ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನು ಕವಿಯಲ್ಲ, ಹಾಡುಗಾರ...

Last Updated 23 ಏಪ್ರಿಲ್ 2011, 19:30 IST
ಅಕ್ಷರ ಗಾತ್ರ

 ಜಗತ್ತಿನ ಪ್ರಕಾರ ನಾನೊಬ್ಬ ನಾಟಕಕಾರನಲ್ಲ, ಸಾಹಿತಿಯಲ್ಲ, ಕವಿಯಲ್ಲ, ಅಥವಾ ಪ್ರಕಟಿತ ನೆಲೆಗಳಲ್ಲಿರಬಹುದಾದ ಏನೊಂದೂ ನನ್ನಲ್ಲಿಲ್ಲ. ನನ್ನದು ಅಪ್ರಕಟಿತ ಸಾಹಿತ್ಯವೇ ಹೆಚ್ಚು. ಕನ್ನಡ ಸಾಹಿತ್ಯದ ಪ್ರಮುಖ ಧಾರೆಯಲ್ಲಿ ನಾನು ಹೆಚ್ಚು ಅಭಿವ್ಯಕ್ತಿಗೊಂಡವನಲ್ಲ. ಅಂಥದ್ದೇನೂ ನಾನು ಬರೆದಿಲ್ಲ. ನನ್ನದು ಮಾಡೆಲ್‌ ಸೆಟ್ಟಿಂಗ್‌ ಬರಹವೇನಲ್ಲ. ನನ್ನದೆಲ್ಲ ಕಿರುಧಾರೆಗಳು. ಬಂಡೆಯ ಬಿರುಕಿನ ಪಯಣಗಳು ಎಂಬುದು ನನಗೆ ಕೇವಲ ರೂಪಕವಲ್ಲ. ಅದು ನಾನು ಬದುಕುವ ಬಗೆ. ಹೀಗಾಗಿ ನನ್ನಂಥವನಿಗೆ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಬಂದರೆ ಪ್ರಶ್ನೆಗಳು ಏಳುವುದು ಸಹಜ.

ನಾನು ಬರೆಯಲು ಆರಂಭ ಮಾಡಿದ್ದು ಹಾಡುಗಾರನಾಗಿ. ಗದ್ದರ್‌, ಚರಬಂಡರಾಜು ಸೇರಿದಂತೆ ನಾನು ತೆಲುಗಿನ ಅತ್ಯುತ್ತಮ ಗೀತೆಗಳನ್ನು ಅನುವಾದ ಮಾಡಿದ್ದೇನೆ. ಅವುಗಳನ್ನು ಜನ ಹಾಡಿದ್ದಾರೆ. ಆದರೆ ಅವರು ಪ್ರಕಟಗೊಂಡಿಲ್ಲ. ನನ್ನ ಮತ್ತು ನನ್ನಂಥ ಹತ್ತಾರು ಜನರ ಪ್ರಯಾಣದ ಭಾಗವಾಗಿ ಬಂದ ಹಾಡುಗಳವು. ಅವುಗಳ ಮಾಲಿಕತ್ವವನ್ನು ಕೇಳುವುದು ಹೇಗೆ ಎಂಬ ಪ್ರಶ್ನೆ ಇತ್ತು. ಹೀಗಾಗಿ ಇದುವರೆಗೂ ನಾನು ಅವುಗಳನ್ನು ಪ್ರಕಟಿಸಿಲ್ಲ.

ಪ್ರಕಟಿಸಬೇಕೆಂದು ನನ್ನ ಗೆಳೆಯರಾದ ಲಕ್ಷ್ಮೀಪತಿ ಕೋಲಾರ ಮತ್ತು ಪಿಚ್ಚಳ್ಳಿ ಶ್ರೀನಿವಾಸ್‌ ಕೆಲವು ವರ್ಷಗಳ ಹಿಂದೆ ಒತ್ತಾಯಿಸಿದರು. ಹಾಡುಗಳನ್ನು ಸಂಗ್ರಹಿಸಿದರು. ಪುಸ್ತಕ, ಕ್ಯಾಸೆಟ್‌ ರೂಪದಲ್ಲಿ ತರುವ ಪ್ರಯತ್ನ ನಡೆಸಿದರು. ಪ್ರಕಟಿಸುವುದನ್ನೇ ದೊಡ್ಡ ಸಂಭ್ರಮವಾಗಿ ಆಚರಿಸುವುದು ಬೇಡ ಎಂದು ನಾನು ಹೇಳಿದಾಗ ಆ ಪ್ರಯತ್ನ ಮುರಿದು ಬಿತ್ತು. ನನ್ನ ಹಾಡುಗಳು ಅನ್ನುವಂಥವು ಯಾವುದೂ ಇಲ್ಲ. ಆಯಾ ಸಂದರ್ಭಕ್ಕೆ ಹಾಡು ಬರೆದುಕೊಟ್ಟು ಬಂದಿರುವವನು ನಾನು. ಮೂವತ್ತೈದು ವರ್ಷದ ಅವಧಿಯಲ್ಲಿ ನಾನು ಒಂದು ಸಾವಿರ ಹಾಡುಗಳನ್ನು ಬರೆದಿರಬಹುದು.

ಮೊದಲಿಂದಲೂ ನಾನು ಕವಿ ಎನ್ನುವುದನ್ನು ತಿರಸ್ಕರಿಸುತ್ತಿದ್ದೆ. ದಯಮಾಡಿ ಕ್ಷಮಿಸಬೇಕು, ನಾನು ಕವಿಯಲ್ಲ, ಹಾಡುಗಾರ ಎಂದು ಹಲವೆಡೆ ಹೇಳಿದ್ದೆ. ಆದರೆ ಕವಿತೆ ಬರೆಯಬೇಕೆಂಬ ಆಸೆಯಂತೂ ಇತ್ತು. ಕೋಲಾರದ ಬಾಲಕರ ಸರ್ಕಾರಿ ಕಾಲೇಜಿನಲ್ಲಿ ಪಿಯುಸಿ ಓದುವಾಗ `ಸದ್ದಿಗಂಜುವ ಬುದ್ಧ~ ಕವಿತೆ ಬರೆದಾಗ, ಅಲ್ಲಿ ಆಗ ಉಪನ್ಯಾಸಕರಾಗಿದ್ದ, ಎಂ.ಎಚ್‌.ಕೃಷ್ಣಯ್ಯ ಪ್ರೋತ್ಸಾಹ ನೀಡಿದರು.

ಬಡವರ ಮಾಧ್ಯಮವಾದ ಬೀದಿ ನಾಟಕಗಳನ್ನೂ ನಾನು ಬರೆದಿರುವೆ. ಅದರ ರೂಪ ತನ್ನ ಘನತೆಯನ್ನು ಕಳೆದುಕೊಂಡು ಕೇವಲ ಘೋಷಣೆಗಳಲ್ಲೇ ಉಳಿದು ಇನ್ನೇನು ಕಳೆದೇಹೋಯಿತು ಎನ್ನುವಾಗ, ಅದಕ್ಕೆ ಘನತೆ ತರುವುದು ಹೇಗೆ ಎಂಬುದನ್ನೂ ಪ್ರಯತ್ನಿಸಿರುವೆ. ಎಲ್ಲವನ್ನೂ ಸೇರಿಸಿದರೆ ನಾನು 50-60 ಬೀದಿ ನಾಟಕಗಳನ್ನು ಬರೆದಿರಬಹುದು.

ಶಿಕ್ಷಣ ಸಾಧನವಾಗಿಯೂ ನನಗೆ ನಾಟಕ ಪ್ರಯೋಜನಕ್ಕೆ ಬಂದಿದೆ. ದಲಿತ ಮಹಿಳೆಯರು, ಮೊದಲ ಬಾರಿಗೆ ಗ್ರಾಮ ಪಂಚಾಯತಿ ಸದಸ್ಯೆಯರಾದವರಿಗೆ ತರಬೇತಿ ಸಲುವಾಗಿ ವಿಭಿನ್ನವಾದ ನಾಟಕ ಮಾದರಿಗಳನ್ನು ರೂಪಿಸಿರುವೆ. ಕೇರಳ, ಪಶ್ಚಿಮ ಬಂಗಾಲ, ಗುಜರಾತ್‌, ರಾಜಾಸ್ತಾನ, ಬಿಹಾರಗಳೂ ಅದನ್ನು ಮಾದರಿಯನ್ನಾಗಿ ಸ್ವೀಕರಿಸಿದವು. ವಿಶ್ವಬ್ಯಾಂಕ್‌ ಯೋಜನೆಗಳ ಅಡಿಯಲ್ಲಿ ಸಮುದಾಯಗಳಲ್ಲಿ ಅರಿವು ಮೂಡಿಸುವ ಯೋಜನೆಗಳ ಹಣವನ್ನು ಬೀದಿನಾಟಕಕ್ಕಾಗಿ ಅರ್ಥಪೂರ್ಣವಾಗಿ ಬಳಸಿರುವೆ. ಈಗ ಅನುದಾನಗಳು ಕೆಟ್ಟ ರೀತಿಯಲ್ಲಿ ಬಳಕೆಯಾಗುತ್ತಿದೆ. ಮುಂದಿನ ಐದು ವರ್ಷಗಳಲ್ಲಿ ಯಾವ ಜಿಲ್ಲೆಯಲ್ಲೂ ಕಲಾವಿದರು ಸಿಗುವುದಿಲ್ಲ. ಏಕೆಂದರೆ ಬೀದಿ ನಾಟಕ ಅತ್ಯಂತ ಕೆಟ್ಟ ರೂಪವನ್ನು ಪಡೆದಿದೆ. ನಾನು ಬರೆದವು ಹದಿನೈದು ಮಕ್ಕಳ ನಾಟಕಗಳಿರಬಹುದು. ಅದರಲ್ಲಿ ನಾಲ್ಕೈದು ಪ್ರಕಟಗೊಂಡಿರಬಹುದು. ಎಲ್ಲವೂ ಪ್ರಯೋಗಗೊಂಡಿವೆ. ನಡೆಯಲ್ಲಿವೆ. ಅವುಗಳನ್ನು ನಾನು ಐತಿಹಾಸಿಕ ಸಂದರ್ಭವೊಂದರಲ್ಲಿ ಬರೆಯುತ್ತಿರುವೆ. ಜಾಗತೀಕರಣ ಸಂದರ್ಭದಲ್ಲಿ ಅಗತ್ಯವಾಗಿ ಗಮನಿಸಲೇಬೇಕಾದ ಶಿಕ್ಷಣ ಸಾಧನವಾಗಿ ನಾಟಕ ಬರೆಯುತ್ತಿದ್ದೇನೆ.

ನನ್ನದು ದುಬಾರಿ ಕನಸು. ಉಳಿವಿನ ಪಠ್ಯಗಳನ್ನು ಆಧರಿಸಿದ ನನ್ನದೇ ವಿಶ್ವವಿದ್ಯಾಲಯವನ್ನು ರೂಪಿಸಬೇಕಾಗಿದೆ. ಎನ್‌ಎಸ್‌ಡಿ, ರಂಗಾಯಣ, ನೀನಾಸಂ ಸೇರಿದಂತೆ ಎಲ್ಲ ರಂಗಶಿಕ್ಷಣ ಸಂಸ್ಥೆಗಳಿಗೂ ನನ್ನದೊಂದು ಪ್ರಶ್ನೆ ಇದೆ. ಇವತ್ತಿಗೆ ಬೇಕಾದ ನಮ್ಮ ನೆಲದ ಉಳಿವಿನ ಪಠ್ಯ (ಸರ್ವೈವಲ್‌ ಟೆಕ್ಸ್ಟ್‌) ಯಾವುದು? ಅದರೆ ಯಾರೊಬ್ಬರಲ್ಲೂ ಒಂದು ಉತ್ತರವೂ ಇಲ್ಲ. ಅವರೆಲ್ಲರಿಗೆ ಎಕ್ಸಲೆನ್ಸ್‌ ಇನ್‌ ಥಿಯೇಟರ್‌ ಬೇಕು. ಅದನ್ನು ಇಟ್ಕೊಂಡು ನಮಗೇನು ಪ್ರಯೋಜನ?

ಸಾಹಿತ್ಯವನ್ನು ನಾನು ರಸ್ತೆ ಬದಿ ಹೋರಾಟದ ನಡೆಗಳಲ್ಲಿ ನೋಡಿದವನು. ಅಧ್ಯಯನ ಶಾಸ್ತ್ರವಾಗಿ ನಾನು ಸಾಹಿತ್ಯವನ್ನು ಓದಿಲ್ಲ. ಕನ್ನಡ ಸಾಹಿತ್ಯವೆಂದರೆ ನನಗೆ, ಸುಗ್ರಾಸ ಭೋಜನ ಮಾಡಿದವರು ನಂತರ ಎಲೆ, ಅಡಿಕೆ, ಲವಂಗ ಮೆಲ್ಲುತ್ತಾ ಆಡುತ್ತಿರುವ ಮಾತಷ್ಟೇ ಆಗಿ ಕಾಣುತ್ತಿದೆ. ಪರ್ಯಾಯಗಳ ಬಗ್ಗೆ ಮಾತನಾಡುತ್ತಿರುವವರೂ ಸೇರಿದಂತೆ ಎಲ್ಲ ಪ್ರಕಾರಗಳಲ್ಲಿ ಬರೆಯುತ್ತಾ ಮಾತನಾಡುತ್ತಿರುವವರು, ಹುಡುಕಾಡುತ್ತಿರುವವರು ಮಾಡುತ್ತಿರುವ ಕೆಲಸ ಅಷ್ಟೇ. ಅಂದರೆ ಅವರಿಗೆ ತಮ್ಮ ಸುತ್ತಲಿರುವ ಹಸಿವಿನ ಬಗ್ಗೆಯಾಗಲೀ, ಗಾಯಗೊಳ್ಳುತ್ತಿರುವ ಜಗತ್ತಿನ ಬಗ್ಗೆಯಾಗಲೀ ಗಮನವಿಲ್ಲ. ಕನ್ನಡ ಸಾಹಿತ್ಯದಲ್ಲಿ ಮಾತಿನ ಮೂಲಕ ಅಭಿವ್ಯಕ್ತಿಗೊಳ್ಳುವ ಪದಗಳ ರಾಶಿ ಇದೆ; ನಿಜವಾದಂಥ ಕಾಳಿರುವ ಮಾತುಗಳಿಲ್ಲ. ಅಂಥವರು ಕಾಣಿಸುತ್ತಿಲ್ಲ ಎಂದಲ್ಲ. ಅಂಥದ್ದು ಕಾಣಿಸುತ್ತಿಲ್ಲ. ಇಂಥದ್ದಿದೆ ಎಂದು ಹೇಳಿ. ನಾನು ಚರ್ಚಿಸಲು ಸಿದ್ಧ.

ನನಗೆ ಯಾವುದೇ ಶಾಲೆಗಳಿಲ್ಲ. ನನ್ನ ತಲೆಮಾರಿನ ಮೊಟ್ಟ ಮೊದಲ ಅಕ್ಷರಸ್ಥ ನಾನು. ನನಗೆ ದೊರೆತ ಪ್ರತಿ ಶಾಲೆಯೂ ಇದು ನನ್ನ ಶಾಲೆಯಲ್ಲ ಎನ್ನಿಸುತ್ತಿತ್ತು. ಹೀಗಾಗಿ ನನಗೆ ಯಾವ ಶಾಲೆಯ ಜೊತೆಗೂ ಜೀವಂತ ಸಂಬಂಧ ಏರ್ಪಡಲೇ ಇಲ್ಲ. ಆದರೆ ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿ ಎಂಬ ಹೊಗಳಿಕೆಯ ನಡುವೆ ನಾನು ನನ್ನ ಬೇರುಗಳನ್ನು, ಭಾಷೆಯನ್ನು ಕಳೆದುಕೊಂಡೆ. ಆರನೇ ಕ್ಲಾಸ್‌ನಿಂದಲೇ ಶಾಲೆಯಿಂದ ಡಿಸ್‌ಕನೆಕ್ಟ್‌ ಆದೆ. ಬದುಕಿನಿಂದ ದೊರಕುವುದನ್ನು ಬಿಟ್ಟು, ಪುಸ್ತಕಗಳ ಮೂಲಕ ಬರುವುದನ್ನೇ ಕಲಿಯುವ ಕೆಲಸ ಮಾಡಿದೆ. ಬುದ್ಧಿವಂತ ಎನಿಸಿಕೊಳ್ಳುತ್ತಿದ್ದೆ. ಆದರೆ ನಾನು ಖಾಲಿಯಾಗಿದ್ದೆ.

ದಲಿತ ಚಳವಳಿ ನನಗೆ ಇದುವರೆಗೂ ಸಿಕ್ಕಿರುವಂಥ ದೊಡ್ಡ ಪಾಠಶಾಲೆ. ಆದರೆ ಪಾಠಗಳು ಸಿಗಲೇಬೇಕಾದ ಕಾಲಘಟ್ಟದಲ್ಲಿ ಶಾಲೆಯಲ್ಲಿದ್ದ ಸಾಮಗ್ರಿಗಳು ಮರೆಯಾದವು, ಬೋರ್ಡ್‌ ಯಾರೋ ಕಿತ್ತುಕೊಂಡು ಹೋದರು, ಪಾಟಿಚೀಲ ಇಲ್ಲ, ಮೇಷ್ಟೇ ಇಲ್ಲ, ವಿದ್ಯಾರ್ಥಿಗಳೇ ಇಲ್ಲ. ಆಗ, ಇದಲ್ಲ ನನ್ನ ಶಾಲೆ ಎಂದು ಮತ್ತೆ ಅನಿಸಿತು. ಈಗ ಈ `ಆದಿಮ~ (ಕೋಲಾರದ ಆದಿಮ ಸಾಂಸ್ಕೃತಿಕ ಸಂಘಟನೆ) ಶಾಲೆಗೆ ಬಂದು ನಿಂತಿದ್ದೀನಿ. ಇದು ಕೂಡ ಶಾಲೆಯಲ್ಲ ಎಂದೆನಿಸಿದರೆ ಇಲ್ಲಿಂದಲೂ ಮತ್ತೆ ಹುಡುಕಾಟ ಶುರುಮಾಡಬೇಕಷ್ಟೆ.

ಈಗ, ಶಾಲೆ ಯಾವುದಿರಬೇಕು ಎಂಬ ಕುರಿತು ನನಗೆ ಬಹಳ ಖಚಿತವಾದ, ತಾತ್ವಿಕವಾದ ನಿಲುವಿದೆ. ನಾನು ಇದುವರೆಗೂ ಮಕ್ಕಳೊಡನೆ ನಡೆಸಿದ ಮುಖಾಮುಖಿಯಲ್ಲಿ ಬಹಳ ಮನವರಿಕೆಯಾಗಿದೆ. ಮುಂದಿನ ಶಾಲೆ ಯಾವ ರೀತಿ ಇದ್ದರೆ ಮಕ್ಕಳಿಗೆ ಅನುಕೂಲ ಎಂಬುದರ ಬಗ್ಗೆ ಕನಸಿದೆ. ಅದು ಹೊಸ ವಿಶ್ವವಿದ್ಯಾಲಯದ ಜೀವಕಲಾ ಶಾಲೆಯ ಕನಸು. ಅದು `ಆದಿಮ~ದ ನೆರಳಲ್ಲಿರುವಂಥದ್ದಲ್ಲ, ಅದನ್ನು `ಆದಿಮ~ದ ಮುಂದುವರಿಕೆಯಾಗಿಯೇ ನೋಡಬೇಕು. ಇಲ್ಲಿ ಅಗೆದರೆ ನೀರು ಸಿಗುತ್ತೆ ಎಂದು ಅಗೆಯುತ್ತೇವೆ. ಸಿಗಲಿಲ್ಲವೆಂದರೆ ಮತ್ತೆ ಬೇರೊಂದು ಕಡೆ ಅಗೆಯಲೇಬೇಕು. ಜೀವಸೆಲೆಗಳ ಹುಡುಕಾಟ ನಿಲ್ಲುವಂತಿಲ್ಲವಲ್ಲ.

ಪ್ರಶಸ್ತಿ ಅನಿರೀಕ್ಷಿತ. ನನಗೆ ಸಾಕಷ್ಟು ಕನಸುಗಳಿವೆ. ಅವೆಲ್ಲ ದುಬಾರಿ ಕನಸುಗಳು. ಅಲ್ಲಿಯೇ ಸಿಲುಕಿಕೊಂಡಿರುವೆ ನಾನು. ಅವುಗಳ ಜೊತೆಗೆ ಯಾರಾದರೂ ಬಂದು ಸೇರಿಕೊಳ್ಳುವುದಕ್ಕೆ ಈ ಪ್ರಶಸ್ತಿ ಸಹಾಯಕವಾಗಿ ನಿಲ್ಲಬಹುದೇನೋ ಅನ್ನಿಸುತ್ತಿದೆ. ಪ್ರಶಸ್ತಿ ಬಂತೆಂದ ಕೂಡಲೇ ನನ್ನಲ್ಲಿ ಮೂಡಿದ ಪ್ರಶ್ನೆ ಅದರಿಂದ ಎಷ್ಟು ಹಣ ದೊರಕಬಹುದು ಎಂಬುದೇ. ನನ್ನ ಕನಸು ನನಸಾಗಲು ನನಗೆ ಈಗ ಸಾಕಷ್ಟು ಹಣ ಬೇಕು. ಪ್ರಶಸ್ತಿಯ ಹಣವನ್ನು `ಆದಿಮ~ಕ್ಕೆ ಬಳಸುವೆ.

ಈಗ ದೊರೆತಿರುವ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ನೆಲ ಸಂಸ್ಕೃತಿಯ ನಡೆಗೆ ಸಿಕ್ಕಿದ ಮನ್ನಣೆ. ಅದು, ಅಪ್ರಕಟಿತ ನೆಲೆಗಳಲ್ಲಿ ಉಳಿದು ಹೋಗಿರುವಂಥ, ಪ್ರಕಟವಾಗದೆ ರಂಗರೂಪಕ್ಕಿಳಿದ ಪ್ರಕಾರಗಳಿಗೆ ಸಂದ ಮನ್ನಣೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT