ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನೆಂದೂ ತಾಲ್ಲೂಕಿನ ಜನರ ಪರ: ಮಧು ಬಂಗಾರಪ್ಪ

ಹೊಳೆಜೋಳದಗುಡ್ಡೆಯಲ್ಲಿ ಜೆಡಿಎಸ್ ಜನಸಂಪರ್ಕ ಸಭೆ: ರೈತರ ವಿರುದ್ಧ ಯೋಜನೆಗೆ ಅವಕಾಶ ನೀಡಲ್ಲ
Last Updated 4 ಡಿಸೆಂಬರ್ 2012, 5:27 IST
ಅಕ್ಷರ ಗಾತ್ರ

ಸೊರಬ: ಈ ಕ್ಷೇತ್ರದ ಜನರ ಋಣ ತೀರಿಸಲು ತಂದೆಯ ಅಣತಿಯಂತೆ ತಾವು ಬಗರ್‌ಹುಕುಂ ಸಾಗುವಳಿದಾರರ, ಗೇಣಿದಾರರ, ಬಡವರ ಪರ ಹೋರಾಟ ಮನೋಭಾವ ಹೊಂದಿದ್ದೇವೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯ ಅಧ್ಯಕ್ಷ ಮಧು ಬಂಗಾರಪ್ಪ ಹೇಳಿದರು.

ತಾಲ್ಲೂಕಿನ ಕಮರೂರು, ಭದ್ರಾಪುರ, ಅಂಬ್ಲಿಕೊಪ್ಪ, ಮೂಡ ದೀವಳಿಗೆ, ಸಂಬಾಪುರ, ಹೊಸಕೊಪ್ಪ, ಮಣ್ಣತ್ತಿ, ಕುಂದಗೋಡು, ನರ್ಚಿ, ಮಾವಿನಬಳ್ಳಿಕೊಪ್ಪ, ಹೊಸಬಾಳೆ ಹಾಗೂ ಹೊಳೆಜೋಳದಗುಡ್ಡೆ ಗ್ರಾಮದಲ್ಲಿ ಸೋಮವಾರ ಜೆಡಿಎಸ್ ಜನಸಂಪರ್ಕ ಸಭೆ ನಡೆಸಿ ಬೆನ್ನೂರು ಗ್ರಾಮದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.

ಎಸ್. ಬಂಗಾರಪ್ಪ ತಮ್ಮ ಜೀವಿತಾವಧಿಯಲ್ಲಿ ಕುಮಾರ ಬಂಗಾರಪ್ಪ ಅವರ ವಿರುದ್ಧ ತಮ್ಮನ್ನು ಚುನಾವಣೆಗೆ ನಿಲ್ಲಿಸಿದ್ದರ ಮರ್ಮವನ್ನು ತಾಲ್ಲೂಕಿನ ಜನ ಅರಿಯಬೇಕು. ಬಂಗಾರಪ್ಪ ಅವರಿಗೆ ಶಕ್ತಿ ನೀಡಿದ ಪುಣ್ಯಸ್ಥಳ ಸೊರಬ ತಾಲ್ಲೂಕಾಗಿದ್ದು,  ಇದನ್ನರಿತ ಅವರು ತಾಲ್ಲೂಕಿನ ಜನತೆಯ ಋಣ ತೀರಿಸಲು ಕುಮಾರ ಬಂಗಾರಪ್ಪ ಅವರ ವಿರುದ್ಧ ಚುನಾವಣಾ ಅಖಾಡಕ್ಕಿಳಿಸಿದ್ದರು ಎಂದರು.

ತಪ್ಪು ಮಾಡದ ತಮ್ಮನ್ನು ಎರಡು ಬಾರಿ ಸೋಲಿಸಿದ್ದೇಕೆ ಎಂಬುದಕ್ಕೆ ಉತ್ತರ ಹುಡುಕಾಡುತ್ತಿದ್ದೇನೆ.  ಅಧಿಕಾರ ಇಲ್ಲದಿದ್ದರೂ ನಾನೆಂದಿಗೂ ತಾಲ್ಲೂಕಿನ ಜನತೆಯ ಪರವಾಗಿ ಇದ್ದೇನೆ.  ದಂಡಾವತಿ ಆಣೆಕಟ್ಟು ಯೋಜನೆ ಸಂತ್ರಸ್ತರು ತಮ್ಮ ಹೋರಾಟದ ಪರಿ ಏನೆಂಬುದನ್ನು ತಿಳಿಯಬೇಕಿದೆ.  ರೈತರನ್ನು ಮುಳುಗಿಸುವ ಯಾವುದೇ ನೀರಾವರಿ ಯೋಜನೆಗೆ ತಮ್ಮ ವಿರೋಧ ಇರುವುದಾಗಿ ಸ್ಪಷ್ಟಪಡಿಸಿದರು.

ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿ ಮಾಡುವುದು ಬಂಗಾರಪ್ಪ ಅವರ ಕನಸಾಗಿತ್ತು.  ಅಪ್ಪಾಜಿಯ ಕನಸು ನನಸು ಮಾಡಲು ಜೆಡಿಎಸ್ ವತಿಯಿಂದ ತಾವು ಅವಿರತ ಪ್ರವಾಸ ಕೈಗೊಳ್ಳುತ್ತಿದ್ದು, ಸೊರಬ ವಿಧಾನಸಭಾ ಕ್ಷೇತ್ರದ 440 ಗ್ರಾಮಗಳ ಜನರಲ್ಲಿ ತಮ್ಮ ಭಾವನೆ ಹಂಚಿಕೊಳ್ಳಲು ಜನಸಂಪರ್ಕ ಸಭೆ ನಡೆಸುತ್ತಿರುವುದಾಗಿ ತಿಳಿಸಿದರು.

ತಾಲ್ಲೂಕು ಅಧ್ಯಕ್ಷ ಎಚ್. ಗಣಪತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್. ಕುಮಾರ್, ಮುಖಂಡರಾದ ಎಂ.ಡಿ. ಶೇಖರ್, ಕೃಷ್ಣಪ್ಪ ಚೊಗಟರ್, ಚಂದ್ರಪ್ಪ ಮಾತನಾಡಿದರು. ಬೆನ್ನೂರು ಗ್ರಾಮ ಪಂಚಾಯ್ತಿ ಅಧ್ಯಕ್ಷ ಮಾರ್ಯಪ್ಪ ಅಧ್ಯಕ್ಷತೆ ವಹಿಸಿದ್ದರು. ಕೆ.ವಿ. ಗೌಡ, ಪಕ್ಕೀರಪ್ಪ ಮಾಕೊಪ್ಪ, ವಿ. ಮಂಜುನಾಥ, ರಾಜುಗೌಡ, ಶೇಖರಮ್ಮ, ಚಂದ್ರಪ್ಪ, ಗಂಗಾಧರ, ಗಣಪತಿ, ಬಸವೇಶ್ವರ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT