ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನು ಮತ್ತು ನನ್ನ ಬರವಣಿಗೆ

Last Updated 31 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ನಾನು ಹುಟ್ಟಿದ್ದು ನಂಜನಗೂಡಿನ್ಲ್ಲಲಿ. 26 ಆಗಸ್ಟ್ 1955ರಂದು. ನಂಜನಗೂಡು ನನ್ನ ತಾಯಿಯ ತವರು. ತಂದೆ ಪಕ್ಕದ ಟಿ.ನರಸೀಪುರದಲ್ಲಿ ವಿದ್ಯೋದಯ ಪ್ರೌಢಶಾಲೆಯಲ್ಲಿ ಹಿಂದಿ ಅಧ್ಯಾಪಕರಾಗಿದ್ದರು. ನನ್ನ  ಪಿ.ಯು.ಸಿ.ವರೆಗಿನ ವಿದ್ಯಾಭ್ಯಾಸ ನಡೆದದ್ದು ಅದೇ ಶಾಲೆಯಲ್ಲಿ. ನಮ್ಮದು ಸಾಹಿತ್ಯ-ಸಂಗೀತಗಳಲ್ಲಿ ತುಂಬಾ ಅಭಿರುಚಿ ಇದ್ದ ಕುಟುಂಬ. ನನ್ನ ಅಜ್ಜಿ, ತಾಯಿ, ಚಿಕ್ಕಮ್ಮಂದಿರು ಇವರಿಗೆಲ್ಲ ಕರ್ನಾಟಕ ಶಾಸ್ತ್ರೀಯ ಸಂಗೀತ ಚೆನ್ನಾಗಿ ಗೊತ್ತಿತ್ತು. ನನ್ನ ಅಕ್ಕ ಸರಸ್ವತಿ ವೀಣೆಯನ್ನು ಕಲಿತಿದ್ದಳು.

ನನ್ನ ಒಬ್ಬ ದೊಡ್ಡಪ್ಪ ಅಚ್ಯುತರಾವ್ ಅಪ್ಪಟ ಕನ್ನಡ ಪ್ರೇಮಿ; ಅವರು ಸಕ್ರಿಯ ಕನ್ನಡ ಕಾರ್ಯಕರ್ತರೂ ಅಗಿದ್ದರು. ಒಮ್ಮೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರವನ್ನು ವಿರೋಧಿಸಿ ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸಿಯೂ ಇದ್ದರು. ನನ್ನಲ್ಲಿ ಕನ್ನಡ ಪ್ರೇಮ ಬೆಳೆಯಲು ಇವರು ಒಂದು ಮುಖ್ಯ ಪ್ರೇರಣೆ. ಮತ್ತೊಬ್ಬ ದೊಡ್ಡಪ್ಪ ವಾಸುದೇವರಾವ್ ಇಂಗ್ಲಿಷ್ ಸಾಹಿತ್ಯವನ್ನು ಚೆನ್ನಾಗಿ ಓದಿಕೊಂಡಿದ್ದರು. ನಾನು ಚಿಕ್ಕಂದಿನಿಂದಲೇ ಇಂಗ್ಲಿಷ್ ಪುಸ್ತಕಗಳನ್ನು ಓದಲು ಇವರು ಮುಖ್ಯ ಕಾರಣ. ನನ್ನ ತಂದೆಯವರಿಂದ ಹಿಂದಿ ಭಾಷೆ-ಸಾಹಿತ್ಯಗಳನ್ನು ಕಲಿತೆ ಮತ್ತು ಮೈಸೂರು ರಿಯಾಸತ್ ಹಿಂದಿ ಪ್ರಚಾರ ಸಮಿತಿ ನಡೆಸುವ ವಿದ್ವಾನ್ ಪರೀಕ್ಷೆಯಲ್ಲಿ ತೇರ್ಗಡೆಯಾದೆ.

ಹೈಸ್ಕೂಲಿನಲ್ಲಿ ಓದುತ್ತಿದ್ದಾಗ ಭಾಷೆ-ಸಾಹಿತ್ಯಗಳ ಬಗ್ಗೆ ಆಸಕ್ತಿ ಬೆಳೆಯಲು ಇಬ್ಬರು ಅಧ್ಯಾಪಕರು ಕಾರಣ. ಒಬ್ಬರು ಕನ್ನಡ ಅಧ್ಯಾಪಕರಾಗಿದ್ದ ಎಸ್. ನಂಜಪ್ಪಯ್ಯ. ಇವರು ನನಗೆ ಕನ್ನಡದಲ್ಲಿ `ಬರೆಯಲು' ಕಲಿಸಿದರು. ನಾನು ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ. ಮಾಡಬೇಕೆಂದು ಸಲಹೆ ಕೊಟ್ಟವರು ಇವರು. `ಕನ್ನಡ ಹೇಗೂ ನಿನ್ನ ಮಾತೃಭಾಷೆ; ಸಹಜವಾಗಿ ಕಲಿಯಬಹುದು; ಇಂಗ್ಲಿಷ್  ಸಾಹಿತ್ಯವನ್ನು ಗುರುಮುಖೇನ ಕಲಿ' ಎಂದು ಅವರು ಹುರುದುಂಬಿಸಿದರು. ಮತ್ತೊಬ್ಬರು ನಮಗೆ ಇಂಗ್ಲಿಷ್ ಕಲಿಸುತ್ತಿದ್ದ ಕ್ರಿಸ್ಟೋಫರ್ ಶಾಂತಪ್ಪನವರು. ಅವರು ಕನ್ನಡದ ಅಭಿಮಾನಿ.

ಹೊಸ ಹೊಸ ಕನ್ನಡ ಪುಸ್ತಕಗಳನ್ನು ಕೊಂಡು ತಂದು ನನ್ನಿಂದ ಓದಿಸುತ್ತಿದ್ದರು. ನಾನು ಓದಿದ ಪುಸ್ತಕಗಳ ಬಗ್ಗೆ ಚಿಕ್ಕ ಚಿಕ್ಕ ಟಿಪ್ಪಣಿಗಳನ್ನು ಬರೆದು ಅವರಿಗೆ ತೋರಿಸಬೇಕಾಗಿತ್ತು. ಪ್ರಾಯಶಃ ನನ್ನ ವಿಮರ್ಶೆಯ ಮೊದಲ ಪಾಠಗಳು ಆರಂಭವಾದದ್ದು ಆ ಅವಧಿಯಲ್ಲಿ. ಶಾಂತಪ್ಪನವರು ಆ ಕಾಲದಲ್ಲಿ ಓರ್ವ ಪ್ರಸಿದ್ಧ ಚರ್ಚಾಪಟುಗಳು. ನನ್ನನ್ನೂ ಓರ್ವ ಚರ್ಚಾಪಟುವನ್ನಾಗಿ ರೂಪಿಸಿದರು. ಆದರೆ ನನಗೆ ಭಾಷಣವನ್ನು ಅವರು ಎಂದೂ ಬರೆದುಕೊಡುತ್ತಿರಲಿಲ್ಲ. ವಿಷಯ ಮುಖ್ಯಾಂಶಗಳನ್ನು ಚರ್ಚಿಸಿ ನನ್ನ ಭಾಷಣವನ್ನು ನಾನೇ ತಯಾರಿಸಿಕೊಳ್ಳಬೇಕೆಂದು ಕಟ್ಟುನಿಟ್ಟು ಮಾಡಿದ್ದರು. ಯಾರೋ ಬರೆದ ಭಾಷಣವನ್ನು ಉರುಹಚ್ಚಿ ಒಪ್ಪಿಸಿ ಪ್ರಥಮ ಬಹುಮಾನ ತೆಗೆದುಕೊಳ್ಳುವುದರಲ್ಲಿ ಏನೂ ಹೆಚ್ಚುಗಾರಿಕೆಯಿಲ್ಲವೆಂದೂ, ಸ್ವತಂತ್ರವಾಗಿ ಯೋಚಿಸಿ ಬರೆಯುವುದು ಮತ್ತು ಮಾತನಾಡುವುದನ್ನು ಚಿಕ್ಕಂದಿನಿಂದಲೇ ಕಲಿಯಬೇಕೆಂದೂ ಅವರು ಆಗ್ರಹ ಪಡಿಸುತ್ತಿದ್ದರು.

ಹೀಗಾಗಿ ಚರ್ಚಾಸ್ಪರ್ಧೆಗಳಲ್ಲಿ ನನಗೆ ಪ್ರಥಮ ಬಹುಮಾನ ಎಂದೂ ಬರಲಿಲ್ಲ. ಆದರೆ ಸ್ವತಂತ್ರವಾಗಿ ಓದಿ-ಬರೆಯುವ ಆತ್ಮವಿಶ್ವಾಸ ನಿಧಾನವಾಗಿ ಮೊಳೆಯಲಾರಂಭಿಸಿತು. ನನ್ನ ಕಷ್ಟದ ದಿನಗಳಲ್ಲಿ-ನನಗೆ ಯಾವ ರೀತಿಯಲ್ಲಿಯೂ ಮುಜುಗರವಾಗದಂತೆ-ಆರ್ಥಿಕ ಸಹಾಯ ಮಾಡುತ್ತಿದ್ದ ಕ್ರಿಸ್ಟೋಫರ್ ಶಾಂತಪ್ಪನವರ ಸಹಾಯವಿಲ್ಲದಿದ್ದರೆ ನಾನು ಎಂ.ಎ. ಓದುವುದು ಇನ್ನೂ ಕಷ್ಟವಾಗುತ್ತಿತ್ತು. ಅವರಿಗೆ ನನ್ನ ಮೇಲೆ ಎಷ್ಟು ಅಭಿಮಾನವೆಂದರೆ, ಅವರು ಬದುಕಿರುವವರೆಗೂ ನನ್ನ ಪುಸ್ತಕಗಳ ಹತ್ತಾರು ಪ್ರತಿಗಳನ್ನು ಕೊಂಡುಕೊಂಡು ಸಾಹಿತ್ಯಾಸಕ್ತರಿಗೆ ಹಂಚುತ್ತಿದ್ದರು; ಆ ಪುಸ್ತಕಗಳನ್ನು ಬರೆದವನು ತಮ್ಮ ಶಿಷ್ಯನೆಂದು ಅಭಿಮಾನದಿಂದ ಹೇಳಿಕೊಳ್ಳುತ್ತಿದ್ದರು.

ಈ ಮಧ್ಯೆ ಕೆಲವು ತಿಂಗಳುಗಳ ಕಾಲ ನಾನು ಬೆಂಗಳೂರಿನ ಬಸವನಗುಡಿಯಲ್ಲಿರುವ ನ್ಯಾಷನಲ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದಿದೆ. ಎಚ್. ನರಸಿಂಹಯ್ಯನವರಿಂದ ಭೌತಶಾಸ್ತ್ರದ ಕೆಲವು ಪಾಠಗಳನ್ನು ಅಲ್ಲಿ ಕಲಿತೆ. ಕಿ.ರಂ. ನಾಗರಾಜ ಮತ್ತು ಕೆ.ವಿ. ನಾರಾಯಣ ಅವರು ನನಗೆ ಅಲ್ಲಿ ಕನ್ನಡ ಅಧ್ಯಾಪಕರಾಗಿದ್ದರು. ಆದರೆ ಕೆಲವೇ ತಿಂಗಳುಗಳ ನಂತರ ನಾನು ಟಿ.ನರಸೀಪುರಕ್ಕೆ ವಾಪಸಾಗಿ ಅಲ್ಲಿ ಪ್ರಾರಂಭವಾದ ಕಾಲೇಜಿನಲ್ಲಿ ಪಿಯು.ಸಿ. ವಿದ್ಯಾಭ್ಯಾಸವನ್ನು ಮುಂದುವರೆಸಿದೆ. ವಿಜ್ಞಾನದ ವಿದ್ಯಾರ್ಥಿಯಾಗಿದ್ದ ನಾನು ಮನೆಯವರ ವಿರೋಧದ ನಡುವೆಯೇ ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಇಂಗ್ಲಿಷ್, ಭಾಷಾಶಾಸ್ತ್ರ ಮತ್ತು ಸಮಾಜ ವಿಜ್ಞಾನಗಳನ್ನು  ಆಯ್ಕೆ ಮಾಡಿಕೊಂಡು ಬಿ.ಎ. ಕ್ಲಾಸಿಗೆ ಸೇರಿಕೊಂಡೆ. ಹತ್ತನೆಯ ತರಗತಿಯವರೆಗೂ ಕನ್ನಡ ಮಾಧ್ಯಮದಲ್ಲಿಯೇ ಓದಿದ್ದರೂ ಇಂಗ್ಲಿಷ್  ಒಂದು ತೊಡಕಾಗಲಿಲ್ಲ. `ಡೆಕ್ಕನ್ ಹೆರಾಲ್ಡ್' ಪತ್ರಿಕೆಯನ್ನು ಓದಿ, ಬಿ.ಬಿ.ಸಿ. ನ್ಯೂಸ್ ಕೇಳಿ ಇಂಗ್ಲೀಷನ್ನು ಕಲಿತಿದ್ದೆ.

ಅಲ್ಲದೆ ಹೈಸ್ಕೂಲಿನಲ್ಲಿರುವಾಗಲೇ ನನ್ನ ತಂದೆ ನನಗೆ `ರೆನ್ ಅಂಡ್ ಮಾರ್ಟಿನ್ ಇಂಗ್ಲಿಷ್  ಗ್ರಾಮರ್ ಅಂಡ್ ಕಾಂಪೋಸಿಷನ್' ಪುಸ್ತಕವನ್ನು ಅರೆದು ಕುಡಿಸಿದ್ದರು. ಹಾಗಾಗಿ ಇಂಗ್ಲಿಷ್ -ಕನ್ನಡ ಎಂಬ ಯಾವ ಭೇದಭಾವ ಇಲ್ಲವೇ ಪಕ್ಷಪಾತವಿಲ್ಲದೆ ಎರಡೂ ಭಾಷೆಗಳಲ್ಲಿ ವ್ಯವಹರಿಸುತ್ತ ನಾನು ನನ್ನ ಸಂವೇದನೆಯನ್ನು ರೂಪಿಸಿಕೊಂಡೆ. ನನ್ನ ಅಜ್ಜ ವೈದ್ಯರಾಗಿದ್ದರಂತೆ. ಅವರಂತೆ ನಾನೂ ಡಾಕ್ಟರ್ ಆಗಬೇಕೆಂದು ನನ್ನ ತಂದೆ ಆಶೆಪಟ್ಟಿದ್ದರು. ಮುಂದೆ ಎಂ.ಎ. ಮಾಡಿ ಕಾಲೇಜು ಅಧ್ಯಾಪಕನಾದ ಮೇಲೆ ಪಿಎಚ್.ಡಿ ಪಡೆದು `ಡಾಕ್ಟರ್' ಆಗಬಹುದೆಂದು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ನಾನು ಡಾಕ್ಟರ್ ಆಗಲೇ ಇಲ್ಲ. ನನ್ನ ಕೆಲವು ಪುಸ್ತಕಗಳು ಪ್ರಕಟವಾದ ಮೇಲೆ, `ಹೋಗಲಿ ಬಿಡು, ಮುಂದೆ ನೀನು ದೊಡ್ಡ ಲೇಖಕನಾದ ಮೇಲೆ ನಿನ್ನ ಬರವಣಿಗೆಯನ್ನು ಕುರಿತು ಅಧ್ಯಯನ ಮಾಡಿ ಯಾರಾದರೂ ಡಾಕ್ಟೊರೇಟ್ ಪಡೆದಾರು' ಎಂದು ನನಗೇ ಸಮಾಧಾನ ಹೇಳಿದ್ದರು!

ಮಹಾರಾಜಾ ಕಾಲೇಜಿಗೆ ಸೇರಿದ ಮೇಲೆ ಅಲ್ಲಿ ಉತ್ಸಾಹೀ ಸಹಪಾಠಿಗಳ ಸಹವಾಸದಲ್ಲಿ ನನ್ನ ಓದು ಮತ್ತು ಚರ್ಚೆಗಳಿಗೆ ಒಂದು ಫೋಕಸ್ ಒದಗಿತು. ಪುಸ್ತಕಗಳ ಆಯ್ಕೆಯಲ್ಲಿ ಹೆಚ್ಚು ನಿಖರತೆ ಬಂದಿತು. ಓದಿನ ಅನುಭವವನ್ನು ಖಚಿತವಾಗಿ, ಸ್ಪಷ್ಟವಾಗಿ ಹೇಳಿಕೊಳ್ಳಲು ಕಲಿತಿದ್ದೇ ಗೆಳೆಯರ ನಡುವಣ ಬಿಸಿಬಿಸಿ-ಆದರೆ ಕಹಿಯಿಲ್ಲದ-ಚರ್ಚೆಗಳಲ್ಲಿ. ಎ.ಆರ್. ನಾಗಭೂಷಣ, ಸಿ.ಎನ್. ಸಂಜಯ್, ಎಸ್.ಆರ್. ರಮೇಶ್. ಇಂದೂಧರ ಹೊನ್ನಾಪುರ, ಬಿ.ವಿ. ಸೀತಾರಾಮ ಮೊದಲಾದ ಉತ್ಸಾಹಿಗಳು ನನ್ನ ಜೊತೆ ಓದುತ್ತಿದ್ದರು. ಅದು ನವ್ಯಸಾಹಿತ್ಯದ ಉಬ್ಬರದ ಕಾಲ; ದಲಿತ-ಬಂಡಾಯದ ಹೊಸದನಿಗಳೂ ಮೊಳಗಲಾರಂಭಿಸಿದ್ದ ಕಾಲ; ಹೊಸ ಅಲೆಯ ಚಿತ್ರಗಳು, ನಾಟಕಗಳು ಪ್ರದರ್ಶಿತವಾಗುತ್ತಿದ್ದ ಕಾಲ; ನಮ್ಮ ಓದು-ಚರ್ಚೆಗಳಿಗೆ ದಿನದ ಇಪ್ಪತ್ತನಾಲ್ಕು ಘಂಟೆಗಳೂ ಸಾಲದು ಎನಿಸಿದ್ದ ಕಾಲ. ದಲಿತ ಸಂಘರ್ಷ ಸಮಿತಿಯ ಚಟುವಟಿಕೆಗಳು, ಸಮಾಜವಾದೀ ಆಂದೋಲನದ ಸೆಳೆತಗಳು, ಕಮ್ಯುನಿಸಮಿನ ಆಕರ್ಷಣೆ, ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿನ ಭೂಗತ ರಾಜಕೀಯ ಚಟುವಟಿಕೆಗಳು ಎಲ್ಲ ಸೇರಿ ನಮ್ಮ ಅಭಿರುಚಿ, ಸಂವೇದನೆ, ಒಟ್ಟಾರೆ ವ್ಯಕ್ತಿತ್ವ ರೂಪುಗೊಳ್ಳುತ್ತಿದ್ದ ಕಾಲ.

ಪುಸ್ತಕಗಳಿಗೆ ಮಾತ್ರವಲ್ಲ ಪುಸ್ತಕೋದ್ಯಮ ಲೋಕಕ್ಕೂ ನಾನು ತೆರೆದುಕೊಂಡ ಕಾಲ ಅದು. ನಮ್ಮ ತಂದೆ ನಿವೃತ್ತರಾಗಿ ಊರಿನಲ್ಲಿ ಸರ್ಕ್ಯುಲೇಟಿಂಗ್ ಲೈಬ್ರರಿ ನಡೆಸುತ್ತಿದ್ದರು. ದ್ವಿತೀಯ ಬಿ.ಎ. ಓದುತ್ತಿದ್ದಾಗ ನಾನು ಒಂದು ವರ್ಷ ನಂಜನಗೂಡಿನಲ್ಲಿ ನನ್ನ ದೊಡ್ಡಪ್ಪನವರ ಮನೆಯಲ್ಲಿ ಇದ್ದುಕೊಂಡು ಕಾಲೇಜಿಗೆ ರೈಲಿನಲ್ಲಿ ಓಡಾಡುತ್ತಿದ್ದೆ. ನಂಜನಗೂಡಿನಲ್ಲಿ ನಾನು ಮತ್ತು ನನ್ನ ದೊಡ್ಡಪ್ಪನ ಮಗ ಜಂಟಿಯಾಗಿ ಒಂದು ಸರ್ಕ್ಯುಲೇಟಿಂಗ್ ಲೈಬ್ರರಿಯನ್ನು ಸಂಜೆವೇಳೆಯಲ್ಲಿ ನಡೆಸುತ್ತಿದ್ದೆವು. ಈ ಎರಡೂ ಲೈಬ್ರರಿಗಳಿಗೆ ಮೈಸೂರು-ಬೆಂಗಳೂರುಗಳ ಪುಸ್ತಕದ ಅಂಗಡಿಗಳಿಂದ ಪುಸ್ತಕಗಳನ್ನು ಕೊಂಡುತರುವ ಜವಾಬ್ದಾರಿ ನನ್ನ ಮೇಲೆ ಬಿದ್ದಿತ್ತು. ಇದರಿಂದ ಪುಸ್ತಕ ವಹಿವಾಟಿನ ಅನೇಕ ಸೂಕ್ಷ್ಮಗಳು, ಒಳಮರ್ಮಗಳು ಪರಿಚಯವಾದವು. ಕನ್ನಡ ಓದುಗರ ವಾಚನಾಭಿರುಚಿಯ ಸ್ವರೂಪವೂ ಚೆನ್ನಾಗಿಯೇ ಮನದಟ್ಟಾಯಿತು. ಚಿಕ್ಕಂದಿನಿಂದ ನಾನೂ ಪುಸ್ತಕಪ್ರೇಮಿಯೇ. ಎನ್. ನರಸಿಂಹಯ್ಯನವರ ಹೆಚ್ಚು ಕಡಿಮೆ ಎಲ್ಲ ಕಾದಂಬರಿಗಳನ್ನೂ ನಾನು ಓದಿದ್ದೇನೆ.

`ಜನಪ್ರಿಯ' ಕಾದಂಬರಿಗಳು ಎಂದು ಕರೆಯಲಾಗುತ್ತಿದ್ದ ನೂರಾರು ಕಾದಂಬರಿಗಳನ್ನು ಓದುವ ಅವಕಾಶ ಸಿಕ್ಕಿದ್ದು ಆಗಲೇ. ರಜಾ ದಿನಗಳಲ್ಲಿ ದಿನವೊಂದಕ್ಕೆ ಎರಡು ಮೂರು ಕಾದಂಬರಿಗಳನ್ನು ಓದಿದ್ದೂ ಉಂಟು. ಕಾಲೇಜಿಗೆ ಬಂದಮೇಲೆ ಕ್ಲಾಸಿಕ್‌ಗಳನ್ನು ಓದಲು ಬೇಕಾದ ಶಕ್ತಿ-ತಾಳ್ಮೆ ಒದಗಿದ್ದು ಹೀಗೆ. ಬಿಡಿ ವಿಶ್ಲೇಷಣೆಯೊಂದಿಗೆ ಈಗ ತುಲನೆಯೂ ಮೊದಲಾಯಿತು. ಪುಸ್ತಕ-ಪುಸ್ತಕಗಳನ್ನು, ಲೇಖಕ-ಲೇಖಕರನ್ನು ತುಲನೆ ಮಾಡುವ ಅಭ್ಯಾಸ ಪ್ರಾರಂಭವಾಗಿ ನನ್ನ ವೈಯಕ್ತಿಕ ಆದ್ಯತೆಗಳೂ ಸ್ಪಷ್ಟವಾಗಲಾರಂಭಿಸಿದವು. ಸಾಹಿತ್ಯ ವಿಮರ್ಶೆಯನ್ನು ಕುರಿತ ಲೇಖನಗಳನ್ನು ಮತ್ತು ಪುಸ್ತಕಗಳನ್ನು ಓದಲು ಆರಂಭಿಸಿದ ಮೇಲೆ ಒಂದು ಕೃತಿಯನ್ನು ಎಷ್ಟೆಲ್ಲ ಬಗೆಗಳಲ್ಲಿ ಓದಲು, ಅರ್ಥೈಸಲು, ವ್ಯಾಖ್ಯಾನಿಸಲು ಸಾಧ್ಯ ಎಂದು ವಿಸ್ಮಿತನಾದೆ. ಇತರರ ಟೀಕೆ ಟಿಪ್ಪಣಿಗಳನ್ನು ಒಪ್ಪಿಕೊಳ್ಳಲು ಸಾಧ್ಯವಿರದಿದ್ದಾಗಲೂ ಅವರು ಹೇಳುವುದರಲ್ಲೂ ಏನೋ ಒಂದು ಸತ್ಯವಿರುವುದು ಗೊತ್ತಾಗುತ್ತಿತ್ತು. ಈ ಓದಿನಿಂದ ನಮ್ಮ ನಮ್ಮ ವೈಯಕ್ತಿಕ ಅಭಿಪ್ರಾಯಗಳನ್ನು ಇತರರ ಅನಿಸಿಕೆಗಳೊಂದಿಗೆ ತಾಳೆಹಾಕಿ ನೋಡಿಕೊಳ್ಳಲು ಅನುವಾಯಿತು.

ಭಿನ್ನಾಭಿಪ್ರಾಯಗಳಿದ್ದಾಗಲೂ ಇತರರನ್ನು ಗೌರವಿಸಲು, ಅವರನ್ನು ಗಂಭೀರವಾಗಿ ತೆಗೆದುಕೊಳ್ಳಲು ಈ ಓದುಗಳು ಸಹಾಯಕವಾದವು. ಮುಖ್ಯವಾಗಿ, ಕೃತಿಗೆ ಒಂದೇ ಅರ್ಥವಿರುವುದಿಲ್ಲ; ಬೇರೆ ಬೇರೆ ಓದುಗಳು ಬೇರೆ ಬೇರೆ ಅರ್ಥವನ್ನು ಸೂಚಿಸಬಹುದು ಎಂಬ ಅರಿವಾಗತೊಡಗಿತು. ಓದುಗನ ವೈಯಕ್ತಿಕ ಹಿನ್ನೆಲೆ, ಅನುಭವ ಬೇರೆಯಾದಂತೆ ವ್ಯಾಖ್ಯಾನಗಳ ಸ್ವರೂಪವೂ ಬೇರೆಯಾಗಬಹುದು ಎಂದು ತಿಳಿಯತೊಡಗಿತು.

ಮಾನಸಗಂಗೋತ್ರಿಯಲ್ಲಿ ಎಂ.ಎ. ಮಾಡಲು ಹೋದಾಗ ಅಲ್ಲಿ ಸಿ.ಡಿ. ನರಸಿಂಹಯ್ಯ, ಯು.ಆರ್. ಅನಂತಮೂರ್ತಿ. ಬಿ.ದಾಮೋದರರಾವ್, ಡಿ.ಎ. ಶಂಕರ್ ಮೊದಲಾದವರು ನನಗೆ ಗುರುಗಳಾದರು. ಮೈಸೂರು ವಿಶ್ವವಿದ್ಯಾಲಯದ ಇಂಗ್ಲಿಷ್  ಅಧ್ಯಾಪಕರು ಒಂದು ಕೃತಿಯನ್ನು ಸೂಕ್ಷ್ಮವಾಗಿ, ಅದರೆಲ್ಲ ವಿವರಗಳೊಂದಿಗೆ ಸಮಗ್ರವಾಗಿ ಓದುವುದು ಹೇಗೆ ಎಂಬುದನ್ನು ಕಲಿಸಿಕೊಟ್ಟರು. ಅವರೆಲ್ಲ ಸ್ವತಃ ಶ್ರೇಷ್ಠ ವಿಮರ್ಶಕರುಗಳಾಗಿದ್ದರೂ ಇತರ ವಿಮರ್ಶಕರನ್ನು ನಮ್ಮ ಲೇಖನಗಳಲ್ಲಿ ಕೇವಲ ಉದ್ಧರಿಸುತ್ತ ಹೋಗುವುದನ್ನು ಪ್ರೋತ್ಸಾಹಿಸುತ್ತಿರಲಿಲ್ಲ. ಸಾಹಿತ್ಯಚರಿತ್ರೆಯನ್ನೂ ಅವರು ಅಷ್ಟಾಗಿ ಮುಂದೆ ಮಾಡುತ್ತಿರಲಿಲ್ಲ. ಬದಲಾಗಿ ನಮ್ಮೆದುರು ಇರುವ ಕೃತಿಯನ್ನು ಅದರ ಭಾಷಿಕ ನೆಲೆಯಲ್ಲಿ ನಮ್ಮ ಅನುಭವವನ್ನು ಧಾರೆ ಎರೆದು ಅನುಸಂಧಾನ ಮಾಡುವುದು ಹೇಗೆ ಎಂಬುದನ್ನು ಒತ್ತಿ ಹೇಳುತ್ತಿದ್ದರು. ಅವರ ಪಾಠಗಳಲ್ಲಿ ಮತ್ತು ನಮ್ಮ ಸೆಮಿನಾರು ಪೇಪರುಗಳಲ್ಲಿ ಈ ಶಿಸ್ತು ಪ್ರಧಾನವಾಗಿತ್ತು. ಒಂದು ಕೃತಿಯ ಅನುಭವವನ್ನು ಹೇಳಿಕೊಳ್ಳಲು ವಿಮರ್ಶೆಯ ವಿಧಾನಗಳು, ನುಡಿಗಟ್ಟುಗಳು, ಪಾರಿಭಾಷಿಕ ಪದಗಳು ಮುಖ್ಯವಾಗಬಹುದು; ಅವುಗಳನ್ನು ಒಬ್ಬರು ಮತ್ತೊಬ್ಬರಿಗೆ ಕಲಿಸಿಕೊಡಲೂ ಬಹುದು; ಆದರೆ ಒಂದು ಕೃತಿ ಉತ್ತಮವೆಂದೋ ಅರ್ಥಪೂರ್ಣವೆಂದೋ, ಶ್ರೇಷ್ಠವೆಂದೋ ನಮಗೇ ಅನ್ನಿಸಬೇಕು; ಅದನ್ನು ಮತ್ತೊಬ್ಬರು ಹೇಳಿಕೊಡಲು ಸಾಧ್ಯವಿಲ್ಲ. ಕೃತಿಯ ಸತತ ಅಭ್ಯಾಸ ಮತ್ತು ಅಧ್ಯಯನದಿಂದ ಅದು ಬರಬಹುದು. ನಮ್ಮ ಓದು ತೀವ್ರವಾದಂತೆ, ಸಮೃದ್ಧವಾದಂತೆ ನಮ್ಮ ಸಂವೇದನೆಯು ಸೂಕ್ಷ್ಮವಾಗುತ್ತದೆ; ಆಗ ಒಂದು ಒಳ್ಳೆಯ ಕೃತಿಯನ್ನು ಮೊದಲ ಓದಿಗೇ ಮೆಚ್ಚಲು, ಅದರ ಬಗ್ಗೆ ನಮ್ಮದೇ ಅಭಿಪ್ರಾಯವನ್ನು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ.

ಎಂ.ಎ.ವ್ಯಾಸಂಗದಲ್ಲಿ ನಾನು ಕಲಿತ ಪ್ರಾಥಮಿಕ ಪಾಠಗಳು ಇವು. `ವಿಮರ್ಶೆ, ಚರಿತ್ರೆಗಳನ್ನು ಆಮೇಲೆ ಓದಿಕೊಳ್ಳಿ; ಮೊದಲು ಒಂದು ಕೃತಿಗೆ ಫ್ರೆಶ್ ಆಗಿ ಪ್ರತಿಕ್ರಿಯಿಸಲು, ಪ್ರತಿಸ್ಪಂದಿಸಲು ಮನಸ್ಸನ್ನು ಸಿದ್ಧಮಾಡಿಕೊಳ್ಳಿ' ಎಂಬುದು ನಮ್ಮ ಅಧ್ಯಾಪಕರ ಒಟ್ಟಾರೆ ಸಲಹೆ ಮತ್ತು ಉಪದೇಶಗಳಾಗಿದ್ದವು ಎನಿಸುತ್ತದೆ. ಅನಂತಮೂರ್ತಿಯವರ ಪ್ರಾಯೋಗಿಕ ವಿಮರ್ಶೆಯ ತರಗತಿಗಳು ನೆನಪಾಗುತ್ತವೆ. ಒಮ್ಮೆ ಅವರು ನಮಗೆ ಒಂದು ಗದ್ಯಬರಹವನ್ನು ಕೊಟ್ಟು ಅದರ ಪ್ರಾಯೋಗಿಕ ವಿಮರ್ಶೆ ಬರೆಯಲು ಹೇಳಿದ್ದರು. ನಾವು ಅದನ್ನು ಅದರ ಸಾಂಕೇತಿಕತೆ, ದರ್ಶನ ಇತ್ಯಾದಿ ನೆಲೆಗಳಲ್ಲಿ ಅರ್ಥೈಸಿ ನಮ್ಮನಮ್ಮದೇ ಉಗ್ರ ವ್ಯಾಖ್ಯಾನಗಳನ್ನು ಬರೆದಿದ್ದೆವು. ಆದರೆ ಅದು ಹಿಂದಿನ ದಿನದ `ಡೆಕ್ಕನ್ ಹೆರಾಲ್ಡ್' ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಸಾಮಾನ್ಯ ವರದಿಯಾಗಿತ್ತು ಎಂದು ತಿಳಿದಾಗ ಬೇಸ್ತು ಬಿದ್ದಿದ್ದೆವು! ಮತ್ತೊಂದು ತರಗತಿಯಲ್ಲಿ ಪ್ರಬಂಧವೊಂದರ ಭಾಗವನ್ನು ವಿಮರ್ಶೆಗೆ ಒಳಪಡಿಸಿ ಆ ಲೇಖಕನ ಬಗ್ಗೆ ಕಟುವಾದ ಟೀಕೆಗಳನ್ನು ಮಾಡಿದ್ದೆವು. ಆಮೇಲೆ ಅದು ಡಿ.ಎಚ್. ಲಾರೆನ್ಸನ ಸುಪ್ರಸಿದ್ಧ ಪ್ರಬಂಧವೊಂದರ ಭಾಗವೆಂದು ಗೊತ್ತಾದಾಗ ನಮ್ಮ ಅತ್ಯುತ್ಸಾಹಕ್ಕೆ ಬ್ರೇಕ್ ಬಿದ್ದಿತ್ತು!


ರಿಸಲ್ಟ್ ಬಂದ ಒಂದು ತಿಂಗಳಿಗೇ ಕನಕಪುರದ ರೂರಲ್ ಕಾಲೇಜಿನಲ್ಲಿ ಕೆಲಸ ಸಿಕ್ಕಿತು. ಅಲ್ಲಿ ವೇಣುಗೋಪಾಲ ಸೊರಬ ಅವರು ವಿಭಾಗದ ಮುಖ್ಯಸ್ಥರಾಗಿದ್ದರು. ಅವರೊಂದಿಗೆ ಒಂದು ಸಂಜೆ ವಾಕ್ ಹೋದಾಗ ಆಗಷ್ಟೇ ಪ್ರಕಟವಾಗಿದ್ದ ಲಂಕೇಶರ `ಮುಸ್ಸಂಜೆಯ ಕಥಾಪ್ರಸಂಗ' ಕಾದಂಬರಿಯ ಬಗ್ಗೆ ಅವರೊಂದಿಗೆ ಉತ್ಸಾಹದಿಂದ ಹರಟಿದೆ. ಅವರು ತುಂಬ ಇಂಪ್ರೆಸ್ ಆಗಿ ಅದನ್ನೇ ಒಂದು ಲೇಖನ ರೂಪದಲ್ಲಿ ಬರೆದುಕೊಡಲು ಹೇಳಿದರು. ಮಾರನೆಯ ದಿವಸವೇ ಬರೆದುಕೊಟ್ಟೆ. ಅವರು ತಮ್ಮದೇ ಖರ್ಚಿನಲ್ಲಿ ಅದನ್ನು `ಸಂಕ್ರಮಣ'ಕ್ಕೆ ಪೋಸ್ಟ್ ಮಾಡಿದರು. ಅಲ್ಲಿ ಅದು ಅಚ್ಚೂ ಆಯಿತು. ನನ್ನ ಮೊದಲ ಪ್ರಕಟಿತ ಲೇಖನ ಅದು. ಮುಂದಿನ ವರ್ಷ ಆ ಲೇಖನವನ್ನು ಜಿ.ಎಸ್. ಶಿವರುದ್ರಪ್ಪನವರು ಕರ್ನಾಟಕ ಸಾಹಿತ್ಯ ಅಕಾಡೆಮಿ ಹೊರತಂದ `ಸಾಹಿತ್ಯ ವಿಮರ್ಶೆ 1979'ರಲ್ಲಿ ಸೇರಿಸಿಕೊಂಡರು. ನಾನೂ ಒಬ್ಬ ವಿಮರ್ಶಕನೆಂದು ಹೆಸರಾದೆ!

ಕನಕಪುರದಲ್ಲಿದ್ದುದು ಒಂದೇ ತಿಂಗಳು. ಅಲ್ಲಿಂದ ತುಮಕೂರಿಗೆ ಹೋಗಿ ಒಂದು ವರ್ಷ ಕಾಲ ಸಿದ್ಧಗಂಗಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಅಧ್ಯಾಪಕನಾಗಿದ್ದೆ. ವಾರದ ಕೊನೆಯಲ್ಲಿ ಬೆಂಗಳೂರಿಗೆ ಹೋಗುತ್ತಿದ್ದೆ. ಬಸವನಗುಡಿಯಲ್ಲಿ ನನ್ನ ಬಂಧುಗಳ ಮನೆಯಲ್ಲಿ ಉಳಿಯುತ್ತಿದ್ದೆ. ಗಾಂಧಿಬಜಾರಿನಲ್ಲಿ ಸುಮತೀಂದ್ರ ನಾಡಿಗರ ಪುಸ್ತಕದ ಅಂಗಡಿ ಇತ್ತು. ಅಲ್ಲಿಗೆ ಅನೇಕ ಪ್ರಸಿದ್ಧ ಲೇಖಕರು ಬರುತ್ತಿದ್ದರು. ಅಡಿಗರು, ನಿಸಾರ್ ಅಹಮದ್, ಎಸ್. ದಿವಾಕರ್, ಜಿ.ಕೆ. ಗೋವಿಂದರಾವ್, ಡಿ.ಆರ್. ನಾಗರಾಜ್. ಲಕ್ಷ್ಮೀನಾರಾಯಣ ಭಟ್ಟ ಮುಂತಾದವರೆಲ್ಲ ಮೊದಲು ಪರಿಚಯವಾದದ್ದು ಅಲ್ಲಿಯೇ. ಒಮ್ಮೆ ಯಾವುದೋ ಒಂದು ವಿಚಾರಗೋಷ್ಠಿಯಲ್ಲಿ ಭಾಗವಹಿಸಿದಾಗ ಬಿ.ವಿ. ವೈಕುಂಠರಾಜು ಅವರು ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ಚರ್ಚೆಯ ಸಂದರ್ಭದಲ್ಲಿ ನಾನೂ ಒಂದೆರಡು ಪ್ರಶ್ನೆಗಳನ್ನು ಕೇಳಿದ್ದೆ. ಅದರಿಂದ ತುಂಬ ಇಂಪ್ರೆಸ್ ಆದ ವೈಕುಂಠರಾಜು `ಪ್ರಜಾವಾಣಿ'ಯಲ್ಲಿ ಪುಸ್ತಕ ವಿಮರ್ಶೆ ಮಾಡಲು ನನಗೆ ಆಹ್ವಾನ ಕೊಟ್ಟರು. ಮುಂದೆ ಸುಮಾರು ಹದಿನೈದು ವರ್ಷಗಳ ಕಾಲ ಪುಸ್ತಕ ವಿಮರ್ಶೆ ಬರೆದೆ.

1979ರಲ್ಲಿ ನನ್ನ ಮೊದಲ ಪುಸ್ತಕ `ನವ್ಯಕಾದಂಬರಿಯ ಪ್ರೇರಣೆಗಳು' ಬಾಪ್ಕೊ ಪ್ರಕಾಶನದಿಂದ ಪ್ರಕಟವಾಯಿತು. ಹತ್ತಾರು ಲೇಖನಗಳ ಸಂಗ್ರಹ ಅದು. ಅನಂತಮೂರ್ತಿ ಮತ್ತು ಶಾಂತಿನಾಥ ದೇಸಾಯಿ ಅವರ ಕಾದಂಬರಿಗಳನ್ನು ಕುರಿತು ಉಗ್ರವಾದ ಟೀಕೆಟಿಪ್ಪಣಿಗಳನ್ನು ಮಾಡಿದ್ದ ಎರಡು ಲೇಖನಗಳೂ ಅದರಲ್ಲಿದ್ದವು. ಪುಸ್ತಕ ಕೊಂಚ ವಿವಾದಕ್ಕೆ ಒಳಗಾಯಿತು. `ಬುದ್ಧಿವಂತ ವ್ಯಕ್ತಿಯೊಬ್ಬನು ವಿಮರ್ಶೆಯ ಹೆಸರಿನಲ್ಲಿ ಮಾಡಬಹುದಾದ ಅಪಾಯಗಳ ಬಗ್ಗೆ ಹೆದರಿಕೆಯಾಗುತ್ತದೆ' ಎಂದು `ಪ್ರಜಾವಾಣಿ'ಯಲ್ಲಿ ಈ ಪುಸ್ತಕವನ್ನು ವಿಮರ್ಶಿಸಿದ ಟಿ.ಜಿ. ರಾಘವ ಬರೆದರು. ಆದರೆ ಈ ಪುಸ್ತಕದಿಂದ ನಾನು ಖ್ಯಾತನೂ ಕುಖ್ಯಾತನೂ ಆದೆ! ಈಗ ನನ್ನ ನಿಲುವುಗಳಲ್ಲಿ ತುಂಬಾ ಬದಲಾವಣೆಯಾಗಿದೆ. ಕಂಬಾರ, ಅನಂತಮೂರ್ತಿ, ದೇಸಾಯಿ, ಗಿರಿ, ಮುಂತಾದವರ ಕೃತಿಗಳ ಮರುಓದನ್ನು ಮಾಡಿದ್ದೇನೆ. ವಿಮರ್ಶೆ ಎಂಬುದು ಅಂತಿಮ ತೀರ್ಪಲ್ಲ; ನಮ್ಮ ವ್ಯಕ್ತಿತ್ವ ವಿಕಾಸವಾದಂತೆ, ನಮ್ಮ ಜೀವನ ಸಂದರ್ಭಗಳು ಬದಲಾದಂತೆ, ನಮ್ಮ ಓದು ವಿಸ್ತಾರವಾದಂತೆ, ಅನುಭವ ಹಿಗ್ಗಿದಂತೆ ನಾವು ನೋಡುವ ಕ್ರಮಗಳು, ಅರ್ಥೈಸುವ-ವ್ಯಾಖ್ಯಾನಿಸುವ ಬಗೆಗಳು, ನಮ್ಮ ಅಭಿಪ್ರಾಯಗಳು ಬದಲಾಗುತ್ತವೆ ಎಂಬುದನ್ನು ಇತರ ವಿಮರ್ಶಕರ ಬರಹಗಳಿಂದ ಮತ್ತು ಸ್ವಂತ ಅನುಭವದಿಂದ ಕಂಡುಕೊಂಡೆ.

1979ರ ನವೆಂಬರ್‌ನಲ್ಲಿ ನಾನು ಸಾಗರದ ಲಾಲ್ ಬಹಾದೂರ್ ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕನಾಗಿ ಸೇರಿಕೊಂಡೆ. ಬಹುಬೇಗ ಕೆ.ವಿ. ಸುಬ್ಬಣ್ಣನವರ ಸಂಪರ್ಕಕ್ಕೆ ಬಂದೆ. ನೀನಾಸಂ ಚಟುವಟಿಕೆಗಳಲ್ಲಿ ಸಕ್ರಿಯನಾದೆ. ಚಲನಚಿತ್ರ ಮತ್ತು ರಂಗಭೂಮಿ,ರಂಗಭೂಮಿ-ಚಲನಚಿತ್ರಗಳನ್ನು ಕುರಿತಂತೆ ಸುಮಾರು ಐದುನೂರು ಶಿಬಿರಗಳನ್ನು ರಾಜ್ಯದಾದ್ಯಂತ ನಡೆಸಿದ್ದೇನೆ. ಇದರಿಂದ ನನ್ನ ಸಂವಹನ ಕಲೆಯೂ ಬೆಳೆಯಿತು.

1987ರಲ್ಲಿ `ಮಯೂರ'ದಲ್ಲಿ ನಾನೊಂದು ಅಂಕಣವನ್ನು ಬರೆಯಬೇಕೆಂದು ಜಿ.ಎಸ್. ಸದಾಶಿವ ಅಪೇಕ್ಷಿಸಿದರು. `ನನಗೆ ಇಷ್ಟವಾಗದ ಪುಸ್ತಕವನ್ನು ಸಾರ್ವಜನಿಕವಾಗಿ ಉಗ್ರವಾದ ಟೀಕೆಗೆ ಒಳಪಡಿಸುವುದರಲ್ಲಿ ಯಾವ ಪುರುಷಾರ್ಥವೂ ಇಲ್ಲ; ನನಗೆ ಇಷ್ಟವಾಗುವ, ಮುಖ್ಯವೆನ್ನಿಸುವ, ಇತರರಿಗೂ ಅರ್ಥಪೂರ್ಣವೆಂದು ಅನ್ನಿಸಬಹುದಾದ ಪುಸ್ತಕಗಳ ಬಗ್ಗೆ ಬರೆದರೆ ಬರೆಯುವವನಿಗೂ ಉತ್ಸಾಹ; ಓದುವವರಿಗೂ ಪ್ರಸ್ತುತವಾಗಬಹುದು' ಎನ್ನಿಸಲಾರಂಭಿಸಿತ್ತು. ಹಾಗಾಗಿ ನನ್ನ ಬರವಣಿಗೆಯ ಉದ್ದೆೀಶ ಮತ್ತು ಸ್ವರೂಪ ಎರಡರಲ್ಲೂ ಬದಲಾವಣೆ ಕಾಣಿಸಿಕೊಂಡಿತು. ಮುಂದೆ ಬೇರೆ ಪತ್ರಿಕೆಗೆ ಅಂಕಣ ಬರೆದಾಗ ಈ ವಿಧಾನ ಮುಂದುವರೆಯಿತು.  ಸದ್ಯ ದೈನಿಕ ಮತ್ತು ಮಾಸಪತ್ರಿಕೆಯೊಂದಕ್ಕೆ ಬರೆಯುತ್ತಿರುವ ಅಂಕಣಗಳಲ್ಲಿಯೂ ನನಗೆ ಮಹತ್ವದ್ದೆಂದು ಕಾಣುವ ಹೊಸ, ಹಳೆಯ, ಅನುವಾದಿತ ಕೃತಿಗಳ ಬಗ್ಗೆ ಉತ್ಸಾಹದಿಂದ ಬರೆಯುತ್ತಿದ್ದೇನೆ. `ಜನಪ್ರಿಯ' ಪತ್ರಿಕೆಗಳ ಅಂಕಣಗಳಲ್ಲಿ ಬರೆಯುವುದಕ್ಕೆ ನನಗೆ ಯಾವ ಹಿಂಜರಿಕೆಯೂ, ಅಳುಕೂ ಇಲ್ಲ. `ಹೇಳುವ ವಿಷಯದಲ್ಲಿ ರಾಜಿ ಮಾಡಿಕೊಳ್ಳಬಾರದು; ಆದರೆ ಹೇಳುವುದನ್ನು ಸ್ಪಷ್ಟವಾಗಿ, ಇತರರಿಗೆ ಅರ್ಥವಾಗುವ ಹಾಗೆ ಹೇಳಬೇಕು' ಎಂಬುದು ನನ್ನ ನಿಲುವು. ಬರವಣಿಗೆಯ ಉದ್ದ ಅಥವಾ ಗಾತ್ರ ಮುಖ್ಯವಲ್ಲ.

ನಾವು ಹೇಳುವುದನ್ನು ಎಷ್ಟೂ ಸರಳವಾಗಿ, ಅಡಕವಾಗಿ, ಸಾಂದ್ರವಾಗಿ ಹೇಳುವುದು ಸಾಧ್ಯ ಎಂಬುದು ನನ್ನ ನಂಬಿಕೆ. ವಿಚಾರ ಸಂಕಿರಣದಲ್ಲಿ `ಪ್ರೌಢ'ಪ್ರಬಂಧ ಮಂಡಿಸುವುದಕ್ಕೂ ಪತ್ರಿಕೆಯಲ್ಲಿ `ಸರಳ'ವಾಗಿ ಲೇಖನ ಬರೆಯುವುದಕ್ಕೂ ಕೃತಕ ವ್ಯತ್ಯಾಸವನ್ನು ಮಾಡಬಾರದು. ಲೇಖನದ ಸ್ವರೂಪವು ಸಂದರ್ಭದಿಂದ ಸಂದರ್ಭಕ್ಕೆ ಬೇರೆಯಾಗಬಹುದಾದರೂ ಅವುಗಳಲ್ಲಿ ಬಲವಂತದ ತರತಮ ವ್ಯತ್ಯಾಸ ಮಾಡುವ ಅಗತ್ಯವಿಲ್ಲ. ಅಂತಿಮವಾಗಿ ಬರವಣಿಗೆ ಎನ್ನುವುದು ಅಭಿವ್ಯಕ್ತಿಯ ಒಂದು ಕ್ರಮ. ಅದು ಪರಿಣಾಮಕಾರಿಯಾಗಿರಬೇಕು; ಅರ್ಥಪೂರ್ಣವಾಗಿರಬೇಕು; ಓದುಗರನ್ನು ಸಂವಾದಕ್ಕೆ, ಚರ್ಚೆಗೆ ಆಹ್ವಾನಿಸುವಂತಿರಬೇಕು. ಲೇಖಕನು ಓದುಗರ ಮೇಲೆ ಸವಾರಿ ಮಾಡಹೋಗಬಾರದು. ತನ್ನ ಅನುಭವವನ್ನು ವಿನಯದಿಂದ ಹಂಚಿಕೊಳ್ಳಬೇಕು. ತನ್ನಷ್ಟೇ ಜವಾಬ್ದಾರಿಯಿಂದ, ಸೂಕ್ಷ್ಮತೆಯಿಂದ ಓದುವ ಮತ್ತೊಬ್ಬ ಓದುಗನು ತಲುಪುವ ನಿರ್ಧಾರಗಳು ತನ್ನವಕ್ಕಿಂತ ತೀರಾ ಭಿನ್ನವಾಗಿರಬಹುದು ಎಂಬ ಎಚ್ಚರ ಇರಬೇಕು. ಹಾಗೆಯೇ ಕೃತಿಯೊಂದು ಕೊಡುವ ಅನುಭವವನ್ನು ಪೂರ್ಣವಾಗಿ ಸ್ವೀಕರಿಸುವ ತಾಳ್ಮೆಯಿರಬೇಕು.


ಒಂದು ಕೃತಿಯ ಬಗ್ಗೆ ನಮ್ಮ ನಿಲುವುಗಳು ಏನೇ ಇದ್ದರೂ ಓದಿನ ಸಂದರ್ಭದಲ್ಲಿ ಲೇಖಕ ಹೇಳುವುದನ್ನು ಸಮಾಧಾನದಿಂದ ಕೇಳಿಸಿಕೊಳ್ಳುವ ವ್ಯವಧಾನ ಇದ್ದೇ ಇರಬೇಕು. ಆದುದರಿಂದಲೇ ಸಿದ್ಧಾಂತಗಳನ್ನು ಹೊರಗಿನಿಂದ ಹೇರಿ ಕೃತಿಯ ಅನುಭವವನ್ನು ಅವುಗಳಿಗೆ `ಹೊಂದಿಸುವ' ವಿಮರ್ಶಾ ವಿಧಾನಗಳ ಬಗ್ಗೆ ನನಗೆ ಅಷ್ಟಾಗಿ ಆಸಕ್ತಿಯಿಲ್ಲ.  ಸಿದ್ಧಾಂತಗಳು ನಮ್ಮ ಅನುಭವ ವಿಸ್ತಾರಕ್ಕೆ, ಅನುಭವ ಸಮೃದ್ಧಿಗೆ, ಹೊಸ ವೈಚಾರಿಕತೆಗೆ, ನೋಡುವ ಹೊಸಕ್ರಮಗಳಿಗೆ ಖಂಡಿತಾ ಬೇಕು. ಆದರೆ ಅವು ಕಣ್ಣುಪಟ್ಟಿಗಳಾಗಬಾರದು. ಎರಡನೆಯದಾಗಿ ಕತೆ-ಕಾದಂಬರಿ-ಕವಿತೆ-ನಾಟಕಗಳೂ `ಜ್ಞಾನ'ವನ್ನು ಸೃಷ್ಟಿಸುವ, ಸಂಗ್ರಹಿಸುವ, ಪ್ರಸಾರಮಾಡುವ ಉಪಕ್ರಮಗಳೆಂದೇ ನಾನು ದೃಢವಾಗಿ ನಂಬಿದ್ದೇನೆ.

ಮನುಷ್ಯಾನುಭವದ ನೆಲೆಯಲ್ಲಿ ಅಲ್ಲಿ `ಜ್ಞಾನ' ಸಂಚಯವಾಗುತ್ತದೆ. `ಕಥನ'ಗಳಲ್ಲಿ ಮತ್ತು `ರೂಪಕ'ಗಳಲ್ಲಿ ಅದನ್ನು ಗ್ರಹಿಸುವ ಸಾಮರ್ಥ್ಯ ಮತ್ತು ಪ್ರತಿಭೆಯನ್ನು ನಾವು ಗಳಿಸಿಕೊಳ್ಳಬೇಕು. ನಾವು ಪ್ರತಿಪಾದಿಸುವ ಮನೋವಿಜ್ಞಾನ, ಸಮಾಜ ವಿಜ್ಞಾನ. ರಾಜ್ಯಶಾಸ್ತ್ರ, ಚರಿತ್ರೆ ಇವುಗಳಿಗೆ ಕೇವಲ ನಿದರ್ಶನಗಳೋ ಅಪವಾದಗಳೋ ಎಂಬಂತೆ ಸಾಹಿತ್ಯ ಕೃತಿಗಳನ್ನು `ಬಳಕೆ' ಮಾಡಿಕೊಳ್ಳುವುದು ಸಾಹಿತ್ಯ ವಿಮರ್ಶೆ ಅನ್ನಿಸಿಕೊಳ್ಳಲಾರದು. ಜೀವನವೆನ್ನುವುದು ಎಲ್ಲ ಶಾಸ್ತ್ರಗಳನ್ನೂ, ಸಿದ್ಧಾಂತಗಳನ್ನೂ, ಸೂತ್ರಗಳನ್ನೂ ಮೀರಿ ನಿಲ್ಲುವಂಥದ್ದು; ಸಾಹಿತ್ಯಕ್ಕೂ ಈ ಮಾತು ಸಲ್ಲುತ್ತದೆ. ಇದನ್ನು ಅರಿತು ವಿಮರ್ಶಕ ಸಾಹಿತ್ಯದೊಡನೆ ಅನುಸಂಧಾನ ಮಾಡಿದರೆ ಸಾಹಿತ್ಯದ ನಿಗೂಢ ಲೋಕವೂ ಅಷ್ಟಿಷ್ಟು ಬಿಚ್ಚಿಕೊಳ್ಳುತ್ತದೆ; ವಿಮರ್ಶೆಯೂ ಬೆಳೆಯುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT