ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವೋದಯ ಶಾಲೆಗೆ ಸುವರ್ಣ ಸಂಭ್ರಮ

Last Updated 21 ಡಿಸೆಂಬರ್ 2013, 8:50 IST
ಅಕ್ಷರ ಗಾತ್ರ

ಹೊಳೆನರಸೀಪುರ: ತಾಲ್ಲೂಕಿನ ದೊಡ್ಡಕುಂಚೇವು ಗ್ರಾಮದ ನವೋದಯ ಪ್ರೌಢಶಾಲೆಯನ್ನು ಜನರು ನಮ್ಮೂರ ಶಾಲೆ ಎಂದು ತಿಳಿದಿಲ್ಲ. ಅದಕ್ಕಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ ‘ನಮ್ಮ ಶಾಲೆ’ ಎಂದೇ ತಿಳಿದು ಅಭಿವೃದ್ಧಿ ಮಾಡುತ್ತಿದ್ದಾರೆ. ಜನರ ಹೆಮ್ಮೆ ಮತ್ತು ಪ್ರೀತಿಯ ಶಾಲೆಗೆ ಈಗ 50 ವರ್ಷ ತುಂಬುತ್ತಿದ್ದು, ಶನಿವಾರ ಮತ್ತು ಭಾನುವಾರ (ಡಿ. 21 ಮತ್ತು 22) ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿದೆ.

ಮೊದಲು 1954ರಲ್ಲಿ ಚನ್ನರಾಯಪಟ್ಟಣದಲ್ಲಿ ನವೋದಯ ವಿದ್ಯಾಸಂಸ್ಥೆ ಆರಂಭವಾಯಿತು. ನಂತರ 1963ರಲ್ಲಿ ಮಾಜಿ ಸಚಿವ ದಿ. ಎ.ಜಿ. ರಾಮಚಂದ್ರರಾಯರ ಸಲಹೆಯಂತೆ ಹಳೇಕೋಟೆ ಹೋಬಳಿಯ ದೊಡ್ಡಕುಂಚೇವು ಗ್ರಾಮದಲ್ಲಿ ನವೋದಯ ಪ್ರೌಢಶಾಲೆ ತಲೆಎತ್ತಿತು. ಗ್ರಾಮದ ಕಾಳೇಗೌಡ ಮತ್ತು ಪುಟ್ಟಯ್ಯನವರು ದಾನವಾಗಿ ನೀಡಿದ 2. 4 ಎಕರೆ ಜಾಗದಲ್ಲಿ ಶಾಲೆ ವಿದ್ಯಾದಾನ ಆರಂಭಿಸಿತು.

ಕೆಲವು ಸಮಾನಮನಸ್ಕ ಸದಸ್ಯರನ್ನು ಸೇರಿಸಿ­ಕೊಂಡು ಪ್ರಾರಂಭಿಸಿದ ನವೋದಯ ಪ್ರೌಢಶಾಲೆ ಸುತ್ತ ಹತ್ತಾರು ಹಳ್ಳಿಗಳ ಮಕ್ಕಳಿಗೆ ವಿದ್ಯಾಭ್ಯಾಸ ನೀಡುವ ಏಕೈಕ ವಿದ್ಯಾಮಂದಿರವಾಗಿತ್ತು. ಆರಂಭ­ದಲ್ಲಿ ಅಂ.ಕಂ. ಸಂಜೀವಶೆಟ್ಟಿ ಅಧ್ಯಕ್ಷರಾಗಿದ್ದರು.

ಶಾಲಾ ಆಡಳಿತ ಮಂಡಳಿಯ ದಕ್ಷತೆ, ಶಿಕ್ಷಕರ ಬದ್ಧತೆ, ವಿದ್ಯಾರ್ಥಿಗಳ ಪ್ರಗತಿ, ಫಲಿತಾಂಶವನ್ನು ಕಂಡ ಗ್ರಾಮಸ್ಥರು ಶಾಲೆಯ ಅಭಿವೃದ್ಧಿಯತ್ತ ಗಮನ ಹರಿಸತೊಡಗಿದರು. ಅಂದಿನ ದಿನದಲ್ಲಿ ಸುತ್ತಲ ಹಳ್ಳಿಗಳಲ್ಲಿ ಎಲ್ಲಾದರೂ ಗಲಾಟೆ ನಡೆದು ದಂಡ ಯಾರಿಗಾದರೂ ವಿಧಿಸಿದರೆ, ಸಂತೆ ಸುಂಕ ಹರಾಜು ಮಾಡಿದರೆ, ಗ್ರಾಮದ ಕೆರೆಯ ಮಣ್ಣು, ಮರಳು ಮಾರಾಟದಿಂದ ಬರುತ್ತಿದ್ದ ಹಣವನ್ನು ಶಾಲೆಯ ಅಭಿವೃದ್ಧಿಗೆ ನೀಡಲಾಗುತ್ತಿತ್ತು. ಈಗಲೂ ಗ್ರಾಮದ ಜನರು ಹಾಗೂ ಹಳೆಯ ವಿದ್ಯಾರ್ಥಿಗಳು ಸಹಕಾರ ನೀಡುತ್ತಿದ್ದಾರೆ. ಇಲ್ಲಿ ಮೂರು ಕಿ.ಮೀ. ವ್ಯಾಪ್ತಿಯಲ್ಲಿ ನಾಲ್ಕೈದು ಸರ್ಕಾರಿ ಪ್ರೌಢಶಾಲೆಗಳಿದ್ದು ಅವುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಇಪ್ಪತ್ತು ಮೂವತ್ತಿದ್ದರೆ, ಈ ಅನುದಾನಿತ ಪ್ರೌಢಶಾಲೆಯಲ್ಲಿ 140 ವಿದ್ಯಾರ್ಥಿ ಗಳಿದ್ದಾರೆ.

1984ರಲ್ಲಿ ಕಲಾ ವಿಭಾಗದ ಪದವಿ ಪೂರ್ವ ಕಾಲೇಜು ಆರಂಭವಾಯಿತು. ಈಗ 75 ವಿದ್ಯಾರ್ಥಿ­ಗಳಿದ್ದಾರೆ. ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜು ವಿಭಾಗದಲ್ಲಿ ಅತ್ಯುತ್ತಮ ಫಲಿತಾಂಶ ದಾಖಲಾಗುತ್ತಿದೆ. 1967ರಿಂದ ಸರ್ಕಾರದ ಅನುದಾನ ಪಡೆದುಕೊಳ್ಳುತ್ತಿರುವ ಈ ಶಾಲೆಗೆ, ಸರ್ಕಾರದ ಸಹಕಾರ ಕಡಿಮೆ.

ಶಾಲೆಯ ಆಡಳಿತ ಮಂಡಳಿಯ ಇಂದಿನ ಅಧ್ಯಕ್ಷ ಜೆ.ಎಸ್‌. ಜಯರಾಂ, ಎಸ್‌.ಸಿ. ನವೀನ್‌ ಸೇರಿದಂತೆ ಇತರೆ 13 ಸದಸ್ಯರು ಹಾಗೂ ಗ್ರಾಮದ ಶಾಲಾಭಿ ವೃದ್ಧಿ ಸಮಿತಿಯ ಕೆ.ಎಚ್‌. ಹರವೇಗೌಡರು, ಡಿ. ಲಕ್ಕೇಗೌಡರು, ಡಿ.ಎಚ್‌. ರಂಗಸ್ವಾಮಿ, ಡಿ.ಸಿ. ಚಂದ್ರಶೇಖರ್‌,  ಡಿ.ಎಸ್‌. ತಿಮ್ಮೇಗೌಡರು, ರಂಗೇ ಗೌಡರು, ಕೆ.ಜೆ. ಜವರಪ್ಪ, ಕಲ್‌ವೀರಯ್ಯ, ಡಿ.ಎಸ್‌. ಶಿವರಾಂ, ಕುಳ್ಳಪ್ಪ, ರಾಮಕೃಷ್ಣ, ಶಂಕರ ಹಾಗೂ ಹಳೆಯ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರ ಸಹಕಾರದಿಂದ ಈ ಶಾಲೆ ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿದೆ.

ಶಾಲೆ ಆವರಣದಲ್ಲಿ ಬೀಟೆ, ತೇಗದ ಗಿಡಗಳನ್ನು ನೆಟ್ಟು ಬೆಳೆಸುತ್ತಿದ್ದಾರೆ. ಸುವರ್ಣ ಮಹೋತ್ಸವವನ್ನು ಗ್ರಾಮಸ್ಥರು ನಮ್ಮೂರ ಹಬ್ಬ ಎನ್ನುವಂತೆ ಆಚರಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ, ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಸಿ. ಮಹದೇವಪ್ಪ, ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ, ಶಾಸಕ ಎಚ್‌.ಡಿ. ರೇವಣ್ಣ, ತಮಕೂರು ರಾಮಕೃಷ್ಣ ಆಶ್ರಮದ ಡಾ. ವೀರೇಶಾನಂದಸರಸ್ವತಿ ಸ್ವಾಮೀಜಿ ಸೇರಿದಂತೆ ಜಿಲ್ಲೆಯ ಎಲ್ಲ ಶಾಸಕರನ್ನು ಆಹ್ವಾನಿಸಲಾಗಿದೆ.

‘50 ವರ್ಷಗಳ ಹಿಂದೆ ಶಾಲೆಯ ಅಭಿವೃದ್ಧಿಗೆ ಶ್ರಮಿಸಿದವರ ಕುಟುಂಬ ವರ್ಗದವರನ್ನು ಸನ್ಮಾನಿಸಿ ಅವರ ದೇಣಿಗೆಯನ್ನು ಸ್ಮರಿಸಲಾಗುತ್ತಿದೆ’ ಎಂದು ಶಾಲಾಭಿವೃದ್ಧಿ ಸಮಿತಿಯ ಡಿ.ಸಿ. ಚಂದ್ರಶೇಖರ್‌ ತಿಳಿಸಿದ್ದಾರೆ. ‘ತಾಲ್ಲೂಕಿನ ಜನತೆ ಹಾಗೂ ಎಲ್ಲ ಹಳೆಯ ವಿದ್ಯಾರ್ಥಿಗಳು ಈ ನಿಮ್ಮ ಶಾಲೆಯ ಸುವರ್ಣ ಸಂಭ್ರಮದಲ್ಲಿ ಪಾಲ್ಗೊಳ್ಳಿ’ ಎಂದು ಆಡಳಿತ ಮಂಡಳಿಯ ಅಧ್ಯಕ್ಷ ಜೆ.ಎಸ್‌. ಜಯರಾಮ್‌ ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT