ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನು ಕಂಡ ಮಹಾಕವಿ ಬೇಂದ್ರೆ

Last Updated 22 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಆಕಾಶದಲ್ಲಿ ಸರಸರನೆ ಹರಿಯುವ ಬಾಣಗಳು, ರಸ್ತೆಗಳಲ್ಲಿ ಪಟಾಕಿಗಳ ಧಡಧಡಾಟ, ದೀಪಗಳ ಸಂಭ್ರಮ ಹಾಗೂ ಆಕಾಶಬುಟ್ಟಿಗಳ ವೈಭವವನ್ನು ಹಿಂದೆ ಸರಿಸುತ್ತ, ಆ ದೀಪಾವಳಿಯ ಮೊದಲ ದಿನದ ಆ ರಾತ್ರಿ ನಮ್ಮ ಟ್ಯಾಕ್ಸಿ ದಾದರಿನ ಸ್ಮಶಾನದ ಹೊರಗೆ ನಿಂತಾಗ ಮನಸ್ಸು ನೆನಪಿಸಿಕೊಳ್ಳುತ್ತಿತ್ತು.

ಹಿಂದೂ ಧರ್ಮದಲ್ಲಿ ಸಾವಿನ ಸಂದರ್ಭಕ್ಕೆ ನೀಡಲಾದ ಉತ್ಸವದ ರೂಪ ಅಣ್ಣಾ ಅವ್ರಿಗೆ ಆತ್ಮೀಯ ವಿಷಯವಾಗಿತ್ತು. ಮೂವತ್ತು ವರ್ಷಗಳ ಹಿಂದೆ ಸೊಲ್ಲಾಪೂರದಲ್ಲಿ ನಾನಿದ್ದ ಓಣಿಯೂ ಸ್ಮಶಾನದ ದಾರಿಯಲ್ಲೇ ಇತ್ತು.

ಕತ್ತಲೆಯಾಗತೊಡಗುತ್ತಿದ್ದಂತೆಯೇ ನಮ್ಮ ಓಣಿಯ ಎದುರೇ ಇದ್ದ ಭಾಗವತರ ದೊಡ್ಡ ಥೇಟರಿನ ಹೊರಗೆ ದೀಪಗಳ ಹಬ್ಬವೇ ಶುರುವಾಗುತ್ತಿತ್ತು. ಕ್ಷಣಕ್ಷಣಕ್ಕೂ ಬೆಳೆಯುತ್ತಾ ಹೋಗುತ್ತಿದ್ದ ಮನುಷ್ಯರ ಗದ್ದಲ, ವಾಹನಗಳ ಗರ್ದಿ, ಇವುಗಳ ಕೋಲಾಹಲಗಳ ನಡುವೆಯೇ, ಹಲಗಿ ಕಣಿಗಳನ್ನು ಬಾರಿಸುತ್ತ, ಚಿಲ್ಲರೆ ಹಣ ತೂರುತ್ತಾ ನಡೆದು ಹೋಗುತ್ತಿದ್ದ ಅಂತ್ಯಯಾತ್ರೆಗಳೂ ರಸ್ತೆಯ ತುಂಬ ಕೆಲವು ಸಲ ತುಂಬಿಬಿಡುತ್ತಿದ್ದವು.
 
ಕ್ರಿಶ್ಚಿಯನ್ ಅಥವಾ ಮುಸಲ್ಮಾನರ ಉದಾಸವಾದ, ಗಂಭೀರವಾದ ಶಿಸ್ತುಬದ್ಧ ಅಂತ್ಯಯಾತ್ರೆಗಳಿಗಿಂತ, ಹಿಂದೂಗಳ ಮರಣೋತ್ಸವ ನನಗೆ ಕುತೂಹಲಕರವೆನಿಸುತಿತ್ತು.
ಇಂದಿಗೂ ಹಾಗೇ ಅನ್ನಿಸುತ್ತದೆ. ಒಂದು ಸಲ ನಾನು ಅಣ್ಣಾ ಅವ್ರಿಗೆ ಈ ಬಗೆಗೆ ಕೇಳಿದೆ ಕೂಡ. ಆಗವರು `ಶವಾ, ಶಿವನ ಭೆಟ್ಟಿಗೆ ಹೊಂಟಾಗ ವಾದ್ಯ ಮೊಳಗದಿದ್ದರ ಇನ್ಯಾವ್ಯಾಗ ಅದು ಮೊಳಗೋದು?~ ಎಂದಿದ್ದರು.

ಆ ನಂತರವೂ ಅವರು ಅನೇಕ ಸಲ ಅಂತ್ಯವಿಧಿಯ ಮಂತ್ರಗಳು, ಅಲ್ಲಿನ ಆಚರಣೆಗಳು, ಆ ನಂತರದ ಸೂತಕದ ದಿನಗಳಲ್ಲಿ ನಡೆಯುವ ಕ್ರಿಯಾವಿಧಿಗಳು, ಇವುಗಳ ಬಗೆಗೆ ನನಗೆ ತಿಳಿಸಿ ಹೇಳಿದ್ದರು. ಪುನರ್ಜನ್ಮದ ಬಗೆಗೆ ಗಾಢ ವಿಶ್ವಾಸವಿರಿಸಿದ್ದ ಅಣ್ಣಾ, ಆ ಎಲ್ಲ ಮಂತ್ರಗಳ ಅರ್ಥವನ್ನೂ ನನಗೆ ಬಿಡಿಸಿ ಹೇಳಿದ್ದರು.
 
ಆಗವರು ಹೇಳಿದ ಇನ್ನೊಂದು ಮಾತು- `ರಸ್ತೆದ ಮ್ಯಾಲ ಯಾರದ ಶವಯಾತ್ರಾ ನಡಿದಿರ್ಲಿ, ನಾವೂ ಕೈಜೋಡಸೋ ರೂಢಿ ನಮ್ಮೆಲ್ಲೆ ಅದ. ತೀರಿಕೊಂಡಾಂವ ನಮಗೇನು ಪರಿಚಯ ಇದ್ದಾಂವನು ಇರ‌್ತಾನ ಅಂತೇನು ಇರೋದಿಲ್ಲ. ಆದರೂ ನಾವು ಕೈ ಮುಗಿತೀವಿ. ಯಾಕ, ಗೊತ್ತದ ಏನು? ನಮ್ಮ ನಮಸ್ಕಾರ ಆ ತೀರಿಕೊಂಡ ವ್ಯಕ್ತಿಗೆ ಇರೋದಿಲ್ಲಾ, ನಾವು ಆಗ ಎಲ್ಲಾರೂ ಆ ಮಹಾ ಕಾಲಪುರುಷಾಗ ನಮಸ್ಕಾರ ಮಾಡತಿರ‌್ತೀವಿ~.

ನಾನು ಮತ್ತು ನಾ.ವ್ಯ.ದೇಶಪಾಂಡೆ ದಾದರಿನ ಆ ಸಮುದ್ರದಡದ ಸ್ಮಶಾನದಲ್ಲಿ ಕಾಲಿಡುತ್ತಿದ್ದಂತೆಯೇ, ಎದುರಿಗೇನೆ ಒಂದು ಧಗಧಗ ಉರಿವ ತಲೆ ಕಾಣುತ್ತದೆ. ಒಂದು ಕ್ಷಣ ಎನಿಸುತ್ತದೆ, ಪತ್ರಿಕೆಗಳು ಅಣ್ಣಾ ಅವರ ಆರೋಗ್ಯದ ಸುದ್ದಿಯನ್ನು ಪ್ರಕಟಿಸುವಾಗ ಆಸ್ಪತ್ರೆಯ ಹೆಸರನ್ನು ತಪ್ಪಾಗಿ ಪ್ರಕಟಿಸಿದ್ದರಿಂದ ನಾವು ಅನೇಕ ಆಸ್ಪತ್ರೆಗಳಲ್ಲಿ ವಿಚಾರ ಮಾಡಿದರೂ ನಮಗೆ ಅಣ್ಣಾ ಅವರ ಭೇಟಿಯಾಗುವುದಾಗಲೇ ಇಲ್ಲ.

ಅರೆ, ಈಗ ಅವರ ಮುಖದರ್ಶನವೂ ಇಲ್ಲವೇನು? ಆದರೆ ಅಷ್ಟರಲ್ಲೇ ಎಡಕಿನಲ್ಲಿ ಇದೀಗ ಸಿದ್ಧ ಮಾಡಿಟ್ಟ ಚಿತೆಯ ಪಕ್ಕದಲ್ಲೇ ಇನ್ನೊಂದು ಶವವಿದೆ ಎಂಬುದು ಕಂಡಿತು. ಸುತ್ತಲೂ ಕೇವಲ ಇಪ್ಪತ್ತು ಇಪ್ಪತ್ತೈದು ಜನರಷ್ಟೇ. ಮಂತ್ರ ಹೇಳುತ್ತಿರುವ ಬ್ರಾಮ್ಹಣರು ಸೂಚಿಸಿದಂತೆ, ತಮ್ಮ ತಮ್ಮ ವಿಧಿ - ನಿಯಮಗಳನ್ನು ನಡೆಸುತ್ತಿದ್ದ ಅಣ್ಣಾ ಅವರ ಹಿರಿಯ ಮಗ ಪಂಡಿತರನ್ನು ಕಂಡೆ.

ಅವರೆದುರು ಹೂಮಾಲೆಗಳಿಂದಲಕೃತವಾದ ಅಣ್ಣಾ ಅವರ ಮೃತ ಶರೀರ, ವಿಶಾಲವಾದ ಹಣೆಯ ಮೇಲೆ ಕರಗುತ್ತ ಹೋದ ಕೇಶರಾಶಿ, ಹಣೆಯ ಮೇಲಿನ ಆ ವಕ್ರ - ಮಡಿಕೆ, ಬೆಳೆದು ನಿಂತಿದ್ದ ದಾಡಿ, ಮತ್ತು ಕರಿಯ ಮೀಶೆಗಳು. ಮುಖ ಚಹರೆ ಸ್ವಲ್ಪವೂ ವಕ್ರವಾಗಿಲ್ಲ.

ತೃಪ್ತವಾದ, ಸಮಾಧಾನಿಯಾದ ಲಕ್ಷಣಗಳಿವೆ ಅ್ಲ್ಲಲಿ. ಮುಚ್ಚಿದ ಕಣ್ಣುಗಳು, ಸದಾ ಬಗೆಗಣ್ಣುಗಳಾಗಿರುತ್ತಿದ್ದ ಅವುಗಳಲ್ಲಿ ಈಗ ಆ ನಿತ್ಯದ ಚಮಕು ಉಳಿದಿರಲಿಲ್ಲ. ಇನ್ನು ಅವು ಎಂದಿಗೂ ನಮಗೆ ಕಾಣುವುದಿಲ್ಲ. ಅವು ನನ್ನಂತೆಯೇ ಅವರ ಸಂಪರ್ಕಕ್ಕೆ ಬಂದ ಅನೇಕರ ನೆನಪಿನಲ್ಲಿ ಮಾತ್ರ ಉಳಿಯುವವು. ಅಣ್ಣಾ ಹೇಳುತ್ತಿದ್ದರು- `ಮನುಷ್ಯಾಗ ಮರಣ ಬರ‌್ತದ. ಸ್ಮರಣಕ್ಕ ಮರಣ ಇರೋದಿಲ್ಲ~.

ಮಂತ್ರ ಹೇಳುವ ಬ್ರಾಮ್ಹಣರು ಹೇಳುತ್ತಾರೆ- `ಈಗ ಹೂವು ಏರಸ್ರಿ~. ಅಣ್ಣಾ ಅವರ ಮಕ್ಕಳು, ಅಳಿಯಂದಿರು ಅವ್ರಿಗೆ ಹೂ ಏರಿಸಿ ಕೈ ಮುಗಿಯುತ್ತಾರೆ. ಅವರ ಹಿಂದೆಯೇ ನಾನೂ ಒಂದು ಹೂವನ್ನು ಅವರ ಪಾದಗಳ ಬಳಿ ಇಟ್ಟು ಕೈ ಮುಗಿಯುತ್ತೇನೆ.

ಸುತ್ತಲಿನ ಆ ಇಪ್ಪತ್ತು ಇಪ್ಪತ್ತೈದು ಜನರಲ್ಲಿ ಪರಿಚಿತರಾದ ಪ್ರಾ.ಮಹಿಷಿಯರ ಮುಖ ಕಾಣುತ್ತದೆ. ಮರಾಠಿ ಲೇಖಕರ‌್ಯಾರೂ ಬಂದಂತಿಲ್ಲ. ಕನ್ನಡ ಸಂಘದ ಕಾರ್ಯಕರ್ತರು ಹಾಗೂ ಅಣ್ಣಾ ಅವರ ಮುಂಬೈಯೊಳಗಿನ ಕೆಲವು ಋಣಾನುಬಂಧಿಗಳು ಇವರಷ್ಟೇ ಬಂದಂತಿದೆ.

ಅಣ್ಣಾ ಅವರ ಮಗ ಬಾಳ ಹೇಳುತ್ತಿದ್ದರು- `ಧಾರವಾಡದ ಡಿ.ಸಿ.ಯವರಿಂದ ಫೋನು ಬಂದಿತ್ತು. ಅಣ್ಣಾ ಅವರ ಮೃತ ಶರೀರವನ್ನು ಧಾರವಾಡಕ್ಕೆ ತರಲಿಕ್ಕೆ, ಅಲ್ಲೇ ಅವರ ಅಂತ್ಯ ಸಂಸ್ಕಾರ ನಡೆಸಲಿಕ್ಕೆ ಕರ್ನಾಟಕ ಸರ್ಕಾರ ತಯಾರಿತ್ತು~. ಆದರೆ ಮಕ್ಕಳೆಲ್ಲರೂ ಅಣ್ಣಾ ಅವರ ಅಂತ್ಯವಿಧಿಯನ್ನು ಧಾರವಾಡದ ಬದಲು ಮುಂಬೈಯೊಳಗೇ ಮಾಡಲು ನಿರ್ಣಯಿಸಿದರು. ಮಕ್ಕಳ ಈ ನಿರ್ಣಯ ಸರಿಯಾದದ್ದೇ ಆಗಿತ್ತು. ಅಣ್ಣಾ ಅವರು ಜೀವನದುದ್ದಕ್ಕೂ ಸರಳವಾಗಿ ಬದುಕಿದರು. ಅವರ ಅಂತ್ಯವಿಧಿಯೂ ಸರಳವಾಗಿಯೇ ನಡೆಯುವುದು ಸೂಕ್ತವೇ ಆಗಿತ್ತು.

ಅಣ್ಣಾ ಅವರ ಅಂತ್ಯ ದರ್ಶನಕ್ಕೆ ನಾನೂ ಕೂಡ ಒಬ್ಬನೇ ಬಂದಿದ್ದೇನೆ. ಬಹುಶಃ ಆಕಾಶವಾಣಿಯ ಮೂಲಕ ಸುದ್ದಿ ತಿಳಿದು ಸೊಲ್ಲಾಪೂರದ ರಾಮ ಪೂಜಾರಿ ಅವರು ದಿಕ್ಕು ತಪ್ಪಿ ಕುಳಿತಿರಬೇಕು. ಪ್ಯಾ.ವಿ.ಸರದೇಶಮುಖರಿಗೂ ಆಳವಾದ ತಳಮಳ ಉಂಟಾಗಿರಬೇಕು.

ಪುಣೆಯಲ್ಲಿರುವ ನನ್ನ ಹಿರಿಯ ಅಣ್ಣ ಒಂದೇ ಸವನೆ ಹಳಹಳಿಸುತ್ತಿರಬೇಕು. ರಾ.ಗೋ.ದೇಶಪಾಂಡೆಯವರಿಗೂ ಸುದ್ದಿ ಹೋಗಿದೆ. ಅವರಿನ್ನೂ ಬಂದಂತಿಲ್ಲ. ಪ್ರಭಾಕರ ಪೋತದಾರರೂ ಬಂದಿಲ್ಲ. ಅಂಬೇ ಜೋಶಾಯಿಯ ರಂಗನಾಥ ತಿವಾರಿ, ಸೊಲ್ಲಾಪೂರದ ಬುವಾ- ಇಂತಹ ಅನೇಕ ಮಿತ್ರರ ಬಗೆಗೆ ಅಣ್ಣಾ ಅವರಿಗೆ ತುಂಬ ಸ್ನೇಹವಿತ್ತು. ನಮಗೆಲ್ಲರಿಗೂ ಅಣ್ಣಾ ಅವರು ಒಂದು ಆಧಾರವಿದ್ದಂತೆಯೇ ಎನಿಸುತ್ತಿದ್ದರು.

1944ರಲ್ಲಿ ಅಣ್ಣಾ ಅವರು ಸೊಲ್ಲಾಪೂರದ ದಯಾನಂದ ಮಹಾವಿದ್ಯಾಲಯದಲ್ಲಿ ಕನ್ನಡ ಅಧ್ಯಾಪಕರೆಂದು ಕೆಲಸ ಶುರು ಮಾಡಿದರು. ನಾನಿನ್ನೂ ಆಗ ಕಲಿಯುತ್ತಿದ್ದೆ.

ರವೀಂದ್ರನಾಥ ಟ್ಯಾಗೋರರಿಗೆ ಹೋಲಿಸಲಾಗಬಲ್ಲ ಒಬ್ಬ ಧೀಮಂತ ಕನ್ನಡ ಕವಿಗಳು ಪ್ರೊಫೆಸರರಾಗಿ ಬಂದಿದ್ದಾರೆಂಬ ಸುದ್ದಿಯಷ್ಟೇ, `ಕುಮಾರ ಸಾಹಿತ್ಯ ಮಂಡಳ~ದ ನಮ್ಮಂತಹ ಕೆಲವು ಶಾಲೆ ಕಲಿಯುತ್ತಿದ್ದ ವಿದ್ಯಾರ್ಥಿಗಳ ಕಿವಿಗೆ ಬಿದ್ದಿತ್ತು. ಅವರು ಸೊಲ್ಲಾಪೂರಕ್ಕೆ ಬಂದ ವರ್ಷದಲ್ಲೇ ಅವರ ಎರಡು ಮಕ್ಕಳನ್ನು ಕಾಲವು ಕಸಿದುಕೊಂಡಿತು.

`1946ರ ನಂತರದ ಕಾಲ. ನನ್ನ ಸ್ಥೈರ್ಯ - ಪರೀಕ್ಷೆಯ ಕಾಲವೇ ಆಗಿತ್ತು~ ಎಂದು ಅವರೇ ಬರೆದಿದ್ದಾರೆ. ಹಾಗೆ ನೋಡಿದರೆ ಸೊಲ್ಲಾಪೂರ ಎನ್ನುವುದು ಕೇವಲ ಒಂದು ವ್ಯಾಪಾರೀ ಶಹರ. `ಈ ಊರಾಗ ಯಾರ ಹತ್ರ ಹಣಾ ಇಲ್ಲ ಅವರಿಗೆ ಮಾನ ಸಿಗೋದು ಭಾಳ ಕಠಿನಾ ಅದ.

ಇಲ್ಲೆ ಒಬ್ಬ ಮನಷ್ಯಾ ತನ್ನ ವಿದ್ಯಾದಿಂದ ಮುಂದ ಬರ‌್ತಾನ, ಅಂವಗ ಎಲ್ಲಾ ಒಳ್ಳೆದಾಗ್ತದ ಅನ್ನೂದೂ ಸಾಧ್ಯನ ಇಲ್ಲ~ ಎಂದು ಬಡಾಮುಡಿ ಹೇಳುತ್ತಿದ್ದ ಅಣ್ಣಾ ಅವರು ಮಾತ್ರ ಮುಂದೆ ಚೆನ್ನಾಗಿ ಅಲ್ಲಿಯೇ ಬಾಳಿದರು. 1946ರಲ್ಲಿ ಅವರ ಐವತ್ತನೇ ಹುಟ್ಟಿದ ಹಬ್ಬ.

1956ರಲ್ಲಿ ಅವರಿಗೆ 60 ವರ್ಷ ತುಂಬಿದ್ದರಿಂದ, ಅವರು ನಿವೃತ್ತರಾದದ್ದರಿಂದ ಅವರ ಹುಟ್ಟಿದ ಹಬ್ಬ ಹಾಗೂ ಬೀಳ್ಕೊಡುಗೆ ಎಲ್ಲವನ್ನೂ ಸೊಲ್ಲಾಪೂರದ ಜನತೆ ಸಂಭ್ರಮದಿಂದ ಆಚರಿಸಿದರು. ಇದಲ್ಲದೆ 1972ರಲ್ಲಿ ರಾಮ ಪೂಜಾರಿ ಅವರು, ಅಣ್ಣಾ ಅವರನ್ನು ಧಾರವಾಡದಿಂದ ಕರೆಸಿ ಕುಮಾರ್ ಗಂಧರ್ವರ ಸಾನಿಧ್ಯದಲ್ಲಿ ಅವರ ಅಮೃತಮಹೋತ್ಸವವನ್ನೂ ದೊಡ್ಡ ಸಂಭ್ರಮದಿಂದಲೇ ನಡೆಸಿದರು.

ಅಣ್ಣಾ ಅವರಿಗೂ, ನನಗೂ ಪರಿಚಯ ಎಲ್ಲಿ, ಹೇಗೆ ಆಯಿತು ಎಂಬುದನ್ನು ನಿಕ್ಕೀಯಾಗಿ ನನಗಿಂದು ಹೇಳಲಾಗುವುದಿಲ್ಲ. ರಾಮ ಪೂಜಾರಿ, ನನ್ನ ಹಿರಿಯಣ್ಣ ಭಾಲಚಂದ್ರ ಮತ್ತು ಅವನ ಒಬ್ಬ ಗೆಳೆಯ ಇವರೆಲ್ಲರೂ ಕೂಡಿ ಒಂದು `ಶಾರದೋಪಾಸಕ ಮಂಡಳ~ವನ್ನು ಮಾಡಿಕೊಂಡಿದ್ದರು.

`ಉಲ್ಕಾ~ ಎಂಬ ಕೈಬರಹದ ಪತ್ರಿಕೆಯನ್ನೂ ನನ್ನ ಹಿರಿಯಣ್ಣ ಸಂಪಾದಿಸುತ್ತಿದ್ದ. ರಾಮ ಪೂಜಾರಿ ಅವರಿಗೆ ಅನೇಕ ಹೆಸರಾಂತ ಲೇಖಕರ, ಕಲಾವಿದರ ಆತ್ಮೀಯ ಗೆಳೆತನವಿತ್ತು. ಅದರಿಂದಾಗಿ ಅತ್ರೆ, ಅನಂತ ಕಾಣೇಕರ, ಕವಿವರ್ಯ ಶಿರೀಶ, ಕೆ.ಕ್ಷೀರಸಾಗರ ಇತ್ಯಾದಿ ಹಿರಿಯ ಖ್ಯಾತ ಲೇಖಕರು ಶಾರದೋಪಾಸಕ ಮಂಡಳದಲ್ಲಿ ಉಪನ್ಯಾಸ ನೀಡುತ್ತಿದ್ದರು.

ಉಸ್ತಾದ ಬಿಸ್ಮಿಲ್ಲಾಖಾನರಂಥ ಖ್ಯಾತ ಶಹನಾಯ್ ವಾದಕರೂ ಈ ಕಾರ್ಯಕ್ರಮಗಳಿಗೆ ಹಾಜರಾಗುತ್ತಿದ್ದರು. ಪು.ಲ.ದೇಶಪಾಂಡೆ, ಭೀಮಸೇನ ಜೊಶಿ, ಶಾರದೋಪಾಸಕ ಮಂಡಳಿಯ ಖಾಸಗೀ ಮೆಹಫಿಲ್ಲುಗಳಿಗೆ ಬಣ್ಣ ತುಂಬುತ್ತಿದ್ದರು. ನಮ್ಮ ಈ ಮಂಡಳಕ್ಕೆ ಮಾರ್ಗದರ್ಶಕರೂ, ಸಲಹೆಗಾರರೂ ಅಣ್ಣಾ ಅವರೇ ಆಗಿದ್ದರು.

ನಮ್ಮಲ್ಲಿ ಅನೇಕರ ಆ ಕಾಲದ ಆರ್ಥಿಕ ಸ್ಥಿತಿಯೂ `ಅಷ್ಟಕ್ಕಷ್ಟೇ~ ಇರುತ್ತಿತ್ತು. ಕೆಲವರಂತೂ ದಿಕ್ಕುತಪ್ಪಿದವರೇ ಆಗಿದ್ದೆವು. ಖಾಲಿ ಹೊಟ್ಟೆಯಲ್ಲೇ ಕಾಲೇಜಿಗೆ ಹೋಗುವುದು. ಮನೆಯಲ್ಲಿ ಒಗೆದು ಹಾಕಿಕೊಂಡ ನಮ್ಮ ಆ ಬಟ್ಟೆಗಳು, ಪಠ್ಯ ಪುಸ್ತಕಗಳನ್ನು ಸಹ ಯಾರಿಂದಲಾದರೂ ಕಡ ತಂದು ನಾವು ಓದಬೇಕಾಗುತ್ತಿತ್ತು.
 
ಸಾಹಿತ್ಯ, ಸಂಗೀತ, ರಂಗಭೂಮಿಗಳು ಮಾತ್ರವಲ್ಲದೆ ಕ್ರಿಕೆಟ್‌ನಂತಹ ಆಟಗಳೂ ನಮಗೆ ತುಂಬ ಪ್ರಿಯವಾಗಿದ್ದವು. ಪುಸ್ತಕ, ಪತ್ರಿಕೆಗಳನ್ನು ಕೊಂಡು ಓದುವ ಶಕ್ತಿ ನಮಗಿರಲಿಲ್ಲ. ಮೈಲು ಮೈಲು ದೂರ ನಡೆಯುವುದು, ಹರಟೆ ಹೊಡೆಯುವುದು, ಕೊಂಕು, ಚೇಷ್ಟೆಗಳ ಮಾತಿನಿಂದ ಮನತುಂಬಿ ನಗುತ್ತ, ಅಪರಾತ್ರಿವರೆಗೂ ಅಡ್ಡಾಡುತ್ತ ಸಂವಾದ ನಡೆಸುತ್ತಿದ್ದೆವು.

ಮನಸ್ಸು ಖಿನ್ನವಾದಾಗಲೆಲ್ಲ ನಮ್ಮ ಹೆಜ್ಜೆಗಳು ನಮಗೆ ಅರಿವಾಗದಂತೆ ಅಣ್ಣಾ ಅವರ ಮನೆಯತ್ತ ಹೊರಳುತ್ತಿದ್ದವು. ಎಲ್ಲೆಡೆಯೂ ಹರವಿಕೊಂಡ ಪುಸ್ತಕಗಳ ನಡುವೆಯೇ ಏನನ್ನೋ ಬರೆಯುತ್ತ, ಓದುತ್ತ ಅಣ್ಣಾ ಕೂತಿರುತ್ತಿದ್ದರು. ಬಂದವರನ್ನು ನೋಡಿ ಕೆಲಸವನ್ನು ಬದಿ ಸರಿಸಿ ಮಾತನಾಡಲು ಶುರು ಮಾಡುತ್ತಿದ್ದರು.
 
ಅಣ್ಣಾ ಅವರ ಪರಮ ಮಿತ್ರರೂ, ಕನ್ನಡದ ಖ್ಯಾತ ಲೇಖಕರೂ ಆದ ಮಾಸ್ತಿ ವೆಂಕಟೇಶ ಅಯ್ಯಂಗಾರರು ಅಣ್ಣಾ ಅವರಿಗೆ `ಗಾರುಡಿಗ~ ಎನ್ನುತ್ತಿದ್ದರು. ಗಾರುಡಿಗರು ತಮ್ಮ ಚೀಲದಿಂದ ಒಂದೊಂದೇ ವಸ್ತುವನ್ನು ತೆಗೆದು ತೋರಿಸುತ್ತ, ಜನರ ಚಿತ್ತವನ್ನು ಸೆರೆಹಿಡಿಯುವಂತೆ ಅಣ್ಣಾ ಅವರ ಜೊತೆ ಮಾತನಾಡಿದ ನಂತರ ನಮಗೂ ಆ ಅನುಭವ ಬರುತ್ತಿತ್ತು.

ಐವತ್ತು ವರ್ಷ ದಾಟುವವರೆಗೂ ಅಣ್ಣಾ ಅವರ ಬದುಕು ಅಸ್ಥಿರವಾಗಿಯೇ ಇತ್ತು. ಆ ಕಾಲದ ಪದ್ಧತಿಯಂತೆ ಹದಿನೈದನೇ ವರ್ಷಕ್ಕೇನೆ ಅವರ ಮದುವೆಯಾಗಿತ್ತು. 1928ರಲ್ಲಿ ಬಿ.ಎ. ಆದ ನಂತರ ಅವರು ಶಿಕ್ಷಕ ವೃತ್ತಿಯನ್ನು ಸ್ವೀಕರಿಸಿದರು. ಗಾಂಧೀಜಿಯವರ ಅಸಹಕಾರ ಚಳವಳಿ ಅಂಗವಾಗಿ ರಾಷ್ಟ್ರೀಯ ಶಾಲೆ ತೆಗೆಯಲೂ ಒಂದಾದರು.

1921ರಿಂದ 1924ರ ಕಾಲದಲ್ಲಿ ರಂಗನಾಥ ದಿವಾಕರರೊಂದಿಗೆ ರಾಷ್ಟ್ರೀಯ ಶಾಲೆಯನ್ನು ನಡೆಸುತ್ತಿದ್ದ ಸಂದರ್ಭದಲ್ಲೇ ಧಾರವಾಡದಲ್ಲಿ ಕಾಂಗ್ರೆಸ್‌ನಲ್ಲಿದ್ದ ನಮ್ಮ ತಂದೆಯ ಪರಿಚಯ ಅವರಿಗಾಯಿತು.

ಚಳವಳಿಯಲ್ಲಿ ಧುಮುಕಿದ ಸಾಮಾನ್ಯ ಕಾರ್ಯಕರ್ತನಿಗೆಂಥ ಕಷ್ಟದ ಸ್ಥಿತಿ ಬರುತ್ತದೆ, ಅವರ ಕುಟುಂಬದ ಸ್ಥಿತಿ ಹೇಗೆ ಛಿದ್ರವಾಗಿ ಹೋಗುತ್ತದೆ ಎನ್ನುವುದೆಲ್ಲ ನಿಮ್ಮ ತಂದೆಯವರಿಂದಲೇ ನನಗೂ ತಿಳಿಯಿತೆಂದು ಅವರು ಹೇಳಿದಾಗಲೇ ನಮಗೂ ಅವರ ಕಾಲದ ಆ ಕಷ್ಟಗಳ ಕಲ್ಪನೆ ಬರುತ್ತಿತ್ತು. ಆದರೆ ತಮ್ಮ ದುಃಖದ ಮುಂಗುರುಳುಗಳನ್ನು ನೇವರಿಸಿ ಅದರ ಪ್ರದರ್ಶನವನ್ನು ಅವರೆಂದಿಗೂ ಮಾಡಲಿಲ್ಲ.

ಕಟಾನುಕಟಿ ಪಗಾರದಲ್ಲಿಯೇ, ಬೆಳೆಯುತ್ತಿದ್ದ ಸಂಸಾರದ ಹೊಣೆಯನ್ನೂ ಸಂಭಾಳಿಸುತ್ತ ಅವರು ಚಳವಳಿಯ ಸಂದರ್ಭದ ಸೆರೆಮನೆ ವಾಸವನ್ನೂ ಸ್ವೀಕರಿಸಿದರು. ಬಿ.ಎ. ಆಗಿ ಹದಿನೇಳು ವರ್ಷಗಳ ನಂತರ ಅವರು ಎಂ.ಎ. ಮಾಡತೊಡಗಿದಾಗ ಅವರದೇ ಕವನಸಂಕಲನವನ್ನು ಆ ವರ್ಷ ಪಠ್ಯವನ್ನಾಗಿ ಆರಿಸಲಾಗಿತ್ತು.
 
`ಅಂಬಿಕಾತನಯದತ್ತ~ ಹೆಸರಿನಿಂದ ಕವಿತೆ ಬರೆಯುವ ಕವಿಯೇ, ತಾನು ಸ್ವತಃ ಪರೀಕ್ಷೆಗೆ ಕುಳಿತಿದ್ದಾನೆಂದು ತಿಳಿಯದೆ ಪರಿವೀಕ್ಷಕರು ಅವರಿಗೆ ಕಡಿಮೆ ಅಂಕಗಳನ್ನು ನೀಡಿದ್ದರು.

ಸ್ವತಃ ಅಣ್ಣಾ ಅವರು ನನಗೆ ಈ ಸ್ವಾರಸ್ಯಕರ ಕತೆ ಹೇಳಿಲ್ಲವಾದರೂ, ತಾವು ಮಾಡಿದ ಪಂಡಿತರ ಫಜೀತಿಯ ಬಗೆಗೆ ಮಾತ್ರ ಅವರು ಒಮ್ಮೆ ತಾವೇ ಬಿಚ್ಚಿ ಹೇಳಿದ್ದರು. `ಪ್ರೊ. ರಾಮಸನ್ ಹೀಗೆ ಹೇಳ್ತಾರೆ~ ಎಂದು ಹೇಳುತ್ತಾ ಅಣ್ಣಾ ತಮ್ಮ ಸ್ವಂತದ ಮಾತುಗಳನ್ನೇ ಅಲ್ಲಲ್ಲಿ ಉದ್ಧರಿಸುತ್ತಿದ್ದರು.

ದೊಡ್ಡ ದೊಡ್ಡ ಪಂಡಿತರು ಕೂಡ `ಈ ರಾಮಸನ್ ಯಾರು ಎಂಬುದು ನಮಗೆ ತಿಳಿದಿಲ್ಲ~ ಎಂದು ಒಪ್ಪುತ್ತಿರಲಿಲ್ಲ. ಈ `ರಾಮಸನ್~ ಎಂಬ ಮುಖವಾಡದ ಹಿಂದೆ ರಾಮಚಂದ್ರರ ಮಗ ದ.ರಾ.ಬೇಂದ್ರೆ ಅವರೇ ಅಡಗಿದ್ದಾರೆಂಬುದು ಈ ಪಂಡಿತರ ಲಕ್ಷಕ್ಕೆ ಬರುತ್ತಿರಲಿಲ್ಲ.
 
ಕವಿ ಎಂದು ಖ್ಯಾತನಾಮರಾಗಿ, ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ನಂತರ, ಕೊನೆಗೂ 1944ರಲ್ಲಿ 150 ರೂಪಾಯಿಗಳ ವೇತನದ ಪೂರ್ಣಾವಧಿ ಶಿಕ್ಷಕ ವೃತ್ತಿ ಅವರಿಗೆ ಸಿಕ್ಕಾಗ ಅವರು ಐವತ್ತು ದಾಟಿ ಹೋಗಿದ್ದರು. ಸಂಕಟ-ನಿರಾಶೆಗಳ ಹಾಲಾಹಲವನ್ನು ಅದೆಷ್ಟು ಸಲ ಕುಡಿದರೂ ಅವರೆಂದೂ ಹತಾಶರಾಗಲಿಲ್ಲ.

ಭಗವಂತನ ಮೇಲೆ ವಿಶ್ವಾಸವಿಟ್ಟು ಮನುಷ್ಯ ಪ್ರತಿಕೂಲ ಪರಿಸ್ಥಿತಿಗಳೊಂದಿಗೆ ಗಟ್ಟಿಯಾಗಿ ಹೋರಾಡಬೇಕೆಂಬುದು ಅವರ ತಿಳಿವಳಿಕೆಯಾಗಿತ್ತು. ದೇವರ ಮೇಲೆ ಅವರಿಗಿದ್ದ ವಿಶ್ವಾಸದ ಮೂಲಕವೇ ಅವರಿಗೆ ಬದುಕಿನ ದುಃಖ ಸಹಿಸುವ ಶಕ್ತಿ ಬಂದಿರಬೇಕು. ನಾಸ್ತಿಕನಿಗೆ ಪ್ರತ್ಯೇಕ ಪ್ರಶ್ನೆಗೂ ಉತ್ತರ ಹುಡುಕಬೇಕಾಗುತ್ತದೆ. ಈ ಹುಡುಕಾಟದಲ್ಲಿ ಆತ ಹ್ರಸ್ವನಾಗುತ್ತಾನೆ.

ಉತ್ತರ ಸಿಗದಿದ್ದಾಗ ಈ ಬಗೆಯ ಜನರು, ಉತ್ತರದಾಚೆಗೆ ನೆಗೆದು ಓಡಿಬಿಡುತ್ತಾರೆ ಇಲ್ಲವೇ ದೇವರ ಅಸ್ತಿತ್ವವನ್ನು ನಂಬಿ ಮೋಕಳೀಕರಾಗುತ್ತಾರೆ. ಇದೆಲ್ಲವೂ ದೇವರ ಆಟ ಎಂಬ ನಂಬಿಕೆಯಿಂದ ಆಸ್ತಿಕರ ಬದುಕು ಸುಖಕರ ಆಗದಿದ್ದರೂ ಸುಸಹ್ಯವಾದರೂ ಆಗುತ್ತದೆ.

ವೇದ, ಪುರಾಣ, ಉಪನಿಷತ್ತು, ಅನ್ಯ ಧರ್ಮೀಯರ ಪವಿತ್ರ ಗ್ರಂಥಗಳು, ತತ್ವಜ್ಞಾನಿಗಳ ಭಾಷ್ಯಗಳು, ಸಿಂಹಸಾಹಿತ್ಯ, ಇವೆಲ್ಲವುಗಳ ಗಾಢ ಅಧ್ಯಯನದಿಂದ ಅಣ್ಣಾ ಅವರ ದೇವರ ಮೇಲಿನ ವಿಶ್ವಾಸ ಬೆಳೆಯುತ್ತಾ ಹೋಯಿತು. ಆಧ್ಯಾತ್ಮಿಕ ಕ್ಷೇತ್ರದ ಅನೇಕ ಅಧಿಕಾರೀ-ಗುರುಗಳ ಸಹವಾಸವೂ ಅವರಿಗೆ ಒದಗಿತು.

ನನಗೆ ಮೊದಲಿನಿಂದಲೂ ಅಧ್ಯಾತ್ಮದ ಬಗೆಗೆ ಅಲರ್ಜಿಯೇ ಇದ್ದುದರಿಂದ, ಎಷ್ಟೋ ಸಲ ಅವರು ವಿವರಿಸುತ್ತಿದ್ದ ವಿಷಯದ ಬಗೆಗೆ ನನಗೆ ತಡೆದುಕೊಳ್ಳಲಾಗದಷ್ಟು ನಗೆ ಬರುತ್ತಿತ್ತು. ಅಣ್ಣಾ ಅವರಿಗೆ ನನ್ನ ಪಾಖಂಡ-ಪ್ರಶ್ನೆಗಳು ರುಚಿಸುತ್ತಿರಲಿಲ್ಲ. ಆದರೂ, ಅವರೆಂದಿಗೂ ಆ ಬಗೆಗೆ ಸಿಟ್ಟಿಗೇಳಲಿಲ್ಲ. ಅರವಿಂದರು ಅವರ ಮುಖ್ಯ ಶ್ರದ್ಧಾಕೇಂದ್ರವಾಗಿದ್ದರು.

ಆಗಸ್ಟ್ 15 ಅರವಿಂದರ ಜನ್ಮದಿನ. ಆ ದಿನ ಅರವಿಂದರ ಪ್ರತಿಮೆಯ ಪೂಜೆಮಾಡಿ,  `ಸಾವಿತ್ರಿ~ಯಂತಹ ಮಹಾಕಾವ್ಯದ ಭಾಗಗಳನ್ನು ಭಕ್ತಿಭಾವದಿಂದ ಓದುತ್ತಿದ್ದರು. ತಮ್ಮ ಪೂರ್ವಜನ್ಮಗಳಲ್ಲಿ ತಾವು ಒಮ್ಮೆ ಲಿಯೋನಾರ್ದೋ-ದಾ-ವಿಂಚಿಯಾಗಿಯೂ, ಅದಕ್ಕೂ ಮೊದಲು ವಾಲ್ಮೀಕಿಯಾಗಿಯೂ ಅವತರಿಸಿದ್ದೇವೆಂದು ಅರವಿಂದರು ಭಾವಿಸುತ್ತಿದ್ದರು ಎಂಬುದನ್ನು ಅಣ್ಣಾ ಒಮ್ಮೆ ನನಗೆ ಹೇಳಿದಾಗ, `ಲಿಯೋನಾರ್ದೋ-ದಾ-ವಿಂಚಿ ಹಾಗೂ ವಾಲ್ಮೀಕಿಯೇ ಏಕೆ? ಮಾಯಕೆಲ್ ಎಂಜಿಲೋ ಹಾಗೂ ವ್ಯಾಸರೇಕಲ್ಲ?~ ಎಂಬಂತಹ ಸ್ಫೋಟಕ ಪ್ರಶ್ನೆಯನ್ನು ನಾನು ಕೇಳಿದ್ದೆ.ಆಗ ಅಣ್ಣಾ ಹೇಳಿದ್ದರು- `ನಿಮ್ಮಂಥಾ ಅಶುದ್ಧಾವಂತರು ಕತ್ತಲಿದ್ದಂಗ ಇದ್ದೀರಿ. ನಿಮ್ಮಂಥವ್ರಿಗೆ ಏನೂ ಕಾಣಸೂದು ಸಾಧ್ಯಯಿಲ್ಲಾ~.

ಒಮ್ಮೆ ಅಣ್ಣಾ ಅವರು ಮುಂಬೈನಲ್ಲಿ ಭೇಟಿಯಾದಾಗ, `ನೀವು ಪರಶುರಾಮ ದೇವರ ಬಗೆಗೆ ಬರೆಯಬೇಕೆಂದಿದ್ದೀರಿ, ಏನಾಯಿತು?~ ಎಂದು ಕೇಳಿದೆ. ಅಣ್ಣಾ ಹೇಳಿದರು- “ಸ್ವಾಮಿ ಮಹಾರಾಜರು ಸ್ವಪ್ನದೊಳಗೆ ಬಂದು, `ಆ ಪಂಢರಪೂರದ ವಿಠೋಬಾ ನಿಮ್ಮನ್ನ ಕರೀಲಿಕ್ಕೆ ಹತ್ಯಾನ ಮೊದಲ ಅವನ ಕಡೆ ಲಕ್ಷ ಕೊಡ್ರಿ.

ಆ ಮ್ಯಾಲೆ ನಿಮ್ಮ ಆ ಪರಶುರಾಮ~ ಅಂತ ಹೇಳಿದರು”. ಅವರ ಸ್ವಪ್ನದಲ್ಲಿ ಬರುತ್ತಿದ್ದ ಸ್ವಾಮಿ ಮಹಾರಾಜರು, ಇವರೇನು ಅಕ್ಕಲಕೋಟದ ಮಹಾರಾಣಿ ಅಥವಾ ಅವರ ಮೇಲೂ ಅನುಗ್ರಹ ಮಾಡಿದ್ದ ಪ್ರಭಾಕರ ಮಹಾರಾಜ ಟೇಂಬೆಯವರೆ? ಎಂದು ನಾನೆಂದಿಗೂ ಅವರನ್ನು ಕೇಳಲಿಲ್ಲ. ಇವರಿಬ್ಬರಲ್ಲೇ ಒಬ್ಬರು ಇವರ ಸ್ವಪ್ನದಲ್ಲಿ ಕಂಡಿರಬೇಕೆಂದು ನನಗೆ ಖಾತ್ರಿ ಇತ್ತು, ಆದರೆ ಇಂಥ ಅನುಭವಗಳು ನಮಗೇಕೆ ಆಗುವದಿಲ್ಲ ಎಂಬ ಒಡಪು ಮಾತ್ರ ನನಗಿನ್ನು ಒಡೆದಿಲ್ಲ.

ಅಣ್ಣಾ ಅವರ ಈ ಮಾತುಗಳು ನನಗೆ ಒಪ್ಪಿತವಾಗದಿದ್ದರೂ ಕೇಳುತ್ತ ಕೂಡಬೇಕೆನಿಸುತ್ತಿತ್ತು. ಸೋಮವಾರದ ನಂತರ ಮಂಗಳವಾರವೇ ಏಕೆ ಬರುತ್ತದೆ? ಮಂಗಳವಾರದ ನಂತರ ಬುಧವಾರವೇ ಏಕೆ ಬರಬೇಕು? ಇಂತಹ ಅವರ ಕೆಲವು ವಿಚಾರಗಳನ್ನು ಕೇಳಿ ನಾನಂತೂ ತಲೆ ತಿರುಗಿದವನಾಗಿಬಿಟ್ಟಿದ್ದೆ.

ನನಗೆ ಉತ್ತರ ಹೇಳಲು ಬರುತ್ತಿಲ್ಲ ಎಂಬುದನ್ನು ತಿಳಿದ ಅಣ್ಣಾ, ತಕ್ಷಣ ಈ ವಾರಗಳ ಸುತ್ತ ಹಬ್ಬಿದ ಅನೇಕ ಕತೆಗಳನ್ನು ತಿಳಿಸಿ, ಅವುಗಳ ಪರಸ್ಪರ ಸಂಬಂಧಗಳನ್ನೂ ತಿಳಿಸಿ, ಹೇಳಿದರು- `ಸೋಮವಾರದ ನಂತರ ಮಂಗಳವಾರನ ಬರಬೇಕಾಗ್ತದೆ. ಬುಧವಾರ ಬಂದರ ನಡೀಯಾದಿಲ್ಲಾ~. ಅವರ ಈ ಮಾತಿಗೆ ಪ್ರತಿಯಾಗಿ `ಸಂಡೆ ನಂತರ `ಮಂಡೇ~ನ ಯಾಕ ಬರ‌್ತದ? `ಟ್ಯೂಸಡೇ~ ಯಾಕ ಬರೂದಿಲ್ಲಾ?~ ಎಂದು ಕೇಳಿದೆ. ಆಗವರು ಒಂದಿಷ್ಟೂ ಗಲಿಬಿಲಿಗೊಳ್ಳದೆ- `ಅದನ್ನ ನೀ ಹುಡುಕು, ಅವರ ವಾರಗಳ ಕ್ರಮದ ಹಿಂದೂ ಏನಾರ ಅರ್ಥ ಇದ್ದ ಇರ‌್ತದ~ ಎಂದರು.

ಜ್ಞಾನದ ಯಾವ ಕ್ಷೇತ್ರವೂ ಅವರಿಗೆ ವರ್ಜ್ಯವಾಗಿರಲಿಲ್ಲ. ಆಯಿನ್‌ಸ್ಟೀನರ ಸಾಪೇಕ್ಷವಾದವಿರಲಿ, ಸಾರ್ತ್ರನ ಅಸ್ತಿತ್ವವಾದವಿರಲಿ, ಯೋಗಶಾಸ್ತ್ರದಲ್ಲಿನ ಕುಂಡಲಿ ಮೂಲಕದ ಫಲ-ಜ್ಯೋತಿಷ್ಯದ ವಿಷಯವಿರಲಿ, ಸಾಮುದ್ರಿಕೆ, ಸಂಖ್ಯಾ ಜ್ಯೋತಿಷ್ಯವಿರಲಿ ಅಥವಾ ರಸಾದಿ ಸಪ್ತಧಾತುಗಳ ಬಗೆಗೆ ಸಾರಂಗಧರ ಸಂಹಿತೆಯಲ್ಲಿ ನೀಡಿದ ವಿವರವಿರಲಿ- ಈ ಎಲ್ಲ ವಿಷಯಗಳ ಬಗೆಗೂ, ಪರಿಣತರಾದವರ ಜೊತೆ ಚರ್ಚೆ ನಡೆಸುತ್ತಿದ್ದರು. ಅವರ ಸಮೀಕರಣಗಳು, ಗಣಿತದ ವಿಚಿತ್ರ ಲೆಕ್ಕಗಳು, ಅವುಗಳ ಅರ್ಥ ನಮಗೆ ಏನೂ ಆಗುತ್ತಿರಲಿಲ್ಲ.

ಅಣ್ಣಾ ಅವರ ಪ್ರಶ್ನೆಗಳ ಸರಮಾಲೆಯ ಎದುರು ತಮ್ಮ ವಿದ್ವತ್ತಿನ ಮಿತಿ ಬಯಲಾಗುವುದೆಂದು ಅನೇಕ ಪಂಡಿತರಿಗೆ ಸಂಕಟವೂ ಆಗುತ್ತಿತ್ತು. ತಮ್ಮ ತಮ್ಮ ವಿಷಯಗಳ ಆಳ ಪರಿಜ್ಞಾನಕ್ಕಾಗಿ ಹೊಸ ಹೊಸ ಗ್ರಂಥಗಳ ಬೆನ್ನು ಹತ್ತುವ ಇಚ್ಛೆಯುಳ್ಳವರಿಗೆ, ಅವರಿಗೆ ತಿಳಿಯದ, ಅಥವಾ ಲಭ್ಯವಿಲ್ಲದ ಗ್ರಂಥಗಳು ಅಣ್ಣಾ ಅವರ ಕಡೆಗೆ ಸಿಗುತ್ತಿದ್ದವು. ಅಣ್ಣಾ ಅವರು ಅಕ್ಷರಶಃ ಸಾವಿರಾರು ಪುಸ್ತಕಗಳನ್ನು ಖರೀದಿಸಿದರು.
 
`ಪುಸ್ತಕಾ ಬರದು ಏನ ಗಳಿಸಿದ್ದೆ ಅದೆಲ್ಲಾ ಪುಸ್ತಕ ಕೊಳ್ಳಲಿಕ್ಕೆ ಹೋತು~ ಎಂದು ಅವರೇ ಹೇಳುತ್ತಿದ್ದರು. ಸೊಲ್ಲಾಪೂರದಲ್ಲಿ ವಾಸ್ತವ್ಯದ ಮನೆ ಚಿಕ್ಕದಾದುದರಿಂದ ತಮ್ಮ ಎಷ್ಟೋ ಪುಸ್ತಕಗಳನ್ನು ಅವರು ಹಲವು ಸಂಸ್ಥೆಗಳಿಗೆ ಕೊಟ್ಟರು. ಆದರೂ ಧಾರವಾಡದ ಅವರ ಮನೆಯಲ್ಲಿ ಸಾಧನಕೇರಿಯ ಮನೆಯಲ್ಲಿ 10-15 ಸಾವಿರ ಪುಸ್ತಕಗಳ ಸಂಗ್ರಹ ಉಳಿದೇ ಇತ್ತು.

1951ರಲ್ಲಿ ಅವರು ಮುಂಬಯಿಯಿಂದ ಬರುವಾಗ ಸಾರ್ತ್ರನ `ಇಂಟಿಮನೆ ಆ್ಯಂಡ್ ಅದರ್ ಸ್ಟೋರೀಸ್~ ಎಂಬ ಕಥಾಸಂಗ್ರಹವನ್ನು ತಂದಿದ್ದರು. ಆ ಕಾಲದಲ್ಲಿ ಅದೇ ಆಗ ಸಾರ್ತ್ರನ ಹೆಸರು ಅಲ್ಲಿ ಇಲ್ಲಿ ಕೇಳಿಬರುತ್ತಿತ್ತು. ಪುಸ್ತಕವನ್ನು ನನಗೆ ಕೊಡುತ್ತ, ಕಣ್ಣು ಹೊಡೆದು, ಅವರು ಹೇಳಿದ್ದರು- `ಈ ಲೇಖಕ ನಿನಗೆ ಸೇರ‌್ತಾನ. ಪಕ್ಕಾ ನಾಸ್ತಿಕ ಇದ್ದಾನ ಈ ಲೇಖಕ.

ನರಕ ಅಂದ್ರೆ ಏನೂ ಅನ್ನೂದು ಇಂವಗ ಪಕ್ಕಾ ತಿಳಿದದ~. ನಾನು ಆಮೇಲೆ ಅದರೊಳಗಿನ ಸಾರ್ತ್ರನ `ವಾಲ್~ ಕಥೆಯನ್ನು ಅನುವಾದ ಮಾಡಿ ತೋರಿಸಿದ ನಂತರ, ಅವನ ನಿರೀಶ್ವರವಾದೀ ಅಸ್ತಿತ್ವವಾದದ ಬಗೆಗೆ ಒಪ್ಪಿಗೆ ಇಲ್ಲದ ಅಣ್ಣಾ, ಸಾರ್ತ್ರನ ಸಾಹಿತ್ಯದ-ಜೀವನತತ್ವದ ಬಗೆಗೆ ಎಷ್ಟೋ ಸೂಕ್ಷ್ಮವಾದ ವಿಷಯಗಳನ್ನು, ಅನೇಕ ಬಗೆಯಲ್ಲಿ ನನಗೆ ತಿಳಿಸಿಕೊಟ್ಟರು.

ಮಾಸ್ತಿ ವೆಂಕಟೇಶ ಅಯ್ಯಂಗಾರರ `ಸುಬ್ಬಣ್ಣ~ ಕಾದಂಬರಿಯನ್ನು  ನನಗೆ ಕೊಟ್ಟು, ಅದರ ಮರಾಠಿ ಅನುವಾದವನ್ನು ಮಾಡಲು ಹೇಳಿದ್ದರು. ಈ ಭಾಷಾಂತರದ ಕೆಲಸದ ಸಲುವಾಗಿ ಸ್ವತಃ ಮಾಸ್ತಿ ಅವರ ಬಾಯಿಂದಲೇ ಅವರ ಆ ಕೃತಿಯ ಸೂಕ್ಷ್ಮವನ್ನು ತಿಳಿಯುವ ಸಂದರ್ಭವೂ ನನಗೆ ಒದಗಿಬಂದಿತ್ತು.

ಅಣ್ಣಾ ಅವರು ಹೇಳಿದಂತೆ ನಾನು ಮಾಡಿದ ಆ ಭಾಷಾಂತರವನ್ನು ನಾನು ಎಂದಿಗೂ ಪ್ರಕಟಿಸಲಿಲ್ಲ. 1948ರಿಂದ 1954ರವರೆಗಿನ ಆ ಏಳು ವರ್ಷಗಳಲ್ಲಿ ಬಹುಶಃ ಅಣ್ಣಾ ಅವರ ಸಹವಾಸದಿಂದಾಗಿ ನಾನು ಮಾಡಿದ ಎಲ್ಲ ಲೇಖನಗಳೂ ನನಗೇ ಸುಳ್ಳಾಗಿವೆ ಎನ್ನಿಸತೊಡಗಿದವು.

ನಾನು ಶಾಲಾ ವಿದ್ಯಾರ್ಥಿ ಇದ್ದಾಗಲೇ ಅತ್ಯಂತ ಗುಣಮಟ್ಟದ ಸಾಪ್ತಾಹಿಕಗಳಲ್ಲಿ, ಮಾಸಿಕಗಳಲ್ಲಿ ನನ್ನ ಲೇಖನಗಳು ಪ್ರಕಟವಾಗಿದ್ದವು. ತನ್ನ ಲೇಖನಗಳು ಪ್ರಕಟವಾಗಿ ಬಂದಾಗಿನ ಹೊಸ ಲೇಖಕನ ಸಂತೋಷಗಳನ್ನು ನಾನು ಸಣ್ಣವನಿದ್ದಾಗಲೇ ಅನುಭವಿಸಿದ್ದೆ.

ನನ್ನ ಬರವಣಿಗೆಯ ಬಗೆಗೆ ನಾನೇ ಖುಷಿಪಡುವ ನನ್ನ ಆ ಎಳೆವಯಸ್ಸಿನಲ್ಲಿ ಅಣ್ಣಾ, ಶಬ್ದಗಳ ಸಾಧನೆ ಅದೆಷ್ಟು ಕಠಿಣ ಎಂಬುದನ್ನು ತಿಳಿಸಿಕೊಟ್ಟರು. ಯಾರ‌್ಯಾರದೋ ಅನುಕರಣ ಮಾಡುವುದು, ಇಲ್ಲವೇ ಶಬ್ದಗಳ ಜೊತೆಗೆ ಸರ್ಕಸ್ ಮಾಡುವುದು, ಇವುಗಳಿಗಿಂತ, ಬರೆಯದಿರುವದೇ ಒಳ್ಳೆಯದೆಂದೂ ನನಗೂ ಅನ್ನಿಸತೊಡಗಿತು.

ನಿಜವಾಗಿಯೂ ಬರೆಯಬೇಕೆನ್ನಿಸಿದಾಗ ಮಾತ್ರ ಬರೆಯಬೇಕೆಂದು ಅಣ್ಣಾ ಹೇಳುತ್ತಲೇ ಇದ್ದರು. ಬರಹದಲ್ಲಿ, ಮಾತಿನಲ್ಲಿ ಮನುಷ್ಯನ ವ್ಯಕ್ತಿತ್ವ ಸ್ಪಷ್ಟ ಹೊಳೆಯಬೇಕು ಎಂದವರು ಹೇಳುತ್ತಿದ್ದರು. ಮರಾಠಿಯಂತೆಯೇ ಅನ್ಯ ಭಾಷೆಯಲ್ಲೂ ಬರೆಯಲು, ಮಾತನಾಡಲು ಬರಬೇಕೆಂದವರ ಅಭಿಪ್ರಾಯವಾಗಿತ್ತು. ಅವರ ಆ ಆಗ್ರಹದಿಂದಲೇ, ಅಷ್ಟಿಷ್ಟಾದರೂ ನಾನು ಹಿಂದೀ, ಮತ್ತು ಇಂಗ್ಲಿಷಿನಲ್ಲಿ ಬರೆಯಲು ಮಾತನಾಡಲು ಕಲಿತೆ.

ಆದರೆ ನಾನೆಂದೂ ಕನ್ನಡವನ್ನು ಕಲಿಯಲಿಲ್ಲ. ನನ್ನ ಅಜ್ಜಂದಿರು ಧಾರವಾಡದವರೇ ಆಗಿದ್ದರು. ನನ್ನ ಅಜ್ಜಿ, ತಂದೆ, ತಾಯಿ, ಕನ್ನಡದಲ್ಲಿ ಚೆನ್ನಾಗಿ ಮಾತಾಡುತ್ತಿದ್ದರು. ಅಣ್ಣಾ ನನಗೂ ಕನ್ನಡವನ್ನು ಕಲಿಯಲು ಹೇಳುತ್ತಿದ್ದರು. ಆದರೆ ಅದು ಆಗಲೇ ಇಲ್ಲ. ಹೀಗಾಗಿ ಅಣ್ಣಾ ಅವರು ಓದುತ್ತಿದ್ದ ಅವರ ಕನ್ನಡ ಕವಿತೆಗಳ ನಾದ-ಮಾಧುರ್ಯ ಮಾತ್ರ ನನಗೆ ಹೊಳೆಯುತ್ತಿತ್ತು. ಉಳಿದದ್ದೇನೂ ತಿಳಿಯುತ್ತಿರಲಿಲ್ಲ, ಒಬ್ಬ ಸೃಜನಶೀಲ ಲೇಖಕರಾಗಿ ಅಣ್ಣಾ ಬಹಳ ಉಚ್ಚ-ಪ್ರತಿಭೆಯುಳ್ಳವರು ಎಂದು ತಿಳಿದವರು ಹೇಳುತ್ತಿದ್ದರು.

ಸ್ಮಶಾನದಲ್ಲಿ ಅಣ್ಣಾ ಅವರ ಜತೆ ಎದುರು ನಿಂತಾಗ ಇವೆಲ್ಲ ಸಂಗತಿಗಳೂ ನೆನಪಿಗೆ ಬರುತ್ತಿವೆ. ಪಕ್ಕದಲ್ಲಿ ನಿಂತ ಇಬ್ಬರು- ಮೂವರು ಅಪರಿಚಿತ ತರುಣರು ಅಣ್ಣಾ ಕವಿತೆಗಳನ್ನು ಗುಣಗುಣಿಸುತ್ತಿದ್ದಾರೆ. ಸುಮಾರು ಮೂವತ್ತು ವರ್ಷಗಳ ಹಿಂದೆ ಭೀಮಸೇನ ಜೋಶಿ ಅವರು ಅಣ್ಣಾ ಅವರಿಗೆ ಹಾಡಿ ತೋರಿಸಿದ `ಉತ್ತರಧ್ರುವದಿಂ...~ ಕವಿತೆ, ಹಾಗೂ ಅವರ ಸ್ವರಗಳಿಗೆ ತಲೆದೂಗುತ್ತಿದ್ದ ಬೇಂದ್ರೆ ಇಬ್ಬರೂ ಕಾಣತೊಡಗುತ್ತಾರೆ.

ಇಷ್ಟೊತ್ತಿನವರೆಗೆ ಮಂತ್ರ ಹೇಳುತ್ತಿದ್ದ ಬ್ರಾಮ್ಹಣರು `ಯಾರದೇ ಭಾಷಣ ಮಾಡಾವ್ರಿದ್ದರ ಈಗ ಮಾಡರಿ~ ಎಂದರು. ಯಾರೂ ಭಾಷಣ ಮಾಡಲಿಲ್ಲ. ನನಗೂ ಸಮಾಧಾನವಾಯಿತು. ಏಕೆಂದರೆ ಸ್ಮಶಾನದಲ್ಲಿ ನಡೆಯುವ ಭಾಷಣ ಇತ್ಯಾದಿ ಕಾರ್ಯಕ್ರಮಗಳು ನನಗಂತೂ ಹಿಡಿಸುವುದಿಲ್ಲ. ಅಣ್ಣಾ ಅವ್ರಿಗೂ ಇಂಥ ಔಪಚಾರಿಕತೆ ಹಿಡಿಸುತ್ತಿರಲಿಲ್ಲ. ಅವರ ಅಂತ್ಯಸಂಸ್ಕಾರದ ಮೊದಲು ಯಾರಾದರೂ ಭಾಷಣ ಮಾಡಿದ್ದರೆ ಅದು ಅಸಂಗತವೆನಿಸುತ್ತಿತ್ತು.

ಅಣ್ಣಾ ಅವರು ಲೇಖಕರಾಗಿಯಂತೂ ದೊಡ್ಡವರೇ ಇದ್ದರು. ಅಧ್ಯಯನಶೀಲರು ಪಾಂಡಿತ್ಯದ ಪ್ರತ್ಯುತ್ಪನ್ನಮತಿಯುಳ್ಳವರಾಗಿಯೂ ಅವರು ಬಹಳ ಧೀಮಂತರಾಗಿದ್ದರು. ಆದರೆ ಆ ರಾತ್ರಿ ನಮ್ಮೆಲ್ಲರಿಗೂ ಮತ್ತೆಮತ್ತೆ ನೆನಪಾಗುತ್ತಿದ್ದುದು, ಕುಟುಂಬವತ್ಸಲರಾದ ಬೇಂದ್ರೆ, ಅಂತಃಕರಣದ, ಪಿತೃಸ್ವರೂಪರಾದ ಅವರ ರೂಪವೇ. ಪುಸ್ತಕಗಳನ್ನು ಪ್ರೀತಿಸುವ ಪಂಡಿತರು ಮನುಷ್ಯರನ್ನೂ ಪ್ರೀತಿಸುತ್ತಾರೆಂದೇನೂ ಇಲ್ಲ.

ಅನೇಕ ಸಲ ಈ ಪುಸ್ತಕ ಓದುವ ಹುಚ್ಚಿನವರು ಮನುಷ್ಯದ್ವೇಷಿ ಆಗುವುದೇ ಹೆಚ್ಚು. ತಮ್ಮ ಜ್ಞಾನಸಮಾಧಿಗೆ ಭಂಗ ತರುವರೆಂದೇ ಎಲ್ಲರನ್ನೂ ಭಾವಿಸಿ, ಬಂದವರ ಜೊತೆ ಮೇಲು-ಮೇಲಿನ ಮಾತನಾಡಿ ಹಿಂದೆ ಕಳಿಸುವ ಜನ ಇವರು. ಅಣ್ಣಾ ಅವರಿಗೆ ಮಾತ್ರ ಹೀಗಾಗಲಿಲ್ಲ. ಎಷ್ಟೇ ವರ್ಷದ ಮೇಲೆ ಮಿತ್ರ ಭೇಟಿಯಾದರೂ, ಅವರ ಸಂಬಂಧಿಗಳ ಬಗೆಗೂ ಅಣ್ಣಾ ಉಭಯಕುಶಲೋಪರಿ ಕೇಳುತ್ತಿದ್ದರು.

ಜ್ಞಾನಪೀಠ ಪ್ರಶಸ್ತಿ ಬಂದ ನಂತರ ಅವ್ರಿಗೆ ಮುಂಬಯಿಯಲ್ಲಿ ಒಂದು ಬೃಹತ್ ಸಾರ್ವಜನಿಕ ಸತ್ಕಾರವೂ ನಡೆಯಿತು. ಆ ಗದ್ದಲದಲ್ಲೂ ಅವರು ವೇಳೆ ಮಾಡಿಕೊಂಡು ನಮ್ಮ `ಸಾಹಿತ್ಯ-ಸಹವಾಸ~ಕ್ಕೆ ಬಂದರು. ನನ್ನ ತಾಯಿಯ ಜೊತೆ ಕನ್ನಡದಲ್ಲಿ ಮಾತನಾಡುತ್ತ ನಮ್ಮೆಲ್ಲರ ಬಗೆಗೆ ಕೌತುಕದ ಮಾತುಗಳನ್ನಾಡಿದರು. ಅವರ ಸೊಲ್ಲಾಪೂರದ ಮನೆಯಲ್ಲಿದ್ದ ಒಂದು ಬೆಕ್ಕಿನ ಬಗೆಗೂ ಯಾರೋ ಅಗಲಿದ ತಮ್ಮ ಸಂಬಂಧಿಯನ್ನು ಕುರಿತು ಮಾತಾಡಿದಷ್ಟೇ ಆತ್ಮೀಯವಾಗಿ ಮಾತನಾಡಿದರು.
 
ಅಣ್ಣಾ ಅವರ ಮನುಷ್ಯನ ಬಗೆಗಿನ ಪ್ರೀತಿ, ಮಾನವ ಜೀವನದ ಬಗೆಗಿನ ಕುತೂಹಲ ಅವರಿಗೆ ಎಂಬತ್ತು ಎಂಬತ್ತೈದು ವರ್ಷಗಳಾಗಿ ಹೋಗಿದ್ದರೂ ಎಂದೂ ಕಡಿಮೆಯಾಗಿರಲಿಲ್ಲ. ಅಂತೆಯೇ ಅವರು ಎಲ್ಲಿಯೇ ಹೋದರೂ ಅಲ್ಲಿ ಚಿಂತನಶೀಲ ಹಿರಿಯರ, ಹಾಗೂ ಮಕ್ಕಳ ಗದ್ದಲ ತುಂಬಿರುತ್ತಿತ್ತು.

ಚಿತೆಗೆ ಅಗ್ನಿಸ್ಪರ್ಶವಾಗುತ್ತಿದ್ದಂತೆಯೇ ಕೆಲವರು `ಬೇಂದ್ರೆ ವಾಣಿ ಅಮರವಾಗಲಿ~ ಎಂದು ಜಯಘೋಷ ಮಾಡುತ್ತಿದ್ದಾರೆ. ಅಷ್ಟರಲ್ಲೇ ತೀರ ಅವಸರದಿಂದ ಒಳಬಂದ ಮರಾಠಿ ಸಾಹಿತ್ಯ ಸಂಘದ ಬಾಪೂರಾವ ನಾಯಿಕ ಅವರು ಸಂಘದ ವತಿಯಿಂದ ಹೂಮಾಲೆ ಹಾಕುತ್ತಾರೆ.

ಅಣ್ಣಾ ಅವರ ಪಾರ್ಥಿವ ಶರೀರ ನೋಡು ನೋಡುತ್ತಿದ್ದಂತೆಯೇ ಇಲ್ಲವಾಗುತ್ತದೆ. ನಾವೆಲ್ಲ ಅಣ್ಣಾ ಅವರ ಅಂತಃಕರಣದ ನೆನಪುಗಳನ್ನು ಮಾಡಿಕೊಳ್ಳುತ್ತ ಸ್ಮಶಾನದಿಂದ ಮರಳುತ್ತೇವೆ. ಈಗಲೂ ಆಕಾಶದಲ್ಲಿ ಬಾಣಗಳು ಸಿಡಿಯುತ್ತಿವೆ. ರಸ್ತೆಗಳಲ್ಲಿ ಪಟಾಕಿಗಳ ಧಡಧಡಾಟ ಹೆಚ್ಚಾಗುತ್ತಿದೆ. ಆಕಾಶಬುಟ್ಟಿಗಳಿಂದ ಊರು ಇನ್ನೂ ಹೆಚ್ಚು ಬೆಳಕಿನಿಂದ ಪ್ರಜ್ವಲಿಸುತ್ತಲೇ ಇದೆ.

(ಅ.26ರ ಬುಧವಾರ ಧಾರವಾಡದ ಸಾಧನಕೇರಿಯ `ಬೇಂದ್ರೆ ಭವನ~ದಲ್ಲಿ ಬೇಂದ್ರೆ ಸ್ಮರಣೆ ಹಾಗೂ ಯುವ ಲೇಖಕರಿಗೆ `ಬೇಂದ್ರೆ ಪುಸ್ತಕ ಬಹುಮಾನ~ದ ಪುರಸ್ಕಾರ.)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT