ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವಿಲೇ... ಇಂಚಗೇರಿ ನವಿಲೇ...

Last Updated 21 ಮೇ 2012, 19:30 IST
ಅಕ್ಷರ ಗಾತ್ರ

ವಿಜಾಪುರ ಜಿಲ್ಲೆ ಇಂಡಿ ತಾಲ್ಲೂಕಿನ ಇಂಚಗೇರಿ ಎರಡು ಕಾರಣದಿಂದ ಪ್ರಸಿದ್ಧ. ಒಂದು- ಇಲ್ಲಿರುವ ಮಠ; ಇನ್ನೊಂದು- ಮಠದ ಆವರಣ ಮತ್ತು ಸುತ್ತಮುತ್ತ ಬೀಡುಬಿಟ್ಟ ನವಿಲುಗಳು.

ಸಪ್ತಮಹಾರಾಜರ ಕತೃ ಗದ್ದುಗೆಗಳ ಜಾಗೃತ ಸ್ಥಳವಾದ ಈ ಮಠಕ್ಕೆ ಕರ್ನಾಟಕ ಮಾತ್ರವಲ್ಲದೆ ನೆರೆಯ ಮಹಾರಾಷ್ಟ್ರದಲ್ಲೂ ದೊಡ್ಡ ಸಂಖ್ಯೆಯಲ್ಲಿ ಭಕ್ತರಿದ್ದಾರೆ. ಜತೆಗೆ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗಳೂ ಬರುತ್ತಾರೆ. ಹೀಗೆ ಬಂದವರು ಗರಿಗೆದರಿಕೊಂಡು ನರ್ತಿಸುವ, ಹಾಯಾಗಿ ನಲಿದಾಡುವ, ಸ್ವಚ್ಛಂದವಾಗಿ ವಿಹರಿಸುವ ನವಿಲುಗಳ ಸೌಂದರ್ಯಕ್ಕೆ ಮನಸೋಲುತ್ತಾರೆ.

ಪ್ರತಿನಿತ್ಯ ಸೂರ್ಯೋದಯ ಹಾಗೂ ಸೂರ್ಯಾಸ್ತದ ವೇಳೆಯಲ್ಲಿ ಶ್ರೀಮಠ, ಶ್ರೀ ಸದ್ಗುರು ಮಾಧವಾನಂದ ಪ್ರಭೂಜಿ ಪ್ರೌಢ ಶಾಲೆಯ ಆವರಣ ಹಾಗೂ ಸುತ್ತಲಿನ ಪ್ರದೇಶದಲ್ಲಿ ಪುಟ್ಟ ಪುಟ್ಟ ಹೆಜ್ಜೆ ಇಡುತ್ತ, ಆಹಾರ ಅರಸುತ್ತ ಗುಂಪು ಗುಂಪಾಗಿ ವಿಹರಿಸುವ ನವಿಲು ಹಿಂಡು ನೋಡುವುದೇ ಚಂದ.

ನಸುಕಿನಲ್ಲಿ ಇತ್ತ ಶ್ರೀಮಠದಲ್ಲಿ ಜಾಗಟೆ ಹಾಗೂ ತಾಳಗಳ ನಿನಾದದೊಂದಿಗೆ ಪೂಜೆ ನಡೆಯುತ್ತಿದ್ದಂತೆ ಅತ್ತ ಆವರಣದಲ್ಲಿ ಎಲ್ಲೆಡೆ ಕ್ಯಾಂವ್... ಕ್ಯಾಂವ್... ಕ್ಯಾಂವ್.... ಎಂದು ನವಿಲುಗಳ ಸಾಮೂಹಿಕ ಕೂಗು ಶುರುವಾಗುತ್ತದೆ. ದಿನವಿಡೀ ಮಠದ ಹೊಲಗದ್ದೆಗಳಲ್ಲಿ ಆಹಾರಕ್ಕಾಗಿ ಹುಳಹುಪ್ಪಡಿಗಳನ್ನು ಅರಸುತ್ತ ಸಂಚರಿಸುವ ಈ ನವಿಲುಗಳು

ಸಂಜೆಯಾಗುತ್ತಿದ್ದಂತೆ ಹಿಂಡು-ಹಿಂಡಾಗಿ ಮಠದ ಆವರಣವನ್ನು ಪ್ರವೇಶಿಸಿ ಅಲ್ಲಲ್ಲಿ ಗರಿಗೆದರಿಕೊಂಡು ನರ್ತಿಸುತ್ತವೆ. ಶ್ರೀಮಠದ ಆವರಣದಲ್ಲಿ ಕಾಳುಕಡಿ ಹಸನುಗೊಳಿಸಿದ ನಂತರ ಬಿದ್ದ ಅಳಿದುಳಿದ ಕಾಳುಗಳನ್ನು ತಿನ್ನುತ್ತ ಎಲ್ಲೆಂದರಲ್ಲಿ ನಿರ್ಭಯದಿಂದ ಸಂಚರಿಸುತ್ತವೆ.

ಈ ನವಿಲುಗಳಿಗೆ ಇಲ್ಲಿ ಯಾರ ಉಪದ್ರವವೂ ಇಲ್ಲ. ಹಾಗೆಯೇ ನವಿಲುಗಳಿಂದಲೂ ಯಾವುದೇ ರೀತಿಯ ಹಾನಿಯಿಲ್ಲ. ಬದಲಾಗಿ ಅವು ತಡಕಾಡಿ ಹುಳಹುಪ್ಪಡಿಗಳನ್ನು ಹೆಕ್ಕಿ ತಿನ್ನುವುದರಿಂದ ಬೆಳೆಗಳಿಗೆ ಕೀಟದ ಬಾಧೆ ಇಲ್ಲದಂತೆ ಮಾಡುತ್ತಿವೆ, ರೈತನ ಮಿತ್ರನಾಗಿವೆ.

80ರ ದಶಕದಲ್ಲಿ ಕೇವಲ ಬೆರಳೆಣಿಕೆಯಷ್ಟಿದ್ದ ನವಿಲುಗಳ ಸಂತತಿ ವರ್ಷದಿಂದ ವರ್ಷಕ್ಕೆ ವೃದ್ಧಿಯಾಗುತ್ತ ಇಂದು ಸಾವಿರದ ಸಂಖ್ಯೆಯನ್ನೂ ಮೀರಿವೆ. ಇಂಚಗೇರಿ ಭಾಗದಲ್ಲಿರುವ ಗುಡ್ಡಗಳ ಸಾಲು, ಮಠದ ಸುತ್ತ ಗಿಡಮರಗಳು, ಪ್ರಶಾಂತ ವಾತಾವರಣ ಈ ನವಿಲುಗಳ ವಾಸಕ್ಕೆ ಅತ್ಯಂತ ಪ್ರಶಸ್ತ ಸ್ಥಳವಾಗಿದೆ.

ಅಷ್ಟೇ ಅಲ್ಲ. ಈ ಭಾಗದ ಜನರ ಹಾಗೂ ಮಠದ ಭಕ್ತರ ಪಕ್ಷಿಪ್ರೇಮವೂ ನವಿಲುಗಳ ಸಂಖ್ಯೆ ಹೆಚ್ಚಳಕ್ಕೆ ಸಹಕಾರಿಯಾಗಿದೆ.ಇಂಚಗೇರಿ ಸುತ್ತಮುತ್ತಲಿನ ಪ್ರದೇಶದಲ್ಲಿ ನವಿಲುಗಳು ಬಹುಸಂಖ್ಯೆಯಲ್ಲಿ ಇರುವುದನ್ನು ಗಮನಿಸಿಯೇ ಈ ಹಿಂದೆ `ನಾನೂ ನೀನು ಜೋಡಿ~ ಚಿತ್ರ ತಂಡದವರು `ನವಿಲೇ....ನವಿಲೇ....ಮಾಯದ ನವಿಲೇ....~ ಎಂಬ ಹಾಡಿಗೆ ಇಲ್ಲಿ ಚಿತ್ರೀಕರಣ ಮಾಡಿದ್ದರು.

~ನವಿಲುಧಾಮ~ ನೋಡಲು ಶ್ರೀಕ್ಷೇತ್ರ ಇಂಚಗೇರಿ ಮಠಕ್ಕೆ ಆಗಮಿಸುವ ಪ್ರವಾಸಿಗರಿಗೆ ಸರಿಯಾದ ಸಾರಿಗೆ ಸೌಲಭ್ಯವೂ ಇದೆ. ವಿಜಾಪುರದಿಂದ ಇಂಚಗೇರಿಗೆ ಕನ್ನೂರ ಅಥವಾ ಹೊರ್ತಿ ಮಾರ್ಗವಾಗಿ ಬರಬಹುದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT