ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನು ಹೊರನಾಡ ಕನ್ನಡಿಗ

ನನ್ನ ಕಥೆ : ಡಾ. ವಿಕ್ರಮ್ ಶ್ರೀವಾಸ್ತವ
Last Updated 12 ಡಿಸೆಂಬರ್ 2012, 19:50 IST
ಅಕ್ಷರ ಗಾತ್ರ

ನಾನು ಕ್ಯಾಮೆರಾ ಕೈಗೆತ್ತಿಕೊಂಡಾಗ ಅಪ್ಪನಿಗೂ ನನಗೂ ವಾಗ್ವಾದ. ಅಪ್ಪನ ಆಸೆಯದ್ದೊಂದು ದಿಕ್ಕು, ನನ್ನ ಆಸಕ್ತಿಯದು ಇನ್ನೊಂದು ದಿಕ್ಕು. ಮಗ ತನ್ನ ಮಾತು ಕೇಳುತ್ತಿಲ್ಲ ಎಂಬ ಅವರ ಕೋಪ ಸಣ್ಣನೆ ಕರಗಿದ್ದು ನಾನು ಪುಣೆಯ ಪಿಲ್ಮ್ ಆ್ಯಂಡ್ ಟೆಲಿವಿಷನ್ ಇನ್ಸ್‌ಟಿಟ್ಯೂಟ್ ಆಫ್ ಇಂಡಿಯಾ (ಎಫ್‌ಟಿಐಐ) ಸೇರಿಕೊಂಡ ಬಳಿಕ. ನಾನು ಸರಿಯಾದ ಹಾದಿಯಲ್ಲಿದ್ದೇನೆ ಎಂದು ಅವರಿಗೆ ಅನಿಸಿದ್ದು ಆಗಲೇ.

ನಾನೊಂದು ರೀತಿ `ಹೊರನಾಡ ಕನ್ನಡಿಗ'! ಅನ್ಯರಾಜ್ಯದಿಂದ ಬಂದವನು ಕನ್ನಡಿಗನಾಗಿದ್ದೇನೆ. ಅಪ್ಪನ ಮಹದಾಸೆಯಂತೆ ನನಗೆ ವೈದ್ಯಕೀಯ ವೃತ್ತಿ ಕಲಿತದ್ದು, ನನ್ನ ಹೆಬ್ಬಯಕೆಯಂತೆ ಮೊದಲ ಬಾರಿಗೆ ಸ್ವತಂತ್ರವಾಗಿ ಕ್ಯಾಮೆರಾ ಹಿಡಿದದ್ದು ಇದೇ ಕನ್ನಡ ನಾಡಿನಲ್ಲಿ. ಸಿನಿಮಾ ಸೆಟ್‌ನಲ್ಲಿ ಗೆಳೆಯರೊಂದಿಗೆ ಮಾತನಾಡುತ್ತಲೇ ಅಲ್ಪಸ್ವಲ್ಪ ಕನ್ನಡ ಕಲಿತದ್ದು. ಇವ ಹಿಂದಿಯವ, ನಮ್ಮವನಲ್ಲ ಎಂಬ ಭಾವದಿಂದ ಯಾರೂ ನೋಡಲಿಲ್ಲ.

ಮಧ್ಯಪ್ರದೇಶದ ಇಂಧೋರ್ ನಾನು ಹುಟ್ಟಿದೂರು. ಬಾಲ್ಯದ ಬದುಕು ಸಾಗಿದ್ದು ಅಲ್ಲಿಯೇ. ಪಟ್ಟಣದ ಬದುಕಾಗಿದ್ದರಿಂದ ಅದರಾಚೆಗಿನ ಹಳ್ಳಿಗಳು, ಅಲ್ಲಿನ ಸಂಪ್ರದಾಯ ಆಚರಣೆಗಳ ಪರಿಚಯ ಅಷ್ಟಕಷ್ಟೆ. ಅಂಥ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಕಂಡಿದ್ದು ಕರ್ನಾಟಕದಲ್ಲಿಯೇ. ತಂದೆ ದಂತವೈದ್ಯರು. ಅಮ್ಮ ಗೃಹಿಣಿ. ಅಪ್ಪನಿಗೆ ನಾನೂ ಅವರಂತೆಯೇ ದಂತವೈದ್ಯನಾಗಬೇಕೆಂಬ ಗುರಿ. ತಮ್ಮ ಕ್ಲಿನಿಕ್‌ಗೆ ಬರುವ ರೋಗಿಗಳ ಛಾಯಾಚಿತ್ರ ತೆಗೆದಿಟ್ಟುಕೊಳ್ಳಲು ಅಪ್ಪ ಅಲ್ಲೊಂದು ಕ್ಯಾಮೆರಾ ತಂದಿಟ್ಟುಕೊಂಡಿದ್ದರು. ನನ್ನ ಕ್ಯಾಮೆರಾ ಸೆಳೆತ ಶುರುವಾಗಿದ್ದು ಅಲ್ಲಿಯೇ.

ಅದನ್ನು ಕೈಗೆತ್ತಿಕೊಂಡು ಚಿತ್ರಗಳನ್ನು ಕ್ಲಿಕ್ಕಿಸತೊಡಗಿದೆ. ಛಾಯಾಗ್ರಹಣ ಮಾಡಬೇಕೆಂದರೆ ಮೊದಲು ಕಲಿಕೆ ಮುಖ್ಯ ಎಂಬ ತಂದೆಯವರ ಮಾತಿನಂತೆ ಹಿರಿಯ ಛಾಯಾಗ್ರಾಹಕರ ಬಳಿ ಛಾಯಾಗ್ರಹಣದ ಪಾಠ ಹೇಳಿಸಿಕೊಂಡೆ. ಕಾಡುಮೇಡು, ಬೆಟ್ಟ ಗುಡ್ಡ, ಪ್ರಕೃತಿ ಹೀಗೆ ಬರಿಗಣ್ಣಿಗೆ ಸಾಮಾನ್ಯವಾಗಿ ಗೋಚರಿಸುವ ದೃಶ್ಯಗಳನ್ನು ಕ್ಯಾಮೆರಾ ಕಣ್ಣಿನಲ್ಲಿ ವಿಶಿಷ್ಟವಾಗಿ ಸೆರೆಹಿಡಿಯುವ ಕಲೆ ಕರಗತವಾಗತೊಡಗಿತು. ಬೆಳಗಿನ ಜಾವ ನಾಲ್ಕು ಗಂಟೆಗೆ ಎದ್ದು ಕ್ಯಾಮೆರಾ ಹಿಡಿದು ಮನೆ ಬಿಡುತ್ತಿದ್ದೆ. ಛಾಯಾಗ್ರಹಣದ ಹುಚ್ಚು ಅಷ್ಟರಮಟ್ಟಿಗೆ ಆವರಿಸಿತ್ತು. 12ನೇ ತರಗತಿ ಮುಗಿದ ಬಳಿಕ ಛಾಯಾಗ್ರಹಣ ವೃತ್ತಿ ಮಡುತ್ತೇನೆ ಎಂದಾಗ ಅಪ್ಪನ ಕೋಪ ನೆತ್ತಿಗೇರಿತ್ತು. ವೈದ್ಯನಾಗುವುದು ಬೇಡ ಕಡೇಪಕ್ಷ ಓದನ್ನಾದರೂ ಮುಗಿಸು ಎಂದರು. ಅವರ ಒತ್ತಾಯಕ್ಕೆ ಕಟ್ಟುಬಿದ್ದು ಮುಖ ಮಾಡಿದ್ದು ದಾವಣಗೆರೆಯತ್ತ. ಬದುಕೆಂದರೆ ಏನು ಎಂಬುದು ಅರ್ಥವಾಗಿದ್ದು ಅಲ್ಲಿಯೇ. ಮೊದಲ ಬಾರಿಗೆ ಮನೆಯಿಂದ ದೂರದೂರಿಗೆ, ಭಾಷೆ ಬಾರದ ನೆಲದಲ್ಲಿ ಹೊಸ ಗೆಳೆಯರೊಂದಿಗೆ ಹಾಸ್ಟೆಲ್ ಬದುಕು ನಿಜಕ್ಕೂ ಅವಿಸ್ಮರಣೀಯ. ನನ್ನ ಬದುಕಿನ ಅತ್ಯಂತ ಶ್ರೇಷ್ಠ ಕಾಲ ಅದು.

ಅಲ್ಲಿ ಓದುತ್ತಿದ್ದಾಗ ತಂದೆ ಕೊಡಿಸಿದ್ದ ಹ್ಯಾಂಡಿಕ್ಯಾಮ್ ಹಿಡಿದು ಪರಿಸರಗಳನ್ನು ದಾಖಲಿಸಿಕೊಳ್ಳತೊಡಗಿದೆ. ಕಾಲೇಜಿಗೆ ಸಂಬಂಧಿಸಿದಂತೆ ಅದರಲ್ಲಿಯೇ ಮೂರು ಸಾಕ್ಷ್ಯಚಿತ್ರಗಳನ್ನು ತಯಾರಿಸಿದೆ. ಸ್ಥಿರ ಛಾಯಾಗ್ರಹಣದಿಂದ ಚಲನ ಛಾಯಾಗ್ರಹಣದತ್ತ ಮನಸ್ಸು ಪಲ್ಲಟಗೊಂಡಿದ್ದು ಆ ಸಮಯದಲ್ಲಿಯೇ. ಜೀವಂತಿಕೆಯನ್ನು ಕಟ್ಟಿಕೊಡಲು ಸಾಧ್ಯವಾಗುವುದು ಸಿನಿಮಾ ಛಾಯಾಗ್ರಹಣದಲ್ಲಿ. ಇದು ಹೆಚ್ಚು ಪರಿಣಾಮಕಾರಿಯೂ ಹೌದು. ಹೀಗಾಗಿ ಓದುವಾಗಲೂ ಮನ ತುಡಿಯುತ್ತಿದ್ದದ್ದು ಸಿನಿಮಾ ಬಳಗವನ್ನು ಸೇರಬೇಕೆಂದು.

ದಂತವೈದ್ಯಕೀಯ ಪದವಿಯ ಗುಚ್ಛ ಹಿಡಿದು ಮರಳಿ ಮನೆ ಹಾದಿ ಹಿಡಿದಾಗ ಪ್ರಾಕ್ಟೀಸ್ ಮಾಡುವುದು ಅನಿವಾರ್ಯವಾಗಿತ್ತು. ತಂದೆಯ ಬಳಿ ನಾಲ್ಕು ತಿಂಗಳು ಅಪ್ರೈಂಟಿಸ್ ಆಗಿ ಕೆಲಸ ಮಾಡಿದೆ. ಒಂದೂವರೆ ವರ್ಷ ವೈದ್ಯಕೀಯ ವೃತ್ತಿಯನ್ನೂ ನಡೆಸಿದೆ. ಆದರೆ ಛಾಯಾಗ್ರಹಣದ ಸೆಳೆತ ಓದಿದ್ದನ್ನು ನೆಚ್ಚಿಕೊಳ್ಳುವುದನ್ನು ನಿರಾಕರಿಸಿತ್ತು. ಮಗನೂ ನನ್ನ ವೃತ್ತಿ ಮುಂದುವರೆಸಲಿ ಎಂಬ ಅಪ್ಪನ ಆಶಯಕ್ಕೆ ವಿರುದ್ಧ ನಡೆ ನನ್ನದು. ಛಾಯಾಗ್ರಹಣವನ್ನು ವೃತ್ತಿಯಾಗಿ ತೆಗೆದುಕೊಳ್ಳುವ ನನ್ನ ಆಯ್ಕೆಯೇ ಸರಿಯಿಲ್ಲ ಎಂಬ ಭಾವ ಅವರದು.

ಬಾಂಬೆ ದಾರಿಯಲ್ಲಿ ಹೆಜ್ಜೆ ಹಾಕಿದ ನನಗೆ ಸಿಕ್ಕವರು ಹಿರಿಯ ಛಾಯಾಗ್ರಾಹಕರಾದ ರಾಜನ್ ಕೊಠಾರಿ ಮತ್ತು ಸಿ.ಕೆ. ಮುರಳಿಕೃಷ್ಣನ್. ಅವರ ಬಳಿ ಅನೇಕ ಜಾಹೀರಾತು ಚಿತ್ರಗಳು, ಸಾಕ್ಷ್ಯ ಹಾಗೂ ಚಲನಚಿತ್ರಗಳಿಗೆ ಕ್ಯಾಮೆರಾ ಸಹಾಯಕನಾಗಿ ದುಡಿದೆ. ಫಿಲ್ಮ್ ಕ್ಯಾಮೆರಾ ಮತ್ತು ತಂತ್ರಜ್ಞಾನದ ಪುಟ್ಟ ಕೋರ್ಸ್ ಕೂಡ ಮಾಡಿದೆ. ಮೂರು ವರ್ಷ ಅಲ್ಲಿನ ಬದುಕು.

ಕ್ಯಾಮೆರಾ ಎಂದರೆ ಇಷ್ಟೇ ಅಲ್ಲ. ಅದರಲ್ಲಿ ಕಲಿಯುವುದು ಸಾಕಷ್ಟಿದೆ ಎಂಬುದು ಅರಿವಾದ ಬಳಿಕ ಹತ್ತಿದ್ದು ಎಫ್‌ಟಿಐಐ ಮೆಟ್ಟಿಲು. ನಿರ್ದೇಶಕ ಅಭಯಸಿಂಹ ಪರಿಚಯವಾಗಿದ್ದು ಅಲ್ಲಿಯೇ. ಮಾತ್ರವಲ್ಲ ಇಬ್ಬರೂ ರೂಮ್‌ಮೇಟ್‌ಗಳು. ತರಗತಿ, ಪರೀಕ್ಷೆ, ಪಾಠಗಳೆಂಬ ಒತ್ತಾಯದ ಹೇರಿಕೆಯಿಲ್ಲದೆ ನಮ್ಮನ್ನು ನಮ್ಮ ಪಾಡಿಗೆ ಬಿಟ್ಟು ಕಲಿಸುವಂಥ ಜಾಗವದು. ಮೂರು ವರ್ಷದ ಕಲಿಕೆ ಬಳಿಕ ಮತ್ತೆ ಸೇರಿಕೊಂಡಿದ್ದ ರಾಜನ್ ಕೊಠಾರಿ ಹಾಗೂ ಮುರಳಿಕೃಷ್ಣನ್ ಅವರಲ್ಲಿ. ಸಹಾಯಕ ಛಾಯಾಗ್ರಾಹಕನಾಗಿ ಕೆಲಸ ಮಾಡುತ್ತಿದ್ದವನಲ್ಲಿ ಸ್ವತಂತ್ರ ಛಾಯಾಗ್ರಾಹಕನಾಗಿ ಸಿನಿಮಾಕ್ಕೆ ಕೆಲಸ ಮಾಡಬೇಕು. ವಿಭಿನ್ನ ಪ್ರಯೋಗಗಳಿಗೆ ತೊಡಗಿಕೊಳ್ಳಬೇಕು ಎಂಬುದಷ್ಟೇ ಗುರಿ. ಕನಸು ಕಾಣುತ್ತ ಬದುಕಿನ ಬಂಡಿ ಎಳೆಯುತ್ತಿದ್ದಾಗ ಗೆಳೆಯ ಅಭಯಸಿಂಹನಿಂದ ಕರೆ ಬಂತು. ಒಂದು ಸಿನಿಮಾ ಮಾಡುತ್ತಿದ್ದೇನೆ. ನೀನೇ ಛಾಯಾಗ್ರಹಣ ಮಾಡು ಎಂದು ಆಹ್ವಾನವಿತ್ತಾಗ ಕನಸುಗಳಿಗೆ ರೆಕ್ಕೆಪುಕ್ಕ.

ಹೀಗೆ ಸ್ವತಂತ್ರವಾಗಿ ನಾನು ಕ್ಯಾಮೆರಾ ಕಣ್ಣಿನ ಮೂಲಕ ಇಡೀ ಕಥೆಯನ್ನು ದಾಖಲಿಸಿದ ಮೊದಲ ಸಿನಿಮಾ `ಗುಬ್ಬಚ್ಚಿಗಳು'. ನಿರ್ದೇಶಕ ಅಭಯಸಿಂಹನಿಗೂ ಅದು ಮೊದಲ  ಚಿತ್ರ. ಮೊದಲ ಪ್ರಯತ್ನದಲ್ಲೇ ಪ್ರಶಸ್ತಿ ಪಡೆದ ಚಿತ್ರದಲ್ಲಿ ಭಾಗಿಯಾದವನು ನಾನು ಎಂಬ ಹೆಮ್ಮೆ. ಕೃತಕ ಬೆಳಕಿನ ವ್ಯವಸ್ಥೆಯನ್ನೂ ಮಾಡಿಕೊಳ್ಳಲಾಗದಂತ ಸ್ಥಿತಿಯಲ್ಲಿ ಐದು ದಿನ ಚಿತ್ರೀಕರಣ ನಡೆಸಿದ್ದೆವು. ಇಡೀ ಚಿತ್ರಕ್ಕೆ ಕ್ರೇನ್ ಬಳಸಲು ಸಿಕ್ಕಿದ್ದು ಒಂದೇ ದಿನ. ಹಣಕಾಸಿನ ಕೊರತೆಯಿಂದ ಇಷ್ಟೆಲ್ಲಾ ಕಷ್ಟಗಳನ್ನು ಅನುಭವಿಸಿ ಮಾಡಿದ ಚಿತ್ರಕ್ಕೆ 2008ರಲ್ಲಿ ರಾಷ್ಟ್ರೀಯ ಪ್ರಶಸ್ತಿ ಬಂದಾಗ ನಮಗಾದ ಆನಂದ ಹೇಳತೀರದು.

ಕನ್ನಡದಲ್ಲಿ ಇದುವರೆಗೆ ಛಾಯಾಗ್ರಹಣ ಮಾಡಿರುವ ಮೂರೂ ಸಿನಿಮಾಗಳು ಅಭಯಸಿಂಹ ನಿರ್ದೇಶನದವು. `ಶಿಕಾರಿ' ಪ್ರಯೋಗಾತ್ಮಕ ಚಿತ್ರವಾಗಿ ಹೆಸರು ಮಾಡಿದ್ದರೆ, ಬಿಡುಗಡೆಯಾಗಬೇಕಿರುವ `ಸಕ್ಕರೆ' ಪಕ್ಕಾ ಕಮರ್ಷಿಯಲ್ ಮಾದರಿ ಚಿತ್ರ. ಮರಾಠಿ ಚಿತ್ರಗಳಾದ `ಲಾಟರಿ ಲಗ್ಲಿ ರೇ' ಮತ್ತು `ಪ್ರತಿಸಾದ್'ಗಳು ನನ್ನ ಛಾಯಾಗ್ರಹಣದ ಮತ್ತೆರಡು ಚಿತ್ರಗಳು.

ಹಾಲಿವುಡ್ ಚಿತ್ರವೊಂದಕ್ಕೂ ಕ್ಯಾಮೆರಾ ಹಿಡಿದ ಖುಷಿ ನನ್ನದು. `ದಿ ಎಕ್ಸ್‌ಪೆರಿಮೆಂಟ್' ಸಿನಿಮಾದ ಚಿತ್ರೀಕರಣಕ್ಕೆಂದು ವಾರಣಾಸಿಗೆ 10 ದಿನಗಳ ಮಟ್ಟಿಗೆ ಹಾಲಿವುಡ್‌ನ ಚಿತ್ರತಂಡ ಬಂದಿತ್ತು. ಅವರ ಮುಖ್ಯ ಛಾಯಾಗ್ರಾಹಕ ಬರಲು ಸಾಧ್ಯವಾಗದಿದ್ದರಿಂದ ಭಾರತೀಯ ಛಾಯಾಗ್ರಾಹಕರನ್ನೇ ಬಳಸಿಕೊಳ್ಳಲು ಅವರು ಹುಡುಕಾಟ ನಡೆಸಿದ್ದರು. ಅವರ ಕಣ್ಣಿಗೆ ಬಿದ್ದದ್ದು ನಾನು. ಹೀಗೆ ಹಾಲಿವುಡ್ ಚಿತ್ರವೊಂದಕ್ಕೆ ಛಾಯಾಗ್ರಹಣ ಮಾಡುವ ಅವಕಾಶ ದಿಢೀರನೆ ನನ್ನ ಪಾಲಿಗೆ ಬಂತು.

ಬಾಲ್ಯದಿಂದಲೂ ಅಧ್ಯಾತ್ಮದೆಡೆಗೆ ಒಲವು ಹೆಚ್ಚು. ದೇವಸ್ಥಾನಗಳಿಗೆ ಸುತ್ತಾಡುತ್ತಿದ್ದವನಿಗೆ ನಿಜವಾದ ನಂಬಿಕೆ, ನೆಮ್ಮದಿ ಇರುವುದು ಗುಡಿ ಗೋಪುರಗಳಲ್ಲಿನ ದೇವರಲ್ಲಿ ಅಲ್ಲ. ನಮ್ಮಳಗೇ ದೇವರಿದ್ದಾನೆ ಎಂದೆನಿಸಿತು. ಕೆಲಸದ ಒತ್ತಡಗಳ ಮಧ್ಯೆ ಆಗಾಗ್ಗೆ ಧ್ಯಾನದ ಮೊರೆ ಹೋಗುತ್ತೇನೆ. ಮರಗೆಲಸ, ಚಿತ್ರಕಲೆ, ಸಂಗೀತ ಕೇಳುವುದು ನನ್ನ ಇತರ ಹವ್ಯಾಸಗಳು. ಸ್ವಲ್ಪ ಸಮಯ ಸಿಕ್ಕರೂ ಮಾರುಕಟ್ಟೆಯಿಂದ ಮರದ ಸಾಮಗ್ರಿಗಳನ್ನು ತಂದು ಷೋಕೇಸ್‌ನಲ್ಲಿ ಇಡಬಹುದಾದ ಪುಟ್ಟ ಪುಟ್ಟ ಬಗೆ ಬಗೆಯ ವಸ್ತುಗಳನ್ನು ತಯಾರಿಸುತ್ತೇನೆ. ಅಡುಗೆ ಮಾಡುವುದು ಮತ್ತೊಂದು ಅಚ್ಚುಮೆಚ್ಚಿನ ಕೆಲಸ. ಕರ್ನಾಟಕಕ್ಕೆ ಬಂದವನು ಮೊದಲು ಕಲಿತ, ಅತ್ಯಂತ ಖುಷಿಯಿಂದ ಮಾಡುವ ಅಡುಗೆಯೆಂದರೆ ದೋಸೆ.

ಬಾಂಬೆ ಮತ್ತು ಕರ್ನಾಟಕ ಎರಡೂ ಪ್ರದೇಶಗಳನ್ನು ಸಿನಿಮಾಕ್ಕಾಗಿ ಕ್ಯಾಮೆರಾ ಕಣ್ಣಿನ ಮೂಲಕ ನೋಡಿದ್ದೇನೆ. ಈ ಎರಡರ ಮಧ್ಯೆ ಹೆಚ್ಚು ಆಪ್ತವಾಗುವುದು, ಕಾಡುವುದು ಇಲ್ಲಿನ ಪರಿಸರ.

ಅನೇಕ ಕಿರುಚಿತ್ರ, ಸಾಕ್ಷಚಿತ್ರಗಳು, ಟಿ.ವಿ ಎಪಿಸೋಡ್‌ಗಳು, ಮ್ಯೂಸಿಕ್ ವಿಡಿಯೋ ಮತ್ತು ಜಾಹಿರಾತುಗಳಿಗೆ ಕ್ಯಾಮೆರಾ ಕೆಲಸ ಮಾಡಿದ್ದೇನೆ. ನಿಜಕ್ಕೂ ಖುಷಿ ಕೊಡುವುದು ಸಿನಿಮಾ ಛಾಯಾಗ್ರಹಣ. ವೈವಿಧ್ಯಮಯ ಸನ್ನಿವೇಶಗಳಿಗೆ ಕ್ಯಾಮೆರಾ ಹಿಡಿಯುವುದೆಂದರೆ ಹಲವಾರು ಜಗತ್ತುಗಳನ್ನು ಸುತ್ತಿಬಂದಂತೆ. ಈಗ ಬಾಂಬೆಯಲ್ಲಿ ನನ್ನ ಬದುಕು. ಒಂದೆರಡು ಸಿನಿಮಾ, ಜಾಹೀರಾತುಗಳು ಕೈಯಲ್ಲಿವೆ. ಹೀಗಾಗಿ ಕೆಲವು ಕಾಲ ಚೆನ್ನೈನಲ್ಲಿ ನನ್ನ ಬೀಡು. ಹುಡುಗುತನದಲ್ಲಿ ಮೂಡಿದ ಸಿನಿಮಾ ಛಾಯಾಗ್ರಾಹಕನಾಗುವ ಕನಸು ನನಸಾಗಿದೆ. ನನ್ನ ವೃತ್ತಿ ಜಗತ್ತಿನಲ್ಲಿ ಕ್ಯಾಮೆರಾಕ್ಕೆ ಮಾತ್ರ ಅವಕಾಶ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT