ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನು ತೃಪ್ತನಾಗಿಲ್ಲ: ಸಚಿನ್

Last Updated 3 ಜೂನ್ 2011, 19:30 IST
ಅಕ್ಷರ ಗಾತ್ರ

ಲಂಡನ್ (ಪಿಟಿಐ):  ಕ್ರಿಕೆಟ್ ಕ್ಷೇತ್ರದಲ್ಲಿ ಹಲವಾರು ದಾಖಲೆಗಳನ್ನು ಬರೆದಿರುವ ಸಚಿನ್ ತೆಂಡೂಲ್ಕರ್ ಅವರು `ನಾನು ತೃಪ್ತನಾಗಿಲ್ಲ~ ಎಂದು ಹೇಳುವ ಮೂಲಕ ಬೆರಗುಗೊಳಿಸಿದ್ದಾರೆ.

`ಕ್ರಿಕೆಟ್ ಪ್ರೀತಿ ನಿರಂತರ ಪ್ರವಾಹ, ಆಡುವ ಉತ್ಸಾಹ ಬತ್ತುವುದಕ್ಕೆ ಬಿಡುವುದಿಲ್ಲ~ ಎಂದು ಲಿಟಲ್ ಚಾಂಪಿಯನ್ ಖ್ಯಾತಿಯ ಬ್ಯಾಟ್ಸ್‌ಮನ್ ತೆಂಡೂಲ್ಕರ್ ಅವರು ಇಲ್ಲಿನ ಆಂಗ್ಲ ನಿಯತಕಾಲಿಕವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಭಾರತ ತಂಡವು ವಿಶ್ವಕಪ್ ಚಾಂಪಿಯನ್ ಪಟ್ಟ ಪಡೆಯುವುದರೊಂದಿಗೆ ತಮ್ಮ ಮಹತ್ವಾಕಾಂಕ್ಷೆಯ ಕನಸು ನನಸಾದ ಸಂತಸದಲ್ಲಿ ತೇಲಿದ `ಮುಂಬೈಕರ್~ ಇನ್ನು ತೃಪ್ತ ಎನ್ನುವ ಭಾವನೆ ಎಲ್ಲರಲ್ಲಿ ಇರುವುದು ಸಹಜ. ಆದರೆ ಸ್ವತಃ ಸಚಿನ್ ಹೀಗೆ ಭಾವಿಸುವುದಿಲ್ಲ. `ಎಲ್ಲವನ್ನೂ ಸಾಧಿಸಿದ್ದೇನೆ ಎಂದುಕೊಳ್ಳುವುದಿಲ್ಲ. ಇನ್ನೂ ಆಡಲು ಸಾಧ್ಯವಿದೆ. ಕೊನೆ ಎನ್ನುವುದೇ ಇಲ್ಲ. ಆದ್ದರಿಂದ ನಾನು ತೃಪ್ತಿ ಪಡುವುದಿಲ್ಲ~ ಎಂದು ಅವರು ಹೇಳಿದ್ದಾರೆ.

`ತಂಡವು ಗೆಲ್ಲುವಂಥ ಆಡವಾಡಿದಾಗ ಹಾಗೂ ಹೆಚ್ಚು ರನ್ ಮೊತ್ತವನ್ನು ಗಳಿಸಿದಾಗ ನಾನು ಮಾಧ್ಯಮಗಳಿಗೆ ಸಂತಸವಾಗಿದೆ ಎಂದು ಮಾತ್ರ ಪ್ರತಿಕ್ರಿಯೆ ನೀಡಿದ್ದೇನೆ. ಎಂದೂ ಸಂತೃಪ್ತನಾಗಿದ್ದೇನೆಂದು ಹೇಳಿಲ್ಲ. ಎಲ್ಲವನ್ನೂ ಸಾಧಿಸಿದ್ದೇನೆ ಎಂದು ಈಗಲೂ ನನಗೆ ಅನಿಸುವುದಿಲ್ಲ~ ಎಂದಿರುವ ಮಾಸ್ಟರ್ ಬ್ಲಾಸ್ಟರ್ `ಯಾವ ಹಂತದಲ್ಲಿ ನಾನು ತೃಪ್ತನೆಂದು ಅಂದುಕೊಳ್ಳುತ್ತೇನೋ ಅಲ್ಲಿಗೆ ಎಲ್ಲವೂ ನಿಂತು ಹೋಗುತ್ತದೆ. ಇದು ನನಗೆ ಮಾತ್ರ ಅನ್ವಯವಾಗುವ ಮಾತಲ್ಲ. ಯಾವುದೇ ಕ್ಷೇತ್ರದಲ್ಲಿ ಬೆಳೆಯುವ ಉತ್ಸಾಹ ಹೊಂದಿದವರಿಗೆ ಅನ್ವಯವಾಗುತ್ತದೆ~ ಎಂದು ತಿಳಿಸಿದ್ದಾರೆ.

ಎರಡು ದಶಕಕ್ಕೂ ಹೆಚ್ಚು ಕಾಲ ಅಂತರರಾಷ್ಟ್ರೀಯ ಕ್ರಿಕೆಟ್ ಜೀವನ ನಡೆಸಿರುವ ಬ್ಯಾಟ್ಸ್‌ಮನ್ ವಯಸ್ಸಿನ ಭಾರಕ್ಕೆ ಕುಗ್ಗಿಲ್ಲ. ಈಗಲೂ ಹಿಂದಿನ ಉತ್ಸಾಹವೇ ಇದೆ. ಕೆಲವು ವರ್ಷಗಳ ಹಿಂದೆಯೇ ಇರುವ ನಿವೃತ್ತಿ ಹೊಂದುವುದು ಸೂಕ್ತವೆಂದು ಕೆಲವು ಸಿನಿಕರು ಮಾತನಾಡಿದ್ದರು. ಆದರೆ ಅದಕ್ಕೆ ಕಿವಿಗೊಡದ ತೆಂಡೂಲ್ಕರ್ ಹೊಸದೊಂದು ಹುಮ್ಮಸ್ಸಿನೊಂದಿಗೆ ಮುನ್ನುಗ್ಗಿದರು. ಅಷ್ಟೇ ಅಲ್ಲ ಮತ್ತೆ ಹಲವಾರು ದಾಖಲೆಯ ಶ್ರೇಯವನ್ನು ಪಡೆದರು. ಈಗಲೂ ಅವರು ದಣಿದಿಲ್ಲ ಹಾಗೂ ತಾನು ತೃಪ್ತ ಎಂದುಕೊಳ್ಳುತ್ತಿಲ್ಲ.

`ಕ್ರಿಕೆಟ್ ಆಟವು ನನ್ನ ಜೀವನದ ಜೋಡಿ. ಅದನ್ನು ಬಿಟ್ಟು ಇರುವ ಬಗ್ಗೆ ಯೋಚನೆ ಮಾಡುವುದಕ್ಕೂ ಸಾಧ್ಯವಿಲ್ಲ. ಹೃದಯದ ತುಂಬಾ ಈ ಆಟವೇ ತುಂಬಿಕೊಂಡಿದೆ. ಹೀಗಿರುವಾಗ ಆಟದ ಅಂಗಳದಲ್ಲಿ ಇನ್ನಷ್ಟು ಕಾಲ ಮುಂದುವರಿಯಲು ಹೊರಗಿನಿಂದ ಪ್ರೇರಣೆ ಸಿಗಬೇಕಾದ ಅಗತ್ಯವೇ ಇಲ್ಲ~ ಎಂದಿರುವ ಅವರು `ಚಿಕ್ಕವನಾಗಿದ್ದಾಗ ದೇಶಕ್ಕಾಗಿ ಆಡುವ ಕನಸು ಕಂಡಿದ್ದೆ. ಅದು ನನಸಾಯಿತು. ಆದರೆ ನನಸಾದ ಆ ಕನಸಿನಲ್ಲಿ ಹೀಗೆಯೇ ಮುಂದುವರಿಯಲು ಇಷ್ಟಪಡುತ್ತೇನೆ~ ಎಂದಿದ್ದಾರೆ.

`ಆಟವನ್ನು ನಾನಿನ್ನೂ ಸಂಪೂರ್ಣವಾಗಿ ಕಲಿತಿಲ್ಲ. ಇಲ್ಲಿ ಅನುಭವದಿಂದ ಅರಿಯಬೇಕಾದ ಪಾಠಗಳು ಇನ್ನೂ ಸಾಕಷ್ಟಿವೆ. ಅಂಗಳದಲ್ಲಿ ಇರಲಿ-      ನೆಟ್ಸ್‌ನಲ್ಲಿಯೇ ಆಗಿರಲಿ ಮನಸ್ಸನ್ನು ಮುಕ್ತವಾಗಿಟ್ಟುಕೊಂಡು ಬ್ಯಾಟಿಂಗ್ ಮಾಡುತ್ತೇನೆ. ಪ್ರತಿಯೊಂದು ಎಸೆತವನ್ನು ಎದುರಿಸಿದಾಗಲೂ ಸಣ್ಣದೊಂದು ಪಾಠ ಕಲಿಯುತ್ತೇನೆ. ಹೀಗೆ ಈ ಕಲಿಕೆ ನಿರಂತರ~ ಎಂದಿದ್ದಾರೆ ಸಚಿನ್.

ಭಾರತ ತಂಡವು ವಿಶ್ವಕಪ್ ಗೆದ್ದ ಕ್ಷಣವನ್ನು ಸ್ಮರಿಸಿಕೊಂಡಿರುವ ಅವರು `ನಾನು ಆಗ ಕ್ಷೇತ್ರದಲ್ಲಿ ಇರಲಿಲ್ಲ. ಬಾಕಿ ಆಟಗಾರರ ಜೊತೆಗೆ ಬಾಲ್ಕನಿಯಲ್ಲಿ ನಿಂತಿರಲಿಲ್ಲ. ನಾನೊಬ್ಬನೇ ಡ್ರೆಸಿಂಗ್ ಕೋಣೆಯಲ್ಲಿ ಒಂಟಿಯಾಗಿ ನಿಂತು ಕಣ್ಣುಮುಚ್ಚಿಕೊಂಡು ದೇವರಿಗೆ ಕೃತಜ್ಞತೆ ಸಲ್ಲಿಸಿದ್ದೆ~ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT