ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವದಶಕದ ಹೊಸ್ತಿಲಲ್ಲಿ; ಹಸನಾಗಲಿ ಭವಿಷ್ಯ

Last Updated 31 ಡಿಸೆಂಬರ್ 2010, 11:20 IST
ಅಕ್ಷರ ಗಾತ್ರ

ಮಾನವ ಸಮಾಜ 21ನೆಯ ಶತಮಾನದ ಮೊದಲ ದಶಕವನ್ನು ಪೂರೈಸಿದೆ. ಈ ಸಂದರ್ಭದಲ್ಲಿ ಗತ ದಶಕದ ರಸನಿಮಿಷಗಳನ್ನು, ಗೊಂದಲಗಳನ್ನು, ಸಂಕಟಗಳನ್ನು ನೆನೆಯುವುದು ಅಗತ್ಯ. ಹೊಸ ವರ್ಷವನ್ನು ಸಂಭ್ರಮದಿಂದ ಆಚರಿಸುವ ಪರಂಪರೆಯ ಹಿಂದೆ ಆತ್ಮಾವಲೋಕನದ ಕ್ರಿಯೆ ಇಲ್ಲದಿದ್ದಲ್ಲಿ ಭಾವುಕತೆಗೆ ಒಳಗಾಗುವ ಸಂದರ್ಭಗಳೇ ಹೆಚ್ಚಾಗುತ್ತದೆ. ಕಾಲ ಚಕ್ರ ಉರುಳುವುದು ಪ್ರಕೃತಿ ನಿಯಮವಾದದೂ ಉರುಳುವ ಕಾಲಚಕ್ರದ ಹೆಜ್ಜೆಗಳನ್ನು ನಿಯಂತ್ರಿಸುವ ಹೊಣೆಗಾರಿಕೆ ನಾಗರಿಕ ಸಮಾಜದ ಮೇಲಿರುತ್ತದೆ.

ಯಾವುದೇ ಸಮಾಜ ಕಳೆದ ವರ್ಷದ ಗತ ನಿಮಿಷಗಳನ್ನು ನೆನೆಯುವ ಸಂದರ್ಭದಲ್ಲಿ ತನ್ನ ತಪ್ಪು ಹೆಜ್ಜೆಗಳನ್ನು ಗುರುತಿಸದೆ ಹೋದಲ್ಲಿ ಹೊಸ ವರ್ಷವನ್ನು ಸ್ವಾಗತಿಸುವುದು ಕೇವಲ ಸಾಂಪ್ರದಾಯಿಕವಾಗುತ್ತದೆ. ಹ್ಯಾಪಿ ನ್ಯೂ ಇಯರ್ ಎಂಬ ಮುಗಿಲು ಮುಟ್ಟುವ ಘೋಷಣೆಗಳ ಹಿಂದೆ, ಮುಂಬರುವ ವರ್ಷದಲ್ಲಿ ಹರುಷವನ್ನು ಸೃಷ್ಟಿಸುವ ಸದುದ್ದೇಶವಿಲ್ಲದಿದ್ದರೆ, ಹೊಸ ವರ್ಷದ ಆಚರಣೆ ಕೇವಲ ಆಚರಣೆಯಾಗಿ ಮಾತ್ರ ಉಳಿದುಬಿಡುತ್ತದೆ. ಈ ಸಂದರ್ಭದಲ್ಲಿ ಗತ ವರ್ಷವನ್ನು ಮಾತ್ರವಲ್ಲದೆ ಶತಮಾನದ ಮೊದಲ ದಶಮಾನದ ಆಗುಹೋಗುಗಳನ್ನು ವಿಶ್ಲೇಷಿಸುವುದು ಅತ್ಯಗತ್ಯ.

21ನೆಯ ಶತಮಾನ ಆರಂಭವಾಗಿರುವ ವರ್ಷಗಳ ಈ ಸಂದರ್ಭದಲ್ಲಿ ವಿಶ್ವದ ಸಾಮಾನ್ಯ ಜನತೆಯ ಮನದಾಳದಲ್ಲಿ ಮೂಡಿದ್ದ ಆಕಾಂಕ್ಷೆಗಳು, ನಂಬಿಕೆಗಳು, ಭರವಸೆಗಳು ಮತ್ತು ಕನಸುಗಳು ಎಷ್ಟರ ಮಟ್ಟಿಗೆ ಸಾಕಾರಗೊಳ್ಳುವ ಸೂಚನೆಗಳು ಕಂಡುಬರುತ್ತಿವೆ ಎಂದು ಯೋಚಿಸಿದಾಗ ಖಿನ್ನತೆ ಮೂಡುತ್ತದೆ. ಇಡೀ ವಿಶ್ವವನ್ನೇ ಒಂದು ಪುಟ್ಟ ಹಳ್ಳಿಯಂತೆ ಕಾಣುವ ಕನಸು ಹೊತ್ತಿದ್ದ ಜಾಗತಿಕ ಬಂಡವಾಳ ವ್ಯವಸ್ಥೆ ಸಂಘಟಿತ ಮಾನವ ಸಮಾಜವನ್ನು ವಿಘಟನೆಯತ್ತ ಕೊಂಡೊಯ್ಯುವ ಮೂಲಕ ಮತ್ತೊಮ್ಮೆ ಮನುಕುಲವನ್ನು ವಿನಾಶದ ಹಾದಿಯಲ್ಲಿ ಸಾಗಿಸುತ್ತಿದೆ.

ಮಾಹಿತಿ ತಂತ್ರಜ್ಞಾನದ ಮೂಲಕ ಜಾಗತಿಕ ಹಣಕಾಸು ಬಂಡವಾಳವನ್ನು ವಿನಿಯೋಗಿಸಿ ಶ್ರಮವಿಲ್ಲದ ಅರ್ಥವ್ಯವಸ್ಥೆಯನ್ನು ಸೃಷ್ಟಿಸುವ ಭರಾಟೆಯಲ್ಲಿ ಮನುಕುಲ ತನ್ನ ಮಾನವೀಯ ನೆಲೆಗಳನ್ನೇ ಕಳೆದುಕೊಳ್ಳುತ್ತಿದೆ. ಜನಸಾಮಾನ್ಯರ ಆಶೋತ್ತರಗಳನ್ನು ಪೂರೈಸುವ ಹೊಣೆಗಾರಿಕೆಯನ್ನೇ ಮರೆತಿರುವ ರಾಜಕಾರಣಿಗಳು ಮೌಲ್ಯಗಳ ಅಧಃಪತನಕ್ಕೆ ಸುಭದ್ರ ಬುನಾದಿ ಒದಗಿಸುತ್ತಿರುವ ಈ ಸಂಧರ್ಭದಲ್ಲಿ ಹೊಸ ವರ್ಷವನ್ನು, ಹೊಸ ದಶಮಾನವನ್ನು ಸ್ವಾಗತಿಸಬೇಕಿದೆ. 

ಕಳೆದ ಎರಡು ದಶಕಗಳಿಂದ ಭಾರತೀಯ ಸಮಾಜವನ್ನು ಕಾಡುತ್ತಿರುವ ಅನೇಕ ಸಮಸ್ಯೆಗಳಲ್ಲಿ ನೈಸರ್ಗಿಕ ಪ್ರಕೋಪಗಳಿಗಿಂತಲೂ ಮಾನವ ಸಮಾಜದ ಸ್ವಯಂ ಕೃತ ವಿಕೋಪಗಳೇ ಹೆಚ್ಚಾಗಿರುವುದನ್ನು ಕಾಣಬಹುದು. ಪ್ರಕೃತಿದತ್ತ ಸಂಪನ್ಮೂಲಗಳನ್ನು ತನ್ನ ಐಷಾರಾಮಿ ಜೀವನ ಶೈಲಿಗೆ ಬಲಿ ಕೊಡುವ ಪರಂಪರೆಗೆ ಅಭಿವೃದ್ಧಿ-ಪ್ರಗತಿ ಎಂಬ ಹಣೆಪಟ್ಟಿ ನೀಡಿರುವ ಆಧುನಿಕ ಸಮಾಜ ತನ್ನ ಅವನತಿಗೆ ತಾನೇ ಮಾರ್ಗ ನಿರ್ಮಿಸಿಕೊಳ್ಳುತ್ತಿರುವುದು ಈ ಅವಧಿಯಲ್ಲಿ ಸಾಬೀತಾಗಿದೆ.

ಹೊಸ ದಶಮಾನವನ್ನು ಪ್ರವೇಶಿಸುತ್ತಿರುವ ನಾವು ಇತ್ತೀಚಿನ ದಿನಗಳಲ್ಲಿ ಭಯೋತ್ಪಾದಕ ದಾಳಿಗೆ ತುತ್ತಾಗದಿರುವುದು ಸಮಾಧಾನಕರ ಅಂಶವಾದರೂ, ಭಯೋತ್ಪಾದನೆ ಮತ್ತು ಕೋಮುವಾದದ ಪರಿಣಾಮಗಳಿಂದ ಮುಕ್ತವಾಗಿಲ್ಲ ಎಂದು ಸ್ಪಷ್ಟವಾಗಿ ಹೇಳಬಹುದು.

ಬೆಲೆ ಏರಿಕೆಯ ಸುಳಿಯಲ್ಲಿ ಸಿಲುಕಿ ನಲುಗಿ ಹೋಗುತ್ತಿರುವ ದೇಶದ ಶ್ರಮಿಕ ವರ್ಗಗಳು ಜವರಾಯನ ಪಾದ ಸೇರುತ್ತಿರುವಂತೆಯೇ ದಶಕದಲ್ಲಿ ಎರಡು ಬಾರಿ ಜನ ಪ್ರತಿನಿಧಿಗಳು ತಮ್ಮ ಸೌಕರ್ಯಗಳನ್ನು ಹೆಚ್ಚಿಸಿ ಕೊಂಡಿರುವುದು ಪ್ರಜಾಸತ್ತೆಯ ವಿಡಂಬನೆ. ಕಳೆದ 15 ವರ್ಷಗಳಲ್ಲಿ ಆತ್ಮಹತ್ಯೆಗೆ ಶರಣಾಗಿರುವ 2 ಲಕ್ಷ 50 ಸಾವಿರ ರೈತರು ಭಾರತೀಯ ಪ್ರಜಾಸತ್ತೆಯನ್ನೇ ಅಣಕಿಸುತ್ತಿದ್ದಾರೇನೋ ಎನಿಸುತ್ತದೆ. ಏತನ್ಮಧ್ಯೆ ಸ್ವತಂತ್ರ ಭಾರತದ ಇತಿಹಾಸದಲ್ಲೇ ಕಂಡು ಕೇಳರಿಯದ ಭ್ರಷ್ಟಾಚಾರದ ಹಗರಣಗಳು ಈ ದಶಕದಲ್ಲಿ ತಲೆದೋರಿವೆ. 2ಜಿ ತರಂಗಾಂತರ, ಆದರ್ಶ್ ವಸತಿ ಸಮುಚ್ಚಯ, ಕಾಮನ್‌ವೆಲ್ತ್ ಕ್ರೀಡಾಕೂಟ, ಭೂ ಹಗರಣಗಳು ಪ್ರಜ್ಞಾವಂತ ಜನತೆಯನ್ನು ತಲೆತಗ್ಗಿಸುವಂತೆ ಮಾಡಿವೆ.

2004ರಲ್ಲಿ ಸಂಭವಿಸಿದ ಸುನಾಮಿಯ ಅಲೆಗಳು ಮರೆಯಾಗಿದ್ದರೂ, ನೆನಪುಗಳು ಮರೆಯಾಗಿಲ್ಲ. ಸುನಾಮಿಯ ಅಲೆಗಳಿಗೆ ಬಲಿಯಾದವರಿಗಿಂತಲೂ ಹೆಚ್ಚಿನ ಸಂಖ್ಯೆಯ ಅಮಾಯಕ ಜನತೆ ಮಾನವ ಪ್ರೇರಿತ ದ್ವೇಷದ ಅಲೆಗಳಿಗೆ ಬಲಿಯಾದದ್ದನ್ನು 2002ರ ಗುಜರಾತ್ ಹತ್ಯಾಕಾಂಡಗಳು ನಿರೂಪಿಸಿವೆ. ಸುನಾಮಿ ಅಲೆಗಳು ಹಿಂದೆ ಸರಿದಿವೆ. ಆದರೆ ಮತೀಯತೆ , ಪ್ರಾದೇಶಿಕತೆ ಮತ್ತು ಜನಾಂಗೀಯ ದ್ವೇಷದ ಅಲೆಗಳು ವಿಭಿನ್ನ ಸ್ವರೂಪಗಳಲ್ಲಿ ಮುನ್ನುಗ್ಗುತ್ತಲೇ ಇವೆ. ಆಧುನಿಕ ನಾಗರಿಕತೆಯ ಬಗ್ಗೆ ಹೆಮ್ಮೆ ಪಡುವ ಮಾನವ ಸಮಾಜ ಪ್ರೀತಿ ಪ್ರೇಮಗಳನ್ನು ಹರಡುವ ಬದಲು ದ್ವೇಷ, ಅಸೂಯೆ ಮತ್ಸರಗಳನ್ನು ಹರಡುತ್ತಿದೆ.

ಮಾನವ ಚಂದ್ರನಲ್ಲಿ ನೀರಿನ ಅಂಶವನ್ನು ಕಂಡುಹಿಡಿದಿದ್ದಾನೆ. ಚಂದ್ರಲೋಕದಲ್ಲಿ ಜೀವಿಸುವ ಕನಸು ಕಾಣುತ್ತಿದ್ದಾನೆ. ಮಂಗಳ ಗ್ರಹ ಭೇದಿಸುವ ಛಲ ತೊಟ್ಟಿದ್ದಾನೆ. ತಂತ್ರಜ್ಞಾನ ಮತ್ತು ಆಧುನಿಕತೆ ಇಡೀ ವಿಶ್ವವನ್ನು ಕಿರಿದಾಗಿಸಿದೆ. ಹಾಗೆಯೇ ಮಾನವನ ಹೃದಯವೂ ಕಿರಿದಾಗುತ್ತಲೇ ಇದೆ. ಹಿಡಿಯಷ್ಟು ಇರುವ ಹೃದಯದ ವೈಶಾಲ್ಯತೆ ಅಪಾರ, ಸಾಗರದಷ್ಟು ಅಪಾರ. ಆದರೆ ಶತಮಾನಗಳನ್ನು ಸವೆಸಿದರೂ ಮಾನವ ಸಮಾಜ ಈ ವೈಶಾಲ್ಯತೆಯನ್ನು ಗ್ರಹಿಸಿಲ್ಲ ಎಂದು ಖೇದದಿಂದ ಹೇಳಬೇಕಾಗಿದೆ.

ಇಂದಿಗೂ ಮನುಕುಲ ಪ್ರೀತಿ ಪ್ರೇಮಗಳನ್ನು ಹರಡದೆ ದ್ವೇಷ, ವೈಷಮ್ಯಗಳನ್ನು ಹರಡುತ್ತಿದೆ. ಜೀವ ನೀಡಲಾಗದ ಕೈಗಳು ಜೀವ ತೆಗೆಯುತ್ತಿವೆ. ಮಾರುಕಟ್ಟೆ ಸಂಸ್ಕೃತಿಯಲ್ಲಿ ಎಲ್ಲವೂ ಮೌಲ್ಯಯುತವಾಗಿವೆ, ಮನುಜ ಜೀವ ಮಾತ್ರ ಮೌಲ್ಯ ಕಳೆದುಕೊಳ್ಳುತ್ತಿದೆ.  ಸೌಹಾರ್ದತೆ, ಸಮಾನತೆ, ಸಮರ್ಪಣಾ ಮನೋಭಾವಗಳು ನೇಪಥ್ಯಕ್ಕೆ ಸರಿದು, ಸ್ವಾರ್ಥ, ಅಧಿಕಾರ ಲಾಲಸೆ, ಭೋಗ ವಿಲಾಸಗಳು ಮೆರೆಯುತ್ತಿವೆ. ಇವೆಲ್ಲದರ ನಡುವೆಯೇ ಆಶಾಭಾವನೆಯನ್ನು ಹೊತ್ತು ಮುನ್ನಡೆವ ಛಲ ಹೊಂದೋಣ. ಭವಿಷ್ಯ ಹಸನಾಗುತ್ತದೆ ಎಂಬ ಭಾವನೆಯೊಡನೆ ಮುನ್ನಡೆಯೋಣ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT