ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಟಕ ಸಮಾಜದ ದರ್ಪಣ

Last Updated 19 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಮುಂಬೈ: ನಾಟಕ ನಿತ್ಯದ ಜನಜೀವನಕ್ಕೆ ಸ್ಪಂದಿಸುವ ಸಮಾಜದ ದರ್ಪಣ. ಎಲ್ಲರ ಮೆಚ್ಚಿನ ಸಾಹಿತ್ಯ ಪ್ರಕಾರ ಎಂದು ಹಿರಿಯ ರಂಗ ಕಲಾವಿದ ಜಯಶೀಲ ಕೆ. ಸುವರ್ಣ ಹೇಳಿದರು. ಅವರು ಇಲ್ಲಿನ ಕರ್ನಾಟಕ ಸಂಘ ಹಮ್ಮಿಕೊಂಡ 16 ನೇ ಅಖಿಲ ಭಾರತ ಕುವೆಂಪು ಸ್ಮಾರಕ ಏಕಾಂಕ ನಾಟಕ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.

ಹಿಂದೆ ನಾಟಕಗಳು ಚಲನಚಿತ್ರಗಳಿಗಿಂತ ಹೆಚ್ಚು ಜನಪ್ರಿಯವಾಗಿದ್ದವು. ಜನರು ಅಭಿಮಾನದಿಂದ ಸ್ಪಂದಿಸುತ್ತಿದ್ದರು. ಇಂದು ಉಚಿತ ಪ್ರದರ್ಶನ ನೀಡಿದರೂ ಬರುವವರ ಸಂಖ್ಯೆ ಕಡಿಮೆಯಾಗಿದೆ ಎಂದರು.ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಮಾಜಿ ಕೋಶಾಧಿಕಾರಿ ಬಿ.ಜಿ. ನಾಯಕ್ ವಹಿಸಿದ್ದರು.

ಸಮಾರೋಪ ಸಮಾರಂಭದ ಮುಖ್ಯ ಅತಿಥಿ ಹಿರಿಯ ಪತ್ರಕರ್ತ ಗುಡಿಹಳ್ಳಿ ನಾಗರಾಜ್ ಅವರು ನಾಟಕವೊಂದರಲ್ಲಿ ಕಥಾವಸ್ತು ಸಂಕೀರ್ಣವಾಗಿರಬಹುದು. ಆದರೆ ಇಡಿಯ ನಾಟಕ ಸಂಕೀರ್ಣವಾಗಿರಬೇಕಾಗಿಲ್ಲ. ನಾಟಕ ಪ್ರದರ್ಶನಕ್ಕೆ ಬರುವವರು ಕಡಿಮೆಯಾಗುತ್ತಿದ್ದಾರೆ ಎಂದಾಗ ನಾವು ಯಾಕೆ ವಿಫಲರಾಗಿದ್ದೇವೆ ಎನ್ನುವುದಕ್ಕೆ ಉತ್ತರ ಕಂಡುಕೊಳ್ಳಬೇಕು. ನಾಟಕಕ್ಕೆ ಜನಪ್ರಿಯತೆ ದೋಷ ಆಗಬೇಕೆಂದಿಲ್ಲ ಎಂದರು.

ಅಧ್ಯಕ್ಷತೆ ವಹಿಸಿದ ಕೊಂಕಣ ರೈಲ್ವೆಯ ಹಿರಿಯ ಎಂಜಿನಿಯರ್ ರಘುನಾಥ್ ನಾಯಕ್ ಅವರು ನಮ್ಮಲ್ಲಿ ಮಾನವೀಯತೆ ದೂರವಾಗುತ್ತಿರುವ ಈ ದಿನಗಳಲ್ಲಿ ರಂಗಭೂಮಿ ಅದನ್ನು ಹಿಡಿದಿಟ್ಟುಕೊಳ್ಳುವಂತೆ ಮಾಡುತ್ತದೆ. ಕುವೆಂಪು ಅವರ ಮಾನವ ಮತ, ವಿಶ್ವಪಥ ಎಲ್ಲರದ್ದಾಗಲಿ ಎಂದು ಹಾರೈಸಿದರು. ಕವಿ, ರಂಗಕರ್ಮಿ ಜಯಪ್ರಕಾಶ ಮಾವಿನಕುಳಿ ಅವರು ಮಾತನಾಡಿ ಇಂದಿನ ಯುವಜನಾಂಗ ಏಕಾಂಗಿಯಾಗಿರಲು ಬಯಸುತ್ತಿದೆ. ಒಂದು ಮೊಬೈಲ್ ಇದ್ದರೆ ಸಾಕಾಗುತ್ತದೆ. ಬದುಕನ್ನು ರೂಪಿಸುವ ಕೆಲಸ ಆಗಬೇಕಾಗಿದೆ. ರಂಗಭೂಮಿ ಒಗ್ಗೂಡಿಸುವ ಕೆಲಸ ಮಾಡುತ್ತದೆ ಎಂದು ಹೇಳಿದರು. ತೀರ್ಪುಗಾರರಾದ ದಾಕ್ಷಾಯಣಿ ಭಟ್, ಸತೀಶ್ ಕುಲಕರ್ಣಿ, ಸಾಸ್ವಿಹಳ್ಳಿ ಸತೀಶ್ ಉಪಸ್ಥಿತರಿದ್ದರು.ಮೂರು ದಿನಗಳಲ್ಲಿ 10 ನಾಟಕಗಳು ಪ್ರದರ್ಶಗೊಂಡವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT