ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗರಿಕರೇ ಜೋಕೆ!

Last Updated 23 ಜನವರಿ 2012, 5:55 IST
ಅಕ್ಷರ ಗಾತ್ರ

ಮಡಿಕೇರಿ: ಎಲ್ಲೆಂದರಲ್ಲಿ ಕಸ ಬಿಸಾಡುವ ನಗರವಾಸಿಗಳೇ ಹುಷಾರಾಗಿ. ಇಲ್ಲದಿದ್ದರೆ ರೂ 100 ದಂಡ ನಿಮ್ಮ ಕೊರಳಿಗೆ ಬಿದ್ದೀತು (ಹೋಟೆಲ್ ಸಿಬ್ಬಂದಿಗಳಾದರೆ ರೂ 500 ದಂಡ). ಇಂತಹದೊಂದು ಕಠಿಣ ನಿರ್ಧಾರವನ್ನು ಮಡಿಕೇರಿ ನಗರಸಭೆ ಕೈಗೊಂಡಿದೆ.

ರಾಜ್ಯದಲ್ಲಿ ಮೊಟ್ಟಮೊದಲ ಬಾರಿಗೆ ಪ್ಲಾಸ್ಟಿಕ್ ಚೀಲ ಬಳಕೆಯನ್ನು ನಿಷೇಧಿಸುವ ಮೂಲಕ ಗಮನಸೆಳೆದಿದ್ದ ನಗರಸಭೆ, ಈಗ ಮಡಿಕೇರಿಯನ್ನು ಕಸಮುಕ್ತ ನಗರವನ್ನಾಗಿಸಲು ದೃಢವಾದ ಹೆಜ್ಜೆ ಇಟ್ಟಿದೆ.

ಕಸದ ತೊಟ್ಟಿ ಬಿಟ್ಟು ರಸ್ತೆಗಳ ಮೇಲೆ, ಖಾಲಿ ಜಾಗದಲ್ಲಿ ಕಸ ಹಾಕುವ ನಾಗರಿಕರ ಮೇಲೆ ರೂ 100 ಹಾಗೂ ಹೋಟೆಲ್, ವ್ಯಾಪಾರ ಮಳಿಗೆಗಳ ಮೇಲೆ ರೂ 500 ದಂಡ ವಿಧಿಸಲು ಇತ್ತೀಚೆಗೆ ನಡೆದ ನಗರಸಭೆ ಸಾಮಾನ್ಯಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

ವಿಷಯ ಪ್ರಸ್ತಾಪಿಸಿದ ಸದಸ್ಯ ಬೇಬಿ ಮ್ಯಾಥ್ಯು, ನಗರಸಭೆ ಸೂಚಿಸಿರುವ ನಿರ್ದಿಷ್ಟವಾದ ಕಸದ ತೊಟ್ಟಿಯನ್ನು ಬಿಟ್ಟು ರಸ್ತೆಯ ಮೇಲೋ ಅಥವಾ ಖಾಲಿ ಜಾಗಗಳಲ್ಲಿ ಬೇಕಾಬಿಟ್ಟಿಯಾಗಿ ಕಸವನ್ನು ಚೆಲ್ಲುತ್ತಿದ್ದಾರೆ. ಇದರಿಂದಾಗಿ ಇಡೀ ನಗರ ಗಬ್ಬೆದ್ದು ಹೋಗಿದೆ. ಇದಕ್ಕೆ ನಿಯಂತ್ರಣ ಹಾಕಬೇಕು ಎಂದು ಒತ್ತಾಯಿಸಿದ್ದರು.

ಇದಕ್ಕೆ ಧ್ವನಿಗೂಡಿಸಿದ ಎಲ್ಲ ಸದಸ್ಯರು ಕಸ ಚೆಲ್ಲಾಡುವವರ ಮೇಲೆ ದಂಡ ವಿಧಿಸಬೇಕು ಎಂದು ಒಕ್ಕೊರಲಿನ ನಿರ್ಣಯ ಕೈಗೊಂಡರು.

ದಂಡ ವಿಧಿಸುವುದು ಮುಖ್ಯವಾಗಿ ಹಣ ಪಡೆಯಬೇಕು ಎನ್ನುವ ಉದ್ದೇಶದಿಂದಲ್ಲ. ಇದು ಜನರಿಗೆ ಎಚ್ಚರಿಕೆಯಾಗಿರಲಿ ಹಾಗೂ ಈ ತಪ್ಪನ್ನು ಪದೇ ಪದೇ ಮಾಡದಿರಲಿ ಎನ್ನುವ ಉದ್ದೇಶಕ್ಕಾಗಿ ಎಂದು ಸದಸ್ಯರು ಹೇಳಿಕೊಂಡಿದ್ದಾರೆ.

ಈಗಾಗಲೇ ನಗರಸಭೆಯು ನಗರದ ಪ್ರಮುಖ ಬೀದಿಗಳಲ್ಲಿ ಕಸ ಸಂಗ್ರಹ ಮಾಡುತ್ತಿದೆ. ಇನ್ನುಳಿದ ಭಾಗಗಳಲ್ಲಿಯೂ ಶೀಘ್ರವೇ ಕಸ ಸಂಗ್ರಹವನ್ನು ಆರಂಭಿಸಲಿದೆ. ಇದರ ಹೊರತಾಗಿ ಪ್ರಮುಖ ಸ್ಥಳಗಳಲ್ಲಿ ಕಸದ ತೊಟ್ಟೆಗಳನ್ನು ಇಡಲಾಗಿದೆ. ಇಲ್ಲಿ ಮಾತ್ರ ಮನೆಯ ಕಸ, ತ್ಯಾಜ್ಯವನ್ನು ಹಾಕಬೇಕು. ಬೀದಿಗಳಲ್ಲಿ ಬಿಸಾಡಬಾರದು ಎಂದು ಸದಸ್ಯರು ಮನವಿ ಮಾಡಿಕೊಂಡಿದ್ದಾರೆ.

ಇತ್ತೀಚೆಗೆ ನಗರಸಭೆಯ ಸದಸ್ಯರು ಕಸ-ತ್ಯಾಜ್ಯ ವಿಲೇವಾರಿ ಕುರಿತು ಅಧ್ಯಯನ ನಡೆಸಲು ಆಂಧ್ರದ ಸೂರ್ಯಪೇಟ್‌ಗೆ ಪ್ರವಾಸ ಕೈಗೊಂಡಿದ್ದರು. ಅಲ್ಲಿ ನಗರನಿವಾಸಿಗಳಿಗೆ ಎರಡು ಕಸದ ಡಬ್ಬಿಗಳನ್ನು ನೀಡಲಾಗುತ್ತಿದೆಯಂತೆ. ಕೊಳೆಯುವ ತ್ಯಾಜ್ಯಗಳನ್ನು ಒಂದೆಡೆ ಹಾಗೂ ಕೊಳೆಯದೇ ಇರುವಂತಹ ತ್ಯಾಜ್ಯಗಳನ್ನು ಹಾಕಲು ಮತ್ತೊಂದು ಡಬ್ಬಿ ನೀಡಲಾಗಿದೆಯಂತೆ.

ಹೀಗೆ ಮಾಡಿದರೆ ಕಸ ವಿಲೇವಾರಿ ಮಾಡುವುದು ನಗರಸಭೆಗೆ ಸುಲಭವಾಗಲಿದೆ. ಈ ಮಾದರಿಯನ್ನು ನಾವು ಅಳವಡಿಸೋಣ. ನಗರಸಭೆ ವತಿಯಿಂದಲೇ ಪ್ರತಿ ಮನೆಗೆ ಕಸದ ಡಬ್ಬಿಗಳನ್ನು ನೀಡೋಣ ಎನ್ನುವ ಅಭಿಪ್ರಾಯವನ್ನು ಕೆಲವು ಸದಸ್ಯರು ವ್ಯಕ್ತಪಡಿಸಿದರು.

ಸ್ವಚ್ಛತೆಗೆ ಆದ್ಯತೆ: ನಗರವನ್ನು ಸ್ವಚ್ಛ ಹಾಗೂ ಸುಂದರವನ್ನಾಗಿಸಲು ನಗರಸಭೆ ಒತ್ತು ನೀಡುತ್ತಿದೆ. ಪ್ರತಿದಿನ ನಗರಕ್ಕೆ ಆಗಮಿಸುವ ಸಾವಿರಾರು ಪ್ರವಾಸಿಗರು ಇಲ್ಲಿಂದ ಖುಷಿಯಿಂದಲೇ ಮರಳಬೇಕು. ಇಲ್ಲಿನ ಗಲೀಜು, ಅವ್ಯವಸ್ಥೆ ಕಂಡು ತೆಗಳುತ್ತ ಹೋಗುವಂತಾಗಬಾರದು. ಈ ನಿಟ್ಟಿನಲ್ಲಿ ನಗರಸಭೆ ಉತ್ತಮ ಕ್ರಮಕೈಗೊಂಡಿದೆ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT