ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಡು ನುಡಿ ರಕ್ಷಣೆಯ ಚಿಂತನೆ

Last Updated 4 ಫೆಬ್ರುವರಿ 2011, 17:45 IST
ಅಕ್ಷರ ಗಾತ್ರ

ನಿಘಂಟು ತಜ್ಞ ಜಿ.ವೆಂಕಟಸುಬ್ಬಯ್ಯನವರು ಕನ್ನಡದ ಭಾಷಾ ವಿದ್ವಾಂಸರಲ್ಲಿ ಅಗ್ರಶ್ರೇಣಿಯ ಹಿರಿಯರು. ರಾಜಧಾನಿಯಲ್ಲಿ ನಲವತ್ತು ವರ್ಷಗಳ ನಂತರ ಸಮಾವೇಶಗೊಂಡ ಎಪ್ಪತ್ತೇಳನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನದಿಂದ ಮಾಡಿರುವ ಭಾಷಣ ಕನ್ನಡ ಭಾಷಾ ಶುದ್ಧತೆಯನ್ನೇ ಪ್ರಧಾನ ಲಕ್ಷ್ಯವನ್ನಾಗಿ ಪರಿಗಣಿಸಿರುವುದರಲ್ಲಿ ಆಶ್ಚರ್ಯವಿಲ್ಲ.

ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ಸಿಕ್ಕಿರುವ ಹಿನ್ನೆಲೆಯಲ್ಲಿ ಪರಿಷತ್ತು ನಿಶ್ಚಿತ ಯೋಜನೆಗಳನ್ನು ರೂಪಿಸಿಕೊಂಡು ಭಾಷೆಯ ಅಭಿವೃದ್ಧಿಗೆ ಶ್ರಮಿಸಬೇಕು, ನಾಡುನುಡಿಯ ರಕ್ಷಣೆಗೆ ಸರ್ಕಾರ ಕಂಕಣಬದ್ಧವಾಗಬೇಕು, ಕನ್ನಡಕ್ಕೆ ಸಾರ್ವಭೌಮ ಸ್ಥಾನ ಸಿಗಬೇಕು, ಇದಕ್ಕಾಗಿ ಸರ್ಕಾರ ರಾಜಕೀಯ ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕು ಎಂಬ ಆಶಯಗಳನ್ನು ಅವರು ಪುನರುಚ್ಚರಿಸಿದ್ದಾರೆ. ರಾಜಧಾನಿಯಲ್ಲಿ ಕನ್ನಡದ ಈಗಿನ ಸ್ಥಿತಿಯನ್ನು ವಿಶ್ಲೇಷಿಸಿದ್ದಾರೆ.

ಜನಸಾಮಾನ್ಯರ ನಿತ್ಯದ ವ್ಯವಹಾರದಲ್ಲಿ ಸ್ವಚ್ಛವಾದ ಕನ್ನಡದ ಕೊರತೆ ಇರುವುದನ್ನು ಗುರುತಿಸಿದ್ದಾರೆ. ಗ್ರಾಮೀಣ ಜನ ನಿರರ್ಗಳವಾಗಿ ಶುದ್ಧ ಕನ್ನಡದಲ್ಲಿ ಮಾತಾಡುವುದು ಸಾಧ್ಯವಿರುವುದಾದರೆ ಬೆಂಗಳೂರಿನಂಥ ನಗರದ ಕನ್ನಡಿಗರಿಗೆ ಅದು ಏಕೆ ಸಾಧ್ಯವಿಲ್ಲ ಎಂದು ಸಕಾರಣವಾಗಿಯೇ ಪ್ರಶ್ನಿಸಿದ್ದಾರೆ.

ಕನ್ನಡದಲ್ಲಿಯೇ ಮಾತಾಡುವ ಸಾಮರ್ಥ್ಯವಿದ್ದರೂ ಅದಕ್ಕೆ ಪ್ರಯತ್ನ ಪಡದೆ ಸುಲಭವಾಗಿ ಬಾಯಿಗೆ ಬರುವ ಇಂಗ್ಲಿಷ್ ಪದಗಳನ್ನು ಕನ್ನಡೀಕರಿಸುವ ಪ್ರವೃತ್ತಿ ಅನವಶ್ಯಕ; ರಾಜಧಾನಿಯಲ್ಲಿಯೇ ಕನ್ನಡ ಸಾಯುವಂತಾದರೆ ಅದು ಗ್ರಾಮೀಣ ಪ್ರದೇಶಗಳಲ್ಲಿ ಉಳಿಯುತ್ತದೆಯೇ ಎಂಬ ಅನುಮಾನವನ್ನೂ ವ್ಯಕ್ತಪಡಿಸಿದ್ದಾರೆ.

ಚಲನಶೀಲತೆ ಜೀವಂತ ಭಾಷೆಯ ಲಕ್ಷಣ. ಹೊರಗಿನ ಪ್ರಭಾವಗಳನ್ನು ಅರಗಿಸಿಕೊಳ್ಳುವ ಶಕ್ತಿ ಸಮರ್ಥ ಭಾಷೆಗೆ ಇರುತ್ತದೆ. ಸಾವಿರದೈನೂರು ವರ್ಷಗಳಿಂದ ಬಳಕೆಯಲ್ಲಿದ್ದು, ಶ್ರೀಮಂತವಾದ ಪ್ರಾಚೀನ ಸಾಹಿತ್ಯವನ್ನೂ, ಸಮೃದ್ಧವಾದ ಆಧುನಿಕ ಸಾಹಿತ್ಯವನ್ನೂ ಹೊಂದಿರುವ ಕನ್ನಡದ ಅಸ್ತಿತ್ವದ ಬಗ್ಗೆ ಆತಂಕ ಪಡುವ ಅವಶ್ಯಕತೆಯೇ ಇಲ್ಲವೆಂಬ ಭರವಸೆ ವೆಂಕಟಸುಬ್ಬಯ್ಯನವರ ಭಾಷಣದಲ್ಲಿ ವ್ಯಕ್ತವಾಗಿದೆ.

ಸಮೂಹ ಮಾಧ್ಯಮಗಳಲ್ಲಿ ಖಾಸಗಿ ವಲಯದ ಎಫ್‌ಎಂ ಮತ್ತು ದೂರದರ್ಶನ ವಾಹಿನಿಗಳಲ್ಲಿ ಬಳಕೆಯಾಗುವ ಇಂಗ್ಲಿಷ್ ಮಿಶ್ರಿತ ನಿರೂಪಣೆಯಿಂದ ಕನ್ನಡದ ಸಹಜ ಸೊಗಡಿಗೆ ಧಕ್ಕೆಯಾಗುತ್ತಿರುವ ಪ್ರವೃತ್ತಿ ನಿಲ್ಲಬೇಕೆಂಬ ಸಾತ್ವಿಕ ಆಗ್ರಹವೂ ವ್ಯಕ್ತವಾಗಿದೆ. ಇಂಥ ಪ್ರಯೋಗಗಳು ನಿಲ್ಲಬೇಕು. ನಮ್ಮಲ್ಲಿ ಪ್ರಚಾರದಲ್ಲಿರುವ ಕನ್ನಡ ಪದಗಳನ್ನು ಬಳಸುವಂತೆ ಸಂಬಂಧಪಟ್ಟ ಕೇಂದ್ರಗಳ ಮುಖ್ಯಸ್ಥರು ನಿರ್ದೇಶಿಸಬೇಕು ಎಂಬ ಖಚಿತ ಪರಿಹಾರವನ್ನೂ ಅವರು ಸೂಚಿಸಿದ್ದಾರೆ. ಯಾವ ಶಬ್ದ ಬೇಕಾದರೂ ಬರಲಿ, ಆದರೆ ನಿಧಾನವಾಗಿ ಬರಲಿ ಎಂಬ ಸಮಾಧಾನಚಿತ್ತದ ನಿಲುವು ಅವರದು.

ನಿತ್ಯದ ವ್ಯವಹಾರದಲ್ಲಿ ಕನ್ನಡವನ್ನೇ ಬಳಸುವಂತೆ ಮಾಡುವುದಕ್ಕೆ ಸಮಾಜದ ಹಿರಿಯರು, ಸಾಮಾಜಿಕ ಸಂಸ್ಥೆಗಳ ಕಾರ್ಯಕರ್ತರು, ಕನ್ನಡ ಪರಿಚಾರಕರು ಒಳಗೊಂಡ ಜನಾಂದೋಳನದ ಕರೆಗೆ ಯಾವ ಪ್ರತಿಕ್ರಿಯೆ ಬರುವುದೆಂಬುದು ಕುತೂಹಲದ ಸಂಗತಿ. ಕರ್ನಾಟಕದಲ್ಲಿ ನೆಲೆಸಿರುವ ಎಲ್ಲರೂ ಒಂದನೇ ತರಗತಿಯಿಂದ ಹತ್ತನೆಯ ತರಗತಿಯವರೆಗೆ ಕನ್ನಡವನ್ನು ಪ್ರಥಮ ಭಾಷೆಯಾಗಿ ಕಲಿಯುವಂಥ ವ್ಯವಸ್ಥೆ ಸರ್ಕಾರದ ಮೂಲಕ ಆಗಲೇಬೇಕೆಂಬ ಆಗ್ರಹವನ್ನು ರಾಜ್ಯ  ಸರ್ಕಾರ ಸವಾಲಿನಂತೆ ಸ್ವೀಕರಿಸುವ ಬದ್ಧತೆಯನ್ನು ಪ್ರದರ್ಶಿಸಬೇಕು. ಇಂಥ ಕ್ರಮ ತಮಿಳುನಾಡಿನಲ್ಲಿ ಸಾಧ್ಯವಾದರೆ ಕರ್ನಾಟಕದಲ್ಲಿ ಆಗದಿರುವುದಕ್ಕೆ ಕಾರಣಗಳಿಲ್ಲ. ಒಳ್ಳೆಯ ಕನ್ನಡವನ್ನು ಶಾಲಾ ಹಂತದಲ್ಲಿ ಕಲಿಯುವ ವ್ಯವಸ್ಥೆಗೆ ಮಾಡಿರುವ ಸಲಹೆ ಅನುಷ್ಠಾನಯೋಗ್ಯವಾಗಿದೆ. ಕನ್ನಡವನ್ನು ಪ್ರೀತಿಯಿಂದ ಕಲಿಸುವ ವಾತಾವರಣ ನಿರ್ಮಾಣವಾದರೆ ಅದರಿಂದ ಕನ್ನಡದ ಬೆಳವಣಿಗೆ ನಿರಾತಂಕವಾಗುತ್ತದೆ. ಸಾಹಿತ್ಯ ಪರಿಷತ್ತಿನ ಕಾರ್ಯನಿರ್ವಹಣೆಗೆ ಉಪಯುಕ್ತವಾದ ಕೆಲವು ಸಲಹೆಗಳನ್ನೂ ಅಧ್ಯಕ್ಷರು ನೀಡಿದ್ದಾರೆ.

ಅಧ್ಯಕ್ಷರ ಆಯ್ಕೆ, ಸಮ್ಮೇಳನಗಳನ್ನು ನಡೆಸುವ ವಿಧಾನ ಮೊದಲಾದವು ಪರಿಗಣಿಸಲು ಯೋಗ್ಯವಾದವು. ಇವಷ್ಟೇ ಅಲ್ಲದೆ, ಸವಣೂರಿನ ಭಂಗಿಗಳ ಬವಣೆಯನ್ನು ನಿವಾರಿಸದ, ದೇಶದಲ್ಲಿಯೇ ಅತ್ಯಂತ ಭ್ರಷ್ಟ ರಾಜ್ಯವೆಂಬ ಹೆಸರು ಪಡೆಯಲು ಕಾರಣವಾದ ಜನಪ್ರತಿನಿಧಿಗಳ ಅಸಹ್ಯಕರ ಅಧಿಕಾರ ದಾಹವನ್ನು ಪ್ರಸ್ತಾಪಿಸುವ ಸಾತ್ವಿಕ ಧೈರ್ಯವನ್ನೂ ಪ್ರದರ್ಶಿಸಿದ್ದಾರೆ.

ಸಂವಿಧಾನವನ್ನು ತಿರಸ್ಕರಿಸಿ ದುರ್ಬಲರು ಬಳಸುವ ಬೈಗುಳದ ಬಿಚ್ಚುಗತ್ತಿ ಹಿಡಿದ ಜನಪ್ರತಿನಿಧಿಗಳ ವರ್ತನೆಯಲ್ಲಿ ಗಾಂಭೀರ್ಯವಾಗಲೀ, ಸುಸಂಸ್ಕೃತಿಯಾಗಲೀ ಕಾಣಬರುತ್ತಿಲ್ಲ ಎಂಬ ಅವರ ಮಾತು ವರ್ತಮಾನದ ರಾಜಕೀಯ ಪರಿಸ್ಥಿತಿಗೆ ಹಿಡಿದ ಕೈಗನ್ನಡಿ. ಜನಪ್ರತಿನಿಧಿಗಳು ಅಧಿಕಾರದ ಹುಚ್ಚು ದಾಹವನ್ನು ಬಿಟ್ಟು ನಾಡಿನ ಸೌಖ್ಯಕ್ಕಾಗಿ  ದುಡಿಯುವ ಸದ್ಬುದ್ಧಿ ಪಡೆಯುವಂತೆ ರಾಜಕೀಯ ಪಕ್ಷಗಳಿಗೆ ಅವರು ನೀಡಿರುವ ಕರೆ ಸ್ವಾಗತಾರ್ಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT