ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನು ಮುದ್ದಣ್ಣನ ಮನೋರಮೆಯ ನೋಡಿದ್ದೆ!

Last Updated 7 ಜನವರಿ 2012, 19:30 IST
ಅಕ್ಷರ ಗಾತ್ರ

`ರಾಮಾಶ್ವಮೇಧ~ ಎಂಬ ಕೃತಿ ಮುದ್ದಣ ಕವಿ ಹಳಗನ್ನಡ ಗದ್ಯದಲ್ಲಿ ರಚಿಸಿದ ಅವನ ಮುಖ್ಯ ಕೃತಿ. ಅದರಲ್ಲಿ ಬರುವ ಅವನ ಪತ್ನಿ ಮನೋರಮೆ ಕನ್ನಡ ಕಾವ್ಯಲೋಕದ ಒಂದು ಲೆಜೆಂಡ್ ಆಗಿಬಿಟ್ಟಿದ್ದಾಳೆ. ನಾನು ನನ್ನ ಚಿಕ್ಕಂದಿನಲ್ಲಿ ಮನೋರಮೆಯನ್ನು ನೋಡಿದ್ದೆ, ಆಕೆಯೊಡನೆ ಮಾತನಾಡಿದ್ದೆ. ಈ ಮಾತು ಕೇಳಿ ನಿಮಗೆ ದಿಗ್ಭ್ರಮೆಯಾಗಬಹುದು.

ಹಳಗನ್ನಡದ ಕವಿ ಮುದ್ದಣ ಎಲ್ಲಿ. ಈ ಕಾಲದ ಈ ವ್ಯಕ್ತಿ ಎಲ್ಲಿ? ಎಲ್ಲ ಅರ್ಥವಿಲ್ಲದ ಹುಚ್ಚು ಮಾತು ಎನ್ನಿಸಬಹುದು. ಆದರೆ ಇದು ಸತ್ಯಸ್ಯ ಸತ್ಯ. ನಾನು ಕಂಡು ಮಾತಾಡಿದ್ದ ಆ ಮಹಿಳೆ ಮನೋರಮೆ ಎಂದು ತಿಳಿದಾಗ ನಾನು ಒಂದು ಕ್ಷಣ ಆನಂದ ಆಶ್ಚರ್ಯಗಳಿಂದ ಚಕಿತನಾಗಿದ್ದೆ. ರೋಮಾಂಚನಗೊಂಡಿದ್ದೆ. ಅದು ಎಲ್ಲಿ, ಹೇಗೆ ಯಾವಾಗ ಎನ್ನುವುದನ್ನು ಮುಂದೆ ವಿವರಿಸುತ್ತೇನೆ. ಮೊದಲು ಮುದ್ದಣನ ವ್ಯಕ್ತಿತ್ವದ ಬಗ್ಗೆ ಕೆಲವು ಮಾತು.

ಕವಿ ಮುದ್ದಣ ಕಾವ್ಯದ ಜಾತ್ರೆಗೆ ವೇಷ ತೊಟ್ಟು ಬಂದವನು. ತನ್ನ ಕೃತಿಗಳೆಲ್ಲ ಯಾರೋ ಹಳಗನ್ನಡ ಕವಿಯ ಕೃತಿಗಳೆಂದು ಆಟ ಕಟ್ಟಿದವನು. ಅವನ ವೇಷ ಕಳಚಿಬಿದ್ದು ಆಟ ಮುಗಿಯುವ ಹೊತ್ತಿಗೆ ಅವನ ಅಂತ್ಯ ಕಾಲವೇ ಸಮೀಪಿಸಿತ್ತು. ತನ್ನ ಕಾವ್ಯ ತನ್ನದೇ ಎಂದು ಜನ ಗುರುತಿಸಿ, ಅದು ಗಳಿಸಿದ ಕೀರ್ತಿಯನ್ನು ಕಣ್ಣಾರೆ ಕಾಣದೆ ಹೋದ ದುರದೃಷ್ಟವಂತ ಅವನು. ಕೆಲ ವಿಷಯಗಳಲ್ಲಿ ಅವನ ಬದುಕು ಇಂಗ್ಲಿಷಿನ ಪ್ರಸಿದ್ಧ ಕವಿ ಕೀಟ್ಸ್‌ನ ಹಾಗೆ. ಕೀಟ್ಸ್ ಅನೇಕ ಶ್ರೇಷ್ಠ ಕವಿತೆಗಳನ್ನು ಬರೆದಿದ್ದರೂ ಅದು ಆಗ ಜಗತ್ತಿಗೆ ತಿಳಿಯಲೇ ಇಲ್ಲ. ಬೀಳು ವಿಮರ್ಶಕರು ಅವನನ್ನು ಕೆಟ್ಟ ಕವಿಯೆಂದು ಹೀಗಳೆದರು. ಮುದ್ದಣನಂತೆ ಅವನೂ ಚಿಕ್ಕವಯಸ್ಸಿನಲ್ಲೇ ಕ್ಷಯ ರೋಗಕ್ಕೆ ತುತ್ತಾಗಿ ತೀರಿಕೊಂಡ. ಅನಂತರ ಅವನು ಇಂಗ್ಲಿಷಿನ ಉತ್ತಮೋತ್ತಮ ಕವಿಯೆಂದೂ ಇನ್ನಷ್ಟು ಕಾಲ ಬದುಕಿದ್ದಿದ್ದರೆ ಷೇಕ್ಸ್‌ಪಿಯರನ ಕಾವ್ಯದ ಘನತೆಯನ್ನು ಸಾಧಿಸುತ್ತಿದ್ದನೆಂದೂ ಜಗತ್ತು ಅವನನ್ನು ಹೊಗಳಿತ್ತು. ಮುದ್ದಣ ಕೂಡ ಬಹಳ ವಿಶಿಷ್ಟ ಕವಿಯೆಂದೂ ಇದ್ದಿದ್ದರೆ ಇನ್ನೂ ಶ್ರೇಷ್ಠ ಕೃತಿಗಳನ್ನು ರಚಿಸುತ್ತಿದ್ದನೆಂದೂ ಸತ್ತ ಮೇಲೆ ಹೆಸರು ಪಡೆದ.

***

ಮುದ್ದಣನ ಕೃತಿಯೊಂದರಲ್ಲಿ ಪ್ರತಿಮಾತ್ಮಕವಾಗಿ ಪ್ರಕಟವಾಗಿರುವ ಒಂದು ವಿಮರ್ಶಾತತ್ವ ಅವನಿಗೆ ಎತ್ತರದ ಸ್ಥಾನಗಳಿಸಿಕೊಟ್ಟಿದೆ. ಇಂಗ್ಲಿಷ್ ಸಾಹಿತ್ಯದಲ್ಲಿ ಟಿ.ಎಸ್. ಎಲಿಯಟ್ ಕವಿಯ ಆಗಮನಕ್ಕಿಂತ ಮುಂಚೆ, ಕಾವ್ಯವು ಕೇವಲ ಪ್ರತಿಭೆಯ ಫಲ, ಬುದ್ಧಿ ಶ್ರಮಗಳ ಹಂಗೇ ಇಲ್ಲದೆ ನಿರರ್ಗಳವಾಗಿ ಸೃಷ್ಟಿಯಾಗುವಂಥದು ಎಂಬ ರೊಮ್ಯಾಂಟಿಕ್ ಕಲ್ಪನೆ ನೆಲೆಗೊಂಡಿತ್ತು. ಎಲಿಯಟ್ ಇದಕ್ಕೆ ಭಿನ್ನವಾದ ವಿಚಾರ ಮಂಡಿಸಿದ. ಕಾವ್ಯಸೃಷ್ಟಿಗೆ ಪ್ರತಿಭೆ ಅತ್ಯಗತ್ಯವೆನ್ನುವುದೇನೋ ನಿಜವೇ. ಆದರೆ ಅದರ ಜೊತೆಗೆ ಕವಿಯ ಬುದ್ಧಿಶಕ್ತಿ, ಶ್ರಮಗಳ ಅಗತ್ಯವೂ ಇದೆ. ಕವಿ ತಾನು ಬರೆದ ಎಷ್ಟೋ ಸಾಲುಗಳನ್ನು ಹೊಡೆದು, ತಿದ್ದಿ, ಬದಲಿಸಿ, ಕವಿತೆಗೆ ಬುದ್ಧಿಯ ಚಿಕಿತ್ಸೆಯನ್ನೂ ಮಾಡಬೇಕಾಗುತ್ತದೆ ಎಂಬ ಅಭಿಪ್ರಾಯವನ್ನು ಎಲಿಯಟ್ ಸಮರ್ಥವಾಗಿ ಪ್ರತಿಪಾದಿಸಿದ. ಈ ವಿಚಾರವನ್ನು ಮೊದಲು ಹೇಳಿದವನು ಎಲಿಯಟ್ ಎಂದೇ ಈಗಲೂ ಗೌರವಿಸಲಾಗುತ್ತಿದೆ. ಆದರೆ ಅವನೆಷ್ಟೇ ಪ್ರಸಿದ್ಧನಾದ ವಿಲಿಯಂ ಬಟ್ಲರ್ ಯೇಟ್ಸ್, ಅವನಿಗಿಂತ ಮುಂಚೆ `ಆಡಮ್ಸ ಕರ್ಸ್~ (ಅಞ~ ಇ್ಠ್ಟಛಿ) ಎಂಬ ಒಂದು ಕವಿತೆಯಲ್ಲಿ ಅದನ್ನು ತನ್ನ ಮಾತಾಗಿಯೇ ನಿರೂಪಿಸಿದ್ದ :

..... ನಾನೆಂದೆ. ಕವಿತೆ ಸಾಲೊಂದನ್ನು ಸಾಧಿಸಲು
ಗಂಟೆಗಟ್ಟಲೆ ನಾವು ಹೆಣಗಬೇಕು.
ಬೆನ್ನು ಬಗ್ಗಿಸಿ, ಮಂಡಿಯೂರಿ, ಕೊಳೆ ಅಡಿಗೆ ಮನೆ
ನೆಲವನ್ನುಜ್ಜುವುದೊ,
ಕಡುಭಿಕಾರಿಯ ಹಾಗೆ ಚಳಿ ಬಿಸಿಲು ಎನ್ನದೆ
ಕಲ್ಲನ್ನೊಡೆಯುವುದೊ
ಇದಕ್ಕಿಂತ ಉತ್ತಮ,
ಮಧುರನಾದಗಳ ಹದವಾಗಿ ಹೆಣೆಯುವ ಕೆಲಸ
ಎಲ್ಲಕ್ಕಿಂತ ಕಷ್ಟ.

ಕಾವ್ಯಸೃಷ್ಟಿಗೆ ಸಂಬಂಧಿಸಿದ ಇಂಥ ದಿಟ್ಟ ಸತ್ಯವೊಂದನ್ನು ಯೇಟ್ಸ್‌ಗಿಂತಲೂ ಮುಂಚೆ ಅಪೂರ್ವ ರೀತಿಯಲ್ಲಿ ಪ್ರತಿಮಾತ್ಮಕವಾಗಿ ಮಂಡಿಸಿದವನು ಕವಿ ಮುದ್ದಣ. ಅವನು ಅದನ್ನು ನೇರವಾಗಿ, ವಾಚ್ಯವಾಗಿ ಹೇಳದೆ ತನ್ನ `ರಾಮಾಶ್ವಮೇಧ~ ಕೃತಿಯಲ್ಲಿ ಒಂದು ಹೃದ್ಯವಾದ ಪ್ರಸಂಗದ ಮರೆಯಲ್ಲಿ ಹೇಳಿದ್ದಾನೆ. ಆ ಪ್ರಸಂಗ ಹೀಗಿದೆ:

ರಾಮಾಶ್ವಮೇಧ ರಾಮನ ಅಶ್ವಮೇಧಯಾಗದ ಕಥೆಯಾದರೂ ಕವಿ ಮುದ್ದಣ ಮತ್ತು ಅವನ ಪತ್ನಿ ಮನೋರಮೆ ಆ ಕಾವ್ಯದೊಳಗೆ ಸೂತ್ರಧಾರ ನಟಿಯರಂತೆ ಬಂದು ಪಾತ್ರವಹಿಸುತ್ತಾರೆ. ಇದು ಮುದ್ದಣ ನಿರ್ದಿಷ್ಟ ಉದ್ದೇಶದಿಂದ ರೂಪಿಸಿಕೊಂಡ ಒಂದು ಕಾವ್ಯತಂತ್ರ. ಹಿಂದಿನ ಕವಿಗಳೆಲ್ಲ ಕಾವ್ಯ ಸಂಬಂಧದಲ್ಲಿ ಮಾಡಿದ ಕೆಲವು ತಪ್ಪುಗಳನ್ನು ತಾನು ಮಾಡಬಾರದೆಂದು ಮುದ್ದಣ ನಿರ್ಧರಿಸಿದ್ದ. ತಮ್ಮ ಪಾಂಡಿತ್ಯವನ್ನು ಮೆರೆಸಲು ಕ್ಲಿಷ್ಟವಾದ, ವಿದ್ವತ್ಪೂರ್ಣವಾದ ಆಡಂಬರದ ಶೈಲಿಯನ್ನು ಬಳಸುವುದು, ಕಾವ್ಯ ಸಂದರ್ಭಕ್ಕೆ ಬೇಕಿಲ್ಲದ ಕೆಲವು ದೀರ್ಘ ನಿಸರ್ಗ ವರ್ಣನೆಗಳನ್ನು ತರುವುದು, ಸಂಪ್ರದಾಯ ಪಾಲನೆಗಾಗಿ ದೇವತಾ ಸ್ತುತಿಗಳನ್ನು ಬಳಸುವುದು- ಇಂಥವನ್ನೆಲ್ಲ ಹಿಂದಿನ ಕವಿಗಳು ಮಾಡಿದ್ದುಂಟು. ಇದು ಸರಿಯಲ್ಲವೆಂದೂ ಇದರಿಂದ ಕಾವ್ಯ ಕೆಡುತ್ತದೆಂದೂ ಮುದ್ದಣನಿಗೆ ಅನ್ನಿಸಿತ್ತು. ಆದರೆ ಉದ್ದಕ್ಕೂ ಬಂದ ಇಂಥ ಸಂಪ್ರದಾಯವನ್ನು ತಾನು ಇದ್ದಕ್ಕಿದ್ದಂತೆ ಕೈಬಿಟ್ಟರೆ ಅದರ ಔಚಿತ್ಯ ಜನಕ್ಕೆ ಗೊತ್ತಾಗದೆ ಹೋಗಬಹುದು. ತನಗೆ ಅದೆಲ್ಲ ಸಾಧ್ಯವಿಲ್ಲವಾಗಿ ಹಾಗೆ ಮಾಡಿದ್ದೇನೆಂದು ಓದುಗರು ಭಾವಿಸಬಹುದು. ಇದಕ್ಕಾಗಿ ಅವನೊಂದು ತಂತ್ರ ಹೂಡಿದ. ತನ್ನ ಪತ್ನಿ ಮನೋರಮೆಯ ಸಹಿತ ತಾನೂ ಕಾವ್ಯದೊಳಕ್ಕೆ ಪ್ರವೇಶಿಸಿದ.

ಮನೋರಮೆ ಚೆಲುವೆ, ಜಾಣೆ, ಇನ್ನೂ ಹರೆಯದ ಹೆಣ್ಣು; ಕಥೆ ಕೇಳುವ ಆಸೆ ಇರುವವಳು. ಅರಮನೆಯಲ್ಲಿ ಬಲ್ಲಿದರಿಗೆ ಕಾವ್ಯ ಹೇಳಿ ಬಂದ ಮುದ್ದಣನಿಗೆ ತನಗೂ ಒಂದು ಕಥೆ ಹೇಳಬೇಕೆಂದು ಸರಸವಾದ ಮಾತಿನಲ್ಲೇ ಗಂಟುಬೀಳುತ್ತಾಳೆ. ಅದಕ್ಕೆ ಒಪ್ಪಿದ ಮುದ್ದಣ `ಸ್ವಸ್ತಿ ಶ್ರೀಮತ್ ಸುರಾಸುರೇಂದ್ರ ಮುನೀಂದ್ರ ಫಣೀಂದ್ರ ಮಣಿ ಮುಕುಟ ತಟಘಟಿತೆ~ ಎಂದು ಮನೋರಮೆಗೆ ಅರ್ಥವಾಗದ ಪಾಂಡಿತ್ಯ ಪೂರ್ಣವಾದ ಆಡಂಬರದ ಶೈಲಿಯಲ್ಲಿ ಕಥೆ ಆರಂಭ ಮಾಡುತ್ತಾನೆ. ಮನೋರಮೆ ಅವನನ್ನು ಥಟ್ಟನೆ ತಡೆಯುತ್ತಾಳೆ. ಇದೇನು ನಿನ್ನ ಕಥೆ ಹೇಳಾಟ! ನೀರಿಳಿಯದ ಗಂಟಲಲ್ಲಿ ಕಡುಬು ತುರುಕುವಂತೆ ಸಾಮಾನ್ಯಳಾದ ನನಗೆ ಕಥೆ ಹೇಳಲು ಇಂಥ ಕಷ್ಟದ ಶೈಲಿ ಬಳಸುತ್ತಿದ್ದೀಯ! ಇದು ಯಾರಿಗೆ ಅರ್ಥವಾದೀತು? ತಿಳಿಯುವಂಥ ಮಾತಿನಲ್ಲಿ ಕಥೆ ಹೇಳಬೇಡವೆ? ಎಂದು ಆಕ್ಷೇಪಿಸುತ್ತಾಳೆ. ಮತ್ತೊಮ್ಮೆ ಅವನು ಕಥೆಯ ನಡುವೆ ಯಾವುದೋ ವರ್ಣನೆ ಶುರು ಮಾಡಿದಾಗ `ಯಾರಿಗೆ ಬೇಕು ಈ ಅಸಂಬದ್ಧ ವರ್ಣನೆ? ಸುಮ್ಮನೆ ಕಥೆ ಮುಂದುವರಿಸು~ ಎಂದು ಛೇಡಿಸಿ ಅವನನ್ನು ದಾರಿಗೆ ತರುತ್ತಾಳೆ. ಇಂಥ ಪ್ರಸಂಗ ಹಲವು ಸಲ ಜರುಗುತ್ತದೆ. ಗಂಡ ಹೆಂಡಿರ ಈ ಮನೋಹರ ಸಂವಾದ ಮುದ್ದಣನ ಒಂದು ಅಪೂರ್ವ ಕಲ್ಪನೆ. ಈ ರಸಸಂವಾದ ರಾಮ ಕಥಾವಸ್ತ್ರಕ್ಕೆ ಒಂದು ಜರಿಯಂಚಿನಂತಿದ್ದು ಕೃತಿಯನ್ನು ಅನನ್ಯವಾಗಿಸಿದೆ. ಇದು ಶೃಂಗಾರ ರಸದ ಒಂದು ಹೊಸ ಸೃಷ್ಟಿಯಾಗುತ್ತ, ಕೃತಿಯ ಬಗ್ಗೆ ಕವಿ ತಾನೇ ಮಾಡಿಕೊಳ್ಳುವ ಪರೋಕ್ಷ ವಿಮರ್ಶೆಯೂ ಆಗುತ್ತ, ಕಥೆಗೆ ವೈವಿಧ್ಯ ತರುವ ತಂತ್ರವೂ ಆಗುತ್ತ, ಕನ್ನಡ ಕಾವ್ಯ ಪ್ರಪಂಚಕ್ಕೆ ಹೊಸದೆನಿಸಿದೆ. ಒಲಿದ ಗಂಡ ಹೆಂಡಿರ ಪರಸ್ಪರ ಛೇಡಿಕೆ, ವಿನೋದ, ಸರಸ ಮೂದಲಿಕೆಗಳಿಂದ ಕೂಡಿದ ಈ ಭಾಗವನ್ನು ಪ್ರಶಂಸಿಸುತ್ತ ಪ್ರೊ. ಎಸ್.ವಿ. ರಂಗಣ್ಣನವರಂಥ ಮೇಧಾವಿ ವಿಮರ್ಶಕರು ಇದು ರಾಮಕಥೆಯ `ಸಾಮಾನ್ಯ ಚಿತ್ರಕ್ಕೆ ತೊಡಿಸಿದ ಸುವರ್ಣದ ಚೌಕಟ್ಟು~ ಎಂದು ವರ್ಣಿಸಿದ್ದಾರೆ.

***

ಮುದ್ದಣ ಹುಟ್ಟಿದ್ದು ಉಡುಪಿಗೆ ಸಮೀಪದ ನಂದಳಿಕೆ ಎಂಬ ಗ್ರಾಮದಲ್ಲಿ, 1870ರ ಜನವರಿ 24ರಲ್ಲಿ. ಅವನ ನಿಜವಾದ ಹೆಸರು ಲಕ್ಷ್ಮೀನಾರಣಪ್ಪ. ಈ ಕವಿ ಬದುಕಿದ್ದು ಮೂವತ್ತೊಂದು ವರ್ಷ ಮಾತ್ರ. ಇಂಗ್ಲಿಷ್ ಶಾಲಾ ವಿದ್ಯಾಭ್ಯಾಸ ಇರದ ಈ ಕವಿ ಶಾಲೆಯೊಂದರಲ್ಲಿ ವ್ಯಾಯಾಮ ಶಿಕ್ಷಕನಾಗಿ ದುಡಿದ. ಶ್ರಮಪಟ್ಟು ಹಳಗನ್ನಡ ಕಾವ್ಯಾಭ್ಯಾಸ ಮಾಡಿ ಅದರಲ್ಲಿ ಆಳವಾದ ಪಾಂಡಿತ್ಯ ಸಾಧಿಸಿಕೊಂಡ. ಮೊದಲು `ರತ್ನಾವಳೀ ಕಲ್ಯಾಣ~, `ಕುಮಾರ ವಿಜಯ~ ಎಂಬ ಎರಡು ಯಕ್ಷಗಾನಗಳನ್ನು ಬರೆದ. ಮುಂದೆ ಹಳಗನ್ನಡ ಭಾಷೆಯಲ್ಲಿ `ಅದ್ಭುತ ರಾಮಾಯಣ~, `ರಾಮಪಟ್ಟಾಭಿಷೇಕ~ ಮತ್ತು `ರಾಮಾಶ್ವಮೇಧ~ ಕೃತಿಗಳನ್ನು ರಚಿಸಿದ. ಈ ಮೂರೂ ಕೃತಿಗಳೂ ರಾಮಕಥೆಯನ್ನೇ ಆಧರಿಸಿದವು.

ಅವುಗಳಲ್ಲಿ `ರಾಮಪಟ್ಟಾಭಿಷೇಕ~ ಪದ್ಯ ರೂಪದಲ್ಲಿದ್ದರೆ ಉಳಿದೆರಡೂ ಗದ್ಯದಲ್ಲಿದೆ. ಇವುಗಳಲ್ಲಿ `ರಾಮಾಶ್ವಮೇಧ~ ಹೆಚ್ಚು ಕಾವ್ಯಸತ್ವದಿಂದ ಕೂಡಿದೆ. ಅವನು `ಗೋದಾವರಿ~ ಎಂಬ ಕಾದಂಬರಿಯೊಂದರ ಸ್ವಲ್ಪ ಭಾಗ ಬರೆದಿದ್ದ. ಅದು ಹಸ್ತಪ್ರತಿ ರೂಪದಲ್ಲೇ ಕಣ್ಮರೆಯಾಗಿ ಹೋಯಿತು. `ಜೋ ಜೋ~ ಎಂಬ ಶಬ್ದಾರ್ಥ ಸಂಬಂಧ ಸಂಶೋಧನ ಲೇಖನವೊಂದನ್ನು `ಚಕ್ರಧಾರಿ~ ಎಂಬ ಕಾವ್ಯನಾಮದಿಂದ `ಸುವಾಸಿನಿ~ ಪತ್ರಿಕೆಯಲ್ಲಿ ಪ್ರಕಟಿಸಿದ್ದ. ಆದರೆ ತನ್ನ ಕೃತಿಗಳನ್ನು ತನ್ನ ಸ್ವಂತ ರಚನೆಗಳೆಂದು ತಿಳಿಸದೆ ಹಿಂದಿನ ಯಾರೋ ಹಳಗನ್ನಡ ಕವಿ ಬರೆದದ್ದೆಂದು ಕಥೆ ಕಟ್ಟಿದ. ಹೆಚ್ಚು ವಿದ್ಯಾಭ್ಯಾಸವಿಲ್ಲದ, ವ್ಯಾಯಾಮ ಶಿಕ್ಷಕನಾದ ತಾನು ಬರೆದದ್ದೆಂದು ಹೇಳಿದರೆ ಅವುಗಳಿಗೆ ತಕ್ಕ ಪುರಸ್ಕಾರ ಸಿಗದೆ ಉದಾಸೀನಕ್ಕೆ ಪಕ್ಕಾಗಬಹುದು ಎಂಬ ಕಾರಣಕ್ಕೆ ಹೀಗೆ ಮಾಡಿದ. ಅವನ ಮೂರು ರಾಮ ಕಥೆಗಳೂ ಮೈಸೂರಿನ `ಕಾವ್ಯ ಮಂಜರಿ~ ಮತ್ತು `ಕಾವ್ಯ ಕಲಾನಿಧಿ~ ಮಾಸಪತ್ರಿಕೆಗಳಲ್ಲಿ ಭಾಗ ಭಾಗವಾಗಿ, ಪೂರ್ತಿ ಪ್ರಕಟವಾದುವು. `ರಾಮಾಶ್ವಮೇಧ~ ಪೂರ್ತಿ ಪ್ರಕಟ ಆದದ್ದನ್ನು ಅವನು ನೋಡಲೇ ಇಲ್ಲ. ಒಂದು ವರ್ಷದ ಚಿಕ್ಕ ಗಂಡು ಮಗು ಮತ್ತು ಪತ್ನಿಯನ್ನು ಬಿಟ್ಟು 1901ರಲ್ಲಿ ಕ್ಷಯ ರೋಗಕ್ಕೆ ಒಳಗಾಗಿ ತೀರಿಕೊಂಡ ಅವನ ಜೀವನವೊಂದು ದುರಂತ ಕಥೆಯಾಗಿ ಹೋಯಿತು. ಲಕ್ಷ್ಮೀನಾರಣಪ್ಪನೇ ಮುದ್ದಣನೆಂದೂ ರಾಮಕಥೆಗಳೆಲ್ಲ ಅವನದೇ ಎಂದು ಲೋಕಕ್ಕೆ ತಿಳಿದದ್ದು ಅವನ ಮರಣಾನಂತರವೇ.

***

ಮುದ್ದಣನ ಪತ್ನಿ ಮನೋರಮೆಯನ್ನು ನಾನು ಚಿಕ್ಕಂದಿನಲ್ಲಿ ಕಂಡಿದ್ದೆ, ಮಾತಾಡಿದ್ದೆ ಎಂದು ಹೇಳಿದೆನಷ್ಟೆ. ಆಕೆಯ ನಿಜವಾದ ಹೆಸರು ಕಮಲಾಬಾಯಿ. ಶಿವಮೊಗ್ಗ ಜಿಲ್ಲೆಯ ಕಾಗೆ ಕೋಡಮಗ್ಗಿ ಗ್ರಾಮ ಅವಳ ತವರೂರು. ವಿನೋದ ಸ್ವಭಾವದ ಮುದ್ದಣ ಮುಗ್ಧೆಯಾದ ಹದಿಹರೆಯದ ಪತ್ನಿಯನ್ನು ಆಗಾಗ ರೇಗಿಸಿ ನಗಿಸುತ್ತಿದ್ದನಂತೆ. ಅವಳನ್ನು ತಾನೇ ಇಟ್ಟ ಮನೋರಮೆ ಎಂಬ ಹೊಸ ಹೆಸರಿನಿಂದಲೂ ಕರೆಯುತ್ತಿದ್ದನಂತೆ. ಅವನಿಗೆ ವಿವಾಹವಾದದ್ದು 1893ರಲ್ಲಿ. ಮಗ ರಾಧಾಕೃಷ್ಣ ಹುಟ್ಟಿದ್ದು 1900ರಲ್ಲಿ. ಮುದ್ದಣ್ಣ 1901ರಲ್ಲಿ ತೀರಿಕೊಂಡರು. ಕಮಲಾಬಾಯಿ (ಮನೋರಮೆ)ಗೆ ಆಗ ಹದಿನೆಂಟೋ ಇಪ್ಪತ್ತೋ ವರ್ಷ ಇರಬಹುದು. ಮುಂದೆ ಅವಳನ್ನೂ ಮಗ ರಾಧಾಕೃಷ್ಣನನ್ನೂ ತವರು ಮನೆಯವರು ತಮ್ಮಲ್ಲಿಗೆ ಕರೆದುಕೊಂಡು ಹೋದರು.

ದೊಡ್ಡವನಾದ ಮೇಲೆ ಮುದ್ದಣ್ಣನ ಮಗ ರಾಧಾಕೃಷ್ಣಯ್ಯ ಶಿವಮೊಗ್ಗದ ಆಂಗ್ಲ ಬಾಲಿಕಾ ಪಾಠ ಶಾಲೆಯಲ್ಲಿ (ಎ.ವಿ.ಗರ್ಲ್ಸ್ ಸ್ಕೂಲ್‌ನಲ್ಲಿ) ಅಧ್ಯಾಪಕರ ಕೆಲಸಕ್ಕೆ ಸೇರಿದರು. ಅವರನ್ನು ಬಾಬೂರಾವ್ ಎಂದು ಕರೆಯುವುದು ರೂಢಿಯಲ್ಲಿತ್ತು. ನನ್ನ ಕಡೆಯ ಅಕ್ಕ ಸಾವಿತ್ರಿ ಅವರ ವಿದ್ಯಾರ್ಥಿನಿ. ಅವರ ಮನೆ ಇದ್ದದ್ದು ನಮ್ಮ ಮನೆಯ ಸಾಲಿನಲ್ಲೇ ಒಂದು ವಠಾರದಲ್ಲಿ. ಆಗ ರಾಧಾಕೃಷ್ಣಯ್ಯನವರ ಜೊತೆ ತಾಯಿ ಕಮಲಾಬಾಯಿ, ಪತ್ನಿ ಸರಸ್ವತಮ್ಮ ಹಾಗೂ ಐದು ಜನ ಮಕ್ಕಳಿದ್ದರು. ಕಮಲಾಬಾಯಿಗೆ ಆಗ ಸುಮಾರು 65 ವರ್ಷ ದಾಟಿತ್ತು ಎನಿಸುತ್ತದೆ. ನಾವೆಲ್ಲ ಅವರನ್ನು ಕಮಲಜ್ಜಿ ಎಂದು ಕರೆಯುತ್ತಿದ್ದೆವು. ರಾಧಾಕೃಷ್ಣಯ್ಯನವರ ಎರಡನೇ ಮಗ ಸೀತಾರಾಮು ನನ್ನ ಸಹಪಾಠಿ ಮತ್ತು ಸ್ನೇಹಿತ. ಅವರ ಮನೆಯಲ್ಲಿ ಕೇರಂ ಬೋರ್ಡ್ ಇತ್ತು. ನನಗೆ ಅದರ ಹುಚ್ಚು. ಅದನ್ನು ಆಡಲು ಪ್ರತಿನಿತ್ಯ ನಾನವರ ಮನೆಗೆ ಹೋಗುತ್ತಿದ್ದೆ. ಮನೆಯ ಹಾಲಿನಲ್ಲಿ ಗೋಡೆಯ ಮೇಲೆ ತೂಗುಹಾಕಿದ್ದ ಒಂದು ಫೋಟೋ ಇತ್ತು. ಅದರ ಕೆಳಗೆ ನಂದಳಿಕೆ ಲಕ್ಷ್ಮೀನಾರಾಯಣಪ್ಪ ಎಂಬ ಹೆಸರಿತ್ತು. ತಲೆಗೆ ಪೇಟ ಧರಿಸಿದ್ದ ಆ ಚಿತ್ರದಲ್ಲಿನ ವ್ಯಕ್ತಿ ಸೀತಾರಾಮುವಿನ ಅಜ್ಜ ಎಂದಷ್ಟೇ ನನಗೆ ಗೊತ್ತಿದ್ದದ್ದು. ಆದರೆ ಆ ಚಿತ್ರ ಮುದ್ದಣನದೇ ಎಂದಾಗಲಿ ಕಮಲಜ್ಜಿ (ಕಮಲಾಬಾಯಿ)ಯೇ ಮನೋರಮೆ ಎಂದಾಗಲಿ ನನಗೆ ತಿಳಿದಿರಲಿಲ್ಲ. ಆಗ ನನಗೆ ಹದಿಮೂರೋ ಹದಿನಾಲ್ಕೋ ವಯಸ್ಸು. ಮುದ್ದಣ ಕವಿಯ ಹೆಸರನ್ನೇ ನಾನು ಕೇಳಿರಲಿಲ್ಲ.

ಆ ದಿನಗಳಲ್ಲೇ ನಡೆದ ಒಂದು ಘಟನೆ ನನಗೆ ಚೆನ್ನಾಗಿ ನೆನಪಿದೆ. ಒಂದು ಸಂಜೆ ನಾನು ಕೇರಂ ಆಡುವ ಆಸೆಯಿಂದ ಅವರ ಮನೆಗೆ ಹೋಗಿದ್ದೆ. ಕಮಲಜ್ಜಿ ಹಾಲಿನ ಒಳಗೆ ಒಂದು ಬದಿಯಲ್ಲಿ ಶಾಲು ಹೊದ್ದು ಕೂತಿದ್ದರು. ವಯಸ್ಸಿನಿಂದಾಗಿ ಅವರ ದೃಷ್ಟಿ ಮಂದವಾಗಿತ್ತು. ಮಕ್ಕಳು ಯಾರೂ ಮನೆಯಲ್ಲಿರಲಿಲ್ಲ. ನಾನು ಕಮಲಜ್ಜಿಗೆ ಏನೂ ಹೇಳದೆ, ಹಾಲಿನಲ್ಲಿ ಗೋಡೆಗೆ ಒರಗಿಸಿಟ್ಟಿದ್ದ ಕೇರಂ ಬೋರ್ಡನ್ನೂ, ಬದಿಯಲ್ಲಿದ್ದ ಕಾಯಿಗಳ (ಪಾನುಗಳ) ಡಬ್ಬಿಯನ್ನೂ ಮೆಲ್ಲಗೆ ಹೊರಗೆ ತಂದು ವಠಾರದಲ್ಲಿ ಅವರ ಮನೆ ಮುಂದೆ ಇದ್ದ ಮಣ್ಣಿನ ಜಗಲಿಯ ಮೇಲೆ ಇಟ್ಟುಕೊಂಡು ಒಬ್ಬನೇ ಆಡುತ್ತ ಸೀತಾರಾಮುವಿಗೆ ಕಾಯುತ್ತಿದ್ದೆ. ಅದರ ಸದ್ದು ಕಮಲಜ್ಜಿಗೆ ಕೇಳಿಸಿರಬೇಕು. ನನ್ನನ್ನು ತಮ್ಮ ಮೊಮ್ಮಗ ಸೀತಾರಾಮು ಎಂದು ಭಾವಿಸಿಕೊಂಡು, `ಏನೋ ಸೀತಾರಾಮು, ನಿನ್ನ ಸ್ನೇಹಿತ ಇನ್ನೂ ಬಂದೇ ಇಲ್ಲ. ಆಗಲೇ ಆಟ ಶುರು ಮಾಡಿದೆಯಲ್ಲೋ, ಬೆಳಿಗ್ಗೆ ಸಂಜೆ ಬರೀ ಆಟ, ಓದುವುದು ಯಾವಾಗಪ್ಪಾ?~ ಎಂದು ಆಕ್ಷೇಪದ ದನಿಯಲ್ಲಿ ಕೇಳಿದರು. ಆಗ ನಾನು- `ಸೀತಾರಾಮು ಅಲ್ಲ ಕಮಲಜ್ಜಿ. ನಾನು ಅಣ್ಣ (ಆಗ ನನ್ನನ್ನು ನಮ್ಮ ಬೀದಿಯಲ್ಲೆಲ್ಲ ಅಣ್ಣ ಎಂಬ ಅಡ್ಡಹೆಸರಿನಿಂದ ಕರೆಯುತ್ತಿದ್ದರು). ಸೀತಾರಾಮು ಎಲ್ಲೋ ಹೋಗಿದ್ದಾನೆ. ನಾನು ಅವನಿಗಾಗಿ ಕಾಯ್ತಿದ್ದೀನಿ~ ಎಂದೆ. `ಓ ನೀನಾ? ಸರಿ ಬಿಡು~ ಎಂದು ಸುಮ್ಮನಾಗಿ ಬಿಟ್ಟರು. ಹೀಗೆ ಅವರ ಜೊತೆ ಕೆಲವು ಸಲ ಮಾತಾಡಿದ್ದೂ ಉಂಟು. ನಾನು ಹೋದಾಗ ಆಗೀಗ `ನಿನ್ನ ಅಮ್ಮ ಹೇಗಿದ್ದಾರೆ? ಗೌರ, ಸಾವಿತ್ರಿ ಚೆನ್ನಾಗಿದ್ದಾರಾ?~ ಎಂದು ಕೇಳುತ್ತಿದ್ದುದೂ ಉಂಟು. (ಗೌರಿ, ಸಾವಿತ್ರಿ ನನ್ನ ಅಕ್ಕಂದಿರು).

ಮುಂದೆ ನಾಲ್ಕೈದು ವರ್ಷಗಳ ನಂತರ ಕನ್ನಡ ಆನರ್ಸ್ ಓದಲು ನಾನು ಮೈಸೂರಿಗೆ ಹೋದೆ. ಅಲ್ಲಿ ಎಸ್.ವಿ. ಪರಮೇಶ್ವರ ಭಟ್ಟರು ಸಂಪಾದಿಸಿದ್ದ `ಅದ್ಭುತ ರಾಮಾಯಣ~ದ ಮುನ್ನುಡಿ ಓದಿ, ಅಲ್ಲಿದ್ದ ಕವಿ ವೃತ್ತಾಂತದಿಂದ ಚಕಿತನಾಗಿ ಅವನ ರಾಮಾಶ್ವಮೇಧದ ಪರಿಚಯ ಮಾಡಿಕೊಂಡೆ. ಆಗಲೇ ನನಗೆ ಗೊತ್ತಾದದ್ದು- ಸೀತಾರಾಮುವಿನ ಮನೆಯ ಫೋಟೋದಲ್ಲಿದ್ದ ನಂದಳಿಕೆ ಲಕ್ಷ್ಮೀನಾರಾಯಣಪ್ಪನೇ ಮುದ್ದಣ್ಣ, ಕಮಲಜ್ಜಿಯೇ ಮನೋರಮೆ ಎಂದು. ನಾನು ಮನೋರಮೆಯನ್ನು ಸಾಕ್ಷಾತ್ತಾಗಿ ನೋಡಿದ್ದೇನೆ, ಆಕೆಯೊಡನೆ ಮಾತಾಡಿದ್ದೇನೆ ಎಂದು ಹೊಳೆದಾಗ ನನಗಾದ ಆಶ್ಚರ್ಯ, ಆನಂದ, ರೋಮಾಂಚನಗಳನ್ನು ನೀವು ಕಲ್ಪಿಸಿಕೊಳ್ಳಬೇಕಷ್ಟೆ! ಅದು ಪ್ರತ್ಯಕ್ಷ ದೇವತಾದರ್ಶನ ಎಂಬಂತೆ ಅಪೂರ್ವ ಸ್ಮೃತಿಯಾಗಿ ನನ್ನಲ್ಲಿ ನಿರಂತರ ಉಳಿದುಬಿಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT