ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಡಲ್ಲಿ ಮಿಂಚಲಿರುವ ಕಾಡು ಸುಂದರಿಯರು

Last Updated 7 ಮೇ 2012, 19:30 IST
ಅಕ್ಷರ ಗಾತ್ರ

ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದಲ್ಲಿ ಮೇ 11ರಿಂದ ಮೂರು ದಿನಗಳ ಕಾಲ `ಮಲೆನಾಡು ಫಲ ವೃಕ್ಷ ವೈವಿಧ್ಯ ಮೇಳ~ ನಡೆಯಲಿದೆ. ಅಪರೂಪದ ಕಾಡು ಹಣ್ಣುಗಳನ್ನೂ ಕಣ್ಣಾರೆ ಕಾಣುವ ಅವಕಾಶ ಇಲ್ಲಿ ಲಭ್ಯ.

ಮೂಲತಃ ನಾಲ್ಕು ವರ್ಷಗಳ ಹಿಂದೆ ಈ ಮೇಳ ಆರಂಭವಾಗಿದ್ದು ಮರ ತುಂಬ ಹಣ್ಣು ಬಿಟ್ಟು ನೆಲಕ್ಕೆ ಉರುಳಿ ಕೊಳೆತು ಹೋಗುತ್ತಿದ್ದ ಹಲಸಿನ ಬಗ್ಗೆ ಜನರಲ್ಲಿ ಮತ್ತೆ ಪ್ರೀತಿ ಮೂಡಿಸಲು. ಇದರ ಫಲವೋ ಏನೋ ಈಗಂತೂ ಹಿತ್ತಲಿನ ಹಣ್ಣು ಹಲಸಿಗೆ ಮತ್ತೆ ಘನತೆ ಬಂದಿದೆ. ಅದರ ಜತೆಗೇ, ಕಣ್ಮರೆಯಾಗುತ್ತಿರುವ ಕಾಡು ಹಣ್ಣುಗಳ ಪ್ರದರ್ಶನ ಈ ಬಾರಿ ಸೇರಿಕೊಂಡಿದ್ದು ಮೇಳದ ವಿಶೇಷ.

ಮಲೆನಾಡಿನ ಕಾಡು ರುಚಿಯಾದ ಹಣ್ಣುಗಳಿಗೆ ಹೆಸರು ಮಾಡಿದೆ. ಭೂತಾಯಿ ತನ್ನ ಒಡಲಲ್ಲಿ ಬೀಜ ಅಂಕುರಿಸಿ ಬೆಳೆಸಿದ ವೈವಿಧ್ಯ ಕಾಡು ಗಿಡಗಳು ವರ್ಷಂಪ್ರತಿ ಕೊಡುವ ಹಣ್ಣು ನಾಲಿಗೆಗಷ್ಟೇ ರುಚಿಯಲ್ಲ, ದೇಹಕ್ಕೆ ಹಿತಕರವೂ ಹೌದು.

ಮಲೆನಾಡಿನ ಬೆಟ್ಟ-ಗುಡ್ಡಗಳು ನೈಸರ್ಗಿಕ ಆಸ್ಪತ್ರೆ ಇದ್ದಂತೆ. ಕಾಡು ಹಣ್ಣು ಬಿಡುವ ಗಿಡಗಳಲ್ಲಿ ಔಷಧೀಯ ಗುಣಗಳು, ರೋಗ ನಿರೋಧಕ ಶಕ್ತಿ ಅಡಗಿದ್ದರೆ, ಹಣ್ಣುಗಳು ಪೋಷಕಾಂಶಗಳ ಕಣಜ. ಹಿಂದೆಲ್ಲ ಹಳ್ಳಿ ಹುಡುಗರು ಬೇಸಿಗೆ ರಜೆಯಲ್ಲಿ ಬೆಟ್ಟದ ಹಣ್ಣು ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು.
 
ಇಂದು ಹೊಸ ತಲೆಮಾರು ನಗರಕ್ಕೆ ವಲಸೆ ಬೆಳೆಸಿದೆ. ಕಾನನದ ಕಾಡು ಹರಟೆ ಕಣ್ಮರೆಯಾಗಿದೆ. ಮಕ್ಕಳಿಗೆ ಕಾಡು ಹಣ್ಣಿನ ಖುಷಿಯೇ ಗೊತ್ತಿಲ್ಲ. ಈ ಹಿನ್ನೆಲೆಯಲ್ಲಿ ಜನ ಮಾನಸದಿಂದ ಮರೆಯಾಗುತ್ತಿರುವ ಕಾಡುಹಣ್ಣು ನೆನಪಿಸಲು ಹಲಸಿನ ಜೊತೆಗೆ ಕಾಡು ಹಣ್ಣು ಕಾಡಿನಿಂದ ನಾಡಿಗೆ ಬಂದು ವೇದಿಕೆ ಏರಲಿದೆ.
ಏನೇನಿದೆ?

ಕೌಳಿಹಣ್ಣು, ಮುಳ್ಳೆಹಣ್ಣು, ಬಿಕ್ಕೆ, ನೇರಳೆ, ಸಂಪಿಗೆ, ಹಲಗೆ, ನುರುಕಲು, ಪರಿಗೆ, ಸಳ್ಳೆ, ಗುಡ್ಡೆಗೇರು, ಜಂಬೆಕಾಯಿ, ಕುಂಟನೇರಳೆ, ತುಂಬ್ರಿ ಹಣ್ಣು, ರಂಜಲುಹಣ್ಣು ಹೀಗೆ ಪ್ರಕೃತಿಯ ಹಣ್ಣುಗಳ ಪಟ್ಟಿ ವಿಶಾಲವಾದುದು. ಏಪ್ರಿಲ್-ಮೇ ತಿಂಗಳಿನಲ್ಲಿ ಮುಳ್ಳಿನ ಗಿಡಕ್ಕೆ ಗೊಂಚಲಾಗಿ ಮೂಡುವ ಕಪ್ಪು ಸುಂದರಿ ಕವಳಿ ಹಣ್ಣು ಉಪ್ಪಿನಕಾಯಿಗೆ ಹೇರಳವಾಗಿ ಬಳಕೆಯಾಗುತ್ತದೆ.

ಶರ್ಕರ ಪಿಷ್ಠ, ರಂಜಕ, ಕಬ್ಬಿಣದ ಅಂಶ ಹೊಂದಿರುವ ಈ ಹಣ್ಣು ಪ್ರೋಟಿನ್‌ಯುಕ್ತ ಆಹಾರ. ವಾಂತಿ, ಯಕೃತ್ ತೊಂದರೆ, ಹೃದಯ ಕಾಯಿಲೆಗೆ ಕವಳಿ ಗಿಡದ ಎಲೆ, ಕಾಯಿ, ತೊಗಟೆ ದಿವ್ಯ ಔಷಧಿ.

ಪೌಷ್ಟಿಕಾಂಶ ಹೊಂದಿರುವ ನೇರಳೆ ಹಣ್ಣಿನ ಬೀಜಕ್ಕೆ ಮಧುಮೇಹ ನಿಯಂತ್ರಿಸುವ ತಾಕತ್ತಿದೆ. ಹಲ್ಲಿನರೋಗ, ಸುಟ್ಟಗಾಯ, ಕ್ಯಾನ್ಸರ್, ಮೂತ್ರ ಸಂಬಂಧಿ ಕಾಯಿಲೆಗೆ ನೇರಳೆ ಸಸ್ಯ ಔಷಧಿಯಾಗಿ ಆಯುರ್ವೇದ ವೈದ್ಯದಲ್ಲಿ ಬಳಕೆಯಲ್ಲಿದೆ. ಕುರುಚಲು ಬೆಟ್ಟದಲ್ಲಿ ಬೆಳೆಯುವ ಬಿಕ್ಕೆಹಣ್ಣು ಎಲುಬು ಮುರಿತ, ಭೇದಿ, ಅಲ್ಸರ್ ತಡೆಗಟ್ಟುವ ಗುಣ ಹೊಂದಿದೆ.

ಬಿಳೆಮುಳ್ಳೆ ಹಣ್ಣು ಆಮಶಂಕೆಗೆ ರಾಮಬಾಣವಾದರೆ, ಪರಿಗೆ ಹಣ್ಣು ಮೂಲವ್ಯಾಧಿ ನಿವಾರಕವಾಗಿದೆ. ನುರುಕಲು ಹಣ್ಣು ಹಾವು ಕಡಿತಕ್ಕೆ ಮತ್ತು ಕಾಲರಾ ರೋಗ ತಡೆಗೆ ಸಹಕಾರಿಯಾಗಿದೆ.

ಕಾಡುಹಣ್ಣಿನ ಔಷಧೀಯ ಗುಣದ ಮಹತ್ವ, ವಿನಾಶದ ಅಂಚಿನಲ್ಲಿರುವ ಕಾಡುಹಣ್ಣಿನ ಸಂರಕ್ಷಣೆ ಕುರಿತು ಜನಜಾಗೃತಿ ಮೂಡಿಸುವ ಉದ್ದೇಶ ಮೇಳದ್ದಾಗಿದೆ. ಕೋಕಂ, ಮಾವು, ಗೇರು, ಬಾಳೆಯ ಮೌಲವರ್ಧನೆ ಹಿನ್ನೆಲೆಯಲ್ಲಿ ಈ ಫಲವೃಕ್ಷಗಳನ್ನು ಮೇಳದಲ್ಲಿ ಜೋಡಿಸಲಾಗಿದೆ. ಕದಂಬ ಆರ್ಗಾನಿಕ್ ಮತ್ತು ಮಾರ್ಕೆಟಿಂಗ್ ಟ್ರಸ್ಟ್, ಪಶ್ಚಿಮಘಟ್ಟ ಕಾರ್ಯಪಡೆ ಹಾಗೂ ಇಲಾಖೆಗಳ ಸಹಕಾರದೊಂದಿಗೆ ಮೇಳ ಆಯೋಜಿಸಿದೆ.

ಕಾಡುಹಣ್ಣಿನ ಕುರಿತು ಅಧ್ಯಯನ ಮಾಡಿ ಶಾಲೆ ವಿದ್ಯಾರ್ಥಿಗಳಿಗೆ ಕಾಡುಹಣ್ಣು ಪರಿಚಯಿಸುವ ಅಭಿಯಾನ ನಡೆಸುತ್ತಿರುವ ಉಮಾಪತಿ ಭಟ್ಟ ವಾಜಗಾರ ಅವರು 30ಕ್ಕೂ ಅಧಿಕ ಕಾಡುಹಣ್ಣುಗಳ ಪಟ್ಟಿ ಮಾಡಿದ್ದಾರೆ.  ಬಹಳಷ್ಟು ಹಣ್ಣಿನ ಗಿಡಗಳು ಪುನರುತ್ಪಾದನೆ ಕೊರತೆಯಿಂದ ವಿನಾಶದ ಅಂಚಿಗೆ ತಲುಪಿವೆ.
 
ಕಾಡುಹಣ್ಣಿನ ಗಿಡಗಳನ್ನು ಅವೈಜ್ಞಾನಿಕವಾಗಿ ಕಡಿದು ಪಟ್ಟಣಕ್ಕೆ ಹಣ್ಣು ತಂದು ಮಾರುವ ಸಂಸ್ಕೃತಿ ಹುಟ್ಟಿಕೊಂಡಿದೆ. ಇದರಿಂದ ಕಾಡುಹಣ್ಣಿನ ಗಿಡ ಕಳೆದು ಹೋಗುತ್ತಿದೆ. ಮಲೆನಾಡು ಫಲ ವೃಕ್ಷ ವೈವಿಧ್ಯ ಮೇಳ ಈ ನಿಟ್ಟಿನಲ್ಲಿ ಅರಿವು ಮೂಡಿಸಿದರೆ ಮೇಳ ಸಾಫಲ್ಯವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT