ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾದ ಲೋಕದ ರಸನಿಮಿಷಗಳು

Last Updated 27 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

ಹಾಡು ಮತ್ತು ಪರಿಜ್ಞಾನ

ಹಿಂದೂಸ್ತಾನಿ ಸಂಗೀತ ಖಜಾನೆಯ ರಾಗಗಳನ್ನು ಅತ್ಯಂತ ಸರಳವಾಗಿ ಮತ್ತು ಪ್ರಭಾವಶಾಲಿಯಾಗಿ ಪ್ರಸ್ತುತ ಪಡಿಸಬಲ್ಲ ಗಾಯಕರೆಂದೇ ಖ್ಯಾತರಾದವರು ಪಂ.ಅನಂತ ಮನೋಹರ ಜೋಶಿ.

ಇವರು ಸಂಗೀತಲೋಕದಲ್ಲಿ `ಅಂತೂ ಬುವಾ~ ಎಂದೇ ಚಿರಪರಿಚಿತರು. ಹಾಡುವಾಗ ಗಾಯಕನ ಮುಖ ವಿಕಾರವಾಗಬಾರದು ಎಂಬ ಸಂಗೀತ ಶಾಸ್ತ್ರದ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಿದವರಲ್ಲಿ ಅಗ್ರಗಣ್ಯರು.

`ನಾನು ಉಸ್ತಾದ್ ರಹಿಮತ್‌ಖಾನರು ಹಾಡುವಾಗ ಅನೇಕಸಲ ತಂಬೂರಿ ಸಾಥಿಗೆ ಕುಳಿತಿದ್ದೇೀನೆ. ಅವರು ಮೂರು ಸಪ್ತಕಗಳಲ್ಲಿ ತಾನ್ ಹೊಡದರೂ ಅವರ ಅಂಗಾಂಗಗಳು ಒಂದಿಷ್ಟೂ ಚಲಿಸುತ್ತಿರಲಿಲ್ಲ. ತಾನ್‌ಗಳು ಕೇಳಿಸಬೇಕು, ಕಾಣಿಸಬಾರದು~ ಎನ್ನುತ್ತಿದ್ದ ಅವರು ಇದನ್ನೇ ನಂಬಿ ಅಂತೆಯೇ ಸಂಗೀತವನ್ನು ಆರಾಧಿಸಿದವರು.

1882ರಲ್ಲಿ ಔಂಧ್ ಸಂಸ್ಥಾನದ ಹಳ್ಳಿಯೊಂದರಲ್ಲಿ ಜನಿಸಿದ ಅನಂತ ಮನೋಹರ ಜೋಶಿ ತಮ್ಮ 11ನೇ ವಯಸ್ಸಿನಲ್ಲಿ ಸಂಗೀತವನ್ನು ಕಲಿಯಲಾರಂಭಿಸಿದರು. ನಾರಾಯಣಬುವಾ ಇವರ ಮೊದಲ ಗುರು.
 
ತಂದೆ ಮನೋಹರಬುವಾ ಕೂಡ ಸಂಗೀತಗಾರರು. ತಮ್ಮ ಭಕ್ತಿಗೀತೆಗಳಿಂದಾಗಿ ಮನೋಹರಬುವಾರ ಹೆಸರು ಆ ಭಾಗದಲ್ಲಿ ಜನಜನಿತವಾಗಿತ್ತು. ಅಂತೂಬುವಾ ಏಳನೆಯ ವಯಸ್ಸಿನವರಾಗಿರುವಾಗಲೇ ತಂದೆಯನ್ನು ಕಳೆದುಕೊಂಡರು.

ತಾಯಿಯ ಆಶ್ರಯದಲ್ಲಿ ಬೆಳೆದರು. ಮಿರಜಿಗೆ ಬಂದು ಅಲ್ಲಿ ಬಾಳಕೃಷ್ಣಬುವಾ ಈಚಲಕರಂಜೀಕರ್ ಅವರಲ್ಲಿ ಸಂಗೀತಾಧ್ಯಯನವನ್ನು ಕೈಕೊಂಡರು. ಒಮ್ಮೆ ಅಕಸ್ಮಾತ್ ಭೂಗಂಧರ್ವ ಉಸ್ತಾದ್ ರಹಿಮತ್ ಖಾನರಿಗೆ ತಂಬೂರಿ ಸಾಥ್ ಕೊಡುವ ಅವಕಾಶ ಲಭಿಸಿತು.

ಅಂತೂಬುವಾ ಕೊಡುತ್ತಿದ್ದ ತಂಬೂರಿ ಸಾಥ್ ಮತ್ತು ಸಹಗಾಯನ ರೆಹಮತ್‌ಖಾನರಿಗೆ ಇಷ್ಟವಾಯಿತು. ರೆಹಮತ್ ಖಾನರ ಆಶ್ರಯದಾತರಾಗಿದ್ದ ಛತ್ರೆಯವರು ಕೆಲವು ಕಾಲ ರೆಹಮತ್‌ಖಾನರ ಜೊತೆಗಿದ್ದರೆ ಸಂಗೀತದ ಜ್ಞಾನ ವೃದ್ಧಿಸಬಹುದೆಂದು ಸೂಚಿಸಿದರು.

ತಾವು ಸ್ವತಃ ಹಿರಿಯಗಾಯಕರಾಗಿದ್ದರೂ, ಅಂತೂಬುವಾ ತಮ್ಮ ಜ್ಞಾನವೃದ್ಧಿಗಾಗಿ ರೆಹಮತ್ ಖಾನರೊಂದಿಗೆ ತಂಬೂರಿ ಸಾಥಿದಾರರೆಂದು ನಿಯುಕ್ತರಾದರು. ಅವರಿಂದ ಪರೋಕ್ಷವಾಗಿ ಸಂಗೀತದ ಹಲವು ಸಂಗತಿಗಳನ್ನು ತಿಳಿದಕೊಂಡು ಪಂಡಿತರೆನಿಸಿದರು. ಖಾನದಾನಿ ಹಾಡುಗಾರಿಕೆ ಅವರ ವಿಶೇಷತೆಯಾಗಿತ್ತು.

1947ರಲ್ಲಿ ಆಕಾಶವಾಣಿ ಮುಂಬೈ ಕೇಂದ್ರದಿಂದ ಅವರ ಹಾಡುಗಾರಿಕೆ ಪ್ರಸಾರವಾದಾಗ (ಅವರಿಗಾಗ 66ರ ಪ್ರಾಯ) ಸಮಸ್ತ ಸಂಗೀತಲೋಕವೇ ನಿಬ್ಬೆರಗಾಗಿ ಕೇಳಿತು. ಇಂಥ ಖಾನದಾನಿ ಹಾಡುಗಾರಿಕೆ ಈಗೆಲ್ಲಿ ಎಂದು ಪಂಡಿತರು ಚರ್ಚಿಸುವಷ್ಟು ಪ್ರಭಾವಶಾಲಿಯಾಗಿತ್ತು ಅವರ ಹಾಡುಗಾರಿಕೆ.

ತಮ್ಮ ಇಳಿವಯಸ್ಸಿನಲ್ಲಿ ಅಂತೂಬುವಾ ಮುಂಬೈಯಲ್ಲಿ ಸಂಗೀತ ಶಿಕೋಣಿಗಳನ್ನು ನಡೆಸುತ್ತಿದ್ದರು. ಒಮ್ಮೆ ಅನಾರೋಗ್ಯದ ನಿಮಿತ್ತ ಅಂತೂಬುವಾ ಹಾಸಿಗೆ ಹಿಡಿದಾಗ ಕೆಲವರು ಅವರನ್ನು ಕಾಣಲು ಬಂದರು. ಅವರಲ್ಲೊಬ್ಬರು ಅಂತೂಬುವಾ ಮಲಗಿದ ಕೋಣೆ ಗಲೀಜಾಗಿರುವುದನ್ನು ಕಂಡು ಸ್ವಯಂಸ್ಫೂರ್ತಿಯಿಂದ ಅದನ್ನು ಸ್ವಚ್ಛ ಮಾಡಲು ತೊಡಗಿದರು.
 
ಹಾಗೆ ಸ್ವಚ್ಛಗೊಳಿಸುತ್ತಿರುವಾಗ ಅವರಿಗೆ ಮೂಲೆಯಲ್ಲಿ ಒಂದು ಪುಸ್ತಕ ಕಾಣಿಸಿತು. ಗುಡಿಸುವುದನ್ನು ಮರೆತು ಅವರು ಹಾಗೆಯೇ ನೋಡುತ್ತಾ ನಿಂತುಬಿಟ್ಟರು. ತಾವು ಕೈಕೊಂಡ ಕಾರ್ಯವೇ ಅವರಿಗೆ ಮರೆತು ಹೋಗಿತ್ತು!

ಕೆಲವು ದಿನಗಳ ತರುವಾಯ ಅಂತೂಬುವಾ ಹುಷಾರಾದರು. ಆದರೆ ಆ ದಿನ ಪುಸ್ತಕವನ್ನು ನೋಡುತ್ತ ಮೈಮರೆತ ಯುವಕನಿಗೆ ಒಂದು ಪ್ರಶ್ನೆ ಕಾಡತೊಡಗಿತ್ತು. ಆ ಪುಸ್ತಕದಲ್ಲಿ ಅಂತೂಬುವಾ ಅನೇಕ ಧೃಪದಗಳನ್ನು ಬರೆದುಕೊಂಡಿದ್ದರು.

ಕೇವಲ ಖಯಾಲ್ ಹಾಡುವ ಅಂತೂಬುವಾ ಧೃಪದಗಳನ್ನು ಏಕೆ ಬರೆದುಕೊಂಡಿದ್ದಾರೆ? ಅಂತೂಬುವಾ ಹುಷಾರಾಗಿರುವ ಸಂಗತಿಯನ್ನು ತಿಳಿದ ಆ ಯುವಕ ಮತ್ತೆ ಅವರಲ್ಲಿಗೆ ಬಂದು-

`ಬುವಾ, ನೀವು ಖಯಾಲ್ ಮಾತ್ರ ಹಾಡುತ್ತೀರಿ. ಆದರೆ ನಿಮ್ಮ ವಹಿಯಲ್ಲಿ ಧೃಪದ್‌ಗಳನ್ನೂ ಬರೆದುಕೊಂಡಿದ್ದೀರಲ್ಲ?~ ಎಂದು ಕೇಳಿದ.
ಅಂತೂಬುವಾ ನಗುತ್ತಾ ಹೇಳಿದರು-

`ನಾನು ಮೊದಲ ಸಲ ಮಥುರೆಗೆ ಹೋದಾಗ ಕೆಲವು ದಿನ ಅಲ್ಲಿದ್ದೆ. ಆ ಭೇಟಿಗೆ ಎರಡು ಉದ್ದೇಶಗಳಿದ್ದವು. ಮೊದಲನೆಯದು ನನ್ನ ಹಿಂದಿಯನ್ನು ಸುಧಾರಿಸಿಕೊಳ್ಳುವುದು, ಎರಡನೆಯದು ಧೃಪದ ಕಲಿಯುವುದು. ನಾನು ಅಲ್ಲಿ ಧೃಪದ ಕಲಿತಿದ್ದೇನೆ~.

ಆ ತರುಣ ಅವಾಕ್ಕಾದ. ಅಂತೂಬುವಾ ಮುಂದುವರಿಸಿದರು. `ನಾವು ಕೇವಲ ಹಾಡಿದರೆ ಸಾಲುವುದಿಲ್ಲ. ನಾವು ಏನು ಹಾಡುತ್ತೇವೆಯೋ ಅದಕ್ಕಿಂತ ಹೆಚ್ಚಿನ ಸಂಗೀತಜ್ಞಾನ ನಮಗಿರಬೇಡವೆ?~

ಆ ತರುಣ ಅವರಿಗೆ ನಮಸ್ಕರಿಸಿ ಅಲ್ಲಿಂದ ಎದ್ದುಹೋದ. ಬುವಾರ ಮಾತು ಅವನ ಮನಸ್ಸಿಗೆ ನಾಟಿತು. ಆ ಯುವಕ ಡಾ.ಅಶೋಕ ರಾನಡೆ. ಇಂದು ಅವರೊಬ್ಬ ಪ್ರಖ್ಯಾತ ಸಂಗೀತಗಾರ ಹಾಗೂ ಸಂಗೀತವಿಮರ್ಶಕ. ಭಾರತೀಯ ಸಂಗೀತದ ಕುರಿತು ಅನೇಕ ಮೌಲಿಕ ಗ್ರಂಥಗಳನ್ನು ಮರಾಠಿಯಲ್ಲಿ ಬರೆದಿದ್ದಾರೆ.

ನಾವು ಹಾಡುವುದಕ್ಕಿಂತ ಹೆಚ್ಚಿನ ಜ್ಞಾನ ನಮಗಿರಬೇಕು ಎಂಬ ಪರಿಜ್ಞಾನ ಎಲ್ಲ ಸಾಧಕರಿಗೂ ಅಗತ್ಯವಲ್ಲವೇ? 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT