ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನು, ನೀನು ಮತ್ತು ‘ಉಪ್ಪಿ2’

Last Updated 19 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಉಪೇಂದ್ರ ಅವರ ನಿರ್ದೇಶನದ ಸಿನಿಮಾ ಅಂದ್ರೆ ಪ್ರೇಕ್ಷಕರಿಗೆ ಹಬ್ಬದೂಟ. ಚಿತ್ರಕಥೆಯಲ್ಲಿನ ಫೋರ್ಸ್, ಪಂಚಿಂಗ್‌ ಡೈಲಾಗ್‌ಗಳು, ಟ್ವಿಸ್ಟ್‌ಗಳು ಇವೆಲ್ಲವೂ ಪ್ರೇಕ್ಷಕರಿಗೆ ಸಿಕ್ಕಾಪಟ್ಟೆ ಕಿಕ್‌ ಕೊಡುತ್ತದೆ. ಸಾಮಾನ್ಯ ಮನುಷ್ಯನ ಸೈಕಾಲಜಿಯನ್ನೇ ಇಟ್ಟುಕೊಂಡು ಸಿನಿಮಾ ಮಾಡುವ ಉಪೇಂದ್ರ ಈಗ ಮತ್ತೇ ನಿರ್ದೇಶಕನ ಟೊಪ್ಪಿ ಧರಿಸಿ ಬಂದಿದ್ದಾರೆ. ಎಂದಿನಂತೆ ತಮ್ಮ ಚಿತ್ರಕ್ಕೆ ವಿಶೇಷವಾದೊಂದು ಶೀರ್ಷಿಕೆ ಇರಿಸಿ ಅಭಿಮಾನಿಗಳಿಗೆ ಆರಂಭದಲ್ಲೇ ಕುತೂಹಲದ ಗುಂಗಿಹುಳ ಬಿಟ್ಟಿದ್ದಾರೆ.

1999ರಲ್ಲಿ ತೆರೆಕಂಡಿದ್ದ ‘ಉಪೇಂದ್ರ’ ಸಿನಿಮಾದ ಕ್ಲೈಮ್ಯಾಕ್ಸ್‌ನಲ್ಲಿ ಉಪ್ಪಿ, ‘ನಾನು’ ಎಂಬುದನ್ನು ಬಿಟ್ಟು ಮನುಷ್ಯ ಬದುಕಲು ಸಾಧ್ಯವಾ? ಎನ್ನುವ ಪ್ರಶ್ನೆಯನ್ನು ಪ್ರೇಕ್ಷಕರ ಮುಂದಿಟ್ಟಿದ್ದರು. ಅದಕ್ಕೆ ಉತ್ತರ ರೂಪದಂತಿದೆ ‘ಉಪ್ಪಿ2’.

‘‘ಪ್ರತಿಯೊಬ್ಬ ಮನುಷ್ಯನಲ್ಲೂ ‘ನಾನು’ ಎಂಬ ಅಹಂ ಇರುತ್ತದೆ. ಅದನ್ನು ಬಿಟ್ಟು ಬದುಕಲು ಅವನಿಗೆ ಸಾಧ್ಯವಿಲ್ಲ. ಮನುಷ್ಯ ಸತ್ತಾಗಲೇ ಅದು ನಾಶವಾಗುವುದು. ಆದರೆ, ಕೆಲವರು ‘ನಾನು’ ಎಂಬುದನ್ನು ತೊರೆದು ಬದುಕಿದ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಒಂದು ವೇಳೆ ಸಾಮಾನ್ಯ ಮನುಷ್ಯ ಕೂಡ ‘ನಾನು’ ಎಂಬುದನ್ನು ತೊರೆದರೆ, ಅದರ ನಂತರದಲ್ಲಿ ಆತನ ಬದುಕು ಹೇಗಿರುತ್ತದೆ?. ‘ನಾನು’ ಎಂಬುದನ್ನು ಬಿಟ್ಟು ಬದುಕಲು ಸಾಧ್ಯವಾ? ಈ ಪ್ರಶ್ನೆಗಳಿಗೆಲ್ಲಾ ‘ಉಪ್ಪಿ2’ ಸಿನಿಮಾ ಉತ್ತರಿಸಲಿದೆ. ಇದೇ ಈ ಚಿತ್ರದ ಹೂರಣ. ಈ ಚಿತ್ರ ಪ್ರತಿಯೊಬ್ಬ ಪ್ರೇಕ್ಷಕನನ್ನು ಸ್ವಯಂ ವಿಶ್ಲೇಷಣೆಗೆ ಒಡ್ಡಿಕೊಳ್ಳುವಂತೆ ಮಾಡುತ್ತದೆ.

‘ಉಪೇಂದ್ರ’ ಸಿನಿಮಾದ ಕ್ಲೈಮ್ಯಾಕ್ಸ್‌ನಲ್ಲಿ ಎತ್ತಿದ ಪ್ರಶ್ನೆಗೆ ಉತ್ತರ ರೂಪದಂತಿರುವ ‘ಉಪ್ಪಿ2’ ಚಿತ್ರ ಅದರ ಮುಂದುವರಿದ ಭಾಗ. ಆ ಚಿತ್ರದಲ್ಲಿ ‘ನಾನು’ ಇದ್ದರೆ, ಈ ಚಿತ್ರದಲ್ಲಿ ‘ನೀನು’ ಇರುತ್ತಾನೆ’’ ಎಂದು ಚಿತ್ರದ ಕೆಲವು ಕುತೂಹಲಕಾರಿ ಅಂಶಗಳನ್ನು ತೆರೆದಿಟ್ಟರು  ಉಪೇಂದ್ರ.

‘‘ಸದ್ಯಕ್ಕೆ ‘ಉಪ್ಪಿ2’ ಸ್ಕ್ರಿಪ್ಟ್‌ ರೆಡಿ ಮಾಡಿದ್ದೇನೆ. ಕೈಲಿರುವ ಚಿತ್ರಗಳು ಮುಗಿದ ನಂತರ ತಾರಾಗಣ, ತಾಂತ್ರಿಕ ವರ್ಗದ ಆಯ್ಕೆ ಎಲ್ಲವೂ ಫೈನಲೈಸ್‌ ಆಗಲಿದೆ’ ಎಂದು ಚಿತ್ರಕ್ಕೆ ಸ್ಫೂರ್ತಿ ತುಂಬಿದವರ ಬಗ್ಗೆ ಹೇಳಿದರು ಅವರು. ಚಿತ್ರದಲ್ಲಿ ಎಷ್ಟು ಹಾಡುಗಳಿರುತ್ತವೆ, ಚಿತ್ರವನ್ನು ಎಲ್ಲೆಲ್ಲಿ ಚಿತ್ರೀಕರಣ ಮಾಡಲಾಗುತ್ತದೆ, ಚಿತ್ರದ ನಾಯಕಿ ಯಾರು, ಒಬ್ಬಳೇ ನಾಯಕಿಯಾ ಅಥವಾ ಮೂರು ಮಂದಿ ಇರುತ್ತಾರಾ, ಬಜೆಟ್‌ ಎಷ್ಟು ಎಂಬಿತ್ಯಾದಿ ಪ್ರಶ್ನೆಗಳಿಗೆಲ್ಲಾ ಉಪ್ಪಿಯಿಂದ ಉತ್ತರರೂಪವಾಗಿ ಸಿಕ್ಕಿದ್ದು ಕೇವಲ ಕಿರುನಗು ಮಾತ್ರ. ‘ನಾನೇನೋ ಅದ್ಭುತ ಸಿನಿಮಾ ಮಾಡುತ್ತೇನೆ ಎಂದು ಚಿತ್ರ ನಿರ್ದೇಶನಕ್ಕೆ ಇಳಿಯುವುದಿಲ್ಲ.

ಎಲ್ಲರಿಗೂ ಗೊತ್ತಿರುವ ಸಂಗತಿಗಳನ್ನೇ ನಾನು ನನ್ನ ಚಿತ್ರಗಳಲ್ಲಿ ಹೇಳುವುದು. ನನ್ನ ಸಿನಿಮಾಗಳು ಪ್ರೇಕ್ಷಕರಿಗೆ ಯಾವ ಫಿಲಾಸಫಿಯನ್ನು ದಾಟಿಸುವುದಿಲ್ಲ. ಎಲ್ಲರಿಗೂ ಗೊತ್ತಿರುವ ಸಿದ್ಧಾಂತವನ್ನೇ ನಾನು ತುಸು ಭಿನ್ನವಾಗಿ ಹೇಳುವ ಪ್ರಯತ್ನ ಮಾಡುತ್ತೇನೆ. ಈ ಚಿತ್ರಕ್ಕೂ ಸಹ ವಿವಿಧ ಆಯಾಮಗಳಿವೆ’ ಎಂದು ಮಾತು ಸೇರಿಸಿದರು ಅವರು. 

ವಿಭಿನ್ನ ಮುಹೂರ್ತ
ಪ್ರೇಕ್ಷಕರಿಗೆ ಪ್ರತಿಯೊಂದು ವಿಷಯದಲ್ಲೂ ಸರ್‌ಪ್ರೈಸ್‌ ಕೊಡುವುದನ್ನು ರೂಢಿಸಿಕೊಂಡಿರುವ ನಟ ಉಪೇಂದ್ರ ತಮ್ಮದೇ ಪ್ರೊಡಕ್ಷನ್‌ನಲ್ಲಿ ಮೂಡಿ ಬರುತ್ತಿರುವ ಮೊದಲ ಚಿತ್ರ ‘ಉಪ್ಪಿ2’ ಮುಹೂರ್ತವನ್ನು ಅಷ್ಟೇ ಭಿನ್ನವಾಗಿ ನಡೆಸಿದರು. ಚಿತ್ರ ಮುಹೂರ್ತ ನಿಗದಿಯಾಗಿದ್ದ ಸಮಯಕ್ಕೆ ಅಭಿಮಾನಿಗಳ ಕಣ್ಣಿಗೆ ಕಾಣಿಸಿಕೊಳ್ಳದೇ ಹಿಂದೆ ನಿಂತು ಮೈಕ್‌ನಲ್ಲಿ ಮುಹೂರ್ತಕ್ಕೆ ಸಂಜ್ಞೆ ಮಾಡಿದರು. ಬೃಹತ್‌ ವೇದಿಕೆ ಮುಂಭಾಗದಲ್ಲಿ ಎರಡೂ ಕಡೆ ಇರಿಸಿದ್ದ ಪೋಸ್ಟರ್‌ಗಳ ಒಳಗಿಂದ ದೊಡ್ಡದೊಂದು ಕನ್ನಡಿ ಹೊರಬಂತು. ಅದರ ಮೇಲ್ಭಾಗದಲ್ಲಿ ‘ಉಪೇಂದ್ರ ಪ್ರೊಡಕ್ಷನ್‌’ ಎಂದು ಬರೆದಿತ್ತು. ಇದನ್ನು ಕಣ್ತುಂಬಿಕೊಂಡ ಅಭಿಮಾನಿಗಳ ಕೂಗು, ಚಪ್ಪಾಳೆ ಮುಗಿಲು ಮುಟ್ಟಿತ್ತು.

ಗಾಳಿಯಲ್ಲಿ ತೇಲುತ್ತಿದ್ದ ಮೂವಿಂಗ್‌ ಕ್ಯಾಮೆರಾ ಇವೆಲ್ಲವನ್ನೂ ಸೆರೆಹಿಡಿಯುತ್ತಿತ್ತು. ಕ್ಷಣಹೊತ್ತು ಸರಿದ ನಂತರ ಕನ್ನಡಿ ಒಳಸರಿಯಿತು. ವೇದಿಕೆ ಮೇಲೆ ಉಪೇಂದ್ರ ನಿಂತಿದ್ದರು. ನೀಲಿ ಜೀನ್ಸ್‌, ಬಿಳಿ ಜುಬ್ಬಾ, ತಲೆಯ ಮೇಲೆ ಕಪ್ಪು ಟೊಪ್ಪಿ ಧರಿಸಿ ನಿಂತಿದ್ದ ಉಪ್ಪಿಯನ್ನು ನೋಡಿ ಅಭಿಮಾನಿಗಳ ಉತ್ಸಾಹದ ಮೇರೆ ಮೀರಿತ್ತು. ‘ದೇವಲೋಕಕ್ಕೆ ಒಬ್ಬನೇ ದೇವೇಂದ್ರ; ಭೂಲೋಕಕ್ಕೆ ಒಬ್ಬನೇ ಉಪೇಂದ್ರ’ ಎನ್ನುವ ಘೋಷಣೆಗಳನ್ನು ಕೂಗುತ್ತಿದ್ದರು.

‘ಅಣ್ಣಾವ್ರು ಅಭಿಮಾನಿಗಳನ್ನೇ ದೇವರು ಅನ್ನುತ್ತಿದ್ದರು. ಹಾಗಾಗಿ, ಉಪೇಂದ್ರ ಪ್ರೊಡಕ್ಷನ್‌ನಲ್ಲಿ ಮೂಡಿಬರುತ್ತಿರುವ ಮೊದಲ ಚಿತ್ರಕ್ಕೆ ಅಭಿಮಾನಿ ದೇವರುಗಳ ಚಪ್ಪಾಳೆ, ಹರ್ಷೋದ್ಗಾರವನ್ನೇ ಚಿತ್ರೀಕರಿಸಿಕೊಂಡಿದ್ದೇನೆ. ನಮ್ಮ ಪ್ರೊಡಕ್ಷನ್‌ನಲ್ಲಿ ಬರುವ ಎಲ್ಲ ಸಿನಿಮಾಗಳಿಗೂ ಪ್ರೊಡಕ್ಷನ್‌ ಲೋಗೊ ಇದೆ’ ಎಂದಾಗ ಅಭಿಮಾನಿಗಳಿಂದ ಮತ್ತೇ ಹರ್ಷೋದ್ಗಾರ. ಚಪ್ಪಾಳೆ ಸುರಿಮಳೆ.

ಅಂದಹಾಗೆ, ಈ ಸೆ.18ಕ್ಕೆ ಉಪ್ಪಿಗೆ ನಲವತ್ತೈದು ತುಂಬಿತು. ಈ ಹುಟ್ಟುಹಬ್ಬ ಅವರಿಗೆ ಡಬ್ಬಲ್‌ ಖುಷಿ ಕೊಟ್ಟಿದೆ. ಉಪೇಂದ್ರ ಪ್ರೊಡಕ್ಷನ್‌ನಲ್ಲಿ ಮೂಡಿಬರುತ್ತಿರುವ ಈ ಸಿನಿಮಾದ ನಿರ್ಮಾಪಕಿ ಪ್ರಿಯಾಂಕ ಉಪೇಂದ್ರ. ಮನೋಹರ್‌ ಸಹ ನಿರ್ಮಾಪಕರು. ‘ಉಪ್ಪಿ2’ ಎನ್ನುವ ವಿಶಿಷ್ಟ ಹೆಸರಿಟ್ಟು ಅಭಿಮಾನಿಗಳಲ್ಲಿ ಕೌತುಕ ಹುಟ್ಟಿಸಿರುವ ಉಪೇಂದ್ರ ಆ ಸಿನಿಮಾದಲ್ಲಿ ಇನ್ನೇನು ವಿಶೇಷತೆಗಳನ್ನು ಇರಿಸಿದ್ದಾರೆ ಎಂಬ ಕುತೂಹಲಕ್ಕೆ ತೆರೆಬೀಳುವುದು ಮುಂದಿನ ವರ್ಷ ಸೆ.18ಕ್ಕೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT