ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಟಕದ ಯಶಸ್ಸಿಗೆ ಸಂಘಟನಾ ಶಕ್ತಿ ಅಗತ್ಯ: ಕವಿ ಎಚ್ಚೆಸ್ವಿ

Last Updated 14 ಜನವರಿ 2011, 8:45 IST
ಅಕ್ಷರ ಗಾತ್ರ

ಹೊಳಲ್ಕೆರೆ: ನಾಟಕದ ಯಶಸ್ಸಿಗೆ ಇಡೀ ತಂಡದ ಸಂಘಟನಾ ಶಕ್ತಿ ಅಗತ್ಯ ಎಂದು ಹಿರಿಯ ಕವಿ ಡಾ.ಎಚ್.ಎಸ್. ವೆಂಕಟೇಶ ಮೂರ್ತಿ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಮಲ್ಲಾಡಿಹಳ್ಳಿಯಲ್ಲಿ ನಡೆಯುತ್ತಿರುವ ‘ತಿರುಕನೂರಿನಲ್ಲಿ ರಂಗದಾಸೋಹ’ ನಾಟಕೋತ್ಸವದಲ್ಲಿ ಗುರುವಾರ ಸಮಾರೋಪ ಭಾಷಣ ಮಾಡಿ ಅವರು ಮಾತನಾಡಿದರು.

ನಾಟಕದಲ್ಲಿ ಪ್ರತೀ ಪಾತ್ರದ ಕೊಡುಗೆಯೂ ಮುಖ್ಯ. ಕುವೆಂಪು ಅವರ ಮಾತಿನಂತೆ ‘ನಾಟಕದಲ್ಲಿ ಯಾವ ಪಾತ್ರವೂ ಮುಖ್ಯವಲ್ಲ, ಯಾವ ಪಾತ್ರವೂ ಅಮುಖ್ಯವಲ್ಲ’. ಎಲ್ಲರೂ ಒಗ್ಗೂಡಿ ಕೆಲಸ ಮಾಡುವುದರಿಂದ ಮಾತ್ರ ಯಶಸ್ಸು ಸಾಧ್ಯ. ಪಾತ್ರಧಾರಿಗಳು ತಮ್ಮ ತಮ್ಮ ಪಾತ್ರವನ್ನು ಸಮರ್ಪಕವಾಗಿ ನಿರ್ವಹಿಸಿದರೆ ಅದೊಂದು ಪರಿಪೂರ್ಣ ಪ್ರದರ್ಶನವಾಗುತ್ತದೆ. ಬಿ.ವಿ. ಕಾರಂತ ಹೇಳುವಂತೆ ವಿದ್ಯಾರ್ಥಿಗಳ ಮಾತು, ಭಾಷಾಶೈಲಿ ರಂಗಭೂಮಿಯಿಂದ ಉತ್ತಮವಾಗುತ್ತದೆ. ಎಲ್ಲರಲ್ಲಿಯೂ ಅದ್ಭುತ ಕಲಾಶಕ್ತಿ ಇದ್ದು, ಪ್ರತಿಭೆಯ ಅನಾವರಣಕ್ಕೆ ಸೂಕ್ತ ವೇದಿಕೆ ನಿರ್ಮಿಸಿಕೊಡುವ ಅಗತ್ಯವಿದೆ ಎಂದರು.

ಕಳೆದ ಐದು ದಿನಗಳಿಂದ ನಡೆದ ನಾಟಕಗಳ ಉತ್ಸವ ಯಶಸ್ವಿಯಾಗಿದೆ. ಉತ್ಸವದ ನೆನಪು ಅವಿಸ್ಮರಣೀಯ. ಇಂದಿನ ಮಕ್ಕಳಲ್ಲಿ ಶಿಸ್ತು, ಸೃಜನಶೀಲತೆ, ಕಲೆಗಳು ಮಾಯವಾಗಿವೆ ಎಂಬ ನಕಾರಾತ್ಮಕ ಭಾವನೆ ಬೇಡ. ಇಲ್ಲಿನ ವಿದ್ಯಾರ್ಥಿಗಳ ಅಭಿನಯ, ಪ್ರತಿಭೆ ನೋಡಿದರೆ ಎಲ್ಲರೂ ಮುಂದೆ ಉನ್ನತ ಸ್ಥಾನಕ್ಕೆ ಹೋಗುವುದರಲ್ಲಿ ಸಂದೇಹವಿಲ್ಲ. ಎಲ್ಲರೂ ಅವಕಾಶಗಳನ್ನು ಬಳಸಿಕೊಂಡು ಬೆಳೆಯಬೇಕು ಎಂದು ಸಲಹೆ ನೀಡಿದರು.

ಕಿರುತೆರೆ ನಟ ಹಾಗೂ ರಂಗಭೂಮಿ ಕಲಾವಿದ ವಿ. ಚಿದಾನಂದ್ ಮಾತನಾಡಿ, ಇಲ್ಲಿನ ಶಿಸ್ತು, ಸಂಸ್ಕಾರ, ಅತಿಥಿ ಸತ್ಕಾರಗಳು ನನಗೆ ಹೊಸ ಅನುಭವ ತಂದುಕೊಟ್ಟಿವೆ.ಈ ಪವಿತ್ರ ಕ್ಷೇತ್ರಕ್ಕೆ ಕಾಲಿಟ್ಟ ಕೂಡಲೇ ದೇವಲೋಕಕ್ಕೆ ಬಂದ ಅನುಭವ ಆಯಿತು. ನಾನು ರಂಗಭೂಮಿಯ ಮನೆತನದಿಂದ ಬಂದಿಲ್ಲವಾದರೂ, ಆಸಕ್ತಿಯಿಂದ ಆ ಕ್ಷೇತ್ರ ಆರಿಸಿಕೊಂಡೆ. ನಾಟಕ ಮನುಷ್ಯ ಜೀವನವನ್ನು ಸುಂದರಗೊಳಿಸುತ್ತದೆ. ನೈತಿಕ ಪ್ರಜ್ಞೆ, ಶಿಸ್ತು ಕಲಿಸುತ್ತದೆ. ಮನುಷ್ಯ ಕನಸು ಕಂಡಂತೆ, ಅದನ್ನು ಸಾಕಾರಗೊಳಿಸಲು ಪ್ರಯತ್ನಿಸಬೇಕು ಎಂದು ಹೇಳಿದರು.

ಆಶ್ರಮದ ಆಡಳಿತಾಧಿಕಾರಿ ಹಾಗೂ ಸಾಹಿತಿ ರಾಘವೇಂದ್ರ ಪಾಟೀಲ ಪ್ರಾಸ್ತಾವಿಕ ಮಾತನಾಡಿ, ನಾಟಕೋತ್ಸವಕ್ಕೆ ಆಶ್ರಮದ ಎಲ್ಲಾ ಸಿಬ್ಬಂದಿ, ವಿದ್ಯಾರ್ಥಿಗಳು ಸಹಕರಿಸಿದ್ದಾರೆ. ಸಂಸದ ಜನಾರ್ದನ ಸ್ವಾಮಿ ಅವರು ರಾಘವೇಂದ್ರ ಸ್ವಾಮೀಜಿ ಧ್ಯಾನ ಮಂದಿರ ನಿರ್ಮಾಣಕ್ಕೆ ್ಙ 5 ಲಕ್ಷ ಅನುದಾನ ನೀಡಿದ್ದಾರೆ. ಮುಂದಿನ ವರ್ಷದಿಂದ ದ್ವಿತೀಯ ಪಿಯು ವಿಜ್ಞಾನ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಪಡೆಯುವ ವಿದ್ಯಾರ್ಥಿಗಳಿಗೆ ಪ್ರತೀ ವಿಷಯಕ್ಕೆ ್ಙ 5 ಸಾವಿರ ನಗದು ಬಹುಮಾನ ನೀಡಲಾಗುವುದು ಎಂದು ಘೋಷಿಸಿದರು.

ಹೊಸದುರ್ಗ ತಾಲ್ಲೂಕು ಮಧುರೆಯ ಭಗೀರಥ ವಿದ್ಯಾಪೀಠದ ಪುರುಷೋತ್ತಮಾನಂದ ಪುರಿ ಸ್ವಾಮೀಜಿ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದರು.
ಆಶ್ರಮದಲ್ಲಿ ದ್ವಿತೀಯ ಪಿಯು ಅರ್ಥಶಾಸ್ತ್ರ ವಿಭಾಗದಲ್ಲಿ ಅತೀ ಹೆಚ್ಚು ಅಂಕ ಪಡೆದ ಟಿ.ವಿ. ಮಂಗಳಮ್ಮ ಮತ್ತು ವಿಜ್ಞಾನ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಪಡೆದ ಪಿ.ಟಿ. ಸೌಮ್ಯಾ ಅವರಿಗೆ ಛತ್ರಪತಿ ಪ್ರಾಯೋಜಕತ್ವದಲ್ಲಿ ಡಾ.ಡಿ.ಎಂ. ನಂಜುಂಡಪ್ಪ ಸ್ಮಾರಕ ಚಿನ್ನದ ಪದಕ ನೀಡಿ ಗೌರವಿಸಲಾಯಿತು.

ರಾಘವೇಂದ್ರ ಪಾಟೀಲ ರಚನೆ ಹಾಗೂ ಮಂಜುನಾಥ ಬಡಿಗೇರ ನಿರ್ದೇಶನದ ‘ಕತೆಯ ಹುಚ್ಚಿನ ಕರಿ ಟೋಪಿ ಗಿಯರಾಯ’ ನಾಟಕವನ್ನು ಆಶ್ರಮದ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಅಭಿನಯಿಸಿದರು.

ಸಹಾಯಕ ಆಡಳಿತಾಧಿಕಾರಿಗಳಾದ ಕೆ.ಡಿ. ಬಡಿಗೇರ, ಶಿವರಾಮಯ್ಯ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಂ. ವೀರೇಶ್, ಸಹಾಯಕ ನಿರ್ದೇಶಕಿ ನೀಲಮ್ಮ, ಜಿ.ಪಂ. ಸದಸ್ಯರಾದ ಇಂದಿರಾ ಕಿರಣ್, ಪರುಶುರಾಮಪ್ಪ, ತಾ.ಪಂ. ಸದಸ್ಯ ರವಿ, ಗ್ರಾ.ಪಂ. ಅಧ್ಯಕ್ಷೆಸುರಯ್ಯಾ ಪರ್ವಿನ್, ಬಿದರಹಳ್ಳಿ ಕೃಷ್ಣಮೂರ್ತಿ, ಉಪನ್ಯಾಸಕರಾದ ಎಸ್. ಬಸವರಾಜ್, ಸಂತೋಷ್‌ಕುಮಾರ್, ಮೂರ್ತಿ, ಗುಡ್ಡಪ್ಪ, ತಿಮ್ಮರಾಜು, ಲೋಕೇಶ್, ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT