ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗೂರಿನ ಭಗೀರಥ ಸಹೋದರರು!

Last Updated 14 ಡಿಸೆಂಬರ್ 2013, 5:18 IST
ಅಕ್ಷರ ಗಾತ್ರ

ಭಾಲ್ಕಿ: ಕುಡಿಯುವ ನೀರಿಗೂ ಸದಾ ಪರದಾಡುವಂತಾಗಿದ್ದ ತಾಲ್ಲೂಕಿನ ನಾಗೂರ್‌(ಕೆ) ಗ್ರಾಮದ ಸುತ್ತ ಈಗ ತರಹೇವಾರಿ ಹೂಗಳು ಅರಳಿ ನಿಂತಿವೆ. ಕಬ್ಬು, ಪಪ್ಪಾಯ, ದಾಳಿಂಬೆ, ತರಕಾರಿ ಬೆಳೆಯುವ ಮೂಲಕ ಪಂಢರಿ, ಮುರಾರಿ,ಬಾಬುರಾವ ಮತ್ತು ಉದ್ಧವ ವರವಟ್ಟೆ ಸಹೋದರರು ಗಮನ ಸೆಳೆದಿದ್ದಾರೆ.

ತನ್ನೂರಿನಲ್ಲಿ ನೀರಿಲ್ಲದಿದ್ದರೇನಂತೆ? ಪಕ್ಕದ ಚಂದಾಪೂರ್ ಬಳಿ ಇತ್ತೀಚೆ­ಗಷ್ಟೇ ನಿರ್ಮಾಣವಾಗಿರುವ ಬ್ರಿಜ್‌ ಕಂ ಬ್ಯಾರೇಜ್‌ನಿಂದ ಸುಮಾರು 5 ಕಿಲೋ­ಮೀಟರ್‌ ದೂರಕ್ಕೆ ಪೈಪ್‌ಲೈನ್‌ ಅಳ­ವಡಿಸಿ ತಮ್ಮ ಹೊಲಗಳಿಗೆ ನೀರು ಹರಿಸಿ­ಕೊಂಡಿದ್ದಾರೆ. ಬ್ಯಾರೇಜ್‌ನ ನದಿ ದಂಡೆಯಲ್ಲೊಂದು ವಿದ್ಯುತ್‌ ಮೋಟಾರ್‌ ಅಳವಡಿಸಿ ಅದರಿಂದ ಸಮೀಪದ ಕೃಷಿ ಹೊಂಡವೊಂದರಲ್ಲಿ ನೀರು ಸಂಗ್ರಹಿಸುತ್ತಾರೆ. ನಂತರ ಹೊಂಡ­­ದಲ್ಲೊಂದು ಮೋಟಾರ್‌ ಇದ್ದು ಅದರಿಂದ ತಮ್ಮ ಹೊಲಗಳೆಡೆಗೆ ನೀರನ್ನು ಎತ್ತುತ್ತಾರೆ.

ಇದಕ್ಕೆ ತಗುಲಿದ ವೆಚ್ಚ ಸುಮಾರು ₨15 ಲಕ್ಷ. ಈ ಭಗೀರಥರ ಸಮನ್ವಯ ಪ್ರಯತ್ನದಿಂದ ಬರದಂಥ ಭೂಮಿ­ಯಲ್ಲಿ ನೀರು ಲಭ್ಯವಾಗಿದೆ. ಸುಮಾರು 90 ಎಕರೆಯಲ್ಲಿ ಹನಿ ನೀರಾವರಿ ಪದ್ಧತಿ ಅಳವಡಿಸಲಾಗಿದೆ. ಲಾಭದಾಯಕ ಕೃಷಿಗಾಗಿ ತಿಪ್ಪೆ ಗೊಬ್ಬರದ ಜೊತೆಗೆ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕವನ್ನೂ ಬಳಸುತ್ತಾರೆ. ಸೆಣಬು ಮತ್ತು ಚಿಕ್ಕ ಕಾರಳ್‌ (ಚಿಕ್ಕ ಸೂರ್ಯಕಾಂತಿ) ಬಿತ್ತಿದ ತಿಂಗಳ ನಂತರ ಹೊಲವನ್ನು ಬೆಳೆ ಸಮೇತ ಉಳುಮೆ ಮಾಡುವ ಮೂಲಕ ತಮ್ಮ ಜಮೀನಿ­ನಲ್ಲಿ ಫಲವತ್ತತೆ ಕಾಯ್ದು­ಕೊಳ್ಳುತ್ತಾರೆ.

12 ಎಕರೆ ಕಬ್ಬು, 10 ಎಕರೆ ದಾಳಿಂಬೆ, 11 ಎಕರೆ ಹಸಿಶುಂಠಿ (ಅದರಕ್‌), 10 ಎಕರೆ ಪಪ್ಪಾಯಿ, 10 ಎಕರೆ ಚೆಂಡು ಮತ್ತು ಸೇವಂತಿ ಹೂ ಬೆಳೆದಿದ್ದಾರೆ. ಇದಕ್ಕೆ ಹೊರತಾಗಿ ಸೋಯಾ, ಹೆಸರು, ಉದ್ದು ಕೂಡಾ ಮಿಶ್ರ ಬೆಳೆಯಾಗಿ ಪಡೆದಿದ್ದಾರೆ. ಈ ಮೂಲಕ ಲಕ್ಷಾಂತರ ರೂಪಾಯಿಗಳ ಲಾಭದಾಯಕ ಗಳಿಸಿದ್ದಾರೆ. ಜೊತೆಗೆ ಸುತ್ತಲಿನ ಗ್ರಾಮ­ಗಳ ನೂರಕ್ಕೂ ಹೆಚ್ಚು ಕಾರ್ಮಿಕರಿಗೆ ಕೆಲಸವನ್ನು ಕೊಟ್ಟಿದ್ದಾರೆ.

ಕಷ್ಟ ಸರಿಸಿದ ಧೈರ್ಯ: ದಶಕದ ಹಿಂದೆ ನೂರಾರು ಎಕರೆ ಜಮೀನಿದ್ದರೂ ಸಾಂಪ್ರದಾಯಿಕ ಕೃಷಿಗೆ ಜೋತುಬಿದ್ದಿದ್ದ ಮಾಧವರಾವ ವರವಟ್ಟೆ ಕುಟುಂಬ ಲಕ್ಷಾಂತರ ರೂಪಾಯಿಗಳ ಸಾಲದ ಸುಳಿಗೆ ಸಿಲುಕಿತ್ತು. ಓದುವ ವಯಸ್ಸಿನಲ್ಲಿದ್ದ  ಪಂಢರಿ, ಮುರಾರಿ, ಬಾಬುರಾವ ಮತ್ತು ಉದ್ಧವರಾವ ಅರ್ಧದಲ್ಲೇ ಶಾಲೆಯನ್ನು ಬಿಡುವಂಥ ಅನಿವಾರ್ಯತೆ ಬಂದಿತ್ತು. ಕೌಟುಂಬಿಕ ಸಮಸ್ಯೆಗಳನ್ನು ನಿರ್ವಹಿಸಲು ಜಮೀನು ಮಾರಾಟ ಮಾಡಿದರು.

ಆದರೆ ಪರಿಸ್ಥಿತಿಯ ಅನಿವಾರ್ಯತೆಗೆ ಶಾಲೆ ಬಿಟ್ಟ ಮಕ್ಕಳು ಕೃಷಿಯಲ್ಲಿ ಆಸಕ್ತಿ ಬೆಳೆಸಿಕೊಂಡರು. ಅಲ್ಲಲ್ಲಿ ಆಯೋಜಿ­ಸುವ ಕೃಷಿಮೇಳಗಳಿಗೆ ಭೇಟಿ ಕೊಟ್ಟು ಜ್ಞಾನ ಪಡೆದುಕೊಂಡರು. ಟಿವಿಯಲ್ಲಿ ಬರುವ ಕಾರ್ಯಕ್ರಮ, ಪತ್ರಿಕೆ, ವಾರ ಪತ್ರಿಕೆಗಳಲ್ಲಿ ಬರುವ ಕೃಷಿ ಚಟುವಟಿಕೆ­ಗಳ ಲೇಖನಗಳನ್ನು ಅವಲೋಕನ ಮಾಡತೊಡಗಿದರು. ನಂತರ ಇವರೆಲ್ಲ ತೀರ್ಮಾನಿಸಿದ್ದು, 5 ಕಿಲೋಮೀಟರ್‌ ದೂರದಿಂದ ನೀರು ತರುವ ಭಗೀರಥ ಪ್ರಯತ್ನ.

₨15 ಲಕ್ಷ ಖರ್ಚು ಮಾಡುವ ಧೈರ್ಯ ತೋರಿದ್ದು. ಅದು ಕಾರ್ಯಗತವಾಗುತ್ತಲೇ ಇವರ ಕಷ್ಟದ ದಿನಗಳು ಮರೆಯಾಗಿವೆ. ₨ 20 ಲಕ್ಷ ಸಾಲವನ್ನೂ ತೀರಿಸಿ ಸ್ವಾವಲಂಬಿ ಮತ್ತು ಸ್ವಾಭಿಮಾನದ ಕೃಷಿಕರೆಂದು ಹೆಸರು ಪಡೆದಿದ್ದಾರೆ. ಕೃಷಿಗೆ ಅಗತ್ಯವಿರುವ ಟ್ರ್ಯಾಕ್ಟರ್, ಟಿಲ್ಲರ್‌, ರಾಶಿ ಮಾಡುವ ಯಂತ್ರ, ರೂಟರ್‌, ಆಲೆಮನೆ, ಎರೆಹುಳು ಗೊಬ್ಬರ ತಯಾರಿಕೆ ಘಟಕ, ಹೈನುಗಾರಿಕೆಯಂಥ ವಿವಿಧ ಕೃಷಿ ಕಾರ್ಯಗಳು ಚಾಲ್ತಿಯಲ್ಲಿವೆ.

‘ಸಬ್ಸಿಡಿಯಲ್ಲ; ನೀರು, ವಿದ್ಯುತ್‌ ಕೊಡಿ’
ರೈತರಿಗೆ ಸರ್ಕಾರದಿಂದ ಸಿಗುವ ಸಬ್ಸಿಡಿಗಿಂತಲೂ ನೀರು ಮತ್ತು ವಿದ್ಯುತ್‌ ಸೌಲಭ್ಯ ಸಕಾಲಕ್ಕೆ ದೊರೆಯಬೇಕು. ಹಾಗಾದಾಗ ಮಾತ್ರ ರೈತರ ಅಭಿವೃದ್ಧಿ ಸಾಧ್ಯ. ಅದನ್ನು ಸ್ವಂತ ಸಾಮರ್ಥ್ಯದಿಂದ ಸಾಧಿಸಿದವರು ವರವಟ್ಟೆ ಸೋದರರು. 
– ಸುಧಾಕರ ಘೋರ್ಪಡೆ, ಕೃಷಿ ಸಲಹೆಗಾರ, ಸುಧಾಮ ಕೃಷಿ ಸೇವಾ ಕೇಂದ್ರ, ಭಾಲ್ಕಿ.

‘ಸೋಲಾರ್‌ ಮೋಟಾರ್‌ ಅಗತ್ಯ’
‘ಈಗಿನ ವ್ಯವಸ್ಥೆಯಲ್ಲಿ ರೈತರಿಗೆ ಬೇಕಾಗಿರುವುದು ನೀರು ಮತ್ತು ವಿದ್ಯುತ್‌. ನೀರು ಲಭ್ಯವಿದ್ದರೂ ಸಕಾಲಕ್ಕೆ ಕರೆಂಟ್‌ ಸಿಗೋದೇ ಕಷ್ಟ. ಇಂಥ ಪರಿಸ್ಥಿತಿಯಲ್ಲಿ ಸೋಲಾರ್‌ ಮೋಟಾರ್‌ಗಳು ರೈತರಿಗೆ ಸುಲಭವಾಗಿ ಸಿಗುವಂತಾಗಬೇಕು’ ಎಂಬುದು 7ನೇ ವರೆಗೆ  ಓದಿದ್ದರೂ ಕೃಷಿಯಲ್ಲಿ ಪರಿಣತಿ ಹೊಂದಿದ ಪಂಢರಿ ಮತ್ತು ಉದ್ಧವರಾವ ಅವರ ಅಭಿಪ್ರಾಯ. (9480007810– ಪಂಢರಿ, 9740673032– ಮುರಾರಿ, 9902394187 – ಬಾಬುರಾವ, ಮತ್ತು 9611537685  – ಉದ್ಧವ).

‘ಮಕ್ಕಳು ಮೆಡಿಕಲ್‌, ಬಿ.ಇ. ಓದುತ್ತಿದ್ದಾರೆ’
ನಾಲ್ಕು  ಸಹೋದರರ ಒಗ್ಗಟ್ಟಿನ ಶ್ರಮ ಮತ್ತು ಆಧುನಿಕ ಬೇಸಾಯ ಕ್ರಮಗಳ ಕುರಿತು ಕೃಷಿ ಅಧಿಕಾರಿಗಳು ನೀಡುತ್ತಿರುವ ಮಾರ್ಗದರ್ಶನದಿಂದ ಲಾಭದಾಯಕ ಕೃಷಿ ಕೈಗೊಳ್ಳಲು ಸಾಧ್ಯವಾಗಿದೆ. ಈ ಹಿಂದೆ ಕೇವಲ ಮಳೆಯ ಮೇಲೆ ಮಾತ್ರ ಅವಲಂಬಿತವಾಗಿದ್ದ ನಮ್ಮ ಕುಟುಂಬ ಸಾಕಷ್ಟು ಸಾಲದಲ್ಲಿ ಮುಳುಗಿ ಹೋಗಿತ್ತು. ಈಗ ಸಮೃದ್ಧಿ ಕಂಡಿದ್ದೇವೆ. ನಾವು ಕಲಿಯಲು ಆಗದಿದ್ದರೂ ನಮ್ಮ ಮಕ್ಕಳು ಮೆಡಿಕಲ್‌ ಮತ್ತು ಎಂಜಿನಿಯರಿಂಗ್‌ ಅಧ್ಯಯನದಲ್ಲಿ ತೊಡಗಿದ್ದಾರೆ.  
– ಉದ್ಧವರಾವ ವರವಟ್ಟೆ, ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT