ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಟ್ಯ ಮಯೂರಿ ಭೂಮಿಕಾಳ ಗೆಜ್ಜೆನಾದ...

Last Updated 1 ಜುಲೈ 2012, 10:00 IST
ಅಕ್ಷರ ಗಾತ್ರ

ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಮಾರಕ ಎಂಬ ಉದ್ದೇಶದಿಂದ ಟಿವಿ ವೀಕ್ಷಣೆಗೆ ಅವಕಾಶ ನೀಡದಿರುವ ಪಾಲಕರ ಧೋರಣೆ ಸಾಮಾನ್ಯವಾಗಿರುವ ಇಂದಿನ ದಿನಗಳಲ್ಲಿ ಟಿ.ವಿ ನೋಡಿಕೊಂಡು ನೃತ್ಯ ಕಲಿಯುವ ಮೂಲಕ ಕರ್ನಾಟಕ ನಾಟ್ಯ ಮಯೂರಿಯಾಗಿ ಹೊರ ಹೊಮ್ಮಿದ್ದಾಳೆ ಹಾನಗಲ್ಲಿನ ಪುಟ್ಟ ಬಾಲಕಿ ಭೂಮಿಕಾ ಸಂಗನಗೌಡ ಹಿರೇಗೌಡ್ರ.

  ಹಾನಗಲ್ಲಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನೌಕರ ಸಂಗನಗೌಡ ಹಿರೇಗೌಡ್ರ ಇವರ ಮಗಳು ಭೂಮಿಕಾ ಮೊದ ಮೊದಲು ಎಲ್ಲ ಮಕ್ಕಳಂತೆ ಟಿವಿ ವೀಕ್ಷಣೆಯಲ್ಲಿ ಮೈಮರೆಯುತ್ತಿದ್ದಳು. ಇದರಿಂದ ಪಾಲಕರ ಗದರಿಕೆಗೆ ಒಳಗಾದರೂ, ಪ್ರಸಾರ ಗೊಳ್ಳುತ್ತಿದ್ದ ನೃತ್ಯಗಳನ್ನು ತನ್ಮಯತೆಯಿಂದ ವೀಕ್ಷಿಸುವ ಮೂಲಕ ನಾಟ್ಯದ ಭಂಗಿಗಳನ್ನು ಅನುಸರಿಸಿ ಹೆಜ್ಜೆ ಹಾಕುತ್ತಿದ್ದಳು. ಮಗಳ ಆಸಕ್ತಿಯನ್ನು ಮನಗಂಡ ತಂದೆ-ತಾಯಿ ಟಿ.ವಿ ವೀಕ್ಷಣೆಗೆ ಪ್ರೇರೆಪಿಸಿದ್ದು, ಮನೆಯೇ ಮಗಳ ನೃತ್ಯಕ್ಕೆ  ವೇದಿಕೆಯಾಯಿತು.

ಮನೆಗೆ ಸಿಮಿತವಾಗಿದ್ದ ಭೂಮಿಕಾಳ ನಾಟ್ಯ ಪ್ರತಿಭೆ ಸಾರ್ವಜನಿಕವಾಗಿ ಅನಾವರಣಗೊಂಡಿದ್ದು, ಈ ಹಿಂದೆ ನಡೆದ ಹಾನಗಲ್ಲಿನ ಗ್ರಾಮದೇವಿ ಜಾತ್ರೆಯ ಸಂದರ್ಭದಲ್ಲಿ. ಜಾತ್ರೆಯ ಅಂಗವಾಗಿ ವೇದಿಕೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಂಡಾಗ ಧ್ವನಿವರ್ಧಕದಲ್ಲಿ ನೃತ್ಯ ಪ್ರದರ್ಶನಕ್ಕೆ ಆಹ್ವಾನ ಕೇಳಿಬರುತ್ತಿದ್ದಂತೆ ಜಾತ್ರೆಗೆ ತೆರಳಿದ್ದ ಅಂದು ನಾಲ್ಕು ವರ್ಷದವಳಿದ್ದ ಭೂಮಿಕಾ ಪಾಲಕರ ಅರಿವಿಗೆ ಬಾರದಂತೆ ವೇದಿಕೆಯನ್ನೇರಿ ನಿಂತು ಬಿಟ್ಟಳು. ಸಂಘಟಕರು ಪ್ರಸಾರಗೊಳಿಸಿದ ಹಾಡಿಗೆ ವಿಶಿಷ್ಠವಾಗಿ ಹೆಜ್ಜೆಹಾಕುವ ಮೂಲಕ ನೆರೆದ ಅಸಂಖ್ಯಾತ ಪ್ರೇಕ್ಷಕರ ಪ್ರಶಂಸೆಯ ಚಪ್ಪಾಳೆಗೆ ಪಾತ್ರರಾದಳಲ್ಲದೆ, ಪಾಲಕರ ಅಚ್ಚರಿಯ ಮೆಚ್ಚುಗೆಗೂ ಕಾರಣವಾದಳು.  

   ಬಾಲಕಿಯಲ್ಲಿ ಅಡಗಿದ್ದ ಈ ಸುಪ್ತ ಪ್ರತಿಭೆಗೆ ತಂದೆ ಸಂಗನಗೌಡ, ತಾಯಿ ಭಾರತಿ ಮನ್ನಣೆ ನೀಡಿ, ಇಲ್ಲಿನ ಹೆಜ್ಜೆ-ಗೆಜ್ಜೆ ನೃತ್ಯ ಕಲಾ ವೇದಿಕೆಗೆ  ತರಬೇತಿಗಾಗಿ ಸೇರ್ಪಡೆ ಮಾಡಿದರು. ಈ ಸಂಸ್ಥೆಯು ಮುಂಬಯಿನ ಅಖಿಲ ಭಾರತೀಯ ಗಂಧರ್ವ ಮಹಾವಿದ್ಯಾಲಯ ಮಂಡಲದ ಸಹಯೋಗದೊಂದಿಗೆ ಏರ್ಪಡಿಸಿದ `ಪ್ರಾರಂಭಿಕಾ~ ಎಂಬ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯೊಂದಿಗೆ ತೇರ್ಗಡೆಯಾಗಿ ಹೆತ್ತವರಿಗೂ, ನೃತ್ಯ ಕಲಾ ವೇದಿಕೆಗೂ ಕೀರ್ತಿ ತಂದಿದ್ದಾಳೆ. 

  ಇದೀಗ 10 ನೇ ವಯಸ್ಸಿನ ಭೂಮಿಕಾ ನೃತ್ಯಕ್ಕಾಗಿ ತಾನೇ ಹಾಡನ್ನು ಆಯ್ಕೆ ಮಾಡಿಕೊಳ್ಳುತ್ತಾಳೆ. ಈ ಹಾಡಿನಲ್ಲಿ ಪುರಷರ ಧ್ವನಿಯು ಇರಬಾರದು, ಕೇವಲ ಸ್ತ್ರೀಯೊಬ್ಬಳೆ ಹಾಡಿರಬೇಕು, ಅಲ್ಲದೆ ಮಹಿಳೆ ನರ್ತನವಿರಬೇಕು ಎಂಬ ತನ್ನದೇ ಆದ ನಿಲುವಿ ನೊಂದಿಗೆ ಆ ಹಾಡಿಗೆ ನೃತ್ಯ ಆರಂಭಿಸುತ್ತಾಳೆ. ವೇದಿಕೆಯ ಮೇಲೆ ಅಂಜಿಕೆ ಅಳುಕಿಲ್ಲದೇ ಒಬ್ಬಳೇ ಆಕರ್ಷಕ ನೃತ್ಯ ಪ್ರದರ್ಶಿಸುತ್ತಾಳೆ.

ಇದುವರೆಗೂ ವಿವಿಧೆಡೆಗಳಲ್ಲಿ ಏರ್ಪಡಿಸಿದ ಜಾನಪದ ಮತ್ತು ಚಲನಚಿತ್ರ ನೃತ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ ನೃತ್ಯಾಸಕ್ತರಿಂದ ಭೇಷ್ ಎನಿಸಿ ಕೊಂಡಿದ್ದಾಳೆ. 2010 ರಲ್ಲಿ ಬೆಂಗಳೂರಿನ ಟೌನ್‌ಹಾಲ್‌ನಲ್ಲಿ ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಪ್ರತಿಷ್ಠಾನ ಟ್ರಸ್ಟ್ ಏರ್ಪಡಿಸಿದ್ದ ಅಖಿಲ ಕರ್ನಾಟಕ ಮಕ್ಕಳ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನದಲ್ಲಿ ಭಾಗವಹಿಸಿ `ಕರ್ನಾಟಕ ನಾಟ್ಯ ಮಯೂರಿ ಪ್ರಶಸ್ತಿ~ ಪಡೆದಿದ್ದಾಳೆ. ಅಲ್ಲದೆ  ಸುರ್ವೆ ಕಲ್ಚರಲ್ ಅಕಾಡೆಮಿಯಿಂದ ಅರ್ಹತಾ ಪತ್ರವನ್ನು ಸಹ ಪಡೆದಿದ್ದಾಳೆ.

ಏಕವ್ಯಕ್ತಿ ನೃತ್ಯ ಪ್ರದರ್ಶನ ಹಾಗೂ ಸಮೂಹ ನೃತ್ಯ ಪ್ರದರ್ಶನದಲ್ಲೂ ಪಾಲ್ಗೊಳ್ಳುವ ಭೂಮಿಕಾ ಚಿತ್ರಕಲೆಯಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದಾಳೆ, ಶಾಲಾ ಭ್ಯಾಸದಲ್ಲಿ ಮುಂದಿರುವ ಮೂಲಕ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿ ಶಿಕ್ಷಕರ ಅಚ್ಚುಮೆಚ್ಚಿನ ವಿದ್ಯಾರ್ಥಿನಿಯಾಗಿದ್ದಾಳೆ.

ಶಿಕ್ಷಣ ಇಲಾಖೆ ಆಯೋಜಿಸುವ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಗಳಿಸಿದ್ದಾಳೆ. ಅಕ್ಕಿಆಲೂರಿನ ದುಂಡಿಬಸವೇಶ್ವರ ಜನಪದ ಕಲಾಸಂಘ ಏರ್ಪಡಿಸಿದ್ದ ನೃತ್ಯ ಸ್ಪರ್ಧೆಯಲ್ಲಿ ಪ್ರಥಮಳಾಗಿ ಹೊರ ಹೊಮ್ಮಿದ್ದಾಳೆ.

ವಿಶೇಷ ತರಬೇತಿ, ಸವಲತ್ತುಗಳಿಲ್ಲದೆ ಕೇವಲ ಟಿ.ವಿ, ವಿಡಿಯೋ ಮತ್ತಿತರೆಡೆ ನೃತ್ಯ ನೋಡಿ ಕಲಿತು ನೃತ್ಯಕಲೆಯಲ್ಲಿ ಸಾಧನೆ ತೋರುತ್ತಿರುವ ಭೂಮಿಕಾಳಿಗೆ ಸೂಕ್ತ ತರಬೇತಿ ದೊರೆತಲ್ಲಿ ಅತ್ಯುತ್ತಮ ನೃತ್ಯ ಕಲಾವಿದೆಯಾಗುವುದರಲ್ಲಿ ಸಂಶಯವಿಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT