ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವೋದಯ ಶಾಲೆ ತ್ರಿಭಾಷಾ ಸೂತ್ರ

Last Updated 15 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಗ್ರಾಮೀಣ ಭಾಗದ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ನೀಡಬೇಕು ಎಂಬ ಉದ್ದೇಶದಿಂದ 1986ರ ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಗುಣವಾಗಿ ಕೇಂದ್ರ ಸರ್ಕಾರ ಪ್ರತಿ ಜಿಲ್ಲೆಯಲ್ಲೂ ಜವಾಹರ್ ನವೋದಯ ವಿದ್ಯಾಲಯಗಳನ್ನು ಆರಂಭಿಸಿದೆ. ಈ ಮೂಲಕ, ತ್ರಿಭಾಷಾ ಮಾಧ್ಯಮದಲ್ಲಿ ವ್ಯಾಸಂಗ ಮಾಡುವ ಸುವರ್ಣ ಅವಕಾಶವನ್ನು ವಿದ್ಯಾರ್ಥಿಗಳಿಗೆ ಕಲ್ಪಿಸಿಕೊಟ್ಟಿದೆ.

6ರಿಂದ 12ನೇ ತರಗತಿವರೆಗೆ ಈ ವಿದ್ಯಾಲಯಗಳಲ್ಲಿ ಶಿಕ್ಷಣ ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಕೇಂದ್ರ ಮಾಧ್ಯಮಿಕ ಶಿಕ್ಷಣ ಮಂಡಳಿ ನಡೆಸುವ 10 ಮತ್ತು 12ನೇ ತರಗತಿ ಪರೀಕ್ಷೆಗಳನ್ನು ತೆಗೆದುಕೊಳ್ಳಲಿದ್ದಾರೆ.

ಇವು ಸಹಶಿಕ್ಷಣ ನೀಡುವ ವಸತಿ ಶಾಲೆಗಳಾಗಿದ್ದು, ಬಹುತೇಕ ಉಚಿತ ಶಿಕ್ಷಣ ನೀಡಲಾಗುತ್ತದೆ.  ವಿದ್ಯಾರ್ಥಿಗಳ ವಿಶೇಷ ವಲಸೆ ನೀತಿ ಅನ್ವಯ ರಾಷ್ಟ್ರೀಯ ಐಕ್ಯತೆ ಸಾಧಿಸುವ ಸಲುವಾಗಿ 9ನೇ ತರಗತಿ ವಿದ್ಯಾರ್ಥಿಗಳನ್ನು ಹಿಂದಿ ಮಾತನಾಡದ ರಾಜ್ಯಗಳಿಂದ ಹಿಂದಿ ಮಾತನಾಡುವ ರಾಜ್ಯಗಳಿಗೆ ಹಾಗೂ ಹಿಂದಿ ಮಾತನಾಡುವ ರಾಜ್ಯಗಳಿಂದ ಹಿಂದಿ ಮಾತನಾಡದ ರಾಜ್ಯಗಳಿಗೆ ಕಳುಹಿಸಿಕೊಡಲಾಗುತ್ತದೆ.

2014-– 15ನೇ ಸಾಲಿನ ನವೋದಯ ಶಾಲೆಗಳ ಪ್ರವೇಶಕ್ಕಾಗಿ ಮುಂಬರುವ ಫೆಬ್ರುವರಿ 8ರಂದು ಪ್ರವೇಶ ಪರೀಕ್ಷೆ ನಡೆಯಲಿದೆ. ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಸರ್ಕಾರಿ, ಅನುದಾನಿತ, ಖಾಸಗಿ ಶಾಲೆ ಸೇರಿದಂತೆ ಮಾನ್ಯತೆ ಪಡೆದ ಶಾಲೆಗಳಲ್ಲಿ ಐದನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅರ್ಹರು.

ಅಕ್ಟೋಬರ್ 31 ಕೊನೆ ದಿನ
ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅಕ್ಟೋಬರ್ 31 ಕೊನೆಯ ದಿನವಾಗಿದೆ. ಆಯಾ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಸರ್ವ ಶಿಕ್ಷಣ ಅಭಿಯಾನ ಕೇಂದ್ರ, ಆಯಾ ಜಿಲ್ಲೆಯ ಐದನೇ ತರಗತಿಯುಳ್ಳ ಹಾಗೂ ಮಾನ್ಯತೆ ಪಡೆದ ಯಾವುದೇ ಶಾಲೆಯ ಮುಖ್ಯೋಪಾಧ್ಯಾಯರು ಅಥವಾ ಜಿಲ್ಲಾ ಉಪ ನಿರ್ದೇಶಕರ ಕಚೇರಿಗಳಲ್ಲಿ ಪ್ರವೇಶ ಪರೀಕ್ಷೆಗೆ ಸಂಬಂಧಿಸಿದ ಅರ್ಜಿ ಮತ್ತು ವಿವರಣಾ ಪುಸ್ತಕ ಉಚಿತವಾಗಿ ದೊರೆಯಲಿದೆ.

ನವೋದಯ ವಿದ್ಯಾಲಯಗಳ ಪ್ರಾಚಾರ್ಯರಿಂದ ಅಥವಾ ವೆಬ್‌ಸೈಟ್‌ನಿಂದಲೂ ಅರ್ಜಿ ಪಡೆಯಬಹುದು. ಶಾಲಾ  ಮುಖ್ಯೋಪಾಧ್ಯಾಯರಿಂದ ಹೆಚ್ಚಿನ ಮಾಹಿತಿ ಪಡೆಯ­ಬಹು­ದಾಗಿದೆ. ಭರ್ತಿ ಮಾಡಿದ ಅರ್ಜಿಗಳನ್ನು ಆಯಾ ಶಾಲೆಯ ಮುಖ್ಯೋಪಾಧ್ಯಾಯರ ಸಹಿಯೊಂದಿಗೆ ಕ್ಷೇತ್ರ ಶಿಕ್ಷಣಾಧಿಕಾರಿ­ಗಳಿಗೆ ಅಕ್ಟೋಬರ್ 31ರ ಒಳಗೆ ಸಲ್ಲಿಸಬೇಕು.

ಅಭ್ಯರ್ಥಿ ಬರೆಯುವ ಪರೀಕ್ಷಾ ಮಾಧ್ಯಮವು ವ್ಯಾಸಂಗ ಮಾಡುತ್ತಿರುವ 5ನೇ ತರಗತಿಯ ಮಾಧ್ಯಮಕ್ಕೆ ಸೀಮಿತವಾಗಿರುತ್ತದೆ. ಯಾವುದೇ ಅಭ್ಯರ್ಥಿಗೆ ಎರಡನೇ ಬಾರಿ ಪರೀಕ್ಷೆ ಬರೆಯಲು ಅವಕಾಶ ನೀಡುವುದಿಲ್ಲ. 2001ರ ಮೇ ಒಂದರಿಂದ 2005ರ ಏಪ್ರಿಲ್ 30ರ ಅವಧಿಯಲ್ಲಿ ಜನಿಸಿರುವ ಮಕ್ಕಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ.

ಶೇ 75ರಷ್ಟು ಸೀಟುಗಳು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಹಾಗೂ ಶೇ 25ರಷ್ಟು ಸೀಟುಗಳು ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಮೀಸಲಾಗಿರುತ್ತವೆ. ಪರಿಶಿಷ್ಟ ಜಾತಿಗೆ ಶೇ 15, ಪಂಗಡಕ್ಕೆ ಶೇ 7.5 ಹಾಗೂ ಅಂಗವಿಕಲ ಮಕ್ಕಳಿಗೆ ಶೇ 3ರಷ್ಟು ಮೀಸಲಾತಿ ಇರುತ್ತದೆ. ಅಲ್ಲದೆ ಬಾಲಕಿಯರಿಗೆ ಶೇ 33ರಷ್ಟು ಮೀಸಲಾತಿ ನೀಡಲಾಗುತ್ತದೆ.

ಪ್ರತಿ ವಿದ್ಯಾಲಯದಲ್ಲೂ 6ನೇ ತರಗತಿಗೆ ಪ್ರವೇಶ ಪರೀಕ್ಷೆ ಮೂಲಕ ಯೋಗ್ಯ ಅಭ್ಯರ್ಥಿಗಳ ಲಭ್ಯತೆಯನ್ನು ಆಧರಿಸಿ ಗರಿಷ್ಠ 80 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗುತ್ತದೆ. ವಿದ್ಯಾಲಯದಲ್ಲಿ ಸಾಕಷ್ಟು ಸ್ಥಳಾವಕಾಶ ಇಲ್ಲದಿದ್ದರೆ ವಿದ್ಯಾರ್ಥಿಗಳ ಸಂಖ್ಯೆಯನ್ನು 40ಕ್ಕೆ ಇಳಿಸುವ ಅಧಿಕಾರವನ್ನು ನವೋದಯ ವಿದ್ಯಾಲಯ ಸಮಿತಿ ಹೊಂದಿರುತ್ತದೆ. ಒಮ್ಮೆ ಒಂದು ಶಾಲೆಯಲ್ಲಿ ಪ್ರವೇಶ ಪಡೆದ ನಂತರ ಮತ್ತೊಂದು ಶಾಲೆಗೆ ವರ್ಗಾವಣೆ ನೀಡಬೇಕು ಎಂಬ ಮನವಿಗಳನ್ನು ಯಾವುದೇ ಕಾರಣಕ್ಕೂ ಪರಿಗಣಿಸುವುದಿಲ್ಲ.

ಗ್ರಾಮೀಣ ಅಭ್ಯರ್ಥಿ ಕೋಟಾದಲ್ಲಿ ಸೀಟು ಪಡೆಯಲು ಬಯಸುವವರು 3ರಿಂದ 5ನೇ ತರಗತಿವರೆಗೂ ಗ್ರಾಮೀಣ ಪ್ರದೇಶದ ಮಾನ್ಯತೆ ಪಡೆದ ಶಾಲೆಯಲ್ಲಿ ವ್ಯಾಸಂಗ ಮಾಡಿರಬೇಕು. ಯಾವುದೇ ಅಭ್ಯರ್ಥಿ ನಗರ ಪ್ರದೇಶದಲ್ಲಿ ಸ್ಥಾಪಿತವಾಗಿರುವ ಶಾಲೆಯಲ್ಲಿ ಒಂದು ದಿನ ವ್ಯಾಸಂಗ ಮಾಡಿದ್ದರೂ, ಅಂತಹ ಅಭ್ಯರ್ಥಿಯನ್ನು ನಗರ ಅಭ್ಯರ್ಥಿ ಎಂದು ಪರಿಗಣಿಸಲಾಗುತ್ತದೆ.

ಪ್ರವೇಶ ಪರೀಕ್ಷೆ
21 ಭಾಷೆಗಳ ಪೈಕಿ ಯಾವುದಾದರೂ ಒಂದು ಭಾಷಾ ಮಾಧ್ಯಮದಲ್ಲಿ ಪರೀಕ್ಷೆ ಬರೆಯಬಹುದು. ಪ್ರವೇಶ ಪರೀಕ್ಷೆ ಎರಡು ಗಂಟೆಗಳ ಅವಧಿಯ­ದ್ದಾಗಿದ್ದು, ಒಟ್ಟು ಮೂರು ವಿಭಾಗಗಳನ್ನು ಒಳಗೊಂಡಿರುತ್ತದೆ. ವಸ್ತುನಿಷ್ಠ ಮಾದರಿಯ ಪರೀಕ್ಷೆ ಇದಾಗಿದೆ. ಫೆಬ್ರುವರಿ 8ರಂದು ಪರೀಕ್ಷೆ ನಡೆಸಿ, ಮೇ  ಅಂತ್ಯದ ವೇಳೆಗೆ ಫಲಿತಾಂಶ ಪ್ರಕಟಿಸಲಾಗುತ್ತದೆ.

100 ಅಂಕಗಳ ಪ್ರಶ್ನೆಪತ್ರಿಕೆ ಇರುತ್ತದೆ. ಮಾನಸಿಕ ಸಾಮರ್ಥ್ಯ ಪರೀಕ್ಷೆಗೆ 50 ಅಂಕ, ಗಣಿತ ಮತ್ತು ಭಾಷಾ ಪರೀಕ್ಷೆಗೆ ತಲಾ 25 ಅಂಕಗಳನ್ನು ನಿಗದಿಪಡಿಸಲಾಗಿದೆ.  ಮರು ಮೌಲ್ಯಮಾಪನ, ಮರು ಎಣಿಕೆಗೆ ಅವಕಾಶ ಇರುವುದಿಲ್ಲ. ಅಭ್ಯರ್ಥಿಗಳಿಗೆ ಅಂಕಗಳನ್ನು ತಿಳಿಸು­ವುದಿಲ್ಲ. ಆಯ್ಕೆ ಸಮಿತಿಯ ನಿರ್ಧಾರವೇ ಅಂತಿಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT