ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಡು ನುಡಿಯ ರಕ್ಷಣೆಗಾಗಿ

Last Updated 11 ಫೆಬ್ರುವರಿ 2011, 18:30 IST
ಅಕ್ಷರ ಗಾತ್ರ

ಡಬಿಂಗ್ ವಿರೋಧಿ ಕ್ರಿಯಾ ಸಮಿತಿ ಅಧ್ಯಕ್ಷನಾಗಿ ನಾನು ಕೆಲಸ ಮಾಡಿದವನು. ಡಬಿಂಗ್‌ಅನ್ನು ನಿಲ್ಲಿಸಲು, ರಾಜ್‌ಕುಮಾರ್ ಅವರು ಆ ಚಳವಳಿಗೆ ಬರುವಂತೆ ನಾಡಿದ್ದು ನಾವು. ‘ಟಿಪ್ಪು ಸುಲ್ತಾನ್’ ಧಾರಾವಾಹಿಯನ್ನು ಕನ್ನಡಕ್ಕೆ ಡಬ್ ಮಾಡಬೇಕು ಎಂಬ ಕಾಲದಿಂದ ಅದನ್ನು ನಾವು ವಿರೋಧಿಸಿಕೊಂಡು ಬಂದಿದ್ದೇವೆ. ಇದಲ್ಲದೆ ಮೊದಲಿನಿಂದಲೂ ಕೂಡ ಅದನ್ನು ವಿರೋಧಿಸಿಕೊಂಡು ಬಂದಿದ್ದೇನೆ.

ಕನ್ನಡ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷನಾದ ಮೇಲೆ ಸಮೀಕ್ಷೆ ಮಾಡಿದಾಗ, ಡಬಿಂಗ್ ಬಗ್ಗೆ ಚರ್ಚೆ ಆಗಬೇಕು ಎಂದಾಗ ಅದಕ್ಕೆ ಗಲಾಟೆ ಆಯಿತು. ಅದರ ವಿರುದ್ಧ ದನಿ ಎತ್ತಿದರು. ಆಗ ಆ ಚರ್ಚೆಯನ್ನು ಹಿಂದಕ್ಕೆ ತೆಗೆದುಕೊಂಡೆವು. ಡಬಿಂಗ್ ಬಗ್ಗೆ ಚರ್ಚಿಸಬೇಕು ಎಂದಾಗ ಅದು ಆಗಬಾರದು ಎಂದು ಗಲಾಟೆಗಳು ಆಗುತ್ತವೆ. ಹಾಗಾಗಿ ಅದನ್ನು ಇಟ್ಟುಕೊಂಡು ವೈಯಕ್ತಿಕವಾಗಿ, ಸೃಜನಶೀಲ ನಿರ್ದೇಶಕನಾಗಿ ಕೆಲವೊಂದು ಅಂಶಗಳನ್ನು ಇಟ್ಟುಕೊಂಡು ಡಬಿಂಗ್ ಯಾಕೆ ಬೇಡ ಎಂಬುದನ್ನು ವಿವರಿಸಲು ಯತ್ನಿಸುತ್ತೇನೆ.

ನನ್ನ ಪ್ರಕಾರ ಸೃಜನಶೀಲವಾಗಿ ನಮ್ಮ ಸಿನಿಮಾ ಸೃಷ್ಟಿಯಾಗುತ್ತದೆ ಎಂಬುದನ್ನು ಒಪ್ಪಿಕೊಂಡರೆ, ಸೃಜನಶೀಲತೆ ಇಲ್ಲದ ಸೃಷ್ಟಿಯೊಂದಕ್ಕೆ ನಮ್ಮನ್ನು ನಾವೇ ಡಬಿಂಗ್‌ನಲ್ಲಿ ಒಳಗು ಮಾಡಿಕೊಳ್ಳುತ್ತೇವೆ. ಸೃಜನಶೀಲ ಶಕ್ತಿಗಳನ್ನು ಕೊಂದುಕೊಳ್ಳುತ್ತೇವೆ. ಸಾಂಸ್ಕೃತಿಕವಾದ ಒಂದನ್ನು ಅನಾವರಣ ಮಾಡುವುದು ಸೃಜನಶೀಲ ಸೃಷ್ಟಿಗಳನ್ನು ನಿರ್ಮಿಸುತ್ತದೆ.

ಅದರಲ್ಲಿ ಒಂದು ಅನನ್ಯತೆ ಇರುತ್ತದೆ. ಸಾವಿರಾರು ವರ್ಷಗಳ ಆ ಅನನ್ಯತೆಯನ್ನು ಅಲ್ಲಗಳೆಯುವುದಾಗಲಿ, ಧಕ್ಕೆ ಉಂಟು ಮಾಡುವುದಾಗಲಿ, ಕೀಳಾಗಿ ಕಾಣುವುದಾಗಲಿ ನಮ್ಮನ್ನು ನಾವು ಆತ್ಮಹತ್ಯೆಗೆ ಒಳಪಡಿಸಿಕೊಂಡಂತೆ.

ಡಬಿಂಗ್‌ನಿಂದಾಗಿ ಉಳಿದ ಮಾಧ್ಯಮಗಳೊಂದಿಗೆ ಇರುವ ಸಾವಯವ ಸಂಬಂಧ ನಿಧಾನವಾಗಿ ನಶಿಸಿ ಹೋಗುತ್ತದೆ. ಅದು ಸಾಹಿತ್ಯ, ಸಂಗೀತ, ನೃತ್ಯದೊಂದಿಗೆ ಇರುವ ಸಿನಿಮಾದ ಸಾವಯವ, ಆಂತರಿಕ ಸಂಬಂಧ. ಅದು ದಟ್ಟವಾಗಿ ಬೆಳೆಯಬೇಕು. ಅದನ್ನು ನಾವು ಕನ್ನಡದ ಚಹರೆ ಎನ್ನುತ್ತೇವೆ. ಆದರೆ ಅದು ನಿಧಾನವಾಗಿ ನಶಿಸಿ ಹೋಗುತ್ತದೆ, ಕಲಸು ಮೆಲೋಗರವಾಗುತ್ತದೆ. ಕೊನೆಗೆ ಯಾವುದು ಸರಿ, ಯಾವುದು ತಪ್ಪು ಎಂಬ ಗೊಂದಲಕ್ಕೆ ಬೀಳುತ್ತೇವೆ. ಈ ಗೊಂದಲದಿಂದಾಗಿ ಸಾವಯವ ಸಂಬಂಧಗಳ ಜೊತೆ ಜೊತೆಯಲ್ಲೇ ಸಾಮಾಜಿಕ, ಪ್ರಾಕೃತಿಕ, ಸಾಂಸ್ಕೃತಿಕ ಬದುಕು ನಶಿಸಿ ಹೋಗುತ್ತದೆ. ಕಾಲಗತಿಯಲ್ಲಿ ಆಗುವ ಪ್ರಕ್ರಿಯೆ ಇದು.

ನಾವು ತಮಿಳು, ತೆಲುಗು ಭಾಷೆಗಳ ಸಿನಿಮಾಗಳ ಬಗ್ಗೆ ಮಾತನಾಡುತ್ತೇವೆ. ಅಲ್ಲಿ ಆಗಿದ್ದು ಇಲ್ಲಿ ಯಾಕೆ ಆಗುವುದಿಲ್ಲ ಎಂದು ಕೇಳುತ್ತೇವೆ. ಒಂದು ಸಿನಿಮಾದ 1300 ಪ್ರಿಂಟ್‌ಗಳನ್ನು ಹಾಕಿಸುವ ಆ ಭಾಷೆಗಳ ಜೊತೆ ಕೇವಲ 100 ಪ್ರಿಂಟ್‌ಗಳನ್ನು ಕೂಡ ಹಾಕಲಾಗದ ನಮ್ಮ ಪರಿಸ್ಥಿತಿಯನ್ನು ಹೋಲಿಸುವುದೇ ತಪ್ಪು. ಹೀಗಾಗಿ ಮೊದಲು ಮಾರುಕಟ್ಟೆಯ ವಿಸ್ತರಣೆ ಹಾಗೂ ಆರ್ಥಿಕ ಸ್ಥಿರತೆ ಆಗುವವರೆಗೆ ಈ ನಮ್ಮ ಪುಟ್ಟ ಮಾರುಕಟ್ಟೆಯಲ್ಲೇ ನಮ್ಮ ಸೃಜನಶೀಲತೆಯೂ ಬೆಳೆಯಬೇಕು. ಬಹಳ ಮುಖ್ಯ ಅಂಶ ಎಂದರೆ ನಮ್ಮ ಕಲಾವಿದರು, ತಂತ್ರಜ್ಞರಿಗೆ ಕೆಲಸ ಇರುವುದಿಲ್ಲ. ಇದು ಅಕ್ಷರಶಃ ಸತ್ಯ.

ಒಂದು ಸಲ ನಾವು ಡಬಿಂಗ್ ಅನ್ನು ಒಪ್ಪಿಕೊಂಡುಬಿಟ್ಟರೆ ಅದು ನಿಧಾನವಾಗಿ ನಮ್ಮ ಪುಟ್ಟ ಮಾರುಕಟ್ಟೆಯನ್ನು ಕಬಳಿಸಿಬಿಡುತ್ತದೆ. ಇಂದಿನ ಜಾಗತೀಕರಣದ ಜಾಯಮಾನದಲ್ಲಿ ಅಂಕಲ್ ಚಿಪ್ಸ್‌ನ ಮಾರಾಟದ ಭರಾಟೆಯ ಎದುರು ಮಾರುಕಟ್ಟೆಯಲ್ಲಿದ್ದ ಅಜ್ಜಿ ಮಾಡಿದ ಚಿಪ್ಸ್ ಹಾಗೂ ಮಂಗಳೂರಿನ ಚಿಪ್ಸ್‌ಗಳು ಹೊರಕ್ಕೆ ಹೋದಂತೆ ಆಗುತ್ತದೆ. ಇಲ್ಲಿ ಇಂಗ್ಲಿಷ್ ಶಾಲೆಗಳಿಗೆ ಕಡಿವಾಣ ಹಾಕುವುದನ್ನು ಬಿಟ್ಟು ಕನ್ನಡ ಮಾಧ್ಯಮ ಹೀಗಾಯ್ತಲ್ಲ ಎಂದು ಹಲಬುವ ಸ್ಥಿತಿ ಎದುರಾಗಿದೆಯಲ್ಲ ಹಾಗೆ ಆಗುತ್ತದೆ. ಹಾಗಾಗದಿರುವಂತೆ ಕಲಾವಿದರ, ತಂತ್ರಜ್ಞರ ನಮ್ಮತನವನ್ನು ಅದಕ್ಕೂ ಮುಖ್ಯವಾಗಿ ಕನ್ನಡತನವನ್ನು ಉಳಿಸಿಕೊಳ್ಳುವುದು ತೀರಾ ಮುಖ್ಯ.

ನಮ್ಮ ಸಾಂಸ್ಕೃತಿಕ ನೆಲೆಗಳು ಬಿದ್ದುಹೋದರೆ ನಮ್ಮ ಅಸ್ತಿತ್ವವನ್ನು ಕಳೆದುಕೊಂಡಂತೆ. ಈಗ ಬದಲಾಗುತ್ತಿರುವ ಕಾಲಗತಿಯಲ್ಲಿ, ಜಾಗತೀಕರಣದ ಜಾಯಮಾನದಲ್ಲಿ 50ರ ದಶಕದಲ್ಲಿ ಇದ್ದಂತೆಯೇ 2010ರಲ್ಲೂ ನಾವಿದ್ದೇವೆ. ಅದೇ ಕನ್ನಡ ಪರ ಚಳವಳಿಯ ಬಾಗಿಲಲ್ಲೇ ಇನ್ನೂ ಇದ್ದೇವೆ. ಈ ಕ್ಷಣದ ಸತ್ಯವೆಂದರೆ ರೀಮೇಕ್ ಹೊಡೆತವನ್ನೇ ತಡೆದುಕೊಳ್ಳಲಾಗದ ಚಿತ್ರಸಂಸ್ಕೃತಿ, ಇನ್ನು ಡಬಿಂಗ್ ಹೊಡೆತವನ್ನು ತಡೆದುಕೊಳ್ಳುತ್ತದೆಯೇ?

ಇನ್ನು, ಸಾಹಿತ್ಯದ ಸಂದರ್ಭದಲ್ಲಿ ಶೇಕ್ಸ್‌ಪಿಯರ್, ಟಾಲ್‌ಸ್ಟಾಯ್ ಮುಂತಾದ ದೊಡ್ಡಲೇಖಕರ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸುವುದಿಲ್ಲವೇ? ಎಂಬ ಪ್ರಶ್ನೆಗಳನ್ನು ಕೇಳುತ್ತೇವೆ. ಆದರೆ, ಸಾಹಿತ್ಯ ಒಂದು ಸರಕಲ್ಲ, ಸಿನಿಮಾ ಒಂದು ಸರಕು.

ಆದ್ದರಿಂದ ದೃಶ್ಯ ಮಾಧ್ಯಮದ ಯಾವುದೇ ಚೌಕಟ್ಟುಗಳಲ್ಲಿ ಡಬಿಂಗ್ ಸಂಸ್ಕೃತಿ ನುಸುಳುವುದು ಬೇಡ. ನಮ್ಮ ಸಾಂಸ್ಕೃತಿಕ ಬದುಕು ಸದಾಕಾಲ ಭಾವನಾತ್ಮಕವಾಗಿಯೇ ಬೆಳೆದುಕೊಂಡು ಬಂದಿದೆ, ಆರ್ಥಿಕವಾಗಿ ಅಲ್ಲ. ದುಡ್ಡು ಮಾಡುತ್ತೇನೆ ಎಂದು ಸಾಹಿತ್ಯ ಬರೆಯುವುದಿಲ್ಲ, ನಾಟಕ ಆಡುವುದಿಲ್ಲ. ಹಾಗೆಂದು ಸಿನಿಮಾ ಮಾಡಿ ದುಡ್ಡು ಮಾಡುತ್ತೇನೆ ಎಂದರೆ ಆಗುವುದಿಲ್ಲ. ಆದರೆ ಈಗ ಆರ್ಥಿಕವಾದ ಪ್ರಶ್ನೆಯೇ ಮೂಲಭೂತವಾಗಿದೆ.

ಹೀಗಾಗಿ  ಇದು 60ರ ದಶಕದಲ್ಲಿ ಕರ್ನಾಟಕ ಏಕೀಕರಣದ ಸಮಯದಲ್ಲಿ ಗಾಯಕಿ ಎಂ.ಎಸ್. ಸುಬ್ಬುಲಕ್ಷ್ಮಿ ಅವರು ಕನ್ನಡ ಕೀರ್ತನೆಯನ್ನು ಹಾಡಲಿಲ್ಲ ಎನ್ನುವವರೆಗೆ ಹೋಯಿತು. ಆದರೆ ಈಗ ನಾವು ಗಾಯಕ ಸೋನು ನಿಗಂ ಅವರ ದನಿಯಲ್ಲಿ ಹಾಡಿಸುತ್ತೇವೆ. ಭೀಮಸೇನ ಜೋಷಿಯವರ ಮರಾಠಿ ಹಾಡುಗಳನ್ನು ಕೇಳಿ ಆನಂದಿಸುತ್ತೇವೆ. ಭಾವನಾತ್ಮಕವಾದ ಅಂಶಕ್ಕೆ ಸಂಬಂಧಿಸಿದ ಅವನ್ನು ಸರಿ ತಪ್ಪು ಎಂದು ಹೇಳುವುದು ಕಷ್ಟ. ಆರ್ಥಿಕವಾಗಿ ಸರಿ ಅನ್ನಿಸಬಹುದಾದ ಡಬಿಂಗ್ ಸಂಸ್ಕೃತಿಯ ಮೂಲ ಪ್ರಶ್ನೆ ಎಂದರೆ ನಾವ್ಯಾಕೆ ಕನ್ನಡದಲ್ಲಿ ಎಲ್ಲವನ್ನೂ ಹೇಳಬಾರದು, ನೋಡಬಾರದು ಎನ್ನುವುದು.

ಇದಕ್ಕೆ ಉತ್ತರ,  ಭೀಮಸೇನ ಜೋಷಿಯವರ ಹಾಡುಗಳನ್ನು ಮರಾಠಿಯಲ್ಲಿ ಕೇಳಿ ಖುಷಿ ಪಡಬಹುದಾದರೆ ಹ್ಯಾರಿಪಾಟರ್ ಸಿನಿಮಾಗಳನ್ನು ಇಂಗ್ಲಿಷ್‌ನಲ್ಲಿ ಯಾಕೆ ನೋಡಬಾರದು? ಉದಾಹರಣೆಗೆ ದೇವರಾಜ ಅರಸು ಕಾಲದಲ್ಲಿ ಗಡಿಗಳೆಲ್ಲ ಸುಸ್ಥಿರವಾಗಿವೆ ಎಂದು ಗಡಿ ರಕ್ಷಣಾ ಸಮಿತಿಯನ್ನು ವಿಸರ್ಜಿಸಲಾಯಿತು. ಈಗ ಗಡಿಗಳು ಹೇಗಿವೆ ಎಂಬುದು ಎಲ್ಲರಿಗೂ ಗೊತ್ತಿದೆ. ಈಗ ಈ ಗಡಿ ಅಭಿವೃದ್ಧಿ ಪ್ರಾಧಿಕಾರ ಮಾಡುವ ಪ್ರಮೇಯವೇ ಬರುತ್ತಿರಲಿಲ್ಲ. ಅದರ ಹಾಗೆಯೇ ಇಲ್ಲಿಯೂ ಆಗಬಹುದು.

ಹಾಲಿವುಡ್ ಸಿನಿಮಾಗಳ ಮೂಲಕ ಅನೇಕ ದೇಶಗಳ ಗತಿ ಸ್ಥಿತಿಯ ಬಗ್ಗೆ ಅವಲೋಕಿಸಿದಾಗ ನಮ್ಮ ಭಾಷೆ, ಸಂಸ್ಕೃತಿಯ ಉಳಿವಿಗಾಗಿ ನಡೆಸುತ್ತಿರುವ ಡಬಿಂಗ್ ವಿರುದ್ಧದ ಹೋರಾಟ ನ್ಯಾಯುತವಾಗಿದೆ ಎಂದು ನನಗೆ ಅನಿಸುತ್ತದೆ. ಜಾಗತಿಕರಣದ ಆರ್ಥಿಕ ಪ್ರಭಾವಗಳನ್ನು ಹಾಲಿವುಡ್ ಸಿನಿಮಾಗಳ ಮುಖಾಂತರ ನಮ್ಮದಾಗಿಸಿಕೊಳ್ಳಬೇಕಿಲ್ಲ. ಬ್ರೆಜಿಲ್, ಫ್ರಾನ್ಸ್, ಸ್ವೀಡನ್‌ನಲ್ಲಿ ಆಗಿರುವಂತೆ, ಇಂಗ್ಲಿಷ್ ಭಾಷೆ ಹೊರತಾಗಿರುವ ಯಾವುದೇ ಯುರೋಪಿಯನ್ ಭಾಷೆಗಳಿಗೆ ಆದ ಸ್ಥಿತಿ ಕನ್ನಡಕ್ಕೂ ಬರದಿರಲಿ ಎಂದು ಡಬಿಂಗ್‌ಅನ್ನು ವಿರೋಧಿಸಬೇಕಾಗಿದೆ.

ಆರ್ಥಿಕ ಸಿದ್ಧಾಂತದಲ್ಲಿ ಸಂರಕ್ಷಣಾ ಮಾದರಿ ಎಂಬುದು ಒಂದಿದೆ. ಆ ರೀತಿಯಲ್ಲಿ ನಾವು ನಮ್ಮ ನಾಡು ನುಡಿ ಸಂಸ್ಕೃತಿಯನ್ನು ನಾವು ಕಾಪಾಡಿಕೊಳ್ಳದೆ ಇನ್ಯಾರು ಕಾಪಾಡಿಕೊಳ್ಳಲು ಸಾಧ್ಯ? ಈ ಪ್ರಶ್ನೆಯೊಂದಿಗೆ ಡಬಿಂಗ್ ಬೇಡ ಎನ್ನುವ ಹಲವು ದನಿಗಳಲ್ಲಿ ನನ್ನ ದನಿಯೂ ಒಂದು. ನಮ್ಮ ಭಾಷೆಯ ಬೆಳವಣಿಗೆಯಲ್ಲಿ ಚಲನಚಿತ್ರ ಮಾಧ್ಯಮ ಅತ್ಯಂತ ಪ್ರಭಾವಶಾಲಿ ಎಂದು ನಿರೂಪಿಸುವವರಲ್ಲಿ ನಾನೂ ಒಬ್ಬ.
- ಟಿ.ಎಸ್. ನಾಗಾಭರಣ, ಚಿತ್ರನಿರ್ದೇಶಕ, ಕನ್ನಡ ಚಲನಚಿತ್ರ ಅಕಾಡೆಮಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT