ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾದಲೋಲ `ನಟೋರಿಯಸ್'

ಪಂಚರಂಗಿ
Last Updated 12 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

`ಹಾಡೆ ಹಾದಿಯ ತೋರಿತು'... ನಿರ್ದೇಶಕ ಜೀ ಜೀ ಅವರಿಗೆ ಒಪ್ಪುವ ಮಾತಿದು. ನಿರ್ಮಾಪಕ ಬಿ.ಎನ್. ಗುರುರಾಜ್ ಅವರ ಬಳಿಗೆ ಕತೆ ಹಿಡಿದು ಹೋದರು ಜೀ ಜೀ. ಅದಾಗಲೇ ಮತ್ತೊಂದು ಕತೆ ಬರೆದಿದ್ದ ನಿರ್ಮಾಪಕರು ಮೊದಲು ತಮ್ಮ ಕತೆಯನ್ನು ಚಿತ್ರ ಮಾಡೋಣ ಎಂದರು. ಗೀತ ರಚನೆಕಾರರಾಗಿ ಗುರುತಿಸಿಕೊಂಡಿದ್ದ ಜೀ ಜೀ ಅವರಿಗೆ ಹಾಡು ಬರೆಯುವಂತೆ ಒತ್ತಾಯಿಸಿದರು. ಅಂತೆಯೇ ಜೀ ಜೀ ಮೊದಲು ಒಂದು ಹಾಡು ಬರೆದರು. ಹಾಡಿಗೆ ಮನಸೋತ ನಿರ್ಮಾಪಕರು ಮತ್ತೊಂದು ಗೀತೆ ಬರೆಯುವಂತೆ ಕೋರಿದರು. ಎರಡನೇ ಗೀತೆ ಬರೆದುಕೊಂಡು ಹೋದಾಗ ಚಿತ್ರವನ್ನು ನೀವೇ ನಿರ್ದೇಶಿಸಿ ಎಂದುಬಿಟ್ಟರು. ಪರಿಣಾಮ ಜೀ ಜೀ `ನಟೋರಿಯಸ್' ಚುಕ್ಕಾಣಿ ಹಿಡಿದರು.

ಜೀ ಜೀ ಅವರ ಪೂರ್ಣ ಹೆಸರು ಗೋವಿಂದೇಗೌಡ. ಕಳೆದ ಒಂದು ದಶಕದಿಂದ ನಾಟಕ, ಸಿನಿಮಾ ಎರಡೂ ಕ್ಷೇತ್ರಗಳಲ್ಲಿ ಸಕ್ರಿಯರಾದವರು. ವಿ. ಮನೋಹರ್ ಅವರ ಗರಡಿಯಲ್ಲಿ ಪಳಗುತ್ತಲೇ ಕೆಲ ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ದುಡಿದರು. ಈಗ ಅವರು ಗೋವಿಂದೇಗೌಡ ಅಲ್ಲ. ಸಿಂಪಲ್ಲಾಗಿ ಜೀ ಜೀ. ಅಂದಹಾಗೆ ಚಿತ್ರದಲ್ಲಿರುವ ಐದು ಹಾಡುಗಳಿಗೂ ಇವರದೇ ಸಾಹಿತ್ಯವಿದೆ. ಇವುಗಳಲ್ಲಿ ಒಂದು ಐಟಂ ಗೀತೆ, ಮತ್ತೊಂದು ರಾಜಕಾರಣ ಕುರಿತ ಹಾಡು.

ಮೈಕು ಕತೆ ಬರೆದಿದ್ದ ನಿರ್ಮಾಪಕ ಗುರುರಾಜ್‌ರತ್ತ ಹೊರಳಿತು. ವಠಾರವೊಂದರಲ್ಲಿ ಚಿತ್ರದ ಕತೆ ಸಾಗುತ್ತದೆ. ರಾಕೇಶ್ ಚಿತ್ರದ ನಾಯಕ ನಟರಾದರೂ ಇನ್ನೂ ನಾಲ್ಕು ಮಂದಿ ಅವರ ಗೆಳೆಯರಾಗಿ ನಟಿಸುತ್ತಿದ್ದಾರೆ. ಎಲ್ಲರದೂ ಕೀಟಲೆ ಸ್ವಭಾವ. ಅಂಥ ವಠಾರದಲ್ಲಿ ರಾಜಕಾರಣಿಗಳೂ ಇರುತ್ತಾರೆ. ಆಗ ನಾಯಕಿಯ ಪ್ರವೇಶವಾಗುತ್ತದೆ. ಆಕೆ ಯಾರನ್ನು ಮದುವೆಯಾಗುತ್ತಾಳೆ ಎಂಬ ಕುತೂಹಲದ ಜೊತೆಗೆ ನಟೋರಿಯಸ್ ಎಂಬ ಹಣೆಪಟ್ಟಿ ನಾಯಕನಿಗೇಕೆ ಬಂತು ಎಂದು ಅರ್ಥ ಮಾಡಿಕೊಳ್ಳಲು ಚಿತ್ರಮಂದಿರಕ್ಕೆ ಬರಬೇಕಂತೆ.

ಈ ಸಂದರ್ಭದಲ್ಲಿ ರಾಕೇಶ್ ಅವರಿಗೆ ತಮ್ಮ ಮೊದಲ ಚಿತ್ರ `ಜೋಶ್' ನೆನಪಾಯಿತು. ಅಲ್ಲಿಯಂತೆ ಇಲ್ಲಿಯೂ ಅವರು ಗೆಳೆಯರೊಂದಿಗೆ ಜೋಶ್‌ನಲ್ಲಿ ನಟಿಸಿದ್ದಾರಂತೆ. ಚಿತ್ರದ `ಕನ್ನಡದ ಶೃಂಗಾರಿಯೇ' ಹಾಡು ಹೇಳಲು ಸೋನು ನಿಗಮ್ ಒಪ್ಪದ ಪ್ರಸಂಗವೂ ಇದೇ ವೇಳೆ ಪ್ರಸ್ತಾಪವಾಯಿತು. ಕರ್ನಾಟಕ ಶಾಸ್ತ್ರೀಯ ಸಂಗೀತ ಶೈಲಿಯಲ್ಲಿ ಹಾಡಲು ಸೋನು ಒಪ್ಪಿದ್ದರು. ಆದರೆ ಸಂಗೀತ ನಿರ್ದೇಶಕ ಎಸ್.ಆರ್. ಪ್ರಭು ಅವರಿಗೆ ಸಮಕಾಲೀನ ಶೈಲಿ ಬೆರೆತ ಶಾಸ್ತ್ರೀಯ ಸಂಗೀತ ಇಷ್ಟವಾಗಿತ್ತು. ಕಡೆಗೆ ಸೋನು ಬದಲಿಗೆ ಅರವಿಂದ್‌ಗೆ ಹಾಡು ಒಲಿಯಿತು. ಮತ್ತೊಂದು ಗೀತೆಯನ್ನು ಉಪಾಸನಾ ಎಂಬ ಹೊಸ ಗಾಯಕಿ ಹಾಡಿದ್ದಾರೆ.

`ನಟೋರಿಯಸ್'ನ ಜೊತೆಗಾತಿಯಾಗಿ ಕಾಣಿಸಿಕೊಳ್ಳುತ್ತಿರುವುದು ನಟಿ ರಮ್ಯಾ ಬಾರ್ನಾ. ಅವರ ಹೃದಯಕ್ಕೆ ಹತ್ತಿರವಾಗಿ ಚಿತ್ರ ಮೂಡಿಬಂದಿದೆಯಂತೆ. ಪ್ರಭು ಅವರ ಸಂಗೀತ ನಿರ್ದೇಶನ ಹಾಗೂ ಸಾಹಸ ನಿರ್ದೇಶನವನ್ನು ಕೊಂಡಾಡಿದರು.

ಮಾತು ಮುಗಿಯುತ್ತಿದ್ದಂತೆ ಗರಿಗರಿ ಪೆಟ್ಟಿಗೆಯೊಳಗಿಂದ ಚಿತ್ರದ ಧ್ವನಿಮುದ್ರಿಕೆಗಳು ಹೊರಬಂದವು. ಹಿನ್ನೆಲೆಯಲ್ಲಿ `ಕನ್ನಡದ ಶೃಂಗಾರಿಯೇ' ಹಾಡು ಮೊಳಗುತ್ತಿತ್ತು. ಗಾಯಕ ಅರವಿಂದ್ ಸೇರಿದಂತೆ ಅನೇಕರ ಮೊಗದಲ್ಲಿ ಸಂತಸ ಮನೆ ಮಾಡಿತ್ತು. ಸಂಕಲನಕಾರ ಎಸ್. ನಾಗೇಂದ್ರ, ಕಾರ್ಯಕಾರಿ ನಿರ್ಮಾಪಕ ಕೆ. ಪ್ರಭಾಕರ್ ಮತ್ತಿತರರು ವೇದಿಕೆಯಲ್ಲಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT