ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವನಗರ: ಅಕ್ರಮ ಗೂಡಂಗಡಿ ತೆರವು

Last Updated 17 ಸೆಪ್ಟೆಂಬರ್ 2011, 6:55 IST
ಅಕ್ಷರ ಗಾತ್ರ

ಬಾಗಲಕೋಟೆ: ನವನಗರದ ಖಾಲಿ ನಿವೇಶನ ಮತ್ತು ಪಾದಾಚಾರಿ ಮಾರ್ಗ ಒತ್ತುವರಿ ಮಾಡಿಕೊಂಡಿದ್ದ 60ಕ್ಕೂ ಅಧಿಕ ಅಕ್ರಮ ಗೂಡಂಗಡಿ ಮತ್ತು ಖಾನಾವಳಿಗಳನ್ನು ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರಿ (ಬಿಟಿಡಿಎ) ಶುಕ್ರವಾರ ತೆರವುಗೊಳಿಸಿತು.

ನವನಗರದ ಎಪಿಎಂಸಿ ವೃತ್ತದಿಂದ ಆರಂಭಗೊಂಡ ಕಾರ್ಯಾಚರಣೆ ಜಿಲ್ಲಾಡಳಿತ ಭವನದ ಮುಂಭಾಗ, ಹಳೆ ಆರ್‌ಟಿಒ ಕಚೇರಿ ವೃತ್ತ, ಅಂಬೇಡ್ಕರ್ ಭವನ ವೃತ್ತ, ಜೆ ರಸ್ತೆ, ಜಿಲ್ಲಾ ಆಸ್ಪತ್ರೆ ವೃತ್ತ, ರಸ್ತೆ ಸಂಖ್ಯೆ 5 ಮತ್ತು 1 ಸೇರಿದಂತೆ ಪ್ರಮುಖ ಮಾರ್ಗದಲ್ಲಿ ನಿರ್ಮಾಣಗೊಂಡಿದ್ದ ಗೂಡಂಗಡಿ, ಖಾನಾವಳಿ, ಚಹಾದಂಗಡಿಗಳನ್ನು ತೆರವುಗೊಳಿಸಲಾಯಿತು.

ಬಿಟಿಡಿಎ ಅಧಿಕಾರಿಗಳು ಪೊಲೀಸ್ ಭದ್ರತೆಯೊಂದಿಗೆ ಜೆಸಿಬಿ, ಕ್ರೈನ್, ಟಿಪ್ಪರ್, ಟ್ಯ್ರಾಕ್ಟರ್ ಬಳಸಿ ಕೊಂಡು ಅಕ್ರಮ ಗೂಡಂಗಡಿ ತೆರವುಗೊಳಿಸಿದರು.

ಯಾವುದೇ ಮುನ್ಸೂಚನೆ ನೀಡದೇ ತೆರವುಗೊಳಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದ ಗೂಡಂಗಡಿ ವ್ಯಾಪಾರಸ್ಥರ ಯಾವುದೇ ಮನವಿಗೆ ಸ್ಪಂದಿಸದ ಅಧಿಕಾರಿಗಳು ತೆರವು ಕಾರ್ಯಾಚರಣೆ ಮುಂದುವರಿಸಿದರು.

ಬಿಟಿಡಿಎ ಕಾರ್ಯಾಚರಣೆಯಿಂದ ಬೀದಿಪಾಲಾದ ನೂರಾರು ಬಡ ವ್ಯಾಪಾರಿಗಳು ಅದರಲ್ಲೂ ಹೆಂಗಸರು ತಮ್ಮ ತುತ್ತನ್ನು ಕಸಿದುಕೊಂಡ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕಿದರು.
ಬಿಟಿಡಿಎ ಅಧಿಕಾರಿಗಳು ಕಾರ್ಯಾಚರಣೆಯನ್ನು ಆರಂಭಿಸುತ್ತಿದ್ದಂತೆ ಸ್ವಯಂ ಪ್ರೇರಿತರಾಗಿ ಗೂಡಿಂಗಡಿ ವ್ಯಾಪಾರಿಗಳು ಸಾಮಾನುಗಳನ್ನು ರಕ್ಷಿಸಿಕೊಂಡರು.

ಅಲ್ಪಸ್ವಲ್ಪ ವಿರೋಧದ ನಡುವೆಯೂ ಬಿಡಿಟಿಎ ಅಧಿಕಾರಿಗಳು ಯಂತ್ರಗಳ ಮೂಲಕ ಖಾನಾವಳಿ, ಗೂಡಂಗಡಿ, ತಳ್ಳುವ ಗಾಡಿ, ಬೀಡಾ ಅಂಗಡಿ, ಹಣ್ಣಿನ ಅಂಗಡಿಗಳನ್ನು ಬೇರೆಡೆಗೆ ಸ್ಥಳಾಂತರಿಸಿದರು.

ಜಿಲ್ಲಾಡಳಿತ ಭವನದ ಎದುರು ಬಿಟಿಡಿಎ ಅಧಿಕಾರಿಗಳು ತೆರವು ಕಾರ್ಯಾಚರಣೆ ನಡೆಸುತ್ತಿದ್ದ ಸಂದರ್ಭದಲ್ಲಿ `ಪ್ರಜಾವಾಣಿ~ಯೊಂದಿಗೆ ಮಾತನಾಡಿದ  ಸಾವಿತ್ರಿ ಬಾಯಿ ಬಿ. ಕರಿಯಣ್ಣವರ, ಯಾವುದೇ ಸೂಚನೆ ನೀಡದೇ ಬಿಟಿಡಿಎ ಸಿಬ್ಬಂದಿ ತೆರವುಗೊಳಿಸುತ್ತಿದ್ದಾರೆ, ಬಡವರ ಹೊಟ್ಟೆಗೆ ಕಲ್ಲುಹಾಕಿರುವ ಶಾಸಕರ ಮನೆ ಮುಂದೆ ವಿಷ ಕುಡಿದು ಸಾಯುತ್ತೇನೆ ಎಂದು ಬೆದರಿಕೆ ಹಾಕಿದರು.

ಜಿಲ್ಲಾಡಳಿತ ಭವನ ಆರಂಭವಾದ ದಿನದಿಂದಲೂ ಖಾನಾವಳಿಯನ್ನು ನಡೆಸುತ್ತಿದ್ದೇನೆ, ಹಳ್ಳಿ ಜನರಿಂದ ಒಂದಷ್ಟು ವ್ಯಾಪಾರ ಆಗುತ್ತಿತ್ತು. ಇದನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದೇನೆ, ವಯಸ್ಸಾಗಿದೆ, ಗೂಡಂಗಡಿ ನಾಶ ಮಾಡಿದ್ದಾರೆ, ಜೀವನ ನಡೆಸಲಿ ಎಂದು ಆತಂಕ ವ್ಯಕ್ತಪಡಿಸಿದರು.

ಬಿಟಿಡಿಎ ಕಾರ್ಯನಿರ್ವಾಹಕ ಎಂಜಿನಿಯರ್ ಎ.ಟಿ. ಚೌದರಿ ಮತ್ತು ಎಸ್.ಸಿ.ಆಡಿನ್ `ಪತ್ರಿಕೆ~ಯೊಂದಿಗೆ ಮಾತನಾಡಿ, ಈಗಾಗಲೇ ಅಕ್ರಮವಾಗಿ ಗೂಡಂಗಡಿ ನಡೆಸುವವರಿಗೆ ಸೂಚನೆ ನೀಡಿದ್ದೇವೆ, ಗುರುವಾರ ಸಂಜೆಯೂ ಕೊನೆಯ ಸೂಚನೆ ನೀಡಿಲಾಗಿತ್ತು. ಅಂತೆಯೇ ತೆರವು ಕಾರ್ಯಾಚರಣೆ ನಡೆಸುತ್ತಿದ್ದೇವೆ. ನಾಳೆಯೂ ಕೆಲವೆಡೆ ಅಕ್ರಮ ಗೂಡಂಗಡಿಗಳ ತೆರವು ಕಾರ್ಯಾಚರಣೆ ನಡೆಸುತ್ತೇವೆ ಎಂದು ಹೇಳಿದರು.

ಕಾರ್ಯಾಚರಣೆ ನಡೆಯುತ್ತಿದ್ದ ಸ್ಥಳಕ್ಕೆ ಆಗಮಿಸಿದ್ದ ನಗರ ಕಾಂಗ್ರೆಸ್ ಘಟಕದ ಅಧ್ಯಕ್ಷ ಎ.ಡಿ.ಮೊಕಾಶಿ `ಪತ್ರಿಕೆ~ಯೊಂದಿಗೆ ಮಾತನಾಡಿ, ನವನಗರ ಇನ್ನೂ ಅಭಿವೃದ್ಧಿ ಕಂಡಿಲ್ಲ, ಕೆಲವೆಡೆ ಈಗ ತಾನೇ ಜನರು ಬಂದು ನೆಲೆಸುತ್ತಿದ್ದಾರೆ. ಅಗತ್ಯ ವಸ್ತುಗಳಿಗೆ ಮತ್ತು ಹೋಟೆಲ್‌ಗಳಿಗೆ ಕಿ.ಮೀ. ದೂರ ಅಲೆಯಬೇಕಾಗುತ್ತದೆ, ಇಂತಹ ಸಂದರ್ಭದಲ್ಲಿ ಗೂಡಂಗಡಿಗಳಿಂದ ಜನಸಾಮಾನ್ಯರಿಗೆ ಅನುಕೂಲವಾಗಿದೆ, ಯಾವುದೇ ಮುನ್ಸೂಚನೆ ನೀಡದೇ ತೆರವುಗೊಳಿಸುತ್ತಿರುವ ಬಿಟಿಡಿಎ ಕ್ರಮ ಖಂಡನೀಯ ಎಂದರು.

ನಗರ ಸಂಪೂರ್ಣ ಅಭಿವೃದ್ಧಿಯಾದ ಬಳಿಕ  ಗೂಡಂಗಡಿ ತೆರವುಗೊಳಿಸಲಿ ಎಂದ ಅವರು, ಬಡವರು, ನಿರುದ್ಯೋಗಿಗಳು ಸಾವಿರಾರು ರೂಪಾಯಿ ಬಂಡವಾಳ ಹಾಕಿಕೊಂಡು ಬರುವ ಅಲ್ಪಸ್ವಲ್ಪ ಆದಾಯದಲ್ಲಿ ಕುಟುಂಬಗಳನ್ನು ನಿರ್ವಹಣೆ ಮಾಡುತ್ತಿದ್ದಾರೆ. ಅವರ ಬದುಕಿಗೆ ಕಲ್ಲುಹಾಕುವ ಕೆಲಸವನ್ನು ಸ್ಥಳೀಯ ಶಾಸಕರು ಬಿಡಬೇಕು ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT