ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾದ ಲೋಕದ ರಸನಿಮಿಷಗಳು: ಭಾವನೆಯೂ... ಸಂಭಾವನೆಯೂ...

Last Updated 26 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಪಂ.ಶಿವರಾಮಬುವಾ ವಝೆ ಅವರದು ಹಿಂದೂಸ್ತಾನಿ ಸಂಗೀತದಲ್ಲಿ ಬಹುದೊಡ್ಡ ಹೆಸರು. ಪಂ.ರಾಮಕೃಷ್ಣ ಬುವಾರಿಗೆ ತಕ್ಕ ಮಗ ಎನಿಸಿದ್ದ ಅವರ ಅಪ್ರತಿಮ ಹಾಡುಗಾರಿಕೆಗೆ ಮಾರುಹೋಗದವರೇ ಇರಲಿಲ್ಲ! ಕುಮಾರ ಗಂಧರ್ವ, ಭೀಮಸೇನ ಜೋಶಿ ಬೆಳಗಾವಿಗೆ ಬಂದರೆ ತಪ್ಪದೇ ಶಿವರಾಮ ಬುವಾರನ್ನು ಭೆಟ್ಟಿಯಾಗುತ್ತಿದ್ದರು.

ಶಿವರಾಮ ಬುವಾ ಬಲು ಬೇಶಿಸ್ತಿನ ಮನುಷ್ಯ. ಸರಿಯಾಗಿ ಬಟ್ಟೆ ತೊಡುತ್ತಿರಲಿಲ್ಲ. ಅವರ ಮನೆಯಲ್ಲಿದ್ದ ಸಾಮಾನುಗಳು ಸದಾ ಅಸ್ತವ್ಯಸ್ತವಾಗಿ ಹರಡಿಕೊಂಡಿರುತ್ತಿದ್ದುವು. ಮೂಲೆಯೊಂದರಲ್ಲಿ ದೊಡ್ಡದಾದ ತಂಬೂರಿಯನ್ನು ಆನಿಸಿ ಇಟ್ಟಿರುತ್ತಿದ್ದರು. ಮನೆಯಲ್ಲಿದ್ದ ನೀರಿನ ತಂಬಿಗೆ, ಹಾಸಿಗೆ, ಹರಕು ಗಾದಿ, ತಲೆದಿಂಬು ಇವುಗಳ ಮೇಲೆ ಬೆಳಗಾವಿಯ ಕೆಂಪುದೂಳು ಸದಾ ಆವರಿಸಿರುತ್ತಿತ್ತು. ಯಾರಾದರೂ ಅತಿಥಿಗಳು ಬಂದರೆ ಕೂರಲೆಂದು ಜಮಖಾನೆಯೊಂದನ್ನು ಹಾಸಿರುತ್ತಿದ್ದರು. ಅದು ಅಲ್ಲಲ್ಲಿ ಹರಿದಿರುತ್ತಿತ್ತು, ಅದರ ಮೇಲೂ ಕೆಮ್ಮಣ್ಣಿನ ದೂಳು ಕಾಣುತ್ತಿತ್ತು. ಆದರೆ ಇದಾವುದನ್ನೂ ಗಮನಿಸದೆ ಕುಮಾರ ಗಂಧರ್ವ, ಭೀಮಸೇನ ಜೋಶಿಯಂಥವರು ಅವರ ಮನೆಗೆ ಬಂದು ಅವರೊಡನೆ ಮನಸಾರೆ ಹರಟುತ್ತಿದ್ದರು.

ಅವರು ತೊಡುತ್ತಿದ್ದ ಬಟ್ಟೆಯೂ ಅಷ್ಟೇ- ಕೆಮ್ಮಣ್ಣಿನ ವರ್ಣಕ್ಕೆ ತಿರುಗಿದ ಬಿಳಿ ಪಂಚೆ, ದೇಹಕ್ಕೆ ಸಾಕಷ್ಟು ದೊಡ್ಡದೆನಿಸುವ ಕುರ್ತಾ, ತಲೆಯ ಮೇಲೆ ಅಸ್ತವ್ಯಸ್ತವಾಗಿ ಕುಳಿತಿರುತ್ತಿದ್ದ ಖಾದಿ ಗಾಂಧಿ ಟೊಪ್ಪಿಗೆ! ಇಂಥ ವೇಷದಲ್ಲಿಯೇ ಅವರು ತಿರುಗುತ್ತಿದ್ದರು. ನೋಡಲು ಭಿಕಾರಿಯಂತೆ ಕಾಣುತ್ತಿದ್ದ ಈ ಅಪ್ರತಿಮ ಗಾಯಕ ವಿರಾಗಿಯ ಜೀವನವನ್ನು ಬದುಕುತ್ತಿದ್ದ. ಶಿವರಾಮಬುವಾ ಶಾಲೆ ಕಲಿತವರಲ್ಲ. ಸಂಗೀತವೊಂದುಳಿದು ಬೇರೇನೂ ಅವರಿಗೆ ಬರುತ್ತಿರಲಿಲ್ಲ. ಅದೇ ಅವರ ಬದುಕಿನ ದಾರಿಯಾಗಿತ್ತು.

ಬುವಾ ಅವರು ಪ್ರಾಮಾಣಿಕತೆಗೆ ಇನ್ನೊಂದು ಹೆಸರು ಕೂಡ. ವಿನಾಕಾರಣ ಒಂದು ನಯಾಪೈಸೆಯನ್ನೂ ಹೆಚ್ಚಿಗೆ ಪಡೆಯುತ್ತಿರಲಿಲ್ಲ. ಯಾರ ಮೇಲೂ ತನಗೆ ಬರಬೇಕಾದ ದುಡ್ಡನ್ನು ಬಿಡುತ್ತಿರಲಿಲ್ಲ. ಒಂದು ಸಣ್ಣ ಚೀಜ್ ಹೇಳಿಕೊಡಬೇಕಾದರೂ ಕನಿಷ್ಠ ಒಂದು ಪ್ಲೇಟ್ ಮಿರ್ಚಿಭಜಿಯನ್ನಾದರೂ ಕೊಡಿಸಬೇಕೆಂಬ ಅಪೇಕ್ಷೆಯುಳ್ಳ ಆಸಾಮಿ!

ಒಂದು ದಿನ, ಅವರ ಕಾರ್ಯಕ್ರಮ ಮುಂಬೈನ ಟ್ರಿನಿಟಿಹಾಲ್‌ನಲ್ಲಿ  ಆಯೋಜಿತವಾಗಿದೆ ಎಂಬ ಪತ್ರ ಬಂತು. ಅನಕ್ಷರಸ್ಥರಾದ್ದರಿಂದ ಅವರಿಗೆ ಓದಲು ಬರುತ್ತಿರಲಿಲ್ಲ. ಅದನ್ನವರು ತೆಗೆದುಕೊಂಡು ನೇರವಾಗಿ ವಿಜಾಪುರೆಯವರ ಬಳಿಗೆ ಬಂದರು. ವಿಜಾಪುರೆಯವರು ಅದರಲ್ಲಿದ್ದ ಮಜಕೂರನ್ನು ಓದಿ ಹೇಳಿದರು. ಪಂಡಿತ ಶಿವರಾಮ ಬುವಾರ ನಾಲ್ಕು ಕಾರ್ಯಕ್ರಮಗಳು ಟ್ರಿನಿಟಿ ಕ್ಲಬ್ ವತಿಯಿಂದ ಮುಂಬೈಯಲ್ಲಿ ಆಯೋಜಿತವಾಗಿವೆ ಎಂದೂ, ಪ್ರತಿಯೊಂದು ಕಾರ್ಯಕ್ರಮಕ್ಕೆ ಎರಡೂವರೆ ನೂರು ರೂಪಾಯಿಗಳ ಬಿದಾಗಿ ನೀಡಲಾಗುವುದೆಂದೂ ಅದರಲ್ಲಿ ಬರೆಯಲಾಗಿತ್ತು. ಪತ್ರದಲ್ಲಿಯ ಮಜಕೂರನ್ನು ಕೇಳಿಸಿಕೊಂಡ ಶಿವರಾಮಬುವಾ ಎರಡು ನಿಮಿಷ ವಿಚಾರಮಗ್ನರಾದರು. ತರುವಾಯ ವಿಜಾಪುರೆಯವರಿಗೆ ಹೇಳಿದರು-

‘ಮಾಸ್ತರ್, ಒಂದ ಕೆಲಸಾ ಮಾಡರಿ. ನನ್ನ ಹಾಡಿಗೆ ಎರಡೂವರಿ ನೂರಂದ್ರ ಭಾಳ ಆತು. ಬರೇ ಎರಡು ನೂರು ಸಾಕು. ಹಂಗಂತ ಪತ್ರಾ ಬರದ ಬಿಡರಿ’.

ಈ ಮಾತು ಕೇಳಿ ವಿಜಾಪುರೆಯವರು ತಲೆಗೆ ಕೈಹಚ್ಚಿ ಕುಳಿತರು. ಎಲ್ಲ ಗಾಯಕರೂ ಹೆಚ್ಚಿನ ಬಿದಾಗಿಯನ್ನು ಅಪೇಕ್ಷಿಸುತ್ತಿದ್ದರೆ ಶಿವರಾಮಬುವಾ ತಮಗೆ ಕೊಡುತ್ತೇವೆಂದ ಹಣ ಹೆಚ್ಚಾಯಿತೆಂದು ಹೇಳುತ್ತಿದ್ದಾರೆ! ವಾಸ್ತವವಾಗಿ, ಅವರ ಸ್ಥಾನಕ್ಕೆ ತಕ್ಕಂತೆ ಅದು ಯಾವ ಮಹತ್ತರ ಮೊತ್ತವೂ ಆಗಿರಲಿಲ್ಲ. ಆದರೆ ಇದನ್ನು ಕೇಳುವ ಸ್ಥಿತಿಯಲ್ಲಿ ಶಿವರಾಮಬುವಾ ಇರಲಿಲ್ಲ. ವ್ಯವಹಾರ ಜ್ಞಾನವೇ ಇಲ್ಲದ ಶಿವರಾಮಬುವಾರ ಜೊತೆಗೆ ವಾದ ಮಾಡುವುದರಲ್ಲಿ ಅರ್ಥವಿಲ್ಲವೆಂದು ವಿಜಾಪುರೆ ಮಾಸ್ತರರು ಪತ್ರ ಬರೆದುಕೊಡುವುದಾಗಿ ಹೇಳಿ ಅಲ್ಲಿಂದ ಎದ್ದು ಬಂದರು.

‘ನನಗೆ ನೀಡುತ್ತಿರುವ ಸಂಭಾವನೆ ಹೆಚ್ಚಾಯಿತು’ ಎಂದು ಭಾವಿಸಿದ ಕಲಾವಿದ ಬಹುಶಃ ಶಿವರಾಮಬುವಾ ಒಬ್ಬರೇ ಇರಬೇಕು. ಇದಕ್ಕೆ ಪ್ರತಿಯಾಗಿ, ತಮಗೆ ಕೊಟ್ಟ ಹಾಗೂ ಕೊಡುತ್ತಿರುವ ಸಂಭಾವನೆ ಕಡಿಮೆ ಆಯಿತು ಎಂದು ಜಗಳವಾಡಿದ ಸಾವಿರಾರು ಪ್ರಸಂಗಗಳನ್ನು ಸಂಗೀತಲೋಕ ತನ್ನ ಇತಿಹಾಸದ ಪುಟಗಳಲ್ಲಿ ದಾಖಲಿಸಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT