ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಡ ಕಲಾನುಡಿ

Last Updated 13 ಅಕ್ಟೋಬರ್ 2012, 8:35 IST
ಅಕ್ಷರ ಗಾತ್ರ

ನಾಡು, ನುಡಿ, ಸಂಸ್ಕೃತಿ, ಪರಂಪರೆ, ಬಹು ಭಾಷಾ ಸಿರಿತನ ಮೇಳೈಸಿದ ನಾಡು ತುಳುನಾಡು. ಅನಾದಿ ಕಾಲದಿಂದಲೂ ಹಿರಿಯರು ಕಾಪಾಡಿಕೊಂಡು ಬಂದಿರುವ ಮಣ್ಣಿನ ಮೂಲ ಸಂಸ್ಕೃತಿಯ ಹಳೆ ಬೇರು ಒಂದೊಂದಾಗಿ ಕಳಚುತ್ತಾ ಕರಾವಳಿ ಆಧುನಿಕತೆಯತ್ತ ಮುಖಮಾಡಿದೆ.

ಗತಕಾಲದ ನೆನಪುಗಳಿಗೆ ಹಳೆ ಪೀಳಿಗೆ ಉಳಿಸಿ ಬೆಳೆಸಿದ ತುಳುನಾಡಿನ ಪರಂಪರೆಯನ್ನು ಒಂದೆಡೆ ಜೀವಂತವಾಗಿ ಕಾಪಾಡಲು ಬೆಂಗಳೂರಿನ ಪ್ರಾಚ್ಯ ವಸ್ತು ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳು ಮುತುವರ್ಜಿವಹಿಸಿವೆ. ಈ ಪ್ರಯತ್ನಕ್ಕೆ ಮಂಗಳೂರಿನ ಕರಾವಳಿ ಕಲಾವಿದರ ಚಾವಡಿಯ ಚಿತ್ರ ಕಲಾವಿದರೂ ಕೈಜೋಡಿಸಿದ್ದಾರೆ. ನಶಿಸಿ ಹೋಗುವ ತುಳುವರ ಮೂಲ ಸಂಸ್ಕೃತಿಗಳ ನಾನಾ ಮಗ್ಗಲುಗಳಲ್ಲಿ  ಕಲಾ ಕುಂಚದಲ್ಲಿ ಸೆರೆ ಹಿಡಿಯುವ ಕೆಲಸಕ್ಕೆ ಇಲ್ಲಿನ ಕಲಾವಿದರು ಮುಂದಾಗಿದ್ದಾರೆ.

ಈ ಸಲುವಾಗಿ ಮಂಗಳೂರಿನ ಬಲ್ಮಠದ ಸಹೋದಯದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಎರಡು ದಿನಗಳ  `ನಾಡ ಕಲಾ ನುಡಿಯ ಚಿತ್ರಕಲಾ ಶಿಬಿರ~ದಲ್ಲಿ  ಸುಮಾರು 34 ಚಿತ್ರ ಕಲಾವಿದರು ಪಾಲ್ಗೊಂಡರು. ಹಲವು ವರ್ಷಗಳ ಬಳಿಕ ಅವಿಭಜಿತ ದಕ್ಷಿಣ ಕನ್ನಡದ ಇಷ್ಟೊಂದು ಕಲಾವಿದರು ಏಕಕಾಲದಲ್ಲಿ ಚಿತ್ರರಚನೆಯಲ್ಲಿ ತೊಡಗಿಸಿಕೊಂಡರು.  ಶಿಬಿರದಲ್ಲಿ ಪಾಲ್ಗೊಂಡ ಹೆಚ್ಚಿನ ಕಲಾವಿದರು ತಮ್ಮ  ಕಲಾ ಕ್ಷೇತ್ರದಲ್ಲಿ ಹೆಸರು ಮಾಡಿದವರೇ. ಇವರೆಲ್ಲರನ್ನೂ ಒಗ್ಗೂಡಿಸುವ ಉಸ್ತುವಾರಿ ವಹಿಸಿದ್ದು ಪ್ರಸಾದ್ ಆರ್ಟ್ ಗ್ಯಾಲರಿಯ ಕೋಟಿ ಪ್ರಸಾದ್ ಆಳ್ವ.

`ಒಂದೇ ಕಡೆ ಇಷ್ಟೊಂದು ಕಲಾವಿದರು ಒಟ್ಟು ಸೇರಿ ಚಿತ್ರ ಬಿಡಿಸುವುದು ಅಪರೂಪ. ಇಲ್ಲಿ ಅಂತಹ ಅಪರೂಪದ ಸಂದರ್ಭ ಮೇಲೈಸಿದೆ. ಒಬ್ಬ ಕಲಾವಿದ ಬಿಡಿಸುವ ಚಿತ್ರವನ್ನು ಇನ್ನೊಬ್ಬ ಕಲಾವಿದ ನೋಡುವ ಅವಕಾಶ ಇಲ್ಲಿರುವುದರಿಂದ, ಪ್ರತಿಯೊಬ್ಬ ಕಲಾವಿದನ ಚಿತ್ರದ ಭಿನ್ನತೆ, ನೈಪುಣ್ಯತೆಯನ್ನು ಅರಿತುಕೊಳ್ಳುವುದು ಸಾಧ್ಯವಾಗುತ್ತದೆ~ ಎನ್ನುತ್ತಾರೆ ಕಲಾವಿದ ದಿನೇಶ್ ಹೊಳ್ಳ.

ನಗರದ ಅಭಿವೃದ್ಧಿಯ ಭರದಲ್ಲಿ  ಕ್ಷೀಣಿಸುತ್ತಿರುವ ತುಳುನಾಡಿನ  ಜಾನಪದ ಸಿರಿ, ಕಣ್ಮರೆಯಾಗುತ್ತಿರುವ ಹಸಿರು, ಕೃಷಿ ಮತ್ತು ಕೃಷಿಯೇತರ ಚಟುವಟಿಕೆ ಮೂಲೆ ಸೇರುತ್ತಿರುವ ಕರಾವಳಿಯ ನೈಜ ಚಿತ್ರಣಗಳನ್ನು ಕಲಾವಿದರು ಕ್ಯಾನ್ವಾಸ್ ಮೇಲೆ ಪ್ರತಿಬಿಂಬಿಸಿದರು. ನೆಲದ ಸಂಸ್ಕೃತಿ ಬಗ್ಗೆ ತಮಗಿರುವ ಜ್ಞಾನಕ್ಕೆ ಕಲಾವಿದರು ಸೃಜನಶೀಲತೆಯ ಸ್ಪರ್ಶ ನೀಡುವಲ್ಲಿ ಯಶಸ್ವಿಯಾದರು. ತುಳುನಾಡಿನ ಚಿತ್ರಣವನ್ನು ಅವರು ಕಟ್ಟಿಕೊಟ್ಟ ರೀತಿ ಮೆಚ್ಚುಗೆಗೆ ಪಾತ್ರವಾಯಿತು. ತುಳುನಾಡಿನ ಭೂತಾರಾಧನೆ, ಕೋಲ, ನಾಗಾರಾಧನೆ, ಜಾತ್ರೆ, ತೇರು, ಅಂಕ, ಆಯನ, ಪಡುವಣದ ಕಡಲು, ತುಳುನಾಡಿನ ಮಣ್ಣಿನ ಸೆಳೆತ...  ಎಲ್ಲವೂ  ಬಿಳಿ ಕ್ಯಾನ್ವಾಸಿನ ಮೇಲೆ ರಂಗು ರಂಗಿನ ರೂಪ ಪಡೆದವು. ನಾನಾ ವರ್ಣದ ರೇಖೆಗಳು, ಇಲ್ಲಿನ ಸಂಸ್ಕೃತಿಯ ಎಸಳುಗಳನ್ನು ಎಳೆ ಎಳೆಯಾಗಿ  ಮೂಡಿಸಿದವು.

ಚಿತ್ರ ಕಲಾವಿದ ತಾರಾನಾಥ ಕೈರಂಗಳ ಅವರ ಆಟಿ ಕಳೆಂಜ ಜನಪದದ ಹೊಸ ಮೆರುಗನ್ನು ನೀಡಿದರೆ, ಸೈಯದ್ ಆಸಿಫ್ ಆಲಿ ಅವರ ಮೊಸರು ಕುಡಿಕೆ ಮನ ಸೆಳೆಯಿತು. ಹರೀಶ್ ಕೊಡಿಯಾಲ್‌ಬೈಲ್ ಅವರ ಕಲಾಕೃತಿಯಲ್ಲಿ ನೂರಾರು ವರ್ಷಗಳ ಹಿಂದಿನ ಕರಾವಳಿಯ ಬೇಟೆಯ ನೈಜ ಚಿತ್ರಣ ಮನಮುಟ್ಟುವಂತೆ ಮೂಡಿಬಂತು. ಮುಂಬೈಯ ಕಲಾವಿದ ಮಧುಸೂದನ ಅವರು ಕುದುರೆಯ ನಾಗಾಲೋಟವನ್ನು ಕಟ್ಟಿಕೊಟ್ಟರೆ, ಸಂತೋಷ್ ಅಂದ್ರಾದೆ ಅವರು ಕರಾವಳಿ ತೀರವನ್ನು ಮನಮೋಹಕವಾಗಿ ಮೂಡಿಸಿದರು. ದಿನೇಶ್ ಹೊಳ್ಳ ಅವರ ರೇಖಾ ಚಿತ್ರದ `ಆಟಿ ಕಳೆಂಜ~, ಸಪ್ನಾ ನರೋನ್ಹಾ ಅವರ `ಕೋಳಿ ಅಂಕ~ಗಳಲ್ಲಿ ಕರಾವಳಿಯ ಪರಂಪರೆಯ ಆಪ್ತತೆ ಇತ್ತು. ವೀಣಾ ಶ್ರೀನಿವಾಸ್ ಅವರು  ಕಾವಿ ಕಲೆಯಲ್ಲಿ `ಚೆನ್ನೆಮಣೆ~ಯ ಚೆಲುವು ಚೆನ್ನಾಗಿ ಮೂಡಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ  ಮಂಗಳೂರಿನ ಕಲಾವಿದರಿಗೆ ಸರಿಯಾದ ಚಿತ್ರಕಲಾ ಗ್ಯಾಲರಿ ಇಲ್ಲ.  ನಗರದ ಬೋಂದೆಲ್‌ನಲ್ಲಿ ನಿರ್ಮಾಣವಾಗಲಿರುವ ರಂಗಮಂದಿರದಲ್ಲಿ ಕಲಾ ಗ್ಯಾಲರಿಗೆ ಅವಕಾಶ ಕಲ್ಪಿಸಿ, ಈ ಕೊರತೆ ನೀಗಿಸಬೇಕೆಂಬುದು ಕಲಾವಿದರ ಅಹವಾಲು. `ನಾಡ ಕಲಾ ನುಡಿ~ ಚಿತ್ರಕಲಾ ಶಿಬಿರದಲ್ಲಿ ಮೂರ್ತರೂಪ ತುಳು ನಾಡಿನ ಸಂಸ್ಕೃತಿಯ 34 ಬಿಂಬಗಳನ್ನು ಸದ್ಯಕ್ಕೆ ಬಿಜೈನ ಸಿಮಂತಿನಿಬಾಯಿ ವಸ್ತುಸಂಗ್ರಹಾಲದಲ್ಲಿ ಸಾರ್ವಜನಿಕರ  ಪ್ರದರ್ಶನಕ್ಕೆ ಇಡಲಾಗುತ್ತದೆ. ಬೋಂದೆಲ್‌ನಲ್ಲಿ ರಂಗಮಂದಿರ ನಿರ್ಮಾಣವಾದ ಬಳಿಕ ಅಲ್ಲಿ ಇವುಗಳನ್ನು ಶಾಶ್ವತವಾಗಿ ಇರಿಸಲಾಗುವುದು ಎನ್ನುತ್ತಾರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಗಳಾ ನಾಯಕ್.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT