ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗೇಂದ್ರನಮಟ್ಟಿ ನಿವಾಸಿಗಳ ಪ್ರತಿಭಟನೆ

ಮಂಜೂರಾದ ಪ್ರೌಢಶಾಲೆ ರದ್ದತಿಗೆ ವಿರೋಧ
Last Updated 6 ಫೆಬ್ರುವರಿ 2013, 11:10 IST
ಅಕ್ಷರ ಗಾತ್ರ

ಹಾವೇರಿ: ಸರ್ಕಾರದಿಂದ ಮಂಜೂರು ಆಗಿರುವ ಉನ್ನತೀಕರಿಸಿದ ಪ್ರೌಢಶಾಲೆಯನ್ನು ರದ್ದುಪಡಿಸಿರುವ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕ್ರಮವನ್ನು ಖಂಡಿಸಿ ಶಾಲಾ ಮಕ್ಕಳು ಹಾಗೂ ಶಿಕ್ಷಣ ಪ್ರೇಮಿಗಳು ಮಂಗಳವಾರ ನಗರದ ನಾಗೇಂದ್ರನಮಟ್ಟಿಯ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಎದುರು ಪ್ರತಿಭಟನೆ ನಡೆಸಿದರು.

ನಾಗೇಂದ್ರನಮಟ್ಟಿಗೆ ಪ್ರೌಢಶಾಲೆಯ ಅಗತ್ಯತೆಯನ್ನು ಮನಗಂಡು ಸರ್ಕಾರ ಉನ್ನತೀಕರಿಸಿದ ಪ್ರೌಢಶಾಲೆಯನ್ನು ಮಂಜೂರು ಮಾಡಿದ್ದನ್ನು ಯಾವುದೋ ದುರುದ್ದೇಶ ಇಟ್ಟುಕೊಂಡು ಶಾಲೆಯನ್ನು ರದ್ದು ಪಡಿಸಲಾಗಿದೆ ಎಂದು ಆರೋಪಿಸಿರುವ ಪ್ರತಿಭಟನಾಕಾರರು, ಶಿಕ್ಷಣ ಸಚಿವರಿಗೆ, ಡಿಡಿಪಿಐ ಹಾಗೂ ಬಿಇಓ ಅವರ ವಿರುದ್ಧ ಘೋಷಣೆಗಳನ್ನು ಕೂಗಿದರಲ್ಲದೇ, ಪ್ರೌಢಶಾಲೆ ಮಂಜೂರಾತಿ ರದ್ದುಗೊಳಿಸಿರುವ ಆದೇಶವನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದರು.

ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಸತೀಶ ಹಾವೇರಿ ಮಾತನಾಡಿ, ಸರ್ಕಾರವು 2010 ರಲ್ಲಿ ನಾಗೇಂದ್ರನಮಟ್ಟಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯನ್ನು ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಯೋಜನೆಯಡಿ ಉನ್ನತೀಕರಿಸಿದ ಪ್ರೌಢಶಾಲೆಯನ್ನಾ ಪರಿವರ್ತಿಸಿತಲ್ಲದೇ ಮಂಜೂರಾತಿಯನ್ನು ನೀಡಿತು. 2011 ಜೂನ್ 11 ರಂದು ಉನ್ನತೀಕರಿಸಿದ ಪ್ರೌಢಶಾಲೆಯನ್ನು ಆಗಿನ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಂ.ಉದಾಸಿ ಉದ್ಘಾಟನೆ ಸಹ ನೆರವೇರಿಸಿದ್ದರು ಎಂದು ಹೇಳಿದರು.

ಇಲಾಖೆಯಿಂದ ಶಾಲೆಗೆ ಮೂವರು ಶಿಕ್ಷಕರನ್ನು ನಿಯೋಜನೆಗೊಳಿಸಲಾಯಿತಲ್ಲದೇ, ಆ ವರ್ಷ 8ನೇ ತರಗತಿಗೆ ಪ್ರವೇಶ ಪಡೆದ 53 ವಿದ್ಯಾರ್ಥಿಗಳು ಪ್ರಸಕ್ತ ವರ್ಷ 9ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಈ ವರ್ಷ ಮತ್ತೆ 8ನೇ ತರಗತಿಗೆ ವಿದ್ಯಾರ್ಥಿಗಳು ಪ್ರವೇಶ ಪಡೆಇದ್ದಾರೆ. ಅಷ್ಟೇ ಅಲ್ಲದೇ ಪ್ರೌಢಶಾಲೆ ಮಕ್ಕಳಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳಾದ ಉಚಿತ ಪಠ್ಯ ಪುಸ್ತಕ, ಸೈಕಲ್, ಬಿಸಿಯೂಟವನ್ನು ನೀಡಲಾಗಿದೆ ಎಂದು ತಿಳಿಸಿದರು.

ಒಂದೂವರೆ ವರ್ಷದ ನಂತರ ದಿಢೀರನೇ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಎಸ್.ಬಿ.ಕೊಡ್ಲಿ ಅವರು, ನಾಗೇಂದ್ರನಮಟ್ಟಿಗೆ ಪ್ರೌಢಶಾಲೆ ಮಂಜೂರಾತಿ ದೊರೆತಿಲ್ಲ. ಈಗಾಗಲೇ ಪ್ರವೇಶ ಪಡೆದು ಓದುತ್ತಿರುವ 8 ಮತ್ತು 9ನೇ ತರಗತಿ ಮಕ್ಕಳ ವರ್ಗಾವಣೆ ಪತ್ರ ಮತ್ತು ಸಂಬಂಧಪಟ್ಟ ದಾಖಲಾತಿಗಳನ್ನು ಹತ್ತಿರ ಪ್ರೌಢಶಾಲೆಗೆ ವರ್ಗಾಯಿಸಬೇಕೆಂದು ಆದೇಶ ಹೊರಡಿಸುವ ಮೂಲಕ ಈ ಭಾಗದ ಮಕ್ಕಳನ್ನು ಶಿಕ್ಷಣದಿಂದ ವಂಚಿತರಾಗುವಂತೆ ಮಾಡಿದ್ದಾರೆ ಎಂದು ಆರೋಪಿಸಿದರು.

ಕೂಡಲೇ ರದ್ದು ಆದೇಶವನ್ನು ಹಿಂಪಡೆಯಬೇಕು. 10ನೇ ತರಗತಿವರೆಗೂ ಶಿಕ್ಷಣ ಮುಂದುವರೆಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು. 

ಪ್ರತಿಭಟನಾ ಸ್ಥಳಕ್ಕೆ ಡಿಡಿಪಿಐ ಎಸ್.ಬಿ.ಕೊಡ್ಲಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಕೆ. ರಾಮಶೆಟ್ಟಿ ಭೇಟಿ ನೀಡಿ, ಸರ್ಕಾರದ ನಿರ್ಧಾರವನ್ನು ಪಾಲನೆ ಮಾಡಿದ್ದೇವೆ. ಇದರಲ್ಲಿ ಇಲಾಖೆಯ ಅಧಿಕಾರಿಗಳ ಯಾವುದೇ ಪಾತ್ರವಿಲ್ಲ. ಮಂಜೂರಾತಿಗಾಗಿ ಸರ್ಕಾರಕ್ಕೆ ಪತ್ರ ಬರೆದಿರುವುದಾಗಿ ತಿಳಿಸಿದರು.

ಪ್ರತಿಭಟನೆಯಲ್ಲಿ ಮಲ್ಲೇಶಪ್ಪ ಬಿ. ಪಟ್ಟಣಶೆಟ್ಟಿ, ವೆಂಕಟೇಶ ಡಂಬರಹಳ್ಳಿ, ಹನುಮಂತಪ್ಪ ಕುಮ್ಮಣ್ಣನವರ, ಜಿ.ಪಂ.ಮಾಜಿ ಅಧ್ಯಕ್ಷ ಪರಮೇಶಪ್ಪ ಮೇಗಳಮನಿ, ಯಲ್ಲಪ್ಪ ಮಲ್ಲಪ್ಪನವರ, ಈರಪ್ಪ ಬಾತೇರ, ಎಲ್.ಡಿ. ಹಾವನೂರ, ಬಸವರಾಜ ಬಾದಗಿ, ಆರ್.ಡಿ. ಹಾವನೂರ, ಎ.ಎಂ. ಅಕ್ಕಿವಳ್ಳಿ, ಚೌನಸಾಬ್ ಪಠಾಣ ಅಲ್ಲದೇ ನೂರಕ್ಕೂ ಹೆಚ್ಚು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT