ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾದ ಸಾಧಕ ಶೇಷಗಿರಿ

Last Updated 4 ನವೆಂಬರ್ 2011, 19:30 IST
ಅಕ್ಷರ ಗಾತ್ರ

ತ್ಯಾಗರಾಜನಗರದ ಶ್ರೀ ಗುರು ಸಮರ್ಥ ಸಂಗೀತ ವಿದ್ಯಾಲಯ ಭಾನುವಾರ 9ನೇ ಸಂಗೀತೋತ್ಸವ ಹಾಗೂ ಖ್ಯಾತ ತಬಲಾ ವಾದಕ ಪಂಡಿತ್ ಶೇಷಗಿರಿ ಹಾನಗಲ್ ಅವರಿಗೆ ಸನ್ಮಾನ ಹಮ್ಮಿಕೊಂಡಿದೆ.

ಪಂಡಿತ್ ಶೇಷಗಿರಿ ಹಾನಗಲ್ ರಾಜ್ಯದ ಹೆಸರಾಂತ ತಬಲಾ ವಾದಕರು. ಆದರೆ, 90 ವರ್ಷದ ಈ ಹಿರಿಯರ ಖ್ಯಾತಿ ರಾಜ್ಯಕ್ಕೆ ಮಾತ್ರ ಸೀಮಿತವಲ್ಲ. ಗಾಯನ ಗಂಗೆ ಡಾ. ಗಂಗೂಬಾಯಿ ಹಾನಗಲ್ ಅವರಿಗೆ ನಿರಂತರವಾಗಿ ಸಾಥ್ ನೀಡಿದ ಶ್ರೇಯಸ್ಸು ಅವರಿಗೆ ಸೇರುತ್ತದೆ.

ದೇಶದ ಸರ್ವಶ್ರೇಷ್ಠ ಗಾಯಕರುಗಳಾದ ಸವಾಯಿ ಗಂಧರ್ವ, ಭೀಮಸೇನ ಜೋಶಿ, ಮಲ್ಲಿಕಾರ್ಜುನ ಮನ್ಸೂರ, ಬಸವರಾಜ ರಾಜಗುರು, ಗುರುರಾವ ದೇಶಪಾಂಡೆ, ಸಂಗಮೇಶ್ವರ ಗುರವ,

ಪಂಡಿತ ಜಸರಾಜ್, ಮಣಿರಾಮ ಕೃಷ್ಣರಾವ, ಶಂಕರ ಪಂಡಿತ, ಶ್ರೀಕೃಷ್ಣ ರಾತಂಜನಕರ, ನಿವತ್ತಿಬುವಾ ಸರನಾಯಕ, ಸುರೇಶಬಾಬು ಮಾನೆ, ಶರಶ್ಚಂದ್ರ ಆರೋಳಕರ, ದಿನಕರ ಕಾಯ್ಕಿಣಿ, ರಾಮರಾವ ನಾಯಕ, ಎಂ. ಆರ್ ಗೌತಮ, ಎ. ಕಾನನ, ವಿ. ಎ. ಕಾಗಲಕರ, ಹಿರಾಬಾಯಿ ಬಡೋದೆಕರ, ಗಿರಿಜಾದೇವಿ, ಕೃಷ್ಣ ಹಾನಗಲ್, ಲಕ್ಷ್ಮೀಶಂಕರ, ಸುಲೋಚನಾ ಬ್ರಹಸ್ಪತಿ, ಮಾಲವಿಕಾ ಕಾನನ, ಮೀರಾ ಬ್ಯಾನರ್ಜಿ,
 
ಮಾಣಿಕ ವರ್ಮಾ, ಮಾಲಿನಿ ರಾಜೂರ್‌ಕರ ಹೀಗೆ ಅನೇಕರಿಗೆ ತಬಲಾ ಸಾಥ್ ನೀಡಿದ ಹಿರಿಮೆಯೂ ಅವರಿಗಿದೆ.

ಪಂಡಿತ್ ಶೇಷಗಿರಿ ಅವರ ತಬಲಾ ಸೋಲೊ ಮುಂಬೈ ರೇಡಿಯೋದಲ್ಲಿ ಮೊದಲ ಸಲ 1949ರಲ್ಲಿ ಪ್ರಸಾರವಾಯಿತು.

ಆಕಾಶವಾಣಿಯ 3ನೇ ರಾಷ್ಟ್ರೀಯ ಸಂಗೀತ ಸಮ್ಮೇಳನದಲ್ಲಿ ಇವರು ನೀಡಿದ ಕಾರ್ಯಕ್ರಮ ಈಗಲೂ ಪ್ರಸಾರವಾಗುತ್ತಿದೆ. ಇವರು ದಿ. ಇಂದಿರಾ ಗಾಂಧಿ ಹೆಸರಿನಲ್ಲಿ 9/1.5 ಮಾತ್ರೆಯ ಇಂದಿರಾ ತಾಲವೆಂಬ ತಾಲ್ ರಚಿಸಿ ಪುಣೆಯ ಸಂಗೀತ ಸಮ್ಮೇಳನದಲ್ಲಿ ನುಡಿಸಿದ್ದರು.

ತಂದೆ ಮತ್ತು ಚಿಕ್ಕಪ್ಪನವರಲ್ಲಿ ತಬಲಾ ವಾದನದ ಪ್ರಾರಂಭಿಕ ಪಟ್ಟುಗಳನ್ನು ಕಲಿತ ಇವರು, ಮುಂಬಯಿಯ ಪಂಡಿತ್ ನಾರಾಯಣರಾವ ಇಂದುಕರ (ಇವರು ಉಸ್ತಾದ ಜಾಹಾಂಗೀರ ಖಾನ್ ಸಾಹೇಬರ ಶಿಷ್ಯರು) ಹಾಗೂ ಪಂಡಿತ್ ಲಾಲಜಿ ಗೋಖಲೆ (ಇವರು ಉಸ್ತಾದ ಅಹಮದಜಾನ್ ತಿರಖವಾ ಖಾನ ಸಾಹೇಬರ ಶಿಷ್ಯರು) ಇವರಲ್ಲಿ ತಬಲಾ ಕಲಿತು ಪರಿಪೂರ್ಣತೆ ಸಾಧಿಸಿದರು.

ಖ್ಯಾತ ತಬಲಾ ವಾದಕರಾದ ರವೀಂದ್ರ ಯಾವಗಲ್, ಸೂರಜ ಪುರಂದರ, ಎಂ. ನಾಗೇಶ, ಉದಯರಾಜ ಕರ್ಪೂರ, ಅಜಯ ಹಾನಗಲ್, ಯಾತ್ರಿಕ ಕೆ. ಸ್ವಾಮಿ, ಮಧಕರ ಮಲಯನೂರ, ದಿ. ರಾಮಚಂದ್ರ ಉಪಾಧ್ಯ, ವಿನಾಯಕ ಪಾಟೀಲ, ರಮೇಶ ಜೋಶಿ, ಪ್ರಕಾಶ ದೇಶಪಾಂಡೆ, ಶ್ರೀಪಾದ ಮುಳಗುಂದ, ಸೋಮಶೇಖರ ಹೊಳಗುಂದಿ ಇವರೆಲ್ಲ ಶೇಷಗಿರಿ ಹಾನಗಲ್ ಅವರ ಶಿಷ್ಯರು.

ಇವರ ಅನುಭವ ಮತ್ತು ಪ್ರತಿಭೆಗೆ ಮನ್ನಣೆ ಸಲ್ಲಿಸುವಂತೆ ರಾಜ್ಯ ಸರ್ಕಾರ 1992ರಲ್ಲಿ ರಾಜ್ಯೋತ್ಸವ ಪ್ರಶಸ್ತಿಯನ್ನು, 1999ರಲ್ಲಿ ಪುರಂದರ ಪ್ರಶಸ್ತಿಯನ್ನು ಕೊಟ್ಟು ಗೌರವಿಸಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT