ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಟಕ ವೀಕ್ಷಣೆಯಿಂದ ಒತ್ತಡ ನಿವಾರಣೆ

Last Updated 13 ಆಗಸ್ಟ್ 2012, 4:30 IST
ಅಕ್ಷರ ಗಾತ್ರ

ರಾಮನಗರ: ಜನಪದ ಕಲೆಗಳಿಂದ ರೂಪಾಂತರಗೊಂಡ ನಾಟಕಗಳಲ್ಲಿ ಸಾಮಾಜಿಕ ಕಳಕಳಿ ಇದೆ. ಇದನ್ನು ಅನುಸರಿಸಿ ಬಂದ ಸಿನಿಮಾಗಳಲ್ಲಿ ಎಲ್ಲವೂ ವಾಣಿಜ್ಯಕರಣಗೊಂಡು ಕಲೆ ನಾಶವಾಗುತ್ತಿದೆ ಎಂದು ಜಾನಪದ ಪರಿಷತ್ತಿನ ಅಧ್ಯಕ್ಷ ಟಿ. ತಿಮ್ಮೇಗೌಡ ವಿಷಾದಿಸಿದರು.

ಜಾನಪದ ಲೋಕದ ಬಯಲು ರಂಗಮಂದಿರದಲ್ಲಿ ಮೈಸೂರಿನ ರಂಗಾಯಣದ ವತಿಯಿಂದ ಶನಿವಾರ ಸಂಜೆ ನಡೆದ ಜಿಲ್ಲಾ ರಂಗೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಯಾಂತ್ರಿಕ ಬದುಕಿನ ಒತ್ತಡದಲ್ಲಿ ನಾಟಕ ಪ್ರದರ್ಶನಗಳನ್ನು ವೀಕ್ಷಿಸಿದರೆ ಮನಸ್ಸಿನ ಒತ್ತಡಗಳು ಕಡಿಮೆಯಾಗುತ್ತವೆ. ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ನಾಟಕ ಪ್ರದರ್ಶನಗಳನ್ನು ವೀಕ್ಷಿಸುವ ಮೂಲಕ ಕಲಾವಿದರಿಗೆ ಉತ್ತೇಜನ ನೀಡಬೇಕು ಎಂದರು.

ಜಾನಪದ ವಿದ್ವಾಂಸ ಡಾ. ಕುರುವ ಬಸವಾರಜ್ ಮಾತನಾಡಿ, ಬಡವ ಬಲ್ಲಿದರೆಂಬ ಭೇದ ತೊರೆದು ಸುಸಂಸ್ಕೃತ ನಾಡನ್ನು ಕಟ್ಟುವ ನಿಟ್ಟಿನಲ್ಲಿ ಸಾಮಾಜಿಕ ನಾಟಕಗಳು ಗಣನೀಯ ಕೊಡುಗೆ ನೀಡಿವೆ. ಸಾಮಾಜಿಕ ನಾಟಕಗಳಲ್ಲಿರುವ ಚಿಂತನೆಗಳು ಸರ್ವ ಜನಾಂಗಗಳ ಅಭಿವೃದ್ಧಿಗೆ ನೆರವಾಗುವ ಮತ್ತು ಸರ್ವ ಕಾಲಕ್ಕೂ ಸಲ್ಲುವ ಸಮರ್ಥ ಸಾಧನಗಳಾಗಿವೆ ಎಂದರು.

ಜಾತಿಜಾತಿಗಳ ನಡುವೆ ಸಂಘರ್ಷದ ತೀವ್ರತೆ ಹೆಚ್ಚುತ್ತಿರುವ ಸಮಕಾಲೀನ ಸಂದರ್ಭದಲ್ಲಿ ಕುವೆಂಪು ಅವರ ಶೂದ್ರ ತಪಸ್ವಿ ನಾಟಕದ ಪ್ರದರ್ಶನ ಔಚಿತ್ಯ ಪೂರ್ಣವಾಗಿದೆ. ಮೌಲ್ಯಗಳನ್ನು ಕುರಿತು ಮಾತನಾಡುವುದಕ್ಕಿಂತ ಮಾನವೀಯ ನೆಲೆಯಲ್ಲಿ ಚಿಂತಿಸಬೇಕಾಗಿದೆ ಎಂದು ತಿಳಿಸಿದರು.

ಸಾಹಿತಿ ಸಿದ್ದಗಂಗಯ್ಯ ಬಿ. ಕಂಬಾಳು ಮಾತನಾಡಿ ಜನಪದ ಕಲೆ ಪ್ರಸಾರಿಸುವ ನಿಟ್ಟಿನಲ್ಲಿ ಜಾನಪದ ಲೋಕದ ವತಿಯಿಂದ ಖಾಸಗಿ ಚಾನೆಲ್ ಒಂದನ್ನು ಪ್ರಾರಂಭಿಸಬೇಕು. ಇದರಿಂದ ರಾಷ್ಟ್ರೀಯ, ಅಂತರ ರಾಷ್ಟ್ರೀಯ ಮಟ್ಟದಲ್ಲಿ ಜನಪದ ಸಾಹಿತ್ಯ, ಕಲೆಗಳಿಗೆ ಮನ್ನಣೆ ದೊರೆಯುತ್ತದೆ ಎಂದರು.

ರಂಗಾಯಣದ ಉಪ ನಿರ್ದೇಶಕಿ ನಿರ್ಮಲ ಮಠಪತಿ ಮಾತನಾಡಿ ರಂಗಾಯಣವು ಕಳೆದ ಹಲವು ವರ್ಷಗಳಿಂದ ನಾಟಕಗಳನ್ನು ಪ್ರದರ್ಶಿಸುತ್ತಾ ಬಂದಿದೆ. ನಾಟಕ ಪ್ರದರ್ಶನಗಳನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುತ್ತಿದೆ. ಆದ್ದರಿಂದ ಪ್ರಸಕ್ತ ಸಾಲಿನಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ರಂಗಾಯಣದ ವತಿಯಿಂದ ಜಿಲ್ಲಾ ರಂಗೋತ್ಸವವನ್ನು ಅಲ್ಲಿನ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಮ್ಯೋನೇಜಿಂಗ್ ಟ್ರಸ್ಟಿ ಇಂದಿರಾ ಬಾಲಕೃಷ್ಣ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಾಹಿತಿ ನಿಸರ್ಗಪ್ರಿಯ, ರಂಗಭೂಮಿ ಕಲಾವಿದ ಕೆ. ಕೃಷ್ಣಮೂರ್ತಿ ಅವರನ್ನು ಸನ್ಮಾನಿಸಲಾಯಿತು. ಕುವೆಂಪು ರಚಿಸಿರುವ ಸಿ. ಬಸವಲಿಂಗಯ್ಯ ನಿರ್ದೇಶನದ ಶೂದ್ರ ತಪಸ್ವಿ, ಚಂದ್ರಶೇಖರ್ ಪಾಟೀಲ್ ರಚಿಸಿರುವ ಹುಲಗಪ್ಪ ಕಟ್ಟಿಮನಿ ನಿರ್ದೇಶನದ ಗೋಕರ್ಣದ ಗೌಡಶಾನಿ ನಾಟಕಗಳನ್ನು ಇದೇ ಸಂದರ್ಭದಲ್ಲಿ ಪ್ರದರ್ಶಿಸಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ದೇವರಾಜ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT