ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾ ಕಂಡ ವಿವೇಕಾನಂದ: ಐಶ್ವರ್ಯದ ಬೆನ್ನು ಹತ್ತಿ...

Last Updated 15 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಜಗತ್ತಿನಾದ್ಯಂತ ಇಂದು ಸದ್ದಿಲ್ಲದೇ ಜನಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಬೃಹತ್ ಆಧ್ಮಾತ್ಮಿಕ- ಸಾಮಾಜಿಕ ಸಂಸ್ಥೆಯಾದ ರಾಮಕೃಷ್ಣ ಮಿಷನ್‌ನ ಸಂಸ್ಥಾಪಕರು ಸ್ವಾಮಿ ವಿವೇಕಾನಂದರು ಎಂಬುದು ಬಹುತೇಕರಿಗೆ ತಿಳಿದಿರುವ ಸಂಗತಿ. ಆದರೆ ಮತ್ತೊಂದು ಅಸಾಧಾರಣ ಸಂಘಟನೆಯೊಂದರ ಅಸ್ತಿತ್ವಕ್ಕೂ ವಿವೇಕಾನಂದರೇ ಕಾರಣೀಭೂತರು ಎಂಬ ವಿಷಯ ಹೆಚ್ಚಿನವರಿಗೆ ತಿಳಿದಿಲ್ಲ.

1894ರ ಆರಂಭದ ದಿನಗಳಲ್ಲಿ ಸ್ವಾಮೀಜಿ ಹಲವಾರು ಉಪನ್ಯಾಸಗಳನ್ನು ನೀಡುತ್ತಾ ಅಮೆರಿಕದಲ್ಲಿ ಸಂಚರಿಸುತ್ತಿದ್ದರು. ವಿಶ್ವ ಧರ್ಮ ಸಮ್ಮೇಳನದಲ್ಲಿ ಭಾಷಣ ಮಾಡಿದ ತರುವಾಯ ಅವರ ಕೀರ್ತಿ ಉತ್ತುಂಗಕ್ಕೇರಿತ್ತು.

ಇದೇ ಸಂದರ್ಭದಲ್ಲಿ ಅಮೆರಿಕದವರೇ ಆದ ಜಾನ್ ಡಿ ರಾಕ್‌ಫೆಲ್ಲರ್ ಎಂಬುವವರು ತೈಲ ಉದ್ಯಮದಿಂದ ಸಾಕಷ್ಟು ಹಣ ಸಂಪಾದಿಸಿದ್ದರು. ಆದರೆ ಹಣ ಗಳಿಕೆಯೊಂದೇ ಏಕೈಕ ಮಾರ್ಗವಾಗಿದ್ದ ಅವರು ನಿಷ್ಕರುಣಿ ಎನಿಸಿಕೊಂಡಿದ್ದರು. ಅಲ್ಲದೆ ಅವರಿಗೆ ಎಷ್ಟರ ಮಟ್ಟಿಗೆ ಹಣ ಸಂಪಾದನೆಯ ಗೀಳು ಹತ್ತಿತ್ತೆಂದರೆ, ಅದರ ನೇರ ಪರಿಣಾಮ ಅವರ ಆರೋಗ್ಯದ ಮೇಲೆ ಬೀರಲಾರಂಭಿಸಿತ್ತು.
 
ಈ ಸಂದರ್ಭದಲ್ಲಿ ಅದ್ಭುತ ಮತ್ತು ಅಸಾಧಾರಣ ವ್ಯಕ್ತಿತ್ವದ ಹಿಂದೂ ಸ್ವಾಮಿಯೊಬ್ಬರು ಷಿಕಾಗೊದಲ್ಲಿದ್ದ ತಮ್ಮ ಉದ್ಯಮ ಮಿತ್ರರೊಬ್ಬರ ಮನೆಯಲ್ಲಿ ತಂಗಿದ್ದಾರೆ ಎಂಬ ಸಂಗತಿ ಅವರಿಗೆ ತಿಳಿದುಬಂತು. ಈ ಸ್ನೇಹಿತ, ಸ್ವಾಮಿಯ ಭೇಟಿಗಾಗಿ ಹಲವು ಬಾರಿ ಆಹ್ವಾನಿಸಿದ್ದರಾದರೂ ರಾಕ್‌ಫೆಲ್ಲರ್ ಅದನ್ನು ನಿರ್ಲಕ್ಷಿಸಿದ್ದರು.

ಒಂದು ದಿನ, ವಾಸ್ತವದಲ್ಲಿ ರಾಕ್‌ಫೆಲ್ಲರ್ ಅವರಿಗೆ ಮನಸ್ಸಿಲ್ಲದಿದ್ದರೂ ಇದ್ದಕ್ಕಿದ್ದಂತೆ ಸ್ವಾಮಿಯನ್ನು ನೋಡುವ ಅಂತಃಪ್ರೇರಣೆ ಉಂಟಾಯಿತು. ಕೂಡಲೇ ತಮ್ಮ ಸ್ನೇಹಿತನ ಮನೆಗೆ ತೆರಳಿದ ಅವರು, ಸೇವಕ ಅಡ್ಡಿಪಡಿಸಿದರೂ ಲೆಕ್ಕಿಸದೆ ತಾವು ಸ್ವಾಮಿಯನ್ನು ಈಗಲೇ ಭೇಟಿ ಮಾಡಬೇಕು ಎಂದು ಹೇಳಿದರು.

ಆಗ ಸೇವಕ ಅವರನ್ನು ಕೋಣೆಯೊಂದಕ್ಕೆ ಕರೆದೊಯ್ದು ಕಾಯುವಂತೆ ತಿಳಿಸಿದರೂ ಕೇಳದರಾಕ್‌ಫೆಲ್ಲರ್, ಪಕ್ಕದಲ್ಲಿ ಸ್ವಾಮೀಜಿ ಇದ್ದ ಅಧ್ಯಯನ ಕೊಠಡಿಗೇ ನೇರವಾಗಿ ನುಗ್ಗಿದರು. ಮೇಜಿನ ಮುಂದೆ ಕುಳಿತಿದ್ದ ಸ್ವಾಮೀಜಿ ತಮ್ಮ ಕೋಣೆಗೆ ಬಂದವರಾರು ಎಂದು ತಿಳಿಯುವ ಪ್ರಯತ್ನವನ್ನೇ ಮಾಡದೆ ತಮ್ಮ ಪಾಡಿಗೆ ತಾವು ಕುಳಿತಿದ್ದುದನ್ನು ಕಂಡು ರಾಕ್‌ಫೆಲ್ಲರ್ ಅವರಿಗೆ ತೀವ್ರ ಅಚ್ಚರಿಯಾಯಿತು.

ಆವರೆಗೆ ಒಮ್ಮೆಯೂ ರಾಕ್‌ಫೆಲ್ಲರ್ ಅವರನ್ನು ಕಂಡಿರದ ಸ್ವಾಮೀಜಿ ಕೊಂಚ ಹೊತ್ತಿನ ಬಳಿಕ ಅವರ ಆಂತರಿಕ ರಹಸ್ಯ ವಿಚಾರಗಳು ಮತ್ತು ಚಿಂತೆಗಳ ಬಗ್ಗೆ ಮಾತನಾಡಲು ಆರಂಭಿಸಿದರು.
 
ರಾಕ್‌ಫೆಲ್ಲರ್ ಅವರ ಪರಮಾಪ್ತ ಸ್ನೇಹಿತರು, ನಿಕಟ ಸಂಬಂಧಿಗಳಿಗೂ ತಿಳಿಯದ ವಿಷಯಗಳನ್ನು ಸ್ವಾಮೀಜಿ ಈ ಸಂದರ್ಭದಲ್ಲಿ ಪ್ರಸ್ತಾಪಿಸಿದರು. ಇದೊಂದು ಪವಾಡ ಸದೃಶ ಘಟನೆಯೆಂದೇ ಭಾವಿಸಿದ ರಾಕ್‌ಫೆಲ್ಲರ್ `ನಿಮಗೆ ಇದೆಲ್ಲಾ ಹೇಗೆ ತಿಳಿಯಿತು? ಇದನ್ನೆಲ್ಲಾ ಯಾರು ನಿಮ್ಮಂದಿಗೆ ಚರ್ಚಿಸಿದ್ದರು?~ ಎಂದು ಅತೀವ ಅಚ್ಚರಿಯಲ್ಲಿ ಕೇಳಿದರು.

ಮುಗ್ಧ ಮಗುವೊಂದು ಎದುರಿಗೆ ನಿಂತು ಮೂರ್ಖ ಪ್ರಶ್ನೆಗಳನ್ನು ಕೇಳುತ್ತಿದೆಯೇನೋ ಎಂಬ ಭಾವದಲ್ಲಿ ಸೌಮ್ಯವಾಗಿ ನಗುತ್ತಾ ರಾಕ್‌ಫೆಲ್ಲರ್ ಅವರನ್ನು ನೋಡಿದ ಸ್ವಾಮೀಜಿ, `ಹಳೆಯದನ್ನೆಲ್ಲಾ ಮರೆಯಿರಿ, ಉಲ್ಲಾಸದಿಂದ ಇರುವುದನ್ನು ಕಲಿಯಿರಿ. ಆರೋಗ್ಯ ಕಾಪಾಡಿಕೊಳ್ಳಿ. ದುಃಖಿಸುತ್ತಾ ಕೊರಗಬೇಡಿ.

ನಿಮ್ಮ ಭಾವಾವೇಶವನ್ನು ಹೊರಜಗತ್ತಿಗೆ ಸೃಜನಾತ್ಮಕವಾಗಿ ಅಭಿವ್ಯಕ್ತಗೊಳಿಸಲು ಪ್ರಯತ್ನಿಸಿ. ನಿಮ್ಮ ಆಧ್ಯಾತ್ಮಿಕ ಆರೋಗ್ಯಕ್ಕೆ ಅದರ ಅಗತ್ಯ ಇದೆ. ನೀವು ಸಂಗ್ರಹಿಸಿರುವ ದೇವರ ಸಂಪತ್ತಿಗೆ ನೀವು ಕೇವಲ ವಾಹಕ ಮಾತ್ರ. ಹೀಗಾಗಿ ಜಗತ್ತಿಗೆ ಒಳಿತು ಮಾಡಬೇಕಾದುದು ನಿಮ್ಮ ಕರ್ತವ್ಯ. ದೇವರು ತನ್ನ ಎಲ್ಲ ಐಶ್ವರ್ಯವನ್ನೂ ನಿಮಗೆ ಧಾರೆ ಎರೆದಿರುವುದರಿಂದ ಅವನ ಹಾಗೂ ಹಸಿವಿನಿಂದ ಬಳಲುತ್ತಿರುವ ಅವನ ಲಕ್ಷಾಂತರ ಮಕ್ಕಳಿಗೆ ಸೇವೆ ಮಾಡುವ ಅವಕಾಶ ನಿಮಗೆ ಒದಗಿಬಂದಿದೆ ಎಂದೇ ತಿಳಿಯಿರಿ~ ಎಂದು ಹೇಳಿದರು.

ಈವರೆಗೆ ಇಂತಹ ನೇರ, ನಿಷ್ಠುರ ಮಾತುಗಳನ್ನು ಕೇಳಿರದ ರಾಕ್‌ಫೆಲ್ಲರ್‌ಗೆ ಇದರಿಂದ ತೀವ್ರ ಮುಜುಗರ ಉಂಟಾಯಿತು. ಕನಿಷ್ಠ ವಿದಾಯವನ್ನೂ ಹೇಳದೆ ಕಿರಿಕಿರಿಯಿಂದ ಅವರು ಅಲ್ಲಿಂದ ನಿರ್ಗಮಿಸಿದರು.

ಆದರೆ ಒಂದು ವಾರದ ಬಳಿಕ ದಿಢೀರನೆ ಸ್ವಾಮೀಜಿ ಕೋಣೆ ಪ್ರವೇಶಿಸಿದ ರಾಕ್‌ಫೆಲ್ಲರ್, ಹಿಂದಿನ ಭಂಗಿಯಲ್ಲೇ ಕುಳಿತಿದ್ದ ಅವರತ್ತ ಕಾಗದವೊಂದನ್ನು ಬಿಸಾಡಿದರು. ಸಾರ್ವಜನಿಕ ಸಂಸ್ಥೆಯೊಂದಕ್ಕೆ ಭಾರಿ ಮೊತ್ತದ ದೇಣಿಗೆ ನೀಡುವ ಅವರ ಯೋಜನೆಯನ್ನು ಆ ಕಾಗದ ಒಳಗೊಂಡಿತ್ತು.

`ಹಾಂ! ಈಗ ಇದನ್ನು ನೋಡಿ ನಿಮಗೆ ತೃಪ್ತಿಯಾಗಬಹುದು. ಅದಕ್ಕಾಗಿ ನೀವಿಗ ನನಗೆ ಕೃತಜ್ಞತೆ ಹೇಳಬೇಕು ಸ್ವಾಮಿ~ ಎಂದು ಹೇಳಿದರು. ಇದನ್ನು ಕೇಳಿದ ಸ್ವಾಮೀಜಿ ಸ್ವಲ್ಪ ಕಾಲ ದೇಹವನ್ನು ಅಲುಗಾಡಿಸುವುದಿರಲಿ, ಕಣ್ಣ ಗುಡ್ಡೆಗಳನ್ನು ಸಹ ಆಚೀಚೆ ಚಲಿಸದೆ ಕುಳಿತಿದ್ದರು. ಬಳಿಕ ನಿಧಾನವಾಗಿ ಆ ಕಾಗದವನ್ನು ಕೈಗೆತ್ತಿಕೊಂಡು ಓದಿ `ನೀವೀಗ ನನಗೆ ಕೃತಜ್ಞತೆ ಹೇಳಬೇಕಾಗಿದೆ~ ಎಂದಷ್ಟೇ ಹೇಳಿದರು.

ಇದು ರಾಕ್‌ಫೆಲ್ಲರ್ ಅವರು ಸಾರ್ವಜನಿಕ ಕಲ್ಯಾಣಕ್ಕೆ ನೀಡಿದ ಭಾರಿ ಮೊತ್ತದ ಮೊದಲ ದೇಣಿಗೆಯಾಗಿತ್ತು. ಮುಂದೆ ಇದೇ ರಾಕ್‌ಫೆಲ್ಲರ್ ಪ್ರತಿಷ್ಠಾನದ ಚಟುವಟಿಕೆಗಳಿಗೆ ನಾಂದಿ ಹಾಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT