ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗಪುರದಲ್ಲಿ ಆಸೀಸ್ ನಾಗಾಲೋಟ

Last Updated 25 ಫೆಬ್ರುವರಿ 2011, 17:50 IST
ಅಕ್ಷರ ಗಾತ್ರ

ನಾಗಪುರ: ತವರಿನಲ್ಲಿ ನಡೆದ ಭೂಕಂಪದ ಆಘಾತದಿಂದ ಚೇತರಿಸಿಕೊಳ್ಳುವ ಪ್ರಯತ್ನದಲ್ಲಿದ್ದ ನ್ಯೂಜಿಲೆಂಡ್ ತಂಡಕ್ಕೆ ಆಸ್ಟ್ರೇಲಿಯಾ ಬಲವಾದ ಪ್ರಹಾರ ನೀಡಿದೆ. ವಿಶ್ವಕಪ್ ಕ್ರಿಕೆಟ್ ಟೂರ್ನಿಯ ‘ಎ’ ಗುಂಪಿನ ಪಂದ್ಯದಲ್ಲಿ ಕಿವೀಸ್ ವಿರುದ್ಧ ರಿಕಿ ಪಾಂಟಿಂಗ್ ಬಳಗ 7  ವಿಕೆಟ್‌ಗಳ ಅಧಿಕಾರಯುತ ಗೆಲುವು ಪಡೆಯಿತು. 

ಜಾಮ್ತಾದ ವಿದರ್ಭ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಕಿವೀಸ್ ನೀಡಿದ 207 ರನ್‌ಗಳ ಗುರಿ ಆಸೀಸ್‌ಗೆ ದೊಡ್ಡ ಹೊರೆಯಾಗಿ ಕಾಣಲೇ ಇಲ್ಲ. ಕೇವಲ 34 ಓವರ್‌ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು ಜಯ ಸಾಧಿಸಿತು. ಶೇನ್ ವ್ಯಾಟ್ಸನ್ (62, 61 ಎಸೆತ, 6 ಬೌಂ, 1 ಸಿಕ್ಸರ್), ಬ್ರಾಡ್ ಹಡಿನ್ (55, 50 ಎಸೆತ, 8 ಬೌಂ) ಅಬ್ಬರಿಸಿದ ಕಾರಣ ಇನ್ನೂ 96 ಎಸೆತಗಳು ಬಾಕಿಯಿರುವಂತೆಯೇ ಆಸ್ಟ್ರೇಲಿಯಾ ಗೆಲುವಿನ ವ್ಯವಹಾರ ಪೂರ್ಣಗೊಳಿಸಿತು.

ಪ್ರಶಸ್ತಿ ಗೆಲ್ಲುವ ‘ಫೇವರಿಟ್’ ಎಂಬ  ಹಣೆಪಟ್ಟಿ ಇಲ್ಲದಿದ್ದರೂ ನಮ್ಮನ್ನು ಕಡೆಗಣಿಸಬೇಡಿ ಎಂಬ ಸ್ಪಷ್ಟ ಸಂದೇಶವನ್ನು ರಿಕಿ ಪಾಂಟಿಂಗ್ ಬಳಗ ಇತರ ತಂಡಗಳಿಗೆ ರವಾನಿಸಿದೆ. ಮಾತ್ರವಲ್ಲ ಈ ಗೆಲುವಿನಿಂದ ಆಸ್ಟ್ರೇಲಿಯಾ ತಂಡ ‘ಚಾಪೆಲ್- ಹ್ಯಾಡ್ಲಿ’ ಟ್ರೋಫಿ ತನ್ನದಾಗಿಸಿಕೊಂಡಿತು. ಈ ಪಂದ್ಯದ ಮೂಲಕ ಟ್ರೋಫಿಯ ವಿಜೇತರನ್ನು ನಿರ್ಣಯಿಸಲು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿಗಳು ನಿರ್ಧರಿಸಿದ್ದವು.

ಬ್ಯಾಟಿಂಗ್‌ನಲ್ಲಿ ವಿಫಲವಾಗಿದ್ದ ಕಾರಣ ನ್ಯೂಜಿಲೆಂಡ್‌ಗೆ ಬೌಲಿಂಗ್ ವೇಳೆ ಏನೂ ಮಾಡುವಂತೆ ಇರಲಿಲ್ಲ. ಸ್ಪಿನ್ ಮುಂದೆ ಆಸ್ಟ್ರೇಲಿಯಾ ತಡಕಾಡುತ್ತದೆ ಎಂಬುದನ್ನು ಅರಿತಿದ್ದ ಕಿವೀಸ್ ನಾಯಕ ಡೇನಿಯಲ್ ವೆಟೋರಿ ಅವರು ಟಿಮ್ ಸೌಥಿ ಜೊತೆ ಬೌಲಿಂಗ್ ಆರಂಭಿಸಿದರು. ಆದರೆ ಆಸೀಸ್‌ನ ಅಬ್ಬರದ ಮುಂದೆ ಇದ್ಯಾವುದೂ ಫಲಿಸಲಿಲ್ಲ. ವ್ಯಾಟ್ಸನ್ ಮತ್ತು ಹಡಿನ್ ತಂಡಕ್ಕೆ ಭರ್ಜರಿ ಆರಂಭ ನೀಡಿದರು. ಮೊದಲು ಹಡಿನ್ ಎದುರಾಳಿ ಬೌಲರ್‌ಗಳನ್ನು ಚಾರ್ಜ್ ಮಾಡಿದರೆ, ವ್ಯಾಟನ್ಸ್ ಅವರಿಗೆ ಉತ್ತಮ ಸಾಥ್ ನೀಡಿದರು. ಬೌಂಡರಿಗಳ ಮಳೆಯೇ ಸುರಿದ ಕಾರಣ 15 ಓವರ್‌ಗಳ ಕೊನೆಗೆ ಆಸೀಸ್ 108 ರನ್ ಪೇರಿಸಿತ್ತು.

ಮೊದಲ ವಿಕೆಟ್‌ಗೆ 133 ರನ್ ಕಲೆಹಾಕಿದ ಇವರಿಬ್ಬರೂ ಹಾಮಿಷ್ ಬೆನೆಟ್ ಎಸೆದ 19ನೇ ಓವರ್‌ನಲ್ಲಿ ಔಟಾದರು. ಆಗಲೇ ಆಸೀಸ್ ಗೆಲುವಿನ ಹಾದಿಯಲ್ಲಿ ಬಂದು ನಿಂತಿತ್ತು. ಬಳಿಕ ರಿಕಿ ಪಾಂಟಿಂಗ್ (12) ಅವರನ್ನು ಕಳೆದುಕೊಂಡಿತಾದರೂ, ಮೈಕಲ್ ಕ್ಲಾರ್ಕ್ (24) ಮತ್ತು ಕ್ಯಾಮರೂನ್ ವೈಟ್ (22) ಅಜೇಯ ಆಟವಾಡಿ ತಂಡವನ್ನು ಭರ್ಜರಿ ಗೆಲುವಿನತ್ತ ಮುನ್ನಡೆಸಿದರು. ಕ್ಲಾರ್ಕ್ ಇದೇ ವೇಳೆ ಏಕದಿನ ಕ್ರಿಕೆಟ್‌ನಲ್ಲಿ 6 ಸಾವಿರ ರನ್‌ಗಳನ್ನು ಪೂರೈಸಿದ ಸಾಧನೆ ಮಾಡಿದರು. 

ಮಿಂಚಿದ ವೇಗಿಗಳು:  ಬೆಳಿಗ್ಗೆ ಟಾಸ್ ಗೆದ್ದಾಗಲೇ ರಿಕಿ ಪಾಂಟಿಂಗ್ ಮುಖದಲ್ಲಿ ಮಂದಹಾಸ ಮೂಡಿತ್ತು. ಮೋಡ ಕವಿದ ವಾತಾವರಣವಿದ್ದ ಕಾರಣ ಫೀಲ್ಡಿಂಗ್ ಆಯ್ದುಕೊಳ್ಳಲು ಅವರಿಗೆ ಎರಡು ಬಾರಿ ಆಲೋಚಿಸುವ ಅಗತ್ಯವೇ ಇರಲಿಲ್ಲ. ಬಿಸಿಲೇರುವ ಮುನ್ನ ಒಂದಷ್ಟು ವಿಕೆಟ್ ಪಡೆದು ಕಿವೀಸ್ ಮೇಲೆ ಒತ್ತಡ ಹೇರುವುದು ಪಾಂಟಿಂಗ್ ಲೆಕ್ಕಾಚಾರವಾಗಿತ್ತು. 

ಬ್ರೆಟ್ ಲೀ ಎದುರು ಎಚ್ಚರಿಕೆಯ ಆಟವಾಡಿದ ಕಿವೀಸ್ ಬ್ಯಾಟ್ಸ್‌ಮನ್‌ಗಳು ‘ಪಂದ್ಯಶ್ರೇಷ್ಠ’ ಮಿಷೆಲ್ ಜಾನ್ಸನ್ (33ಕ್ಕೆ 4) ಮತ್ತು ಶಾನ್ ಟೇಟ್ (35ಕ್ಕೆ 3) ಮುಂದೆ ತಲೆಬಗ್ಗಿಸಿ ನಿಂತರು. 73 ರನ್ ಗಳಿಸುವಷ್ಟರಲ್ಲೇ ಆರು ವಿಕೆಟ್ ಕಳೆದುಕೊಂಡ ತಂಡ ಕಷ್ಟಪಟ್ಟು ಮೊತ್ತವನ್ನು 200ರ ಗಡಿ ದಾಟಿಸಿತು. ನಥಾನ್ ಮೆಕ್ಲಮ್ (52, 76 ಎಸೆತ, 3 ಬೌಂ) ಮತ್ತು ಡೇನಿಯಲ್ ವೆಟೋರಿ (44, 43 ಎಸೆತ, 5 ಬೌಂ) ಛಲ ತೋರಿದ್ದರಿಂದ ತಂಡದ ಮಾನ ಉಳಿಯಿತು.

ಆಸೀಸ್ ವೇಗಿಗಳು ಹರಿಯಬಿಡುತ್ತಿದ್ದ ಚೆಂಡುಗಳು ವಿಸಿಎ ಕ್ರೀಡಾಂಗಣದಲ್ಲಿ ‘ಕಂಪನ’ ಉಂಟುಮಾಡಿತು. ವೆಟೋರಿ ಬಳಗ ನಡುಗಿತು. ವಿಕೆಟ್‌ಗಳು ಪಟಪಟನೆ ಉರುಳಿದವು. ಕ್ರೈಸ್ಟ್‌ಚರ್ಚ್ ಭೂಕಂಪದ ‘ಮರು ಕಂಪನ’ ನಾಗಪುರದಲ್ಲಿ ನಡೆದ ಅನುಭವ ಕಿವೀಸ್‌ಗೆ ಉಂಟಾಯಿತು.

ಇನಿಂಗ್ಸ್ ಆರಂಭಿಸಿದ ಬ್ರೆಂಡನ್ ಮೆಕ್ಲಮ್ ‘ಅಪ್ಪರ್ ಕಟ್’ ಮೂಲಕ ಒಂದೆರಡು ಬೌಂಡರಿ ಗಿಟ್ಟಿಸಿದರು. ಆದರೆ 16 ರನ್ ಗಳಿಸಿದ್ದ ವೇಳೆ ಶಾನ್ ಟೇಟ್ ಎಸೆತದಲ್ಲಿ ಜಾಸನ್ ಕ್ರೇಜಾಗೆ ಕ್ಯಾಚಿತ್ತರು. ಮತ್ತೊಬ್ಬ ಆರಂಭಿಕ ಆಟಗಾರ ಮಾರ್ಟಿನ್ ಗುಪ್ಟಿಲ್ ಲಯ ಕಂಡುಕೊಂಡ ಸಂದರ್ಭದಲ್ಲೇ ಮರಳಿದ್ದು ಕಿವೀಸ್‌ಗೆ ಆಘಾತ ಉಂಟುಮಾಡಿತು.

ಒಂಬತ್ತನೇ ಓವರ್‌ನಲ್ಲಿ ಒಂದು ವಿಕೆಟ್‌ಗೆ 40 ರನ್ ಗಳಿಸಿದ್ದ ನ್ಯೂಜಿಲೆಂಡ್ ಮುಂದಿನ 33 ರನ್‌ಗಳಿಗೆ ಐದು ವಿಕೆಟ್ ಕಳೆದುಕೊಂಡಿತು. ಜಾನ್ಸನ್ ಮತ್ತು ಟೇಟ್ ಮಾರಕ ದಾಳಿ ನಡೆಸಿದರು. ಜೆಸ್ಸಿ ರೈಡರ್ (25) ಉತ್ತಮ ಆರಂಭವನ್ನು ದೊಡ್ಡ ಮೊತ್ತವಾಗಿ ಪರಿವರ್ತಿಸಲು ವಿಫಲರಾದರೆ, ಜೇಮ್ಸ್ ಫ್ರಾಂಕ್ಲಿನ್ ಹಾಗೂ ಸ್ಕಾಟ್ ಸ್ಟೈರಿಸ್ ಬಂದಷ್ಟೇ ವೇಗದಲ್ಲಿ ಪೆವಿಲಿಯನ್ ಮರಳಿದರು.

ಈ ಮೂವರೂ ವಿಕೆಟ್ ಕೀಪರ್‌ಗೆ ಕ್ಯಾಚಿತ್ತು ನಿರ್ಗಮಿಸಿದರು. ಫ್ರಾಂಕ್ಲಿನ್ ಅವರು ಸರಿಯಾದ ಫುಟ್‌ವರ್ಕ್ ಇಲ್ಲದೆಯೇ ಆಫ್ ಸ್ಟಂಪ್‌ನಿಂದ ಹೊರಹೋಗುತ್ತಿದ್ದ ಚೆಂಡನ್ನು ಹೊಡೆಯಲು ಮುಂದಾಗಿ ಎಡವಿದರೆ, ಸ್ಟೈರಿಸ್ ಚೆಂಡಿನ ಗತಿಯನ್ನು ನಿಖರವಾಗಿ ಅಂದಾಜಿಸಲು ವಿಫಲರಾದರು. ಆ ಬಳಿಕ ಕಿವೀಸ್ ಇನಿಂಗ್ಸ್‌ಗೆ ಜೀವ ಬಂತು. ಜೇಮಿ ಹೌ (22) ಮತ್ತು ನಥಾನ್ ಮೆಕ್ಲಮ್ ಏಳನೇ ವಿಕೆಟ್‌ಗೆ 48 ರನ್‌ಗಳನ್ನು ಸೇರಿಸಿದರು. ಹೌ ಮರಳಿದ ಬಳಿಕ ವೆಟೋರಿ ಮತ್ತು ಮೆಕ್ಲಮ್ ಎಂಟನೇ ವಿಕೆಟ್‌ಗೆ 54 ರನ್ ಕಲೆಹಾಕಿದರು.

ಅಂತೂ ಇಂತೂ ಕುಂಟುತ್ತಾ ಸಾಗಿದ ಕಿವೀಸ್ 45.1 ಓವರ್‌ಗಳಲ್ಲಿ 206 ರನ್ ಕಲೆಹಾಕುವಲ್ಲಿ ಯಶಸ್ವಿಯಾಯಿತು. ಜಿಂಬಾಬ್ವೆ ವಿರುದ್ಧದ ಮೊದಲ ಪಂದ್ಯದಲ್ಲಿ 19 ರನ್‌ಗಳಿಗೆ 4 ವಿಕೆಟ್ ಪಡೆದಿದ್ದ ಜಾನ್ಸನ್ ಮತ್ತೆ ಮಿಂಚಿದರು.

ಸ್ಕೋರ್ ವಿವರ
ನ್ಯೂಜಿಲೆಂಡ್ 45.1 ಓವರ್‌ಗಳಲ್ಲಿ 206
ಮಾರ್ಟಿನ್ ಗುಪ್ಟಿಲ್ ಬಿ ಶೇನ್ ವ್ಯಾಟ್ಸನ್  10
ಬ್ರೆಂಡನ್ ಮೆಕ್ಲಮ್ ಸಿ ಕ್ರೇಜಾ ಶಾನ್ ಟೇಟ್  16
ಜೆಸ್ಸಿ ರೈಡರ್ ಸಿ ಹಡಿನ್ ಬಿ ಮಿಷೆಲ್ ಜಾನ್ಸನ್  25
ರಾಸ್ ಟೇಲರ್ ಬಿ ಶಾನ್ ಟೇಟ್  07
ಜೇಮ್ಸ್ ಫ್ರಾಂಕ್ಲಿನ್ ಸಿ ಹಡಿನ್ ಬಿ ಮಿಷೆಲ್ ಜಾನ್ಸನ್  00
ಸ್ಕಾಟ್ ಸ್ಟೈರಿಸ್ ಸಿ ಹಡಿನ್ ಬಿ ಶಾನ್ ಟೇಟ್  00
ಜೇಮಿ ಹೌ ಎಲ್‌ಬಿಡಬ್ಲ್ಯು ಬಿ ಸ್ಟೀವನ್ ಸ್ಮಿತ್  22
ನಥಾನ್ ಮೆಕ್ಲಮ್ ಎಲ್‌ಬಿಡಬ್ಲ್ಯು ಬಿ ಮಿಷೆಲ್ ಜಾನ್ಸನ್  52
ಡೇನಿಯಲ್ ವೆಟೋರಿ ಸಿ ಹಡಿನ್ ಬಿ ಬ್ರೆಟ್ ಲೀ  44
ಟಿಮ್ ಸೌಥಿ ಸಿ ಪಾಂಟಿಂಗ್ ಬಿ ಮಿಷೆಲ್ ಜಾನ್ಸನ್  06
ಹಾಮಿಷ್ ಬೆನೆಟ್ ಔಟಾಗದೆ  00
ಇತರೆ: (ಬೈ-1, ಲೆಗ್‌ಬೈ-8, ವೈಡ್-13, ನೋಬಾಲ್-2)     24
ವಿಕೆಟ್ ಪತನ: 1-20 (ಬ್ರೆಂಡನ್ ಮೆಕ್ಲಮ್; 3.4), 2-40 (ಗುಪ್ಟಿಲ್; 8.5), 3-66 (ರೈಡರ್; 13.2), 4-66 (ಫ್ರಾಂಕ್ಲಿನ್; 13.5), 5-67 (ಸ್ಟೈರಿಸ್; 14.4), 6-73 (ಟೇಲರ್; 16.6), 7-121 (ಹೌ; 28.6), 8-175 (ನಥಾನ್ ಮೆಕ್ಲಮ್; 41.2), 9-206 (ವೆಟೋರಿ; 44.6), 10-206 (ಸೌಥಿ; 45.1).
ಬೌಲಿಂಗ್: ಬ್ರೆಟ್ ಲೀ 8-2-29-1, ಶಾನ್ ಟೇಟ್ 7-0-35-3, ಮಿಷೆಲ್ ಜಾನ್ಸನ್ 9.1-3-33-4, ಶೇನ್ ವ್ಯಾಟ್ಸನ್ 3-1-9-1, ಜಾಸನ್ ಕ್ರೇಜಾ 9-0-47-0, ಸ್ಟೀವನ್ ಸ್ಮಿತ್ 9-0-44-1
ಆಸ್ಟ್ರೇಲಿಯಾ 34 ಓವರ್‌ಗಳಲ್ಲಿ 3 ವಿಕೆಟ್‌ಗೆ 207
ಶೇನ್ ವ್ಯಾಟ್ಸನ್ ಬಿ ಹಾಮಿಷ್ ಬೆನೆಟ್  62
ಬ್ರಾಡ್ ಹಡಿನ್ ಸಿ ಫ್ರಾಂಕ್ಲಿನ್ ಬಿ ಹಾಮಿಷ್ ಬೆನೆಟ್  55
ರಿಕಿ ಪಾಂಟಿಂಗ್ ಸ್ಟಂಪ್ ಮೆಕ್ಲಮ್ ಬಿ ಟಿಮ್ ಸೌಥಿ  12
ಮೈಕಲ್ ಕ್ಲಾರ್ಕ್ ಔಟಾಗದೆ  24
ಕ್ಯಾಮರೂನ್ ವೈಟ್ ಔಟಾಗದೆ  22
ಇತರೆ: (ಲೆಗ್‌ಬೈ-3, ವೈಡ್-29)  32
ವಿಕೆಟ್ ಪತನ: 1-133 (ಹಡಿನ್; 18.1), 2-136 (ವ್ಯಾಟ್ಸನ್; 18.3), 3-167 (ಪಾಂಟಿಂಗ್; 26.4).
ಬೌಲಿಂಗ್: ಟಿಮ್ ಸೌಥಿ 10-2-45-1, ಡೇನಿಯಲ್ ವೆಟೋರಿ 7-0-39-0, ಹಾಮಿಷ್ ಬೆನೆಟ್ 7-0-63-2, ನಥಾನ್ ಮೆಕ್ಲಮ್ 3-0-22-0, ಜೆಸ್ಸಿ ರೈಡರ್ 5-0-24-0, ಜೇಮ್ಸ್ ಫ್ರಾಂಕ್ಲಿನ್ 2-0-11-0
ಫಲಿತಾಂಶ: ಆಸ್ಟ್ರೇಲಿಯಾಕ್ಕೆ 7 ವಿಕೆಟ್ ಜಯ
ಪಂದ್ಯಶ್ರೇಷ್ಠ: ಮಿಷೆಲ್ ಜಾನ್ಸನ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT