ್ಥೆಯ ಕಪಿಮುಷ್ಟಿಯಿಂದ ಹೊರಬರಲು ಇನ್ನೂ ಆಗುತ್ತಿಲ್ಲ ಎಂಬುದು ವೇದ್ಯವಾಗುತ್ತದೆ. ಅದೇ ಹಳೆಯ ಚಾಳಿಗಳು, ಸ್ವಯಂರಕ್ಷಣೆಗಾಗಿ ವಸಾಹತುಶಾಹಿಯ ಪೀಡಕ ಮನೋಭಾವ, ಜನವಿರೋಧಿ ಮನಸ್ಸುಗಳಲ್ಲೇ ಮುಳುಗಿ ಒದ್ದಾಡುತ್ತಿವೆ. ಕೆಸರಲ್ಲಿ ಮಲಗಿದ ಎಮ್ಮೆಗಳಂತೆ ಅವೇ ಪ್ರವೃತ್ತಿಗಳಲ್ಲಿ ಮಗ್ಗಲು ಬದಲಾಯಿಸುತ್ತಿವೆ.

ಅಂತೆಯೇ ಆಡಳಿತಶಾಹಿ ದಿನನಿತ್ಯ ಪೋಲು ಮಾಡುವ ಸರ್ಕಾರದ ಹಣವನ್ನು ನೋಡಿದರೆ ದಿಗಿಲಾಗುತ್ತದೆ. ನಮ್ಮಿಂದ ಆರಿಸಿಹೋದ ಜನಪ್ರತಿನಿಧಿಗಳು ಹಾಗೂ ಆಡಳಿತಶಾಹಿ ವ್ಯವಸ್ಥೆ ಸಾರ್ವಜನಿಕ ಬೊಕ್ಕಸದ ಹಣವನ್ನು ಮನಬಂದಂತೆ ಬಳಸುತ್ತಿದೆ. ಇದನ್ನು ಹೇಳುವವರು ಕೇಳುವವರೇ ಇಲ್ಲದಂತಾಗಿದೆ.

ಇವರ ವೈಯಕ್ತಿಕ ತೆವಲುಗಳಿಗೆಲ್ಲಾ ಬೊಕ್ಕಸದ ಹಣ ದುರ್ಬಳಕೆಯಾಗುತ್ತಿದೆ. ಡಿ ದರ್ಜೆಯ ಪರಿಚಾರಕರು, ಕಾರು ಚಾಲಕರು, ಕಚೇರಿಯಲ್ಲಿನ ನೌಕರರು ಹೀಗೆ ಹತ್ತಾರು ನಮೂನೆಯ ವರ್ಗ ಇವರಿಗಾಗಿಯೇ ಜನ್ಮ ತಾಳಿದಂತಿದೆ.

ಈ `ಸಾಹೇಬರ~ ಸೇವೆ ಅಬಾಧಿತವಾಗಿ ಸಾಗುತ್ತಿದೆ. ಈ ಅಧಿಕಾರಿಗಳ ಬೇಕುಬೇಡಗಳು ಮತ್ತು ಖ್ವಾಯಿಷ್‌ಗಳಿಗೆ ಜನರ ತೆರಿಗೆಯ ಹಣ ಪೋಲಾಗುತ್ತಿದೆ. ಇವರೆಲ್ಲಾ ತಮ್ಮನ್ನು ತಾವು ಮಹಾನ್ ಪ್ರಭೃತಿಗಳು ಎಂದೇ ಭಾವಿಸಿಕೊಂಡಿದ್ದಾರೆ. ವಸಾಹತುಶಾಹಿಯ ತೊತ್ತು ಎಂದೇ ಪರಿಭ್ರಮಿಸಿ ಬದುಕುತ್ತಿದ್ದಾರೆ.

ಸಾಮಾನ್ಯ ಜನರಿಗಿಂತ ನಾವು ಯಾವಾಗಲೂ ದೊಡ್ಡವರು ಎಂಬುದೇ ಇವರ ಭಾವನೆಯಾಗಿದೆ. ಬೊಕ್ಕಸದ ಹಣವನ್ನು ತಮ್ಮ ತೀಟೆಗಳಿಗೆ ಬಳಸಿಕೊಳ್ಳುತ್ತಿರುವುದಕ್ಕೆ ಇವರಲ್ಲಿ ಕಿಂಚಿತ್ತೂ ವಿಷಾದವಿಲ್ಲ. ಪರಿಚಾರಕರು ಎಂದರೆ ಇವರ ಬ್ಯಾಗು, ಲ್ಯಾಪ್‌ಟಾಪ್, ನೀರಿನ ಬಾಟಲಿ, ಸೂಟ್‌ಕೇಸ್,ಊಟದ ಡಬ್ಬಿಗಳನ್ನು ಹಿಡಿದು ಸಾಗುವುದಕ್ಕೇ ಇರುವ ಜನರು ಎಂದು ತಿಳಿದಿದ್ದಾರೆ.

ಈ ಪರಿಚಾರಕರು ಈ ಸಾಹೇಬರ ಬೂಟುಗಳನ್ನು ಬದಲಾಯಿಸಬೇಕು. ಇವರ ಹೆಂಡತಿ ಮಕ್ಕಳು, ಕುಟುಂಬದ ಬಂಧು ಬಾಂಧವರನ್ನೆಲ್ಲಾ ಸರ್ಕಾರಿ ವಾಹನಗಳಲ್ಲಿ ಪುಕ್ಕಟೆಯಾಗಿ ಹೇಳಿದಲ್ಲಿಗೆ ಕರೆದುಕೊಂಡು ಹೋಗಿ ಬಿಟ್ಟು ಬರಬೇಕು. ಅಧಿಕಾರಿ ಬಂದೊಡನೆ ಅವನಿಗೆ ನಡುಬಗ್ಗಿಸಿ ಕಾರಿನ ಬಾಗಿಲು ತೆಗೆದು ಡೊಗ್ಗು ಸಲಾಮು ಹಾಕಿ `ಸರ್~ ಎಂದು ಬಾಯ್ತುಂಬಾ ಅವರನ್ನು ಕರೆಯಬೇಕು. ಇಂತಹ ಜೀ ಹುಜೂರ್ ಸಂಸ್ಕೃತಿ ಕೇವಲ ಅಧಿಕಾರಿಯೊಬ್ಬನಿಗೇ ಸೀಮಿತವಾಗಿಲ್ಲ.

ಅವರ ಮನೆಮಂದಿಗೆಲ್ಲಾ ಅದು ಸಲ್ಲಬೇಕು. ಸಾಹೇಬರು `ಟೆನ್ನಿಸ್ ಕೋರ್ಟಿಗೆ ಹೋಗುತ್ತೇನೆ~ ಎಂದರೆ, ಅವರ ಪುಟಾಣಿ ಮಗಳು `ಡ್ಯಾನ್ಸ್ ಕ್ಲಾಸಿಗೆ ಹೋಗುತ್ತೇನೆ~ ಎಂದರೆ, ಮೇಮ್ ಸಾಹೇಬರು `ಕಿಟ್ಟಿಪಾರ್ಟಿಗೆ ಹೋಗುತ್ತೇನೆ~ ಎಂದರೆ ಸರ್ಕಾರದ ವಾಹನ ಬಾಗಿಲಲ್ಲಿ ತಯಾರಾಗಿ ನಿಂತಿರಬೇಕು.

ಇವರ ಮನೆಯ ಫೋನು, ವೈದ್ಯಕೀಯ ವೆಚ್ಚಗಳು, ಸಾರಿಗೆ ಭತ್ಯೆಗಳು ಇವೆಲ್ಲಾ ಸರ್ಕಾರದ ಸೇವೆಯಲ್ಲೇ ಸೇರಬೇಕು. ಮಧ್ಯಮ ಮತ್ತು ಹಿರಿಯ ಶ್ರೇಣಿಯ ಬಹುತೇಕ ಸರ್ಕಾರಿ ಅಧಿಕಾರಿಗಳು ಇಂದು ತಮ್ಮ ಮನೆಗಳ ವೆಚ್ಚವನ್ನು ಸಂಪೂರ್ಣವಾಗಿ ಸರ್ಕಾರಿ ಖರ್ಚಿನಲ್ಲೇ ನಿಭಾಯಿಸುತ್ತಿದ್ದಾರೆ. ಇವರಿಗೆಲ್ಲಾ ಜನರ ಉತ್ತರದಾಯಿತ್ವವೇ ಇಲ್ಲದಂತಾಗಿದೆ. ಇವರ ವೈಭವೋಪೇತ ಬದುಕು ನಿರ್ಲಜ್ಜತೆಗೆ ಸಾಕ್ಷಿಯಾಗಿದೆ.

ಆಳುವವರ ಆತ್ಮಸಾಕ್ಷಿ ಸತ್ತುಹೋಗಿರುವ ಸಂದರ್ಭದಲ್ಲಿ ಈ ಸಂಗತಿಗಳು ನಮ್ಮನ್ನು ಕಲುಕದೇ ಹೋದರೆ ಈ ಪ್ರಜಾಪ್ರಭುತ್ವಕ್ಕೆ ಉಳಿವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT