ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ನವ್ಯ ಸಾಹಿತ್ಯ': ಭೂತದಿಂದ ವರ್ತಮಾನದವರೆಗೂ...

ನಿಜವಾಗಿಯೂ `ನವ್ಯ ಸಾಹಿತ್ಯ' ನಮ್ಮ ಸಾಹಿತ್ಯದ ಬೆಳವಣಿಗೆಗೆ ಅಡ್ಡಗಾಲು ಹಾಕಿತೆ?'
Last Updated 4 ಮೇ 2013, 19:59 IST
ಅಕ್ಷರ ಗಾತ್ರ

ಇತ್ತೀಚೆಗೆ ಕಳೆದ ಎಂಟು ತಿಂಗಳಿಂದ ಕೆಲವು ಕಾದಂಬರಿಗಳನ್ನು ಮತ್ತೊಮ್ಮೆ ಓದಬೇಕೆನ್ನಿಸಿತು. ಅವು ಸುಮಾರು ನಾಲ್ಕೂವರೆ ದಶಕಗಳ ಹಿಂದೆ ತುಂಬಾ ಪ್ರಭಾವ ಬೀರಿದ್ದ ಕಾದಂಬರಿಗಳು. ಅವುಗಳಲ್ಲಿ ಮುಖ್ಯವಾಗಿ ಶಾಂತಿನಾಥ ದೇಸಾಯಿಯವರ `ಮುಕ್ತಿ' ಮತ್ತು `ವಿಕ್ಷೇಪ', ಅನಂತಮೂರ್ತಿಯವರ `ಸಂಸ್ಕಾರ', ಲಂಕೇಶ್ ಅವರ `ಬಿರುಕು', ಶೌರಿಯವರ `ಹಳದಿ ಮೀನು', ಎ. ಕೆ. ರಾಮಾನುಜನ್ ಅವರ `ಮತ್ತೊಬ್ಬನ ಆತ್ಮಚರಿತ್ರೆ', ಕುಸುಮಾಕರ ದೇವರಗಣ್ಣೂರ ಅವರ `ನಾಲ್ಕನೆಯ ಆಯಾಮ' ಹಾಗೂ ಗಿರಿಯವರ `ಗತಿಸ್ಥಿತಿ'. ನವ್ಯ ಸಾಹಿತ್ಯದ ಉತ್ತುಂಗತೆಯ ಕಾಲಘಟ್ಟದಲ್ಲಿ ಹೆಚ್ಚು ಚರ್ಚೆಯಾದ ಕೃತಿಗಳು ಇವು. ಇವುಗಳನ್ನು ಮತ್ತು ಇದೇ ರೀತಿಯ ಇತರೆ ಕೆಲವು ಕೃತಿಗಳನ್ನು ಓದದಿದ್ದರೆ, ಏನೋ ಕಳೆದುಕೊಂಡಂತೆ ಅಥವಾ ಸಾಹಿತ್ಯದ ವಾಗ್ವಾದಗಳ ಮೂಲ ನೆಲೆಗಳಿಂದ ವಂಚಿತರಾದಂತೆ ಎಂದು ತಿಳಿದಿದ್ದೆವು.

ಈ ಕಾರಣಕ್ಕಾಗಿ ಆಗ ಎರಡು ಮೂರು ಬಾರಿ ಚರ್ಚಿಸುತ್ತ, ಇತರೆ ವಿವಿಧ ಚರ್ಚೆಗಳಲ್ಲಿ ಭಾಗವಹಿಸುವುದು ಒಂದು ರೀತಿಯಲ್ಲಿ ಚೇತೋಹಾರಿಯಾದ ಸಂಗತಿಯಾಗಿತ್ತು. ಇದು ನಮ್ಮ ಮುಂದಿನ ಸಾಹಿತ್ಯದ ಓದಿಗೆ ಅನನ್ಯವಾದ ವೇದಿಕೆಯನ್ನು ನಿರ್ಮಾಣ ಮಾಡಿಕೊಟ್ಟಿತು. ಈಗ ಇಷ್ಟು ವರ್ಷಗಳ ನಂತರ ಮತ್ತೊಮ್ಮೆ ಓದಲು ಪ್ರಯತ್ನಿಸಿದಾಗ; ಹಿಂದಿನ ಓದಿನ ಕ್ರಮಕ್ಕೆ ಕಿಂಚಿತ್ತೂ ಧಕ್ಕೆ ಬರಲಿಲ್ಲ. ಮತ್ತಷ್ಟು ಒಳನೋಟಗಳನ್ನು ತುಂಬಿಕೊಂಡು ಅರ್ಥೈಸಿಕೊಳ್ಳಲು ಪ್ರಯತ್ನಿಸಿದೆ. ಈ ಪ್ರಯತ್ನದ ಹಿಂದೆ ಯಾವುದೇ ರೀತಿಯ ಒತ್ತಾಯದ ಮನಸ್ಸು ಇರಲಿಲ್ಲ. ಸುಮ್ಮನೆ ಖುಷಿಯಿಂದ ಓದಿಕೊಂಡಿದ್ದು. ಹಾಗೆ ನೋಡಿದರೆ ಹೀಗೆ ಓದಿಕೊಳ್ಳಲು ಪ್ರೇರೇಪಣೆ ದೊರಕಿದ್ದು, ಕೆಲವು ಸಾಹಿತ್ಯದ ಸಭೆ ಸಮಾರಂಭಗಳಲ್ಲಿ ಭಾಗವಹಿಸಿದಾಗ ನವ್ಯ ಸಾಹಿತ್ಯ ಕುರಿತು ಕೆಲವು ಆಕ್ಷೇಪಣೆಗಳಿಂದ ಕೂಡಿದ ಹೇಳಿಕೆಗಳನ್ನು ಅಲ್ಲಿ ಕೇಳಿಸಿಕೊಂಡಿದ್ದೇನೆ. ಮತ್ತು ಇದರ ಮುಂದುವರಿದ ಭಾಗವಾಗಿ ಲೇಖನಗಳಲ್ಲಿ ಚರ್ಚೆಯಾಗುತ್ತಿರುವುದನ್ನು ಗಮನಿಸುತ್ತ ಬಂದಿದ್ದೇನೆ. ಆಗ ಬಹಳಷ್ಟು ಬಾರಿ ಕೇಳಿಕೊಂಡಿದ್ದೇನೆ!- ನಿಜವಾಗಿಯೂ `ನವ್ಯ ಸಾಹಿತ್ಯ' ನಮ್ಮ ಸಾಹಿತ್ಯದ ಬೆಳವಣಿಗೆಗೆ ಅಡ್ಡಗಾಲು ಹಾಕಿತೇ ಎಂದು!

ಪ್ರತಿಯೊಂದು ಕಾಲಘಟ್ಟದಲ್ಲಿ ಕೆಲವು ಸಾಹಿತ್ಯಕ  ಮತ್ತು ಸಾಂಸ್ಕೃತಿಕ  ಒತ್ತಡಗಳ ಕಾರಣಕ್ಕಾಗಿ; ಒಂದು ಚಿಂತನಾ ಕ್ರಮವು (ಸ್ಕೂಲ್ ಆಫ್ ಥಾಟ್) ಪ್ರಚಲಿತಗೊಳ್ಳಲು ಸಾಧ್ಯ. ಹೀಗೆ ಪ್ರಚಲಿತಗೊಳ್ಳುವ ಸಮಯದಲ್ಲಿ ಅದರಲ್ಲಿ ಗಟ್ಟಿತನವಿದ್ದರೆ, ಒಂದಿಷ್ಟು ದಿವಸ ಅತ್ಯಂತ ಪ್ರಭಾವಪೂರ್ಣವಾಗಿ, ಚರ್ಚೆ, ಸಂವಾದ ಮತ್ತು ವಾಗ್ವಾದಗಳಿಗೆ ನೆಲೆಯನ್ನು ನಿರ್ವಹಿಸುತ್ತದೆ.

ಇದು ಸ್ವಾಭಾವಿಕವೂ ಆಗಿರುತ್ತದೆ. ಈ ದೃಷ್ಟಿಯಿಂದ `ನವೋದಯ ಸಾಹಿತ್ಯ'ದ ಕಾಲಘಟ್ಟ ನಿರ್ಮಾಣ ಮಾಡಿದ ಸಾಹಿತ್ಯದ ಬಹುಮುಖೀ ನೆಲೆಗಳನ್ನು ಈಗಲೂ ಬೇರೆ ಬೇರೆ ರೂಪದಲ್ಲಿ ಚರ್ಚಿಸುತ್ತಲೇ ಇದ್ದೇವೆ. ಹೇಗೆ ನವೋದಯ ಸಾಹಿತ್ಯ, ಚರ್ಚೆ ಮತ್ತು ಸಂವಾದಗಳನ್ನು ಬೆನ್ನಿಗಂಟಿಸಿಕೊಂಡು ಬೆಳೆಯುತ್ತ ಬಂತೋ, ಅದೇ ರೀತಿಯ್ಲ್ಲಲೇ ನವ್ಯ ಸಾಹಿತ್ಯವಾಗಲಿ, ಪ್ರಗತಿಶೀಲ ಸಾಹಿತ್ಯವಾಗಲಿ ಅಥವಾ ಬಂಡಾಯ ಸಾಹಿತ್ಯ ಸಂಘಟನೆಯಾಗಲಿ ಹುಟ್ಟಿಕೊಂಡದ್ದು;  ಸಾಹಿತ್ಯಕ ಮತ್ತು ಸಾಮಾಜಿಕ ನೆಲೆಗಳನ್ನು ಹೇಗೆ ನೋಡಬೇಕು ಎಂಬುದರ ಬಗ್ಗೆ ಭಿನ್ನಭಿನ್ನ ನೋಟಗಳನ್ನು ವಿಸ್ತರಿಸಿತು. ಇದು ಒಂದು ದೃಷ್ಟಿಯಿಂದ ಸಂಸ್ಕೃತಿಯ ನೆಲೆಗಳನ್ನು ಶ್ರೀಮಂತಗೊಳಿಸಿತು ಎಂದು ಯಾಕೆ ಭಾವಿಸಬಾರದು? ಇಂಥ ಚಿಂತನಾ ಕ್ರಮಗಳು ವಿಶ್ವವ್ಯಾಪಿ ನಡೆದಿರುವಂಥದ್ದು ಎಲ್ಲರಿಗೂ ಗೊತ್ತಿರುವ ವಿಷಯವೇ ಆಗಿದೆ.

ಅದರಲ್ಲೂ ಇಪ್ಪತ್ತನೆಯ ಶತಮಾನ ಕೆಲವು ಅಪೂರ್ವ ಸಂಗತಿಗಳಿಗೆ ವೇದಿಕೆಯಾಯಿತು. ಸಾಹಿತ್ಯ, ರಾಜಕೀಯ ಹಾಗೂ ಇತರೆ ಸಾಮಾಜಿಕ ಆಯಾಮಗಳನ್ನು ಪ್ರತ್ಯೇಕಿಸಿ ನೋಡಲು ಹೋಗಲಿಲ್ಲ. ಇವುಗಳ ನಡುವೆ ಒಂದಕ್ಕೊಂದು ಅಂಟಿಕೊಂಡಂತೆ ಇರುವ ಸಂಬಂಧಗಳು ಎಂಥವು ಎಂದು ಶೋಧಿಸಲು ಹೊರಟಿದ್ದು ಅತ್ಯಂತ ಮಹತ್ವಪೂರ್ಣವಾದದ್ದು. ಕೆಲವು ಕಾರಣಗಳಿಗಾಗಿ ಇದು ಸಂಘಟನಾತ್ಮಕವಾಗಿ ನಡೆದಿದೆ. ಇಲ್ಲಿ ಸಂಘಟನಾತ್ಮಕ ಎಂಬುದನ್ನು ಬಳಸುತ್ತಿರುವುದು; ಜಗತ್ತಿನೆಲ್ಲೆಡೆ ನಡೆಯುತ್ತಿದ್ದ ಪ್ರತಿಯೊಂದು ಇಲ್ಲಿಯ ಭಾರತೀಯ ಭಾಷೆಗಳಲ್ಲಿ ಅಥವಾ ಸಾಹಿತ್ಯದಲ್ಲಿ ಚರ್ಚೆಯ ವಿಷಯವಾಗತೊಡಗಿತು.

ಈ ದೃಷ್ಟಿಯಿಂದ `ಆರ್ಟ್ ಫಾರ್ ಆರ್ಟ್ಸ್  ಸೇಕ್', `ಸೋಷಿಯಲ್ ಕಮಿಟ್‌ಮೆಂಟ್', `ಇಂಟೆಲೆಕ್ಚುಯಲ್' ಮತ್ತು `ರಿಯಾಕ್ಷನರಿ', `ಪ್ರೊಗ್ರೆಸಿವ್' ಮುಂತಾದ ಪದಪುಂಜಗಳು ಎಷ್ಟೊಂದು ರೂಪಕಗಳಲ್ಲಿ ಚಲಾವಣೆಯಾಗ ತೊಡಗಿದ್ದವು. ಹಾಗೆಯೇ ಇಪ್ಪತ್ತನೇ ಶತಮಾನದಲ್ಲಿ `ಸಮಾಜವಾದ ಮತ್ತು ಸಮತಾವಾದ' ಎಂತೆಂಥ ಆಯಾಮಗಳನ್ನು ಪಡೆಯ ತೊಡಗಿತು. ಕೇವಲ ಇಷ್ಟಕ್ಕೇ ಇದು ನಿಲ್ಲಲಿಲ್ಲ. ಸಂವಾದದ ನೆಪದಲ್ಲಿ ಎಲ್ಲ ಭಾಷೆಗಳಲ್ಲಿ ಸಾವಿರಾರು ಕೃತಿಗಳು ಬಂದುವು. ಆದರೆ ಬಹುಪಾಲು ಗಂಭೀರ ಲೇಖಕರು ಇದನ್ನು ತಮ್ಮಳಗೆ ಒಂದು ಘೋಷಣೆಯಾಗಿ ಬಿಟ್ಟುಕೊಳ್ಳಲಿಲ್ಲ. ಒಂದು ನೋಟಕ್ಕೆ ಮಾತ್ರ ಇಟ್ಟುಕೊಂಡರು. ಯಾಕೆಂದರೆ ಪ್ರತಿಯೊಬ್ಬ ದೊಡ್ಡ ಲೇಖಕನು ಅದರ ಮಿತಿಗಳನ್ನು ತಿಳಿದಿರುತ್ತಾನೆ. ಹಾಗೆಯೇ ಅನುಭವವನ್ನು ಕಲಾತ್ಮಕತೆಯಿಂದ ಬರೆಯಲು ತೊಡಕಾಗಬಾರದು ಎಂದು ತಿಳಿದಿರುತ್ತಾನೆ. `ಸೃಷ್ಟಿಕ್ರಿಯೆ' ಎಂಬುದು ಸರಳ ರೇಖೆಗಳಿಂದ ಕೂಡಿರುವುದಿಲ್ಲ ಎಂಬುದನ್ನು ಸ್ವಲ್ಪಮಟ್ಟಿಗಾದರೂ ಗ್ರಹಿಸಿಕೊಂಡಿರಲು ಸಾಧ್ಯ.

ಮತ್ತೊಂದು ಮುಖ್ಯ ವಿಷಯ. ಪ್ರತಿಯೊಂದು ಕಾಲದಲ್ಲೂ ಹೊಸದೊಂದು ಹುಟ್ಟುವಾಗ, ಹಿಂದಿನದನ್ನು ಪ್ರಶ್ನಿಸಿಯೇ ತನ್ನ ನೆಲೆಯನ್ನು ಸಾಬೀತು ಪಡಿಸಲು ತವಕಗೊಂಡಿರುತ್ತದೆ. ಈ ದೃಷ್ಟಿಯಿಂದ ನವ್ಯದ ಆಶಯಗಳನ್ನು ಮುಂದಿಟ್ಟುಕೊಂಡ ಬಹುಪಾಲು ಲೇಖಕರು ಎತ್ತದ ಮೂಲಭೂತ ಪ್ರಶ್ನೆ ಎಂದರೆ, ನಮ್ಮ ಅನುಭವಕ್ಕೆ ವಾಡಿಕೆಯಾದ ಭಾಷೆಯನ್ನು ತುಂಬ ಭಾವನಾತ್ಮಕವಾಗಿ ಬಳಸುತ್ತಾರೆ ಎಂದು. ಸ್ವಲ್ಪ ಹೆಚ್ಚು ಕಾವ್ಯಕ್ಕೆ ಒತ್ತು ಕೊಟ್ಟು ಹೇಳಿದರೂ ಗದ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡಿದ್ದರು. ಹಾಗೆಯೇ ಗೇಯತೆಗಾಗಿಯೇ ಕಾವ್ಯ ಹುಟ್ಟಿಕೊಂಡರೆ ಅದರ ಸಾರ್ಥಕತೆ ಎಲ್ಲಿ ಉಳಿಯುತ್ತದೆ ಎಂಬ ಪ್ರಶ್ನೆಯನ್ನು ಎತ್ತಿದರು. ಇದಕ್ಕೆ ನವೋದಯದ ಕೆಲವು ಮುಖ್ಯ ಕವಿಗಳನ್ನು ಕುರಿತು ಚರ್ಚಿಸಿದರು. ಈ ಚರ್ಚೆಯನ್ನು ಅವರೊಡನೆ ಬರವಣಿಗೆ ಎಂಬ ಯುದ್ಧಕ್ಕೆ ನಿಂತರು ಎಂದು ಯಾಕೆ ಭಾವಿಸಬೇಕು? ನಾವು ಬರೆಯುವುದು ಗಟ್ಟಿಯಾಗಿರಬೇಕು; ದಟ್ಟವಾಗಿರಬೇಕು ಎಂದು ತಿಳಿಯುವುದರಲ್ಲಿ ತಪ್ಪೇನಿದೆ? ಆಂಗ್ಲ ಭಾಷೆಯಲ್ಲಿ ರೊಮ್ಯಾಂಟಿಕ್ ಕವಿಗಳಾದ ವರ್ಡ್ಸ್‌ವರ್ತ್, ಷೆಲ್ಲಿ, ಕೀಟ್ಸ್ ಮುಂತಾದ ಕವಿಗಳು ಬಹುದೊಡ್ಡ ಕವಿಗಳು ನಿಜ. ಆದರೆ ಅವರನ್ನು ಕುರಿತಂತೆ  ಟಿ. ಎಸ್. ಎಲಿಯಟ್, ಎಜ್ರಾ ಪೌಂಡ್, ಏಟ್ಸ್ ಮತ್ತು ಆಡೆನ್ ಅವರಂಥ ಅರ್ಥಪೂರ್ಣ ಕವಿಗಳು ಎತ್ತಿದ ಆಕ್ಷೇಪಣೆಗಳು ಕಾವ್ಯದ ಸಮಷ್ಟಿಯ ದೃಷ್ಟಿಯಿಂದ ಬಹುಮುಖೀ ಚಿಂತನೆಗಳನ್ನು ಬೆಳೆಸಿತು. `ಅತೃಪ್ತಿ' ಎಂಬುದು ಹುಟ್ಟಿಕೊಳ್ಳುವುದು ಕೂಡ ಸದಭಿರುಚಿಯ ಮುಂದುವರಿದ ಭಾಗವೆಂದು ಯಾಕೆ ತಿಳಿಯಬಾರದು? ಆದ್ದರಿಂದ ಭಿನ್ನ ಭಿನ್ನ ನೆಲೆಗಳ ಮೂಲಕ ನಾವು ಬ್ಲೇಕ್, ವರ್ಡ್ಸ್‌ವರ್ತ್, ಷೆಲ್ಲಿ ಮತ್ತು ಎಲಿಯಟ್, ಏಟ್ಸ್ ಅಂಥ ವೈವಿಧ್ಯಮಯ ಚಿಂತನೆಯ ಕವಿಗಳನ್ನು ನಮ್ಮ ಖುಷಿಗಾಗಿ ಓದಿಕೊಳ್ಳುತ್ತಲೇ ಇದ್ದೇವೆ. ಯಾರನ್ನೂ ತಿರಸ್ಕರಿಸಿಲ್ಲ. ಆದರೆ ಎಲಿಯಟ್ ಅಂಥ ಕವಿಗಳು ಪರೋಕ್ಷವಾಗಿ ಪಂಪನನ್ನು ಮತ್ತು ಕುಮಾರವ್ಯಾಸನನ್ನು ಅರ್ಥೈಸಿಕೊಳ್ಳಲು ಪ್ರಯತ್ನಿಸಿ ಎಂಬ ಮಾನಸಿಕ ಸೂಚನೆಯನ್ನು ನೀಡುವಂಥವರೂ ಆಗಿರುತ್ತಾರೆ.

ಹಾಗೆ ನೋಡಿದರೆ ನವ್ಯದವರು ನಮ್ಮ ಹನ್ನೆರಡನೆಯ ಶತಮಾನದ ವಚನಕಾರರ ಭಾಷೆಯ ವೈವಿಧ್ಯತೆಯ ಬಗ್ಗೆ ಹೆಚ್ಚು ಒತ್ತುಕೊಟ್ಟವರು. ಅವರು ಭಾಷೆಯನ್ನು ಹೆಚ್ಚು ಧ್ವನ್ಯಾತ್ಮಕತೆಯ ಕಡೆಗೆ ಒಯ್ದರು ಎಂಬುದರ ಬಗ್ಗೆ ಅನನ್ಯತೆಯನ್ನು ಹೊಂದಿದ್ದರು. ನಾವು ಈಗಲೂ ಕಾವ್ಯದ ಶ್ರೀಮಂತಿಕೆಯ ಮುಂದುವರಿದ ಭಾಗವಾಗಿ, ಬಸವಣ್ಣನವರ, ಅಲ್ಲಮನ, ಅಕ್ಕ ಮುಂತಾದ ಕೆಲವು ವಚನಕಾರರನ್ನು ಮತ್ತೆ ಮತ್ತೆ ಓದಿಕೊಳ್ಳುತ್ತಲೇ ಇದ್ದೇವೆ. ಅದೇ ರೀತಿಯಲ್ಲಿ ಬೇಂದ್ರೆಯವರ `ಜೋಗಿ', `ಬದುಕು ಮಾಯೆಯ ಮಾಟ', `ಮುಗಿಲ ಮಾರಿಗೆ', ಕುವೆಂಪು ಅವರ `ಮುಚ್ಚು ಮರೆಯಿಲ್ಲದೆಯೇ', `ನೀರದೇಕೆ ಹರಿವುದು', `ಅಗಣಿತ ತಾರಗಣಗಳ',  `ಸೊನ್ನೆ ನಿನಗೆ ಬೆಲೆಯೇ ಇಲ್ಲ' ಮುಂತಾದ ಕೆಲವು ಕವಿತೆಗಳನ್ನು ಗೇಯತೆ ಮತ್ತು ಕಾವ್ಯದ ಅದಮ್ಯತೆಯ ಕಾರಣಕ್ಕಾಗಿಯೂ ಓದಿಕೊಳ್ಳಲು ಸಾಧ್ಯವಾಗುತ್ತದೆ. ಇಲ್ಲಿ ಗಂಗಾಧರ ಚಿತ್ತಾಲರಂಥ ಮತ್ತು ಕೆ.ವಿ. ತಿರುಮಲೇಶ್ ಅವರಂಥ ಕವಿಗಳನ್ನು ಓದಿಕೊಳ್ಳುವಾಗ,  ನವ್ಯದ ಚರ್ಚೆಯ ನಡುವೆ ಅವರ ಕಾವ್ಯ ಹುಟ್ಟಿಕೊಂಡಿತು ಎಂಬುದು ಕೂಡ ಮುಖ್ಯವಾಗುತ್ತದೆ. ಹಾಗೆಯೇ ಚಿತ್ತಾಲರ `ಕಾಮಸೂತ್ರ' ಕವಿತೆಯಂತೂ ಸಾರ್ವಕಾಲಿಕ ಶ್ರೇಷ್ಠ ಕವನವೆಂದೇ ಪರಿಗಣಿಸುವೆ. ಕೆ. ಎಸ್. ನ. ಅವರಂಥ ದೊಡ್ಡ ಕವಿಯೊಬ್ಬರು `ಪುಷ್ಪ ಕವಿ' ಎಂದು ಕರೆಸಿಕೊಂಡು, ವಿಷಾದದಿಂದ `ತೆರೆದ ಬಾಗಿಲು' ರೀತಿಯ ಅತ್ಯುತ್ತಮ ಕವನ ಸಂಕಲನವನ್ನು ಕೊಟ್ಟಿದ್ದು  ನವ್ಯದ ಕೊಡುಗೆಯೆಂದೆ ತಿಳಿಯುವೆ. ಯಾಕೆಂದರೆ ಪ್ರತಿಯೊಬ್ಬ ದೊಡ್ಡ ಸಾಹಿತಿಗೆ ಅಥವಾ ಯಾವುದೇ ಲೇಖಕನಿಗೆ `ಅತೃಪ್ತಿ'ಯೆಂಬ ಚಿಂತನೆ ಕಾಡದಿದ್ದರೆ; ಹೊಸದನ್ನು ಎಂದಿಗೂ ಸೃಷ್ಟಿಸಲಾರ. ನವ್ಯದ ಮತ್ತೊಂದು ದೊಡ್ಡ ಕೊಡುಗೆಯೆಂದರೆ: ಓದುವ ಕ್ರಮಕ್ಕೆ ಶಿಸ್ತನ್ನು ತಂದುಕೊಟ್ಟಿದ್ದು. ಇದರ ಜೊತೆಗೆ ಅಭಿರುಚಿಯೂ ಮುಂದುವರಿದ ಭಾಗವಾಯಿತು.

ಇಲ್ಲಿ ಕುವೆಂಪು, ಬೇಂದ್ರೆ, ಗೋಪಾಲಕೃಷ್ಣ ಅಡಿಗ ಮತ್ತು ಚಂದ್ರಶೇಖರ ಕಂಬಾರ ಅಂಥವರನ್ನು ಎಷ್ಟೊಂದು ನೆಲೆಗಳಲ್ಲಿ ಓದಿಕೊಳ್ಳಬಹುದು. ಇವರ ನಂತರ ಯು. ಆರ್. ಅನಂತಮೂರ್ತಿ, ಲಂಕೇಶ್, ತೇಜಸ್ವಿ, ಯಶವಂತ ಚಿತ್ತಾಲ, ರಾಘವೇಂದ್ರ ಖಾಸನೀಸ ಮತ್ತು ದೇವನೂರ ಮಹಾದೇವ ಅವರನ್ನು ವಿಭಿನ್ನ ರೂಪದಲ್ಲಿ ಓದಿಕೊಂಡು ಆನಂದಿಸಬಹುದು. ಇವರ‌್ಯಾರೂ `ಸೋಷಿಯಲ್ ಕಮಿಂಟ್‌ಮೆಂಟ್' ಅನ್ನು ಮುಂದಿಟ್ಟುಕೊಂಡು ಬರೆದವರಲ್ಲ. ಆದರೆ ಅದಕ್ಕೆ ಜೀವ ತುಂಬುವ ರೀತಿಯಲ್ಲಿ ಸಾಹಿತ್ಯ ಸೃಷ್ಟಿಸಿದವರು. ಇಲ್ಲೆಲ್ಲ ಅದ್ಭುತವಾಗಿ ಅನುಭವಕ್ಕೆ ವಾಡಿಕೆಗಾಗಿ ಭಾಷೆಯನ್ನು ಬಳಸಿಕೊಂಡರು. ಹಾಗೆ ನೋಡಿದರೆ, ಲಂಕೇಶ್ ಅವರು ತಮ್ಮ `ಮುಸ್ಸಂಜೆಯ ಕಥಾ ಪ್ರಸಂಗ'ದಂಥ ಅತ್ಯುತ್ತಮ ಕಾದಂಬರಿಯನ್ನು ಕೊಟ್ಟನಂತರ, ಅವರನ್ನು ಸಾಕಷ್ಟು ಅತೃಪ್ತಿ ಕಾಡತೊಡಗಿತು, ಅದನ್ನು ಬೇರೆ ರೀತಿಯಲ್ಲಿಯೇ ಬರೆಯಬೇಕಾಗಿತ್ತು ಎಂದು. ನವ್ಯತೆಯ ಮನಸ್ಥಿತಿ ದಟ್ಟವಾಗಿದ್ದ ಕಾರಣಕ್ಕೆ ಅವರು `ಅಕ್ಷರ ಹೊಸ ಕಾವ್ಯ'ದಂಥ ಚಾರಿತ್ರಿಕ ಕಾವ್ಯದ ಆಂಥಾಲಜಿಯನ್ನು ತರಲು ಸಾಧ್ಯವಾಯಿತು. ಆಗ ಅಡಿಗರು ಎಷ್ಟು ಸಂಭ್ರಮದಿಂದ ಮಾತಾಡಿದ್ದರು. `ಪ್ರಜಾವಾಣಿ'ಯ `ಸಾಪ್ತಾಹಿಕ ಪುರವಣಿ' ಯಂತೂ ಎಂತೆಂಥ ಸಾಹಿತ್ಯಕ ವಾಗ್ವಾದಗಳಿಗೆ ಬಾಗಿಲು ತೆರೆಯಿತು. ಹಾಗೆಯೇ ವಾರದ ಕವಿತೆಗೆ ಎಂಥ ತುಡಿತವನ್ನು ತುಂಬಿಕೊಂಡಿದ್ದೆವು. ಆಗ ಬೇರೆ ಪತ್ರಿಕೆಗಳಲ್ಲಿ ಕವಿತೆ ಪ್ರಕಟವಾಗುತ್ತಿರಲಿಲ್ಲ.

ಇಂದು ಎಲ್ಲ ಜಾತಿ ವರ್ಗಗಳಿಂದ ಮೈಕೊಡವಿಕೊಂಡು ಬರೆಯುತ್ತಿದ್ದಾರೆ. ಇದರ ಮುಂದುವರಿದ ಅರ್ಥ: ಅತ್ಯಂತ ಚೆನ್ನಾಗಿ ಬರೆಯಬೇಕೆಂಬುದೇ ಆಗಿರುತ್ತದೆ. ಇದಕ್ಕೆ ಪೋಷಕವಾಗಿ ವಿಮರ್ಶೆ ಎಂಬುದು ಅತ್ಯಂತ ಚೆನ್ನಾಗಿ ಬೆಳೆದು ನಿಂತಿದೆ. ಬಹಳಷ್ಟು ವಿಮರ್ಶಕರು `ವಿಮರ್ಶೆ' ಒಂದು ಸೃಜನಶೀಲತೆಯೆ ಎಂದೇ ತಿಳಿದು ಬರೆದರು, ಬರೆಯುತ್ತಿದ್ದಾರೆ. ಅವರಲ್ಲಿ  ಸಿ. ಎನ್. ರಾಮಚಂದ್ರನ್,  ಜಿ. ಎಚ್. ನಾಯಕ್,  ಡಿ. ಆರ್. ನಾಗರಾಜ್,  ಕೆ. ವಿ. ನಾರಾಯಣ,  ಎಚ್. ಎಸ್. ರಾಘವೇಂದ್ರರಾವ್, ಬಂಜಗೆರೆ ಜಯಪ್ರಕಾಶ್, ರಾಜೇಂದ್ರ ಚೆನ್ನಿ,  ಓ. ಎಲ್. ಎನ್.,  ಆಶಾದೇವಿ, ಎಸ್. ಆರ್.  ವಿಜಯಶಂಕರ, ಜಿ. ಎಸ್. ಆಮೂರ,  ಬಸವರಾಜ ಕಲ್ಗುಡಿ, ನರಹಳ್ಳಿ ಬಾಲಸುಬ್ರಹ್ಮಣ್ಯ ಮುಂತಾದವರು. ಇವರ‌್ಯಾರೂ ತಮ್ಮ ಬರವಣಿಗೆಯಲ್ಲಿ ನವೋದಯ, ನವ್ಯ, ಪ್ರಗತಿಶೀಲ ಮತ್ತು ದಲಿತ ಬಂಡಾಯದ ಬಗ್ಗೆ ಗೊಣಗಾಡಿದವರಲ್ಲ, ಅದರ ಚಾರಿತ್ರಿಕ ಕೊಡುಗೆ ಏನು ಎಂದು ಚಿಂತಿಸಿದವರು. ಹಾಗೆಯೇ ನನ್ನ ಮುಂದೆ `ಎದೆಗೆ ಬಿದ್ದ ಅಕ್ಷರ' ಮತ್ತು `ಅಜ್ಞಾತನೊಬ್ಬನ ಆತ್ಮಚರಿತ್ರೆ'ಯಂಥ ಅತ್ಯುತ್ತಮ ಕೃತಿಗಳಿದ್ದರೂ ಈ ಲೇಖನದ ಪ್ರಾರಂಭದಲ್ಲಿ ಪ್ರಸ್ತಾಪಿಸಿದ ಕೃತಿಗಳಂಥವು ನನ್ನನ್ನು ವ್ಯಾಪಕವಾಗಿ ಕಾಡುತ್ತಲೇ ಇರುತ್ತವೆ. `ನವ್ಯ ಸಾಹಿತ್ಯ'ವು `ಶ್ರೇಷ್ಠತೆ' ಬಗ್ಗೆ ಮಾತಾಡುತ್ತಿತ್ತು. ಅದು ಅದರ `ವ್ಯಸನ' ವಾಗಿರಲಿಲ್ಲ. ಆಶಯವಾಗಿತ್ತು. ಈ ಆಶಯವೇ ಕೊನೆಗೂ ಸಾರ್ವಕಾಲಿಕ ಸತ್ಯದ ಕಡೆಗೆ ತುಡಿಯುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT