ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಚಿಕೆ ಬಿಡಿ; ಒಂದು ಹೆಜ್ಜೆ ಇಡಿ!

Last Updated 18 ಮೇ 2012, 19:30 IST
ಅಕ್ಷರ ಗಾತ್ರ

ಸ್ತನಕ್ಯಾನ್ಸರ್ ಮತ್ತು ಗರ್ಭಕೋಶದ ಕ್ಯಾನ್ಸರ್‌ಗಳನ್ನು ಪರೀಕ್ಷಿಸುವ ತಜ್ಞ ವೈದ್ಯೆಯರ ಕೊರತೆ ಬಹಳವಿದೆ. ಆದ್ದರಿಂದ ಬಹುತೇಕ ಕಡೆ ಜನರಲ್ ಸರ್ಜನ್ನರೇ (ಪುರುಷರೇ ಹೆಚ್ಚು) ಈ ರೋಗಪರೀಕ್ಷೆ ಮಾಡುತ್ತಾರೆ. ನಾಚಿಕೆ ಸ್ವಭಾವದ ಭಾರತೀಯ ಮಹಿಳೆಯರು ತಪಾಸಣೆಗೆ ಹೋಗಲು ಹಿಂಜರಿಯುತ್ತಾರೆ. 

ಕಳೆದ ವಾರವಷ್ಟೇ ಎಲ್ಲ ಕಡೆಯೂ ಅಮ್ಮಂದಿರ ದಿನವನ್ನು ಸಂಭ್ರಮದಿಂದ ಆಚರಿಸಲಾಹಿತು. ಮಕ್ಕಳು ಜನಿಸಿದ ಕೂಡಲೇ ಜೀವಾಮೃತ ಉಣಿಸಿ ಆರೋಗ್ಯ, ಸದೃಢತೆ ನೀಡುವ ಮಹಾತಾಯಂದಿರನ್ನು ಗುಣಗಾನ ಮಾಡಲಾಯಿತು.

ಆದರೆ ಅದೇ ತಾಯಂದಿರು ಸ್ತನ ಕ್ಯಾನ್ಸರ್ ಎಂಬ ಪೆಡಂಭೂತಕ್ಕೆ ಬಲಿಯಾಗುತ್ತಿರುವ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವುದರ ವರದಿಯೂ ಬಂದಿದೆ. ಈ ಸಮಸ್ಯೆಗೆ ಜೀವನಶೈಲಿ ಕಾರಣವಾದರೂ ಇನ್ನೂ ಒಂದು ಮೂಲಭೂತ ಕಾರಣವೂ ಇದೆ.

ನಮ್ಮ ಹೆಣ್ಣುಮಕ್ಕಳು ಎಷ್ಟೇ ಆಧುನಿಕರಾದರೂ ಭಾರತೀಯ ಗುಣಕ್ಕೆ ತಕ್ಕಂತೆ ನಾಚಿಕೆಯ, ಸಂಕೋಚದ ಸ್ವಭಾವ ಇದ್ದೇ ಇರುತ್ತದೆ. ರೋಗಗಳ ವಿಷಯದಲ್ಲಿ ಇನ್ನೂ ಮುಕ್ತ ಮನಸ್ಸು ಬೆಳೆದಿಲ್ಲ.

ಎಲ್ಲಕ್ಕಿಂತಲೂ ಮುಖ್ಯವಾಗಿ ಸ್ತನಕ್ಯಾನ್ಸರ್ ಮತ್ತು ಗರ್ಭಕೋಶದ ಕ್ಯಾನ್ಸರ್‌ಗಳನ್ನು ಪರೀಕ್ಷಿಸುವ ತಜ್ಞ ವೈದ್ಯೆಯರ ಕೊರತೆಯೂ ಬಹಳವಿದೆ. ಆದ್ದರಿಂದ ಬಹುತೇಕ ಕಡೆ ಜನರಲ್ ಸರ್ಜನ್ನರೇ ಈ ರೋಗಪರೀಕ್ಷೆ ಮತ್ತು ಚಿಕಿತ್ಸೆ ಮಾಡುತ್ತಾರೆ. ಅದರಲ್ಲೂ ಜನರಲ್ ಸರ್ಜನ್ನರು ಪುರುಷರೇ ಹೆಚ್ಚು.

ಇದರಿಂದಾಗಿ ಮೂಲತಃ ನಾಚಿಕೆ ಸ್ವಭಾವದ ಭಾರತೀಯ ಮಹಿಳೆಯರು ತಪಾಸಣೆಗೆ ಹೋಗಲು ಹಿಂಜರಿಯುತ್ತಾರೆ. ಇದಕ್ಕೆ ಬೆಂಗಳೂರು ಕೂಡ ಹೊರತಲ್ಲ. ಎಷ್ಟೇ ದೊಡ್ಡ ಹುದ್ದೆ, ಸಂಬಳ, ಆಧುನಿಕ ಜೀವನವಿದ್ದರೂ ಇಂತಹ ವಿಷಯದಲ್ಲಿ ಹಿಂಜರಿಯುವ ಹೆಂಗಳೆಯರು ಬಳಷ್ಟು ಸಂಖ್ಯೆಯಲ್ಲಿದ್ದಾರೆ. ಬೆಂಗಳೂರು ಮಹಾನಗರಿಯಲ್ಲಿಯೇ ಈ ಪರಿಸ್ಥಿತಿಯಾದರೆ ಇನ್ನುಳಿದ ಸಣ್ಣ ಊರುಗಳ ಗತಿಯೇನು? 

 ಬದಲಾಗುತ್ತಿರುವ ಸಾಮಾಜಿಕ, ಆರ್ಥಿಕ, ಪರಿಸರದ ಬದಲಾವಣೆಗಳು ಮತ್ತು ತಡವಾಗಿ ಮದುವೆಯಾಗುವ ಯುವತಿಯರಲ್ಲಿ  ಈ ಸ್ತನ ಕಾನ್ಸರ್ ಲಕ್ಷಣಗಳು ಹೆಚ್ಚಾಗಿ ಕಾಣುತ್ತಿವೆ.  `ಪಾಶ್ಚಾತ್ಯ ಜೀವನಶೈಲಿಯ ಅನುಕರಣೆ, ಕೊಬ್ಬು ಹೆಚ್ಚಿರುವ ಆಹಾರದ ಅತಿಯಾದ ಸೇವನೆ, ವಿಳಂಬ ಮದುವೆ, ವಿಳಂಬ ಗರ್ಭಧಾರಣೆ, ಹುಟ್ಟಿದ ಮಕ್ಕಳಿಗೆ ಸ್ತನ್ಯಪಾನ ಹೆಚ್ಚು ಕೊಡದಿರುವುದು ಸ್ತನಕ್ಯಾನ್ಸರ್‌ಗೆ ಮೂಲ ಕಾರಣ~ ಎಂದು ಹೇಳುತ್ತಾರೆ ದೆಹಲಿಯ ಅಖಿಲ ಭಾರತ ವೈದ್ಯಕೀಯ ಮಹಾವಿದ್ಯಾಲಯದ ಡಾ. ವಿನೋದ್ ರೈನಾ.

ಚಿಕಿತ್ಸಾ ವಿಧಾನಗಳು
ಈ ರೋಗವನ್ನು ಬೇಗ ಪತ್ತೆ ಮಾಡಿಬಿಟ್ಟರೆ ಅರ್ಧ ಚಿಕಿತ್ಸೆ ಆದಂತೆಯೇ ಸರಿ. ಆದರೆ ಮೊದಲೇ ಹೇಳಿದಂತೆ ಸ್ತನ ಮತ್ತು ಗರ್ಭಕೋಶ ಕ್ಯಾನ್ಸರ್ ತಜ್ಞೆಯರ ಕೊರತೆ ರೋಗಪತ್ತೆಗೆ ತೊಡಕಾಗುತ್ತಿದೆ. ಆದರೆ ಸದ್ಯ ಕಾರ್ಯನಿರ್ವಹಿಸುತ್ತಿರುವ ಸ್ತ್ರೀರೋಗ ತಜ್ಞೆಯರೇ ಪ್ರಾಥಮಿಕ ಹಂತದ ತಪಾಸಣೆಗಳ ಕುರಿತು ನಿಗಾ ವಹಿಸಿದರೆ ಮುಂದಿನ ಅನಾಹುತವನ್ನು ತಡೆಯಲು ಸಾಧ್ಯವಿದೆ.

ಸಂದೇಹ ಬಂದ ಪಕ್ಷದಲ್ಲಿ ಅಥವಾ ರೋಗಿಯು ಸ್ತನಗಳಲ್ಲಿ ಗಂಟು, ನೋವು ಇರುವ ಬಗ್ಗೆ ಹೇಳಿದಾಗ ಸ್ತ್ರೀರೋಗ ತಜ್ಞೆಯರು ಎಕ್ಸ್-ರೆ ತೆಗೆಸಿ ನೋಡಬೇಕು. ನಂತರ ಅಗತ್ಯ ಬಿದ್ದರೆ ಮೆಮ್ಮಗ್ರಾಫಿ ಸ್ಕ್ರೀನಿಂಗ್‌ಗೆ ಸಲಹೆ ನೀಡಬೇಕು. ಎಲ್ಲಕ್ಕಿಂಗ ಮಿಗಿಲಾಗಿ ಸ್ತ್ರೀರೋಗ ಅಥವಾ ಪ್ರಸೂತಿ ತಜ್ಞರು ಸ್ತನ ಮತ್ತು ಗರ್ಭಕೋಶದ ಕ್ಯಾನ್ಸರ್ ಬಗ್ಗೆ ಅರಿವು ಪಡೆದು, ರೋಗಿಗಳಿಗೆ ತಿಳಿವಳಿಕೆ ನೀಡಬೇಕು.

ಆಗ ಮಾತ್ರ ಪ್ರಾಥಮಿಕ ಹಂತದಲ್ಲಿಯೇ ಸ್ತನಕ್ಯಾನ್ಸರ್ ಅನ್ನು ಮಟ್ಟ ಹಾಕಲು ಸಾಧ್ಯ.  ~ಒನ್ ಸ್ಟಾಪ್ ಫಾರ್ ಕ್ಯಾನ್ಸರ್ ಕೇರ್~ ಸಲಹೆ ಮತ್ತು ಚಿಕಿತ್ಸೆ ಈಗ ಲಭ್ಯವಿದೆ. ಸೂಕ್ತ ಸಲಹೆ ಮತ್ತು ಆರಂಭದಲ್ಲಿಯೇ ಸಮರ್ಪಕ ಚಿಕಿತ್ಸೆ ಪಡೆದರೆ ಅನಾಹುತ ತಪ್ಪಿಸಿಕೊಳ್ಳಲು ಸಾಧ್ಯವಿದೆ. ಅದಕ್ಕೆ ನಮ್ಮ ಮಹಿಳೆಯರು ನಾಚಿಕೆ ಬದಿಗಿಟ್ಟು; ಒಂದು ಹೆಜ್ಜೆ ಮುಂದಿಡಬೇಕು ಅಷ್ಟೇ!

(ಲೇಖಕಿ ವಿಶ್ವ ಆರೋಗ್ಯ ಸಂಸ್ಥೆ ಫೆಲೋ (ಸುರಕ್ಷಿತ ತಾಯ್ತನ) ಮತ್ತು ಕ್ಯಾನ್ಸರ್ ಮುಂಜಾಗ್ರತೆ ತಜ್ಞರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT