ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನು ದುರ್ಬಲನಲ್ಲ: ಗುಡುಗಿದ ಸಿಎಂ

Last Updated 19 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ನಾನು ದುರ್ಬಲ ಸಿಎಂ ಅಲ್ಲ. ನನಗೂ ಗೊತ್ತು ಹೇಗೆ ಕೆಲಸ ಮಾಡ್ಬೇಕು ಅಂತ  ಹುಷಾರ್...!~
- ಹೀಗೆ ಗುಡುಗಿದ್ದು ಬೇರೆ ಯಾರೂ ಅಲ್ಲ, ರಾಜ್ಯದ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ.

ಸಚಿವ ಸಂಪುಟ ಸಭೆ ನಂತರ ಎಲ್ಲ ಅಧಿಕಾರಿಗಳನ್ನು ಹೊರಗೆ ಕಳುಹಿಸಿದ ಮುಖ್ಯಮಂತ್ರಿ ಸದಾನಂದ ಗೌಡ ತಮ್ಮ ವಿರುದ್ಧ ಹೇಳಿಕೆ ನೀಡುತ್ತಿರುವ ಯಡಿಯೂರಪ್ಪ ಬೆಂಬಲಿಗ ಸಚಿವರನ್ನು ತರಾಟೆಗೆ ತೆಗೆದುಕೊಂಡ ಘಟನೆ ಗುರುವಾರ ನಡೆದಿದೆ.

`ನಾನೂ ಪಕ್ಷಕ್ಕಾಗಿ ದುಡಿದಿದ್ದೇನೆ. ಪಕ್ಷದ ಅಧ್ಯಕ್ಷ ಕೂಡ ಆಗಿದ್ದೆ. ಮುಖ್ಯಮಂತ್ರಿಯಾಗಿ ಏನೆಲ್ಲ ಕೆಲಸ ಮಾಡಬೇಕು ಎಂಬುದು ನನಗೂ ಗೊತ್ತಿದೆ. ಸಭೆಯಲ್ಲಿ ನಿಲ್ಲಿಸಿಕೊಂಡು ಅವಮಾನ ಮಾಡುವ ಪರಿ ಸರಿ ಅಲ್ಲ~ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಬೀಳಗಿಯಲ್ಲಿ ಬುಧವಾರ ಸಚಿವ ಮುರುಗೇಶ ನಿರಾಣಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಿ.ಎಸ್.ಯಡಿಯೂರಪ್ಪ ಅವರನ್ನು ಹಾಡಿ-ಹೊಗಳಿದ್ದಲ್ಲದೆ ಶಿಷ್ಟಾಚಾರ ಉಲ್ಲಂಘಿಸಿ ತಮ್ಮನ್ನು ಕಡೆಗಣಿಸಿದ್ದು ಸೇರಿದಂತೆ ಸಚಿವರ ಇತ್ತೀಚಿನ ಕೆಲವು ಹೇಳಿಕೆಗಳು ಮುಖ್ಯಮಂತ್ರಿಯವರನ್ನು ಕೆರಳಿಸಿವೆ ಎಂದು ಗೊತ್ತಾಗಿದೆ.

`ಯಾರೋ ಒಬ್ಬರು ಮಾತ್ರ ಪಕ್ಷ ಕಟ್ಟಿದರು. ಅವರಿಂದಲೇ ಪಕ್ಷ ಅಧಿಕಾರಕ್ಕೆ ಬಂತು ಎಂದು ಹೇಳಿಕೊಂಡು ಮುಖ್ಯಮಂತ್ರಿಯನ್ನು ಅವಮಾನ ಮಾಡುವುದು ಸರಿಯಲ್ಲ. ಬಾಯಿಗೆ ಬೀಗ ಹಾಕಿಕೊಳ್ಳದಿದ್ದರೆ ಕಠಿಣ ಕ್ರಮ ಜರುಗಿಸಬೇಕಾಗುತ್ತದೆ~ ಎಂದೂ ಸಚಿವರಿಗೆ ಎಚ್ಚರಿಕೆ ನೀಡಿದರು ಎನ್ನಲಾಗಿದೆ.

`ಪಕ್ಷದ ಹೈಕಮಾಂಡ್ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಿ ಅಂತ ಹೇಳಿದ ಒಂದು ಗಂಟೆಯಲ್ಲಿ ಕೇವಲ ರಾಜೀನಾಮೆ ನೀಡುವುದಲ್ಲ, `ಅನುಗ್ರಹ~ವನ್ನೇ ಖಾಲಿ ಮಾಡುತ್ತೇನೆ. ಯಾವ ಪರಿಸ್ಥಿತಿಯಲ್ಲಿ ನಾನು ಸಿಎಂ ಆಗಿದ್ದು ಎಂಬುದನ್ನು ಎಲ್ಲರೂ ಅರಿಯಬೇಕು. ಅವಮಾನ ಮಾಡುವ ಹಾಗೆ ಹೇಳಿಕೆ ನೀಡಿದರೆ ಅದನ್ನು ಸಹಿಸುವುದಿಲ್ಲ. ನನಗೂ ಶಕ್ತಿ ಇದ್ದು, ಅದನ್ನು ತೋರಿಸಬೇಕಾಗುತ್ತದೆ~ ಎಂದು ಕಟುಶಬ್ದಗಳಲ್ಲಿ ಆಕ್ಷೇಪಿಸಿದರು.

ಸದಾನಂದ ಗೌಡರ ಆಕ್ರೋಶದಿಂದ ವಿಚಲಿತಗೊಂಡ ಯಡಿಯೂರಪ್ಪ ಬೆಂಬಲಿಗ ಸಚಿವರು ಮೌನಕ್ಕೆ ಶರಣಾಗಿದ್ದರು. ಒಂದು ಹಂತದಲ್ಲಿ ಅಬಕಾರಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರು `ಬಳ್ಳಾರಿಯಲ್ಲಿ ನಟಿ ಹೇಮಾಮಾಲಿನಿ ಅವರಿಗೆ ಪರಿಚಯಿಸುವಾಗ ನನ್ನನ್ನು ನೀವು ಡೇಂಜರಸ್ ಮಂತ್ರಿ ಅಂದು ಅವಮಾನ ಮಾಡಲಿಲ್ಲವೇ? ಅದು ಸರಿಯಾ~ ಎಂದು ಮುಖ್ಯಮಂತ್ರಿಯನ್ನು ಪ್ರಶ್ನಿಸಿದರು.

ಇದಕ್ಕೆ ಸದಾನಂದ ಗೌಡರು `ತಮಾಷೆ ಮಾಡುವುದು ಬೇಡ ಅಂದರೆ ಬೇಡ. ನಾನು ಪೌರಾಡಳಿತ ಸಚಿವ ಬಾಲಚಂದ್ರ ಜಾರಕಿಹೊಳಿ ಅವರನ್ನು ಯಾವಾಗಲು ಉಗ್ರಗಾಮಿ ಗುಂಪಿನ ನಾಯಕ ಅನ್ನುತ್ತೇನೆ. ಕಾರಣ ಅವರ ಬಳಿ ಯಾವಾಗಲೂ 8-10 ಮಂದಿ ಶಾಸಕರು ಇರುತ್ತಾರೆ. ಆದರೆ, ಅವರು ಎಂದೂ ನನ್ನ ವಿರುದ್ಧ ಹೇಳಿಕೆ ನೀಡಲಿಲ್ಲ~ ಎಂದು ತಿರುಗೇಟು ನೀಡಿದರು ಎನ್ನಲಾಗಿದೆ.

ಇದರ ನಂತರ ಸಚಿವರಾದ ಆರ್.ಅಶೋಕ, ಗೋವಿಂದ ಕಾರಜೋಳ, ಸಿ.ಪಿ.ಯೋಗೇಶ್ವರ್, ಎಸ್.ಎ.ರಾಮದಾಸ್, ಬಸವರಾಜ ಬೊಮ್ಮಾಯಿ, ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿದಂತೆ ಎಲ್ಲ ಸಚಿವರು `ಮುಖ್ಯಮಂತ್ರಿ ವಿರುದ್ಧ ಯಾವುದೇ ಸಚಿವರು ಹೇಳಿಕೆ ನೀಡುವುದು ಸರಿಯಲ್ಲ~ ಎಂದು ಅಭಿಪ್ರಾಯಪಟ್ಟರು ಎಂದು ಗೊತ್ತಾಗಿದೆ.

ಸಚಿವರು ಪರಸ್ಪರ ಮಾತನಾಡಿಕೊಂಡು, ಮುಖ್ಯಮಂತ್ರಿಗೆ ಅವಮಾನ ಆಗುವ ಹಾಗೆ ಪ್ರತಿನಿತ್ಯ ಹೇಳಿಕೆ ನೀಡುವುದು ಸರಿಯಲ್ಲ. ಇದು ಪಕ್ಷ ಮತ್ತು ಸರ್ಕಾರಕ್ಕೂ ಅಗೌರವ ಸೂಚಿಸಿದಂತೆ. ಇದನ್ನು ನಿಲ್ಲಿಸಬೇಕು ಎಂದು ಹೇಳಿದ್ದಾರೆ.

ಹೀಗೆ ಎಲ್ಲರೂ ಚರ್ಚೆಯಲ್ಲಿ ಮಗ್ನರಾಗಿದ್ದಾಗ ಸಚಿವೆ ಶೋಭಾ ಕರಂದ್ಲಾಜೆ ಮಧ್ಯಪ್ರವೇಶ ಮಾಡಿ `ಈ ವಿಷಯವನ್ನು ಇಲ್ಲಿ ಚರ್ಚಿಸುವುದು ಬೇಡ. ಪತ್ರಿಕೆಗಳಲ್ಲಿ ನಾಳೆ ದೊಡ್ಡದಾಗಿ ಇದೇ ಸುದ್ದಿ ಬರುತ್ತದೆ~ ಎಂದು ಎಚ್ಚರಿಸಿದರು ಎನ್ನಲಾಗಿದೆ.

ಇದಕ್ಕೆ ಸದಾನಂದ ಗೌಡರು ಉತ್ತರಿಸಿ, `ಬಂದರೆ ಬರಲಿ ಬಿಡಿ. ನಾನೇನೂ ತಪ್ಪು ಮಾತನಾಡುತ್ತಿಲ್ಲ~ ಎಂದು ತಿರುಗೇಟು ನೀಡಿದರು ಎಂದು ಗೊತ್ತಾಗಿದೆ.

ಸಂಪುಟದಿಂದ ಕೈಬಿಡಿ: ಒಂದು ಹಂತದಲ್ಲಿ ಸಚಿವ ಬಾಲಚಂದ್ರ ಜಾರಕಿಹೊಳಿ ಅವರು `ಯಾರು ತಮ್ಮ ವಿರುದ್ಧ ಹೇಳಿಕೆ ನೀಡುತ್ತಾರೊ ಅವರನ್ನು ತಕ್ಷಣವೇ ಸಂಪುಟದಿಂದ ಕೈಬಿಡಿ~ ಎನ್ನುವ ಸಲಹೆ ನೀಡಿದರು ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT