ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನು ಮಿಲ್ಖಾಸಿಂಗ್‌ ಆಗಿದ್ದೆ: ಫರ್‌ಹಾನ್‌

Last Updated 27 ಸೆಪ್ಟೆಂಬರ್ 2013, 19:35 IST
ಅಕ್ಷರ ಗಾತ್ರ

ಬೆಂಗಳೂರು: ‘ಭಾಗ್ ಮಿಲ್ಖಾ ಭಾಗ್ ಚಿತ್ರದ ಕಥೆ ಕೇಳಿದ ದಿನದಿಂದ ಅದು ಬಿಡುಗಡೆ ಆಗುವ ದಿನದವರೆಗೆ ಎರಡು ವರ್ಷಗಳ ಕಾಲ ನಾನು ಮಿಲ್ಖಾಸಿಂಗ್‌ ಆಗಿದ್ದೆ’ –ಹೀಗೆಂದು ಹೇಳಿದವರು ಆ ಚಿತ್ರದ ಪ್ರಮುಖ ಪಾತ್ರ ಧಾರಿ, ಖ್ಯಾತ ನಟ ಫರ್‌ಹಾನ್‌ ಅಖ್ತರ್‌. ‘ನನ್ನೊಳಗೆ ಮಿಲ್ಖಾ ಸಿಂಗ್‌ ಅವರೇ ತುಂಬಿದ್ದರು. ನಿತ್ಯ ಓಟದ ಅಭ್ಯಾಸ ಮಾಡ ಬೇಕಿತ್ತು. ದೈಹಿಕ ಕಸರತ್ತು ನಡೆಸುವ ಭಾರವೂ ಜತೆಗಿತ್ತು. ಶಿಸ್ತುಬದ್ಧ ಜೀವನ ನಡೆಸಬೇಕಿತ್ತು. ಹೌದು, ಎರಡು ವರ್ಷ ನಾನು ಸ್ವತಃ ಅಥ್ಲೀಟ್‌ ಆಗಿದ್ದೆ’ ಎಂದು ಭಾವುಕರಾಗಿ ಹೇಳಿದರು.

ಬೆಂಗಳೂರು ಸಾಹಿತ್ಯೋತ್ಸವದಲ್ಲಿ ಶುಕ್ರವಾರ ನಡೆದ ‘ಆತ್ಮ ಕಥೆ ಆಧರಿಸಿದ ಚಿತ್ರ’ ಕುರಿತ ಸಂವಾದದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ‘ಚಿತ್ರ ಬಿಡುಗಡೆಯಾದ ಬಳಿಕ ನಾನು ಕೂಡ ಮಾಜಿ ಅಥ್ಲೀಟ್‌ ಆದೆ’ ಎಂದು ಚಟಾಕಿ ಹಾರಿಸಿದರು.

‘ಭಾರತದ ವಿಭಜನೆ ಪರಿಣಾಮ ಬಾಲ್ಯವನ್ನೇ ಕಳೆದು ಕೊಂಡವರು ಮಿಲ್ಖಾಸಿಂಗ್‌. ಅವರ ಜೀವನ ಇತರರಿಗೂ ಸ್ಫೂರ್ತಿಯಾಗಲಿದೆ ಎನ್ನುವುದು ನಮ್ಮ ಅಭಿಪ್ರಾಯವಾಗಿತ್ತು. ಒಂದು ದಿನ ಸೀದಾ ಅವರ ಮನೆಗೆ ಹೋದೆ. ಅವರ ಸಂಗ್ರಹ ದಲ್ಲಿದ್ದ ಚಿತ್ರ ಸಂಪುಟದ ಒಂದೊಂದು ಚಿತ್ರವೂ ಅವರ ಜೀವ ನದ ಸಿನಿಮಾ ಮಾಡುವ ನನ್ನ ಆಶಯವನ್ನು ಹರಳುಗಟ್ಟಿಸಿತು’ ಎಂದು ನೆನಪುಮಾಡಿಕೊಂಡರು, ಚಿತ್ರದ ನಿರ್ದೇಶಕ ರಾಕೇಶ್‌ ಮೆಹ್ರಾ.

ಚಿತ್ರಕಥೆ ಬರೆದ ಪ್ರಸೂನ್‌ ಜೋಶಿ ಕೂಡ ಸಂವಾದದಲ್ಲಿ ಪಾಲ್ಗೊಂಡಿದ್ದರು. ‘ಕ್ರೀಡಾಪಟುಗಳೆಂದರೆ ನನಗೆ ಅಷ್ಟಕಷ್ಟೇ. ಮಿಲ್ಖಾ ಕುರಿತು ಸ್ವಲ್ಪ ಗೊತ್ತಿತ್ತು. ದಾರಾಸಿಂಗ್‌ ಕುಸ್ತಿಪಟು ಗಿಂತ ಸಿನಿಮಾ ತಾರೆಯಾಗಿ ಪರಿಚಿತರಾಗಿದ್ದರು. ಆದರೆ, ಮಿಲ್ಖಾ ಅವರ ಜೀವನದ ಮಾಹಿತಿ ಪಡೆಯುತ್ತಾ ಹೋದಂತೆ ಅದು ಮಾನವೀಯ ಕಥೆಗಳನ್ನು ಹೇಳುತ್ತಾ ಹೋಯಿತು. ನನ್ನನ್ನು ಬಹುವಾಗಿ ಕಾಡಿದ ಕಥೆ ಅದು’ ಎಂದು ಹೇಳಿದರು.

‘ಸೂಟು ಧರಿಸಿದ್ದ ಮಿಲ್ಖಾಸಿಂಗ್‌ ಸಹೋದರಿ ಮನೆಗೆ ಬಂದಾಗ ಪಾತ್ರೆ ತೊಳೆದ ಸನ್ನಿವೇಶ ನನಗೆ ತುಂಬಾ ಇಷ್ಟವಾ ಯಿತು’ ಎಂದು ಲೇಖಕಿ ಭಾವನಾ ಸೋಮಾಯ ತಿಳಿಸಿದರು. ‘ವಾಸ್ತವವಾಗಿ ಮಿಲ್ಖಾ ಅವರ ಜೀವನದಲ್ಲಿ ಅಂತಹ ಘಟನೆ ನಡೆದಿಲ್ಲ. ಅದೊಂದು ಕಾಲ್ಪನಿಕ ಸನ್ನಿವೇಶ. ಆದರೆ, ಅವರಿಗೆ ಸಹೋದರಿಯರ ಮೇಲೆ ಬಲು ಪ್ರೀತಿ’ ಎಂದರು ಪ್ರಸೂನ್‌.

‘ಪಾತ್ರೆ ತೊಳೆಯುವ ಈ ಸನ್ನಿವೇಶಕ್ಕೆ ನಾಲ್ಕನೇ ಶ್ರೇಣಿಯ ರೈಲ್ವೆ ಉದ್ಯೋಗಿಯೊಬ್ಬರ ಮನೆಯನ್ನು ಕಷ್ಟಪಟ್ಟು ಹುಡುಕಿ ದ್ದೆವು. ಆ ಪುಟ್ಟ ಕೋಣೆಯಲ್ಲಿ ಕ್ಯಾಮೆರಾ ತಿರುಗಿಸುವುದೇ ಕಷ್ಟ ವಾಗಿತ್ತು’ ಎಂದು ರಾಕೇಶ್‌, ಆ ದೃಶ್ಯ ಸೆರೆಹಿಡಿದ ಕ್ಷಣಗಳನ್ನು ಮೆಲುಕು ಹಾಕಿದರು. ‘ಚಿತ್ರವನ್ನು ಇನ್ನೂ ವಿಭಿನ್ನವಾಗಿ ಮಾಡ ಬಹುದಿತ್ತು. ಆದರೆ, ಮಿಲ್ಖಾ ಅವರ ಹೋರಾಟದ ಬದುಕನ್ನು ಚಿತ್ರಿಸುವುದೇ ನಮ್ಮ ಮುಖ್ಯ ಉದ್ದೇಶವಾಗಿತ್ತು’ ಎಂದು ಪ್ರಸೂನ್‌ ಹೇಳಿದರು.

‘ಮಿಲ್ಖಾ ಒಬ್ಬ ಕ್ರೀಡಾಪಟು. ಅವರ ಕಥೆ ಹೇಳುವಾಗ ಹಾಡು ಬೇಕಾಗಿತ್ತೇ ಮತ್ತು ಕುಣಿಯುವ ದೃಶ್ಯದ ಅಗತ್ಯವೇ ನಿತ್ತು’ ಎಂಬ ಪ್ರಶ್ನೆ ಸಭಿಕರಿಂದ ತೂರಿಬಂತು. ‘ಮಿಲ್ಖಾಗೆ ಹಾಡು–ಕುಣಿತದ ಮೇಲೂ ಆಸಕ್ತಿ ಇದೆ. ಆದ್ದರಿಂದಲೇ ಕಥೆಗೆ ಪೂರಕವಾಗಿ ಆ ದೃಶ್ಯ ಸೇರಿಸಿದ್ದೇವೆ. ಅದೇ ಪೊಲೀಸರು ಮತ್ತು ಕಳ್ಳರು ಹಾಡುವ ಇಲ್ಲವೆ ಕುಣಿಯುವ ದೃಶ್ಯ ಸೇರಿಸಿದರೆ ಅಭಾಸ ಎನ್ನಬಹುದು’ ಎಂದು ರಾಕೇಶ್‌ ಅಭಿಪ್ರಾಯಪಟ್ಟರು.

‘ಹಾಡು–ಕುಣಿತ ಸಮುದಾಯದ ಅಭಿವ್ಯಕ್ತಿ ಭಾಗ. ಪೊಲೀ ಸರು ಕುಣಿದರೆ ತಪ್ಪೇನು, ಕ್ರೀಡಾಪಟು ಹಾಡಿದರೆ ಅದರಲ್ಲಿ ಯಾವ ನ್ಯೂನತೆ ಇದೆ’ ಎಂದು ಭಾವನಾ ಕೇಳಿದರು. ಆಗ ಸಂವಾದ ನಡೆದ ‘ಮೈಸೂರು ಪಾರ್ಕ್‌‘ ಹುಲ್ಲುಹಾಸಿನ ಮೇಲೆ ದೊಡ್ಡ ನಗೆಯ ಅಲೆ.
ಲಾಹೋರ್‌ನಿಂದ ಬಂದಿದ್ದ ಮಹಿಳೆಯೊಬ್ಬರು ‘ಸಿನಿಮಾ ದಿಂದ ಭಾರತ ಮತ್ತು ಪಾಕಿಸ್ತಾನ ಎರಡೂ ದೇಶಗಳ ನಡುವೆ ಸೇತುವೆ ಕಟ್ಟಲು ಸಾಧ್ಯವೇ’ ಎಂದು ಪ್ರಶ್ನಿಸಿದರು. ‘ಚಿತ್ರರಂಗ ದಲ್ಲಿ ಎರಡೂ ದೇಶಗಳ ಮಧ್ಯೆ ವಿಭಜನೆಯೇ ಆಗಿಲ್ಲ. ಹಾಗೊಂದು ವೇಳೆ ಬೇರ್ಪಡಿಸುವ ಗೆರೆಗಳು ಇದ್ದರೆ ಪ್ರೀತಿ ಎಂಬ ರಬ್ಬರ್‌ನಿಂದ ಆ ಗೆರೆಯನ್ನು ಅಳಿಸಬೇಕು. ಮಾನವೀಯತೆ ಸೇತುವೆ ಕಟ್ಟಬೇಕು’ ಎಂದು ರಾಕೇಶ್‌ ಉತ್ತರಿಸಿದರು.

‘ನೀವು ನಟರಾಗಲು ಇಷ್ಟಪಡುತ್ತೀರೋ, ನಿರ್ದೇಶಕ ವೃತ್ತಿಗೆ ಅಂಟಿಕೊಳ್ಳುತ್ತೀರೋ’ ಎಂಬ ಪ್ರಶ್ನೆ ಫರ್‌್ಹಾನ್‌ಗೆ ಕೇಳಿದಾಗ, ‘ನನಗೆ ಎರಡೂ ಕೆಲಸಗಳು ಇಷ್ಟ’ ಎಂದು ಉತ್ತರಿಸಿದರು.

ಸಾಹಿತ್ಯದ ಸಂವಾದಗಳಿಗೆ ಸಭಿಕರ ಬರ ಇತ್ತು. ಆದರೆ, ಸಿನಿಮಾ ಸಂವಾದಕ್ಕೆ ಹುಲ್ಲುಹಾಸಿನ ಅಂಗಳವೆಲ್ಲ ತುಂಬಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT