ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನು ನಾಗಲಿಂಗ

Last Updated 22 ಜುಲೈ 2012, 7:40 IST
ಅಕ್ಷರ ಗಾತ್ರ

ತುರುವೇಕೆರೆ ಪಟ್ಟಣ ಪಂಚಾಯಿತಿ ಕಾರ್ಯಾಲಯದ ಮುಂದಿರುವ ನಾಗಲಿಂಗ ಪುಷ್ಪದ ಮರ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದು.

ನಾಗಲಿಂಗ ಪುಷ್ಪ ಮೂಲತಃ ದಕ್ಷಿಣ ಅಮೆರಿಕಾ, ಕೆರೆಬಿಯನ್ ಪ್ರದೇಶದಲ್ಲಿ ಬೆಳೆಯುವ ಮರ. ಲೆಥಿಡೇಸಿ ಕುಟುಂಬಕ್ಕೆ ಸೇರಿದ ಇದರ ಸಸ್ಯ ಶಾಸ್ತ್ರೀಯ ಹೆಸರು ಕೌರಾಪಿಟ್ ಜಿಯನೆಂಸಿಸ್! ಈ ಹೂವಿನ ಮರಕ್ಕೆ ಆಂಗ್ಲಭಾಷೆಯಲ್ಲಿ ಕೆನನ್‌ಬಾಲ್ ಟ್ರೀ, ಕನ್ನಡದಲ್ಲಿ ನಾಗಲಿಂಗ ಪುಷ್ಪ, ತಮಿಳಿನಲ್ಲಿ ಶಿವಲಿಂಗ ಪುಷ್ಪ, ತೆಲುಗಿನಲ್ಲಿ ಮಲಿಕಾರ್ಜುನ ಪುಷ್ಪ ಎನ್ನುತ್ತಾರೆ.

ಹಸಿರು ಎಲೆಗಳ ನಡುವೆ ಜಾರಿ ಇಳಿದ ಬಿಳಿಲುಗಳಲ್ಲಿ ಮೊಗ್ಗುಗಳು, ಕಿತ್ತಳೆ-ಕೆಂಪು ಬಣ್ಣದ ಹೂವುಗಳು, ಕಾಯಿಗಳು ಗೊಂಚಲು ಗೊಂಚಲಾಗಿದ್ದು ನಯನ ಮನೋಹರವಾಗಿವೆ. ತೀಕ್ಷ್ಣ ಸುವಾಸನೆ, ಆಕರ್ಷಕ ವಿನ್ಯಾಸದಿಂದ ಈ ಹೂವು ಎಲ್ಲರಿಗೂ ಅಚ್ಚುಮೆಚ್ಚು. ಹೂವಿನ ಶಾಲಾಕಾಗ್ರವನ್ನು ಹಾವಿನ ಹೆಡೆಯಂತಹ ರಚನೆ ಆವರಿಸಿದೆ. ಶಲಾಕೆ ಲಿಂಗವನ್ನು, ಮೇಲಿನ ಕವಚ ಹಾವಿನೆಡೆಯ ಆಕಾರ ಹೋಲುವುದರಿಂದ ಇದನ್ನು ನಾಗಲಿಂಗಪುಷ್ಪ ಎನ್ನುತ್ತಾರೆ.

ಇದು ಔಷಧಗುಣ ಹೊಂದಿರುವ ಮರ. ನಾಗಲಿಂಗ ಪುಷ್ಪವನ್ನು ಅಜೀರ್ಣ, ವಾಂತಿ, ಶೀತ ಪರಿಹಾರಕ್ಕೆ ಔಷಧಿಯಾಗಿ ಬಳಸಿದರೆ, ಎಲೆಗಳನ್ನು ಫಂಗಸ್ ಮತ್ತು ಬ್ಯಾಕ್ಟೀರಿಯಾಗಳಿಂದ ಉಂಟಾದ ಚರ್ಮ ರೋಗಗಳ ಚಿಕಿತ್ಸೆಗೆ ಬಳಸಲಾಗುತ್ತದೆ. ವಿಚಿತ್ರವೆಂದರೆ ಈ ಹೂವಿನಲ್ಲಿ ಮಕರಂದವಿಲ್ಲ. ಇನ್ನೂ ವಿಚಿತ್ರವೆಂದರೆ ಅದ್ಭುತ ಸುವಾಸನೆಯುಳ್ಳ ಈ ಮರದ ಕಾಯಿ ಜಜ್ಜಿದರೆ ಬರುವ ದುರ್ವಾಸನೆಗೆ ಮೂಗು ಮುಚ್ಚಿಕೊಳ್ಳಬೇಕು.

ಶಿವ ದೇವಾಲಯಗಳ ಮುಂದೆ ಈ ಮರ ಬೆಳಸಲಾಗುತ್ತದೆ. ಹೂಗಳು ಪೂಜೆಗೆ ಬಳಕೆ. ಶಿವನಿಗೆ ಈ ಹೂವು ಪ್ರಿಯ. ವಿದೇಶಿ ಮೂಲದ ಹೂವೊಂದು ನಮ್ಮ ಶಿವನಿಗೆ ಪ್ರಿಯವಾದದ್ದು ಅಚ್ಚರಿಯೇ!

ತುರುವೇಕೆರೆಯಲ್ಲಿ ಇರುವುದು ಒಂದೇ ಮರ. 20 ವರ್ಷಗಳ ಹಿಂದೆ ದೇವರಾಯನ ದುರ್ಗದ ಕಡೆಯಿಂದ ಈ ಪುಷ್ಪದ ಸಸಿ ತಂದು ನೆಡಲಾಗಿತ್ತು ಎಂಬ ನೆನಪು ಪಟ್ಟಣ ಪಂಚಾಯಿತಿ ಅಧ್ಯಕ್ಷ ನಜೀರ್ ಅಹಮದ್ ಅವರದ್ದು. ಮಳೆಗಾಲದ ನಂತರ ನಾಗಲಿಂಗ ಪುಷ್ಪ ಗೊಂಚಲು ಗೊಂಚಲಾಗಿ ಅರಳಿ ನಿಂತು ಮನಸೂರೆಗೊಳ್ಳುತ್ತದೆ. ಆದರೆ ಈ ಬಾರಿ ಮಳೆಗೆ ಮುಂಚೆಯೇ ಅರಳಿ ನಿಂತಿದೆ.

ಮಳೆ ಬರಲಿಲ್ಲವಲ್ಲ ಎಂಬ ವೇದನೆಯೋ, ಮಳೆ ಸುರಿಸು ಶಿವನೇ ಎಂಬ ಪ್ರಾರ್ಥನೆಯೋ ಆ ಶಿವನಿಗೇ ಗೊತ್ತು!
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT