ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನು ನಿಮಿತ್ತ ಮಾತ್ರ: ಮೋದಿಯೇ ಎಲ್ಲ

Last Updated 16 ಮೇ 2014, 19:30 IST
ಅಕ್ಷರ ಗಾತ್ರ

ಮೈಸೂರು: ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಇತಿಹಾಸ ಮತ್ತೊಮ್ಮೆ ಮರುಕಳಿಸಿದೆ. 1952ರಲ್ಲಿ ನಡೆದ ಮೊಟ್ಟಮೊದಲ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಅತ್ಯಂತ ಪ್ರಭಾವಿ ಧುರೀಣರ ಎದುರಿಗೆ ಸ್ಪರ್ಧಿಸಿದ್ದ ಯುವಪತ್ರಕರ್ತನನ್ನು ಮೈಸೂರಿನ ಮತದಾರರು ಗೆಲ್ಲಿಸಿದ್ದರು.

2014ರ ಚುನಾವಣೆಯಲ್ಲಿ ಮತ್ತೊಮ್ಮೆ ಯುವ ಪತ್ರಕರ್ತರೊಬ್ಬರಿಗೆ ಮತದಾರರು ಮಣೆ ಹಾಕಿದ್ದಾರೆ. ಜವಾಹರಲಾಲ್ ನೆಹರೂ ಅವರ ನಿಕಟವರ್ತಿ, ಮುತ್ಸದ್ದಿಯೂ ಆಗಿದ್ದ ಎಚ್‌.ಸಿ. ದಾಸಪ್ಪ ಅವರ ವಿರುದ್ಧ ಕಿಸಾನ್ ಮಜ್ದೂರ್ ಪಕ್ಷದ ಎಂ.ಎಸ್. ಗುರುಪಾದಸ್ವಾಮಿ ಜಯಿಸಿದ್ದರು. ಅವರು ವೃತ್ತಿಯಿಂದ ಪತ್ರಕರ್ತರಾಗಿದ್ದವರು. ಕನಕಪುರದಲ್ಲಿ ಪತ್ರಕರ್ತೆ ತೇಜಸ್ವಿನಿ ಗೌಡ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರನ್ನು ಸೋಲಿಸಿದ್ದರು.

ಈ ಬಾರಿ  ಭಾರತೀಯ ಜನತಾ ಪಕ್ಷದಿಂದ ಸ್ಪರ್ಧಿಸಿದ್ದ ಪತ್ರಕರ್ತ ಪ್ರತಾಪಸಿಂಹ ಅವರು ಹಿರಿಯ ರಾಜಕಾರಣಿ ಅಡಗೂರು ಎಚ್. ವಿಶ್ವನಾಥ್ ವಿರುದ್ಧ ಜಯ ಗಳಿಸಿದ್ದಾರೆ. ಮೂಲತಃ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಬಿರಡಹಳ್ಳಿಯ ಪ್ರತಾಪಸಿಂಹ ಅವರನ್ನು ಈ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಪಕ್ಷ ಆಯ್ಕೆ ಮಾಡಿದಾಗ ಬಹಳಷ್ಟು ಜನರಿಗೆ ಅಚ್ಚರಿಯಾಗಿತ್ತು. 

ಶುಕ್ರವಾರ ಮಧ್ಯಾಹ್ನ ಫಲಿತಾಂಶ ಪ್ರಕಟವಾದ ನಂತರ ವಿಜಯೋತ್ಸವ, ಸಾಲು ಸಾಲು ಸನ್ಮಾನಗಳ ಭರಾಟೆಯ ನಡುವೆಯೂ ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನ ಇಲ್ಲಿದೆ:

*ಸಂಸದನಾಗುವ ಕನಸನ್ನು ಅತಿ ಕಡಿಮೆ ಅವಧಿಯಲ್ಲಿ ನನಸು ಮಾಡಿಕೊಂಡ ಬಗೆ ಹೇಗೆ?
ಇಡೀ ದೇಶದಾದ್ಯಂತ ನರೇಂದ್ರ ಮೋದಿ ಅಲೆ ಇತ್ತು. ಮಾಧ್ಯಮಗಳೂ ಸೇರಿದಂತೆ ಬಹಳಷ್ಟು ಜನ ಒಪ್ಪಿಕೊಳ್ಳಲು ಸಿದ್ಧರಿರಲಿಲ್ಲ. ಆದರೆ, ಅದು ಬರೀ ಅಲೆಯಲ್ಲ; ‘ಸುನಾಮಿ’ ಎಂದು ಇವತ್ತು ಸಾಬೀತಾಗಿದೆ. ಇದು ಮುಖ್ಯಮಂತ್ರಿಗಳ ತವರು ಜಿಲ್ಲೆ. ಮೂರು ಜನ ಪ್ರಮುಖ ಸಚಿವರು ಇಲ್ಲಿದ್ದಾರೆ. ಇದು ಕಾಂಗ್ರೆಸ್ ಪಕ್ಷದ ಭದ್ರಕೋಟೆ, ಯಾರೂ ಬೇರೆಯವರು ಗೆಲ್ಲಲ್ಲ ಎನ್ನುವ ಪರಿಸ್ಥಿತಿ ಇತ್ತು. ಆದರೆ, ಮೋದಿಯವರ ಹವಾ ನಮ್ಮ ಪಕ್ಷದ ಕಾರ್ಯಕರ್ತರು, ಮತದಾರರಲ್ಲಿ ಉತ್ಸಾಹ ತುಂಬಿತು. ಮೈಸೂರಿನಿಂದಲೂ ಪಕ್ಷದ ಪ್ರತಿನಿಧಿಯಾಗಿ ಹೋಗಬೇಕು ಎಂಬ ಸಂಕಲ್ಪ ತೊಟ್ಟರು. ನಿಮಿತ್ತ ಮಾತ್ರನಾಗಿ ನಾನು ಸಂಸದನಾಗಿದ್ದೇನೆ.

*ಊರು, ಕ್ಷೇತ್ರ, ರಾಜಕೀಯ ನಿಮಗೆ ಹೊಸದು. ಇದರಿಂದ ಆರಂಭದಲ್ಲಿ ಆದ ಸಮಸ್ಯೆಗಳನ್ನು ನೀವು ಯಾವ ರೀತಿಯಲ್ಲಿ ಪರಿಹರಿಸಿಕೊಂಡಿರಿ?
ಸ್ವಂತ ಊರು, ಆ ಊರು, ಈ ಊರು ಅನ್ನೋದಕ್ಕೆ ಏನಿದೆ. ಮೋದಿಯವರು ಹುಟ್ಟಿದ್ದು ಭಾವನಗರದಲ್ಲಿ. ಚುನಾವಣೆಯನ್ನು ವಾರಣಾಸಿಯಲ್ಲಿ ಸ್ಪರ್ಧಿಸಿ ಗೆದ್ದರು. ಇಟಲಿಯ ಸೋನಿಯಾಗಾಂಧಿ ಬಂದು ಭಾರತ ಆಳಬಹುದು. ಅವರು ಬಳ್ಳಾರಿಯಲ್ಲಿ ಚುನಾವಣೆಗೆ ನಿಂತಿದ್ದರು. ಅಲಹಾಬಾದಿನಲ್ಲಿ ಜನಿಸಿದ್ದ ಇಂದಿರಾಗಾಂಧಿ ಚಿಕ್ಕಮಗಳೂರಿನಲ್ಲಿ ಸ್ಪರ್ಧಿಸಿದ್ದರು.

ಪಾಕಿಸ್ತಾನದಲ್ಲಿ ಹುಟ್ಟಿದ ಮನಮೋಹನಸಿಂಗ್ ಪ್ರಧಾನಿಯಾದವರು, ನಮ್ಮ ಅಡ್ವಾಣಿಯವರೂ ಪಾಕ್‌ನಲ್ಲಿ ಹುಟ್ಟಿದವರು. ಪರ್ವೇಜ್ ಮುಶ್ರಫ್ ಭಾರತದಲ್ಲಿ ಹುಟ್ಟಿದ್ದರೂ ಪಾಕಿಸ್ತಾನದ ಅಧ್ಯಕ್ಷರಾಗಿದ್ದರು. ನಮ್ಮ ಪಕ್ಷದಿಂದಲೇ ಮೈಸೂರಿನಿಂದ ಸಂಸದರಾಗಿದ್ದ ವಿಜಯಶಂಕರ್ ರಾಣೇಬೆನ್ನೂರಿನವರು. ಮೈಸೂರು ಪಕ್ಕದ ಹಾಸನ ಜಿಲ್ಲೆಯ ಸಕಲೇಶಪುರದವನಾದ ನಾನು ಹೊರಗಿನವ ಹೇಗಾದೆ. ಇವೆಲ್ಲ ನಮ್ಮ ಅನುಕೂಲಕ್ಕೆ ತಕ್ಕಂತೆ ಯಾರನ್ನೋ ಗುರಿ ಮಾಡಲು ಬಳಸುವಂತಹ ಅಸ್ತ್ರಗಳು ಅಷ್ಟೇ. ಬೇರೆ ಇನ್ನೇನೂ ಅಲ್ಲ.

*ಕಾಂಗ್ರೆಸ್‌ ಪಕ್ಷ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರ ವರ್ಚಸ್ಸಿನ ಹೊರತಾಗಿಯೂ ನೀವು ಇಲ್ಲಿ ಜಯ ಗಳಿಸಲು ಮೋದಿ ಅಲೆ ಕಾರಣವೋ ಅಥವಾ ಹೊಸಬರಿಗೆ ಅವಕಾಶ ನೀಡುವ ಜನರ ಆಶಯ ಕಾರಣವೋ?
ಚುನಾವಣೆಯಲ್ಲಿ ಬಹಳಷ್ಟು ಅಂಶಗಳು ಕೆಲಸ ಮಾಡುತ್ತವೆ. ಪಕ್ಷದ ಸಾಮಾನ್ಯ ಕಾರ್ಯಕರ್ತನಿಂದ ನಾಯಕನವರೆಗೂ ತಾವೇ ಅಭ್ಯರ್ಥಿ ಎಂಬ ಭಾವನೆಯಿಂದ ಕೆಲಸ ಮಾಡಬೇಕು. ಆಗಲೇ ಮೋದಿ ಅಲೆಯು ಮತವಾಗಿ ಪರಿವರ್ತನೆಯಾಗುತ್ತದೆ. ಆ ಕೆಲಸವನ್ನು ನಮ್ಮ ಪಕ್ಷ ಮಾಡಿದೆ. ಈ ಜಯದ ಸಿಂಹಪಾಲು ಮೋದಿಯವರಿಗೆ ಸಿಗಬೇಕು. ಅಷ್ಟೇ ದೊಡ್ಡ ಪಾಲು ಪಕ್ಷದ ಕಾರ್ಯಕರ್ತರಿಗೂ ಸಲ್ಲುತ್ತದೆ.

*ಮೋದಿಯವರು ಮೈಸೂರಿಗೆ ಬಂದ ಸಂದರ್ಭದಲ್ಲಿ ನೀವು ಭಾಷಣ ಮಾಡುತ್ತ ಮೈಸೂರಿನಲ್ಲಿ ಮೋದಿ ಅಲೆ ನೋಡಬನ್ನಿ ಎಂದು ಸಿದ್ದರಾಮಯ್ಯನವರಿಗೆ ಸವಾಲು ಹಾಕಿದ್ದಿರಿ. ಮಾರನೇ ದಿನವೇ ಸೋನಿಯಾ ರ್‌್ಯಾಲಿಗೆ ನಿಮ್ಮ ಸಭೆಗಿಂತಲೂ ಹೆಚ್ಚು ಜನರು ಸೇರಿದಾಗ ನಿಮಗೆ ಏನು ಅನಿಸಿತ್ತು?
ಹೆಚ್ಚು ಜನ ಅಂತಾ ಯಾವ ಲೆಕ್ಕದಲ್ಲಿ ಹೇಳಿದಿರಿ. ಮಾಧ್ಯಮಗಳು ಮೋದಿಯವರನ್ನು ಕಾಮಾಲೆ ಕಣ್ಣಿನಿಂದ ನೋಡಿದ್ದು ದುರಂತ. ನಮ್ಮ ಕಾರ್ಯಕ್ರಮಕ್ಕೆ ಅತಿ ಹೆಚ್ಚು ಜನ ಸೇರಿದ್ದರು. ನಾವು ಯಾರಿಗೂ ಹಣ ಕೊಟ್ಟು ಕರೆದುಕೊಂಡು ಬಂದಿರಲಿಲ್ಲ. ನಮ್ಮದು ಶಾಮಿಯಾನಾ ಇಲ್ಲದೇ ಬಿಸಿಲಿನಲ್ಲಿಯೇ ನಡೆದ ಕಾರ್ಯಕ್ರಮ. ಸೋನಿಯಾ ಕಾರ್ಯಕ್ರಮಕ್ಕೆ ಶಾಮಿಯಾನಾ ಹಾಕಿದ್ದರು. ಅವರ ಕಾರ್ಯಕ್ರಮಕ್ಕೆ ಬರೀ ಟ್ರಕ್‌ಗಳು, ಬಸ್ಸುಗಳು ಬಂದಿದ್ದವು.

*ಮೋದಿಯವರು ಮೈಸೂರಿಗೆ ಬಂದು ಮಾಡಿದ್ದ ಭಾಷಣದಲ್ಲಿ ಇಲ್ಲಿಯ ಪ್ರವಾ-­ಸೋದ್ಯ­ಮವೂ ಸೇರಿದಂತೆ ಹಲವು ಕ್ಷೇತ್ರಗಳ ಅಭಿವೃದ್ಧಿಯ ಕುರಿತು ಮಾತ-ನಾ-ಡಿದ್ದರು. ಅವುಗಳನ್ನು ಕಾರ್ಯರೂಪಕ್ಕೆ ತರಲು ಸಂಸದರಾಗಿ ನಿಮ್ಮ ಯೋಜನೆ ಏನು? ಯುವ­ಜನತೆಗಾಗಿ ನಿಮ್ಮ ಕಾರ್ಯಕ್ರಮಗಳು ಏನು?
ಪ್ರವಾಸೋದ್ಯಮ ಅಭಿವೃದ್ಧಿಯಾಗದೇ ಮೈಸೂರು ಏಳ್ಗೆ ಆಗಲ್ಲ. ರೈಲು, ರಸ್ತೆ, ವಾಯುಯಾನ ಸಂಪರ್ಕ ಅಭಿವೃದ್ಧಿ ಮಾಡಬೇಕು. ನಗರದೊಳಗಿನ ರಸ್ತೆಗಳೂ ಅಭಿವೃದ್ಧಿಯಾಗಬೇಕು. ಸಣ್ಣ, ಮಧ್ಯಮ ಮತ್ತು ಅತಿ ಸಣ್ಣ ಕೈಗಾರಿಕೆಗಳು ಮುಚ್ಚಿಹೋಗಿವೆ. ಅವುಗಳನ್ನು ಪುನಶ್ಚೇತನಗೊಳಿಸುವ ಕಾರ್ಯ ಮಾಡುತ್ತೇವೆ. ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತೇವೆ. ಪಿರಿಯಾಪಟ್ಟಣ, ಹುಣಸೂರಿಗೆ ಸರಿಯಾದ ರಸ್ತೆ, ಕುಡಿಯುವ ನೀರು ಇಲ್ಲ. ಅದನ್ನು ಒದಗಿಸುತ್ತೇವೆ. ತಂಬಾಕು ಬೆಳೆಗಾರರಿಗೆ ಅನುಕೂಲ ಕಲ್ಪಿಸಿಕೊಡಲಾಗುವುದು.

ಮೈಸೂರಿನಲ್ಲಿ ಎಂಟು ಎಂಜಿನಿಯರಿಂಗ್ ಕಾಲೇಜುಗಳಿವೆ. ಪದವಿ ಪಡೆದ ಎಲ್ಲರಿಗೂ ಉದ್ಯೋಗ ಸಿಗುತ್ತಿಲ್ಲ. ಇನ್ನು ಬಿ.ಎ., ಬಿ.ಕಾಂ., ಬಿ.ಎಸ್ಸಿ ಮತ್ತಿತರ ಕೋರ್ಸ್ ಮಾಡಿದವರ ಗತಿಯೇನು. ಅವರೆಲ್ಲರಿಗೂ ಉದ್ಯೋಗಗಳು ಸಿಗುವಂತಾಗಬೇಕು. ಅದಕ್ಕೆ ಪೂರಕವಾಗಿ ಪ್ರವಾಸೋದ್ಯಮ, ಐಟಿ ಉದ್ಯಮ, ಕೈಗಾರಿಕೋದ್ಯಮಗಳ ಅಭಿವೃದ್ಧಿಗೆ ಶ್ರಮಿಸುತ್ತೇನೆ.

*ಮುಂದಿನ ಚುನಾವಣೆಯಲ್ಲಿ ನಾನು ಪ್ರಚಾರಕ್ಕೆ ಬರುವುದಿಲ್ಲ. ಮುಂದಿನ ಐದು ವರ್ಷಗಳಲ್ಲಿ ನಾನು ಮಾಡಿದ ಕೆಲಸಗಳಿಂದಲೇ ಜನ ಮತ ಹಾಕುತ್ತಾರೆ ಎಂದು ಹೇಳಿದ್ದೀರಿ. ಅದಕ್ಕಾಗಿ ಏನೇನು ಮಾಡುತ್ತೀರಿ?
ಮುಂದಿನ ಚುನಾವಣೆಯಲ್ಲಿ ನಾನು ಖಂಡಿತವಾಗಿಯೂ ಜನರ ಬಳಿಗೆ ಹೋಗಿ ಮತ ಕೇಳುವುದಿಲ್ಲ. ಅವರ ಬೇಡಿಕೆಗಳನ್ನು ನಾನು ಅರಿತಿದ್ದೇನೆ. ಅವುಗಳನ್ನು ಬರುವ ಐದು ವರ್ಷಗಳಲ್ಲಿ ಈಡೇರಿಸುತ್ತೇನೆ.

*ಮೋದಿಯವರ ಸಚಿವ ಸಂಪುಟದಲ್ಲಿ ನೀವು ಸಚಿವ ಸ್ಥಾನದ ಆಕಾಂಕ್ಷಿಯೇ?
ನಾನು ಸಂಸದನಾಗಿ ಆಯ್ಕೆ ಯಾಗಿದ್ದಕ್ಕಿಂತ ದೊಡ್ಡ ಅವಕಾಶ ಇನ್ನೊಂದಿಲ್ಲ. ಉತ್ತಮ ಸೇವೆ ಮಾಡುತ್ತೇನೆ. ಅದರಿಂದ ಜನರ ವಿಶ್ವಾಸ ಗಳಿಸಿದಾಗ ಅವರ ಮನಸ್ಸಿನಲ್ಲಿ ಸಿಗುವ ಸ್ಥಾನವೇ ದೊಡ್ಡದು. ಈ ಮಂತ್ರಿಗಿರಿಯೆಲ್ಲ ಏನೂ ಅಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT