ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗಾರ್ಜುನ ವಿದ್ಯುತ್ ಸ್ಥಾವರ ಆಧುನಿಕ ಭಸ್ಮಾಸುರ

Last Updated 10 ಫೆಬ್ರುವರಿ 2011, 9:20 IST
ಅಕ್ಷರ ಗಾತ್ರ

ಉಡುಪಿ: ‘ಪಡುಬಿದ್ರಿ ಸಮೀಪದ ನಾಗಾರ್ಜುನ ಉಷ್ಣವಿದ್ಯುತ್ ಸ್ಥಾವರ ಆಧುನಿಕ ಭಸ್ಮಾಸುರನಂತೆ ಸ್ಥಳೀಯರನ್ನು ಪೀಡಿಸುತ್ತಿದೆ’ ಎಂದು ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.ಪೀಠಾರೋಹಣದ 72ನೇ ವರ್ಧಂತ್ಯುತ್ಸವ ಪ್ರಯುಕ್ತ ಇಲ್ಲಿನ ವಿದ್ಯೋದಯ ಶಾಲಾ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಮಾಜ ಸೇವೆ, ಸಾಹಿತ್ಯ, ಶಿಕ್ಷಣ, ಯಕ್ಷಗಾನ, ವೈದ್ಯಕೀಯ ರಂಗದ ಸಾಧಕರಿಗೆ ‘ರಾಮವಿಠಲ’ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

‘ವಿದ್ಯುತ್ ಸ್ಥಾವರ ಆರಂಭಿಸುವಾಗ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಹಾರು ಬೂದಿಯಿಂದ ಸ್ಥಳೀಯರಿಗೆ ಸಮಸ್ಯೆ ಆಗದಂತೆ ತಡೆಗಟ್ಟಲು ಮುಂಜಾಗ್ರತೆ ವಹಿಸುವುದಾಗಿ ರಾಜಕಾರಣಿಗಳು ಭರವಸೆ ನಿಡಿದ್ದರು. ಆದರೆ, ಈಗ ದುಬಾರಿ ವೆಚ್ಚವಾಗುತ್ತದೆ ಎಂಬ ಕಾರಣಕ್ಕೆ ಕಂಪೆನಿ ಆಧುನಿಕ ತಂತ್ರಜ್ಞಾನ ಅಳವಡಿಸಲು ಹಿಂದೇಟು ಹಾಕುತ್ತಿದೆ. ಹಾರುಬೂದಿಯಿಂದಾಗಿ ಈಗ ಸ್ಥಳೀಯ ಜನತೆ ಅನುಭವಿಸುವ ಸಂಕಷ್ಟ ಬೇಸರ ಮೂಡಿಸುತ್ತಿದೆ. ರಾಜಕಾರಣಿಗಳು ಕೊಟ್ಟಮಾತು ಮರೆತು ಸುಮ್ಮನಿದ್ದಾರೆ. ಸ್ಥಳೀಯ ಜನತೆಯನ್ನು ರಕ್ಷಿಸಲು ದೇವರೇ ಚಮತ್ಕಾರ ಮಾಡಬೇಕು’ ಎಂದು ಅವರು ಖೇದ ವ್ಯಕ್ತಪಡಿಸಿದರು.

‘ಕೃಷಿ ಮತ್ತು ಅರಣ್ಯ ಉಳಿದರೆ ಮಾತ್ರ ಋಷಿ ಭೂಮಿ ನಿರ್ಮಾಣವಾಗುತ್ತದೆ. ಅಲ್ಲಿ ಖುಷಿಯೂ ನೆಲೆಸುತ್ತದೆ’ ಎಂದು ಅವರು ಹೇಳಿದರು.‘ಕರಾವಳಿ ಪರಿಸರಕ್ಕೆ ಮಾರಕವಾದ ನೇತ್ರಾವತಿ ನದಿ ತಿರುವಿನಂಥ ಯೋಜನೆಗಳ ಹೆಸರು ಕೇಳಿಬರುತ್ತಿದೆ. ವಿಜ್ಞಾನ ಬೇಕು. ಅದಕ್ಕೆ ಲಗಾಮು ಹಾಕಿ ಬಳಸಬೇಕು. ಅದು ಅತಿರೇಕದ ಆಕ್ರಮಣ ಆಗಬಾರದು. ನಿಯಂತ್ರಣ ಇಲ್ಲದ ವಿಜ್ಞಾನ ಪತನಕ್ಕೆ ನಾಂದಿ’ ಎಂದು ಅವರು ಎಚ್ಚರಿಸಿದರು.

‘ದೇಶದ ಸ್ಥಿತಿ ಅಧಃಪತನವಾಗಿದೆ. ಅನೈತಿಕತೆ, ಭ್ರಷ್ಟಾಚಾರ ತಾಂಡವವಾಡುತ್ತಿದೆ. ಯುವಕರು ಎಚ್ಚೆತ್ತು ಧರ್ಮ ಸಂಸ್ಕೃತಿ ರಕ್ಷಣೆಗೆ ಕಟಿಬದ್ಧರಾಗಬೇಕು’ ಎಂದರು.
ರಾಮವಿಠಲ ಪ್ರಶಸ್ತಿ ಪ್ರದಾನ: ಯಕ್ಷಗಾನ ಕಲಾವಿದರಾದ ಸುಬ್ರಹ್ಮಣ್ಯ ಧಾರೇಶ್ವರ, ತೀರ್ಥಹಳ್ಳಿ ಗೋಪಾಲಾಚಾರ್, ಶಿವರಾಮ ಜೋಗಿ, ಯಕ್ಷಗುರು ಬನ್ನಂಜೆ ಸಂಜೀವ ಸುವರ್ಣ, ದಿನೇಶ್ ಅಮ್ಮಣ್ಣಾಯ, ಮುಖ್ಯಪ್ರಾಣ ಕಿನ್ನಿಗೋಳಿ, ಹಿರಿಯ ಪತ್ರಕರ್ತ ಎನ್.ಗುರುರಾಜ್, ವೈದ್ಯ ಡಾ.ವಿ.ಎಲ್.ನಾಯಕ್, ಸಮಾಜಸೇವಕ ಭುವನೇಂದ್ರ ಕಿದಿಯೂರು, ಜಿ.ಶಂಕರ್, ಸಾಹಿತಿಗಳಾದ ರಾಮದಾಸ, ಸ್ಯಾಕ್ಸೋಫೋನ್ ವಾದಕ ಓಬು ಸೇರಿಗಾರ್ ಅವರಿಗೆ ರೂ 10 ಸಾವಿರ ನಗದನ್ನು ಒಳಗೊಂಡ ರಾಮವಿಠಲ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಾಹಿತಿಗಳಾದ ವಸಂತ ಕುಷ್ಟಗಿ ಹಾಗೂ ಅ.ರಾ.ಮಿತ್ರ ಪ್ರಶಸ್ತಿ ಸ್ವೀಕರಿಸಲು ಆಗಮಿಸಿರಲಿಲ್ಲ.

ಬಡರೋಗಿಗಳಿಗೆ ವೈದ್ಯಕೀಯ ನೆರವು ವಿತರಿಸಲಾಯಿತು. ಕೃಷ್ಣ ಚಕಿತ್ಸಾಲಯದಲ್ಲಿ ಉಚಿತ ವೈದ್ಯಕೀಯ ಸೇವೆ ಸಲ್ಲಿಸುತ್ತಿರುವ ವೈದ್ಯರನ್ನು ಸನ್ಮಾನಿಸಲಾಯಿತು.
ಪೇಜಾವರ ಮಠದ ಕಿರಿಯ ಯತಿ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಇದ್ದರು.ಬಳಿಕ ಪೆರ್ಡೂರು ಮೇಳದ ಕಲಾವಿದರು ‘ಕಂಸವಧೆ’ ಯಕ್ಷಗಾನ ಪ್ರದರ್ಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT