ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನೇಕೆ ಓದುತ್ತೇನೆ: ನಿಜಕ್ಕೂ ಉತ್ತರವಿಲ್ಲ

ಸಾಹಿತ್ಯ ಸಾಂಗತ್ಯ
Last Updated 5 ಅಕ್ಟೋಬರ್ 2013, 19:30 IST
ಅಕ್ಷರ ಗಾತ್ರ

*ನೀವು ಓದನ್ನು ಗಂಭೀರವಾಗಿ ತೆಗೆದುಕೊಂಡಿದ್ದು ಯಾವಾಗ? ಹೇಗೆ ಈ ಓದಿನ ಪ್ರಯಾಣ ಆರಂಭ-­ವಾಯಿತು? ನಿಮ್ಮ ಬಾಲ್ಯದಲ್ಲಿ ಓದಿಗೆ ಪೂರಕವಾದ ವಾತಾವರಣ­ವೊಂದು ಇತ್ತೆ? ಆ ದಿನಮಾನಗಳ ಒಂದು ಚಿತ್ರಣ ಕೊಡಿ.

ಲಜ್ಜೆಗೇಡೆನಿಸಬಹುದಾದರೂ, ಇಲ್ಲೊಂದು ಸತ್ಯ ಹೇಳಿಬಿಡುತ್ತೇನೆ. ನಾನು ಕಡಿಮೆ ಓದು ಮತ್ತು ಹೆಚ್ಚು ಬರಹದ ಆಸಾಮಿ ! ಹಾಗೇ ನಾನೊಬ್ಬ ಹೆಚ್ಚು ಆರ್ಕಿಟೆಕ್ಟು ಮತ್ತು ಕಡಿಮೆ ಬರಹಗಾರ. ಇನ್ನು ಓದು ಗಂಭೀರವಾಗಿರುತ್ತೆ ಅನ್ನೋದು ನನಗೆ ನೇರ ಗೊತ್ತಾಗದ ಮಾತು. ಏನು ಓದುತ್ತೇನೆ ಅನ್ನುವ ಬಗ್ಗೆ ಖಾತ್ರಿ ಇಲ್ಲ. ಹಾಗೇ ಏನು ಬರೆಯುತ್ತೇನೆ ಅನ್ನುವುದೂ ಗ್ಯಾರಂಟಿಯಿಲ್ಲ. ಈ ಬಗ್ಗೆ ಸಾಕಷ್ಟು ಸರ್ತಿ ಹೇಳಿಯಾಗಿದೆ. ದಿನವೊಂದರಲ್ಲಿನ ನನ್ನ ಸುಮಾರು ಎಚ್ಚರವನ್ನು ನೆಚ್ಚಿರುವ ಆರ್ಕಿಟೆಕ್ಚರ್ ನುಂಗಿಬಿಡುತ್ತದೆ.

ಸಮಯವಾದರೋ- ಗೋಡೆ, ಕಂಬ, ಕಿಟಕಿ, ಬಾಗಿಲು, ಸ್ಟೀಲು, ಕಾಂಕ್ರೀಟು, ಗಾಜು, ಗ್ರಾನೈಟು, ಮಾರ್ಬಲು... ಇತ್ಯಾದಿಯಲ್ಲೇ ಸಂದು­ಹೋಗು­ತ್ತದೆ­ನ್ನುವುದು ವ್ಯರ್ಥ ಕರುಬಲ್ಲ; ನನ್ನ ಮಟ್ಟಿಗಿನ ಹೆಮ್ಮೆ ಕೂಡ ! ಡಿಸೈನು ನನಗೆ ಪದ್ಯಸದೃಶ ತಪಸ್ಸಿದ್ದ ಹಾಗೆ. ಪದ್ಯಗಾರಿಕೆ­ಯಲ್ಲಿರುವ ಹಾಗೇ ಇಲ್ಲೂ ಲೇಬರು ಹೆಚ್ಚು, ಸಿದ್ಧಿ ಕಡಿಮೆ. ಈ ನಡುವೆ ಬರೆಯುತ್ತೇನೆ ಅನ್ನುವುದೂನು ಡಿಸೈನುಕ್ರಿಯೆಯ ಉಪೋತ್ಪಾದನೆ ಮಾತ್ರ! ಇನ್ನು ಓದುತ್ತೇನೆ ಅನ್ನುವುದು? ಅದಕ್ಕಿಂತ ಭ್ರಾಂತಿ ಇನ್ನೊಂದಿಲ್ಲ. ಪುರುಸೊತ್ತಿಲ್ಲ ಅಂದರೆ ಹುಂಬತನವಾದೀತು. ಆದರೆ ಓದುವುದು ನಿಜವೆ. ಏನನ್ನುವುದು ಮಾತ್ರ ನನಗೇ ಗೊತ್ತಿರದ ವಾಸ್ತವ. ಸಿಕ್ಕಿದ್ದನ್ನೆಲ್ಲ ಅಷ್ಟಿಷ್ಟು ಓದುತ್ತೇನೆ. ಕೆಲಹೊತ್ತಿನ ಮೆಡಿಟೇಶನಿನ ಹಾಗೆ ಓದುತ್ತೇನೆ. ಆದರೆ ಒಂದನ್ನೇ ಹಿಡಿದುಕೊಂಡು ತಪಸ್ಸಿನ ಹಾಗೆ ಓದುವುದು ಕಡಿಮೆ. ಈ ತಪಸ್ಸಿನಲ್ಲಿ ತೊಡಗಿ ಕುಳಿತರೆ, ಇನ್ನೆಲ್ಲೋ ಮೇಜರು ಮೇಜರು ತಪೋಭಂಗವಾದೀತು ಅಷ್ಟೆ! 

ಓದೆನ್ನುವುದು ಚಿಕ್ಕಂದಿನಲ್ಲೇ ಆಗಿಬಂದ ಮಹಿಮೆ. ಜೂನಿಯರು ಶಾಲೆಯಲ್ಲಿದ್ದಾಗ ಕಂಡಿದ್ದನ್ನೆಲ್ಲ ಓದುತ್ತಿದ್ದ ನೆನಪು. ಆಗ ನಾವು ಬಾಳೇಹೊನ್ನೂರಿನಲ್ಲಿದ್ದೆವು. ಅಲ್ಲಿ ಕಾಮಾಕ್ಷಮ್ಮ ಎಂಬ ಹೆಸರಿನ್ನೊಬ್ಬ ಹಿರಿಯಾಕೆ ಶಿಶುವಿಹಾರ­ದಲ್ಲಿ ಟೀಚರಾಗಿದ್ದರು. ಆಕೆ ನನ್ನ ಅಮ್ಮನಿಗೆ ಕ್ಲೋಸ್‍ಫ್ರೆಂಡು. ಅಮ್ಮನೂ ಅವರನ್ನು ಟೀಚರಂತಲೇ ಕರೆಯುವಳು. ಆಕೆಗೆ ಓದೆಂದರೆ ಇನ್ನಿಲ್ಲದ ಹುಚ್ಚು. ದಿನವೂ ಶಿಶುವಿಹಾರದ ಬದಿಯಲ್ಲಿದ್ದ ಗ್ರಂಥಾಲಯದಿಂದ ಪುಸ್ತಕಗಳನ್ನು ತರುವರು. ಅಮ್ಮ ಅವನ್ನು ಅವರಿಂದ ಕಡ ತಂದು ಓದುವಳು. ಓದಿದ ಮೇಲೆ ಇಬ್ಬರೂ ಓದಿನ ಬಗ್ಗೆ ಪರಾಮರ್ಶೆ ಮಾಡಿಕೊಳ್ಳುವರು. ಓದಿದ್ದರಲ್ಲಿನ ತಪ್ಪು-ಒಪ್ಪುಗಳನ್ನು ತಂತಮ್ಮಲ್ಲೇ ಆಡಿ­ಕೊಳ್ಳುವರು. ಇದು ನನ್ನನ್ನು ಮೊದಮೊದಲ ಓದಿನತ್ತ ತುಯ್ಯಿಸಿತೆನಿಸುತ್ತದೆ.

ಅಮ್ಮನಾದರೋ- ನಾವು ಚಿಕ್ಕವರು ಏನು ಓದಬೇಕು ಓದಬಾರದೆನ್ನುವುದನ್ನು ಕುರಿತು ಕಣ್ಣಿಡು­ವಳಾದರೂ, ಅವಳ ಕಣ್ಣು ತಪ್ಪಿಸಿ ಒಮ್ಮೊಮ್ಮೆ- ಅರ್ಥವಾಗಲಿ, ಬಿಡಲಿ ಅವಳಿಗೆ ಮೀಸಲಿದ್ದವನ್ನೂ ನಾನು ಓದುತ್ತಿದ್ದೆ. ಎಳವೆಯ ದಿವಸಗಳನ್ನು ರೋಚಿಸಿದ್ದು ಅನುಪಮಾ ನಿರಂಜನರ ‘ದಿನಕ್ಕೊಂದು ಕಥೆ’, ಭಾರತ ಭಾರತಿ, ಪುಸ್ತಕಸಂಪದ ಮಾಲಿಕೆಯ ವ್ಯಕ್ತಿಚಿತ್ರಗಳು, ಮಕ್ಕಳ ಪತ್ರಿಕೆಗಳಾದ ಚಂದಮಾಮ, ಬೊಂಬೆಮನೆ ಇತ್ಯಾದಿಗಳು, ಪಂಜೆ, ರಾಜರತ್ನಂ ಇನ್ನಿತರರ ಪದ್ಯಗಳು, ಹೊರನಾಡಿನಲ್ಲಿದ್ದು ಕನ್ನಡೇತರದ್ದನ್ನು ಕಲಿಯುತ್ತಿದ್ದ ಓರಗೆಯ ಕಸಿನುಗಳು ಓದುತ್ತಿದ್ದ ಫೇರೀಟೇಲು -ಫೇಬಲುಗಳು... ಇನ್ನು ‘ಸುಧಾ’ ಪತ್ರಿಕೆಯಲ್ಲಿನ ಮಕ್ಕಳ ಪುಟ- ಡಾಬೂ, ಮಜನೂ, ಫ್ಯಾಂಟಮಿತ್ಯಾದಿ ಫೀಚರುಗಳು. ಅರವತ್ತರ ದಶಕದಲ್ಲಿ ‘ಸುಧಾ’ ಸುರುಗೊಂಡಾಗಿನ ಸಂಚಿಕೆಗಳನ್ನು ಅಮ್ಮ ಬೈಂಡು ಮಾಡಿಸಿ, ದೊಡ್ಡ ವಜನಿನ ಪುಸ್ತಕಗಳನ್ನಾಗಿ ಒಡನಿಟ್ಟುಕೊಂಡಿದ್ದಳು. ಅವುಗಳಲ್ಲಿ ಸಿಕ್ಕ, ಬಹುಶಃ ರಾಜರತ್ನಂರವರು ಸಂಪಾದಿಸಿದ ಜಾತಕ- ಕತೆಗಳು ನನ್ನನ್ನು ಮೋಡಿಗೈದಿತ್ತು. 

ಮಾಧ್ಯಮಿಕ ಶಾಲೆಯ ಹೊತ್ತಿಗೆ, ನನ್ನ ಓದು- ಅಮ್ಮ ಮತ್ತು ಟೀಚರು ಓದುವ ಕಾದಂಬರಿಗಳವರೆಗೂ ಬಡ್ತಿಗೊಂಡಿತ್ತು. ವಾರಪತ್ರಿಕೆಗಳಲ್ಲಿನ ಧಾರಾವಾಹಿಗಳು, ಲೈಬ್ರರಿಯಿಂದ ತಂದ ದಪ್ಪನೆ ಪುಸ್ತಕಗಳು- ಮನಸಿನೆಟುಕುಗಳನ್ನು ವಿಸ್ತರಿಸಿದವು. ಏಳನೆ ತರಗತಿಯಲ್ಲಿರುವಾಗ ಕನ್ನಡ ಕಲಿಸುತ್ತಿದ್ದ ರೇಷ್ಮಾ ಮೇಡಂ ಎಂಬುವವರು ಪಾಠವೊಂದಕ್ಕೆ ಪೂರಕವಾಗಿ ‘ಯಶೋಧರ­ಚರಿತೆ’ಯ ಪೂರ್ತಿ ಕಥೆ ಹೇಳಿದ್ದರು. ಅದು ಒಮ್ಮೆಗೇ ನನ್ನ ಓದಿನ ಪರಿಧಿಯನ್ನು ಹೆಚ್ಚಿಸಿತು.

ಪಿಯುಸಿ ಮುಗಿಸಿ, ಬೆಂಗಳೂರಿನಲ್ಲಿ ಆರ್ಕಿಟೆಕ್ಚರಿನಲ್ಲಿ ದಾಖಲು­­ಗೊಳ್ಳು­ವವರೆಗೂ ಕನ್ನಡವನ್ನು ಓದುವುದಿತ್ತು. ಅಂಥದ್ದು ಹೇಗೆ ತಪ್ಪಿಹೋಯಿತೋ ಗೊತ್ತಿಲ್ಲ, ಬಳಿಕದ ಇಪ್ಪತ್ತಿಪ್ಪತ್ತೈದು ವರ್ಷ ಕಾಲ ಕನ್ನಡದ ದಿನಪತ್ರಿಕೆಯನ್ನೂ ನಾನು ಓದಲಿಲ್ಲ!
*ಓದನ್ನು ಆರಂಭಿಸಿದ ದಿನಗಳಲ್ಲಿ ಅತ್ಯಂತ ಖುಷಿಕೊಟ್ಟ ಪುಸ್ತಕ ಅಥವಾ ಇಷ್ಟವಾದ ಪುಸ್ತಕಗಳ ಬಗ್ಗೆ ಹೇಳಿ.

ಆರಂಭದ ದಿನಗಳ ಓದಿನ ಬಗ್ಗೆ ಈಗಾಗಲೇ ಹೇಳಿದೆನಲ್ಲ. ಹೈಸ್ಕೂಲಿನಲ್ಲಿರುವಾಗ ನನ್ನ ಅಪ್ಪನ ಬ್ರೀಫ್‍ಕೇಸಿನಲ್ಲಿ ‘ಕಾತ್ಯಾಯನಿ’ ಅಂತನ್ನುವ ಕಿರುಹೊತ್ತಿಗೆ ಸಿಕ್ಕಿತು. ಕಸ್ತೂರಿ ಮಾಸಪತ್ರಿಕೆಯಲ್ಲಿ ಅಚ್ಚಾಗಿದ್ದ- ಭೈರಪ್ಪನವರ ‘ವಂಶವೃಕ್ಷ’ದ ಸಾಂಕ್ಷಿಪ್ತಿಕೆ ಅದು. ಅಪ್ಪ ಅದರಿಂದ ಬಲು ಪ್ರಭಾವಿತರಾಗಿದ್ದರೆ­ನಿ­ಸು­ತ್ತದೆ. ಅವರ ಕಣ್ಣು ತಪ್ಪಿಸಿ ಅದನ್ನು ಓದಿದ್ದೆ. ತಿಂಗಳುಗಳ ಬಳಿಕ ‘ವಂಶವೃಕ್ಷ’ವನ್ನು ಪೂರ್ತಿ ಓದಿದೆ.  ಕಡೆಕಡೆಯಲ್ಲಿ ಅತ್ತುಬಿಟ್ಟಿದ್ದೆ.

ಹೈಸ್ಕೂಲಿನಲ್ಲಿರುವಾಗಲೇ ಒಂದು ಸಂಜೆ, ಶಾಲೆಯ ಆಟದ ಬಯಲಿನಲ್ಲಿ ಕಾಸರವಳ್ಳಿಯವರ ‘ಘಟಶ್ರಾದ್ಧ’ವನ್ನು ಬೀಮು ಮಾಡಿದ್ದರು. ಹನ್ನೆರಡು ಹದಿಮೂರನೇ ವಯಸ್ಸು ಆಗ, ಅರ್ಥ­ವಾಗುವಷ್ಟು ಪ್ರಬುದ್ಧತೆಯಿರಲಿಲ್ಲ. ಬಳಿಕ ಶಾಲೆಯ ಲೈಬ್ರರಿಯಲ್ಲಿ- ಯೂಆರ್‍ಎರವರದೊಂದು ಸಂಕಲನ ಸಿಕ್ಕಿ, ‘ಘಟಶ್ರಾದ್ಧ’ವನ್ನು ಓದಿಕೊಂಡೆ. ಅದು ಈ ತನಕ ಮನಸ್ಸಿನಲ್ಲೊತ್ತಿಕೊಂಡುಳಿದಿರುವ ಕತೆ.

*ನಿಮ್ಮ ಪ್ರಕಾರ ಅತ್ಯುತ್ತಮ ಸಾಹಿತ್ಯ ಕೃತಿ ಎಂದರೆ ಯಾವುದು? ನಿಮ್ಮ ಓದಿನ ವ್ಯಾಪ್ತಿಯಲ್ಲಿ ಒಂದೆರಡು ಉದಾಹರಣೆ ಕೊಡಲು ಸಾಧ್ಯವೆ?

ಉಡಾಫೆಯೆನಿಸಬಹುದಾದರೂ, ಅನಿಸಿದ್ದು ಹೇಳಿಬಿಡು­ತ್ತೇನೆ. ನನ್ನ ಮಟ್ಟಿಗೆ ಒಳ್ಳೆಯ ಮತ್ತು ಕಳಪೆಯ ಅಂತನ್ನುವ ಪ್ರಭೇದಗಳೇ ಇಲ್ಲ. ಹಾಗೆ ಓದನ್ನು ಪಂಗಡಿಸಿ­ಡುವುದೂ ಸರಿಯಲ್ಲವೇನೋ. ಯಾವುದೇ ಓದು ನನಗೆ ಆ ಕ್ಷಣದ ಪುಳಕ ಮಾತ್ರ ! ಪುಸ್ತಕವೊಂದು ಒಮ್ಮೆ ಮನಸ್ಸನ್ನು ಮೀಂಟಿತಾದರೆ, ಅದನ್ನು ಮತ್ತೊಮ್ಮೆ  ಓದುವಾಗ ಹಾಗೇ ಅನಿಸು­­ತ್ತದೆನ್ನುವ ಖಾತ್ರಿಯೂ ನನಗಿಲ್ಲ. ಹಾಗಂತ ಮೊದಲ ಸಲವುಂಟಾದ ಪುಳಕ ಕಡಿಮೆಯೆಂತಲೂ ಅಲ್ಲ. ಮನಸ­ನ್ನೊಂದು ಬೋಗುಣಿ ಅಂತನ್ನುವುದಾದರೆ, ವಯಸ್ಸಿಗೆ ತಕ್ಕು­ದಾಗಿ ಅದೂ ದೊಡ್ಡದಾಗಿ- ಅನುಭವವೊಂದು ಹುಟ್ಟಿಸುವ ಸಂತೋಷವು ಅದರ ಒಳಪಾಯದಲ್ಲಿ ಚಿಕ್ಕದೆನಿಸಿಬಿಡಬಹುದು ಅಷ್ಟೆ.

‘ತಿರುಕನೋರ್ವನೂರ ಮುಂದೆ ಮುರುಕು ಧರ್ಮ­ಶಾಲೆಯಲ್ಲಿ’ –ಎಂದು ಸಾಗುವ ಕಂದಪದ್ಯವು ಒಂದಾನೊಮ್ಮೆ ಮನಸು ತುಡಿಸಿದಷ್ಟೇ ತೀವ್ರವಾಗಿ, ‘ಬಾ ಬಾ ಕಪ್ಪು ಹಕ್ಕಿಯೇ... ನಿನಗೆ ಯಾವತ್ತೂ ಹೀಗೆ ಅನ್ನವಿಟ್ಟು ಕಾಯ್ದಿರಲಿಲ್ಲ’ ಅಂತ ಓದುವ ಎಚ್ಚೆಸ್ವಿಯವರ ‘ಉತ್ತರಾಯಣ’ವೂ ನನ್ನಲ್ಲಿ ಮಿಡಿದಿದ್ದಿದೆ. ಹೇಳಿ- ಇವೆರಡರಲ್ಲಿ ಯಾವುದು ಹೆಚ್ಚು ಚೆನ್ನೆನ್ನುವುದರ ಗೊಡವೆ ನಿಜಕ್ಕೂ ಬೇಕೆ?

*ಯಾವ ಸಾಹಿತ್ಯ ಕೃತಿ/ಗಳು ನಿಮ್ಮ ಮೇಲೆ ತೀರಾ ಪ್ರಭಾವ ಬೀರಿವೆ? ಅವು ನಿಮ್ಮ ಬದುಕು, ಸಾಹಿತ್ಯವನ್ನು ನೋಡುವ ಕೋನವನ್ನು ಬದಲಾಯಿಸಿವೆಯೆ?

ಉತ್ತರಿಸುವುದು ಕಷ್ಟ. ನನ್ನ ನಿಜವಾದ ಓದು/ಗಳು ಘಟಿಸಿದ್ದೇ ಚಿಕ್ಕಂದಿನಲ್ಲಿ. ಈ ಮಹಾನಗರಿಯಲ್ಲಿ ಬಂದು ಬೇರೂರಲಿಕ್ಕೆ ಮೊದಲು. ಇಲ್ಲಿ ಬಂದು, ಆರ್ಕಿಟೆಕ್ಚರಿನಲ್ಲಿ ತೊಡಗಿಕೊಂಡ ಮೇಲೆ- ನನಗೆ ಇಲ್ಲಿನ ಔದ್ಯೋಗಿಕ ಅಗತ್ಯವಾದ ಇಂಗ್ಲಿಷನ್ನು ಸೆಣಸುವುದಿತ್ತು ಮತ್ತು ಪಳಗಿಸಿ­ಕೊಳ್ಳುವುದಿತ್ತು. ಆ ಭರದಲ್ಲಿ ಕನ್ನಡವೇ ಕೈತಪ್ಪಿಹೋಯಿತು. ಎಂಬತ್ತೆಂಟನೇ ಇಸವಿಯಿಂದೀಚೆಗಿನ ಓದಂತೂ ಬಲುಪಾಲು ವೃತ್ತಿಪರ­ವಾದುದೇ ಇದ್ದಿತು ಮತ್ತು ಎಲ್ಲವೂ ಇಂಗ್ಲಿಷಿನಲ್ಲಿ ಆಗುತ್ತಿತ್ತು.

ಸುದೈವವೆಂದರೆ, ಆರ್ಕಿಟೆಕ್ಚರಿನ ಓದು, ಕಲಿಕೆಗಳೆರಡೂ- ನನ್ನನ್ನು ಈ ಹಿಂದೆ ತೊಡಗಿಸುತ್ತಿದ್ದ ಸಾಹಿತ್ಯಕ್ಕಿಂತ ಹೆಚ್ಚೇನೂ ಬೇರೆಯಿರಲಿಲ್ಲ. ಕಟ್ಟಡಗಾರಿಕೆ­ಯೆನ್ನುವುದು- ಎಷ್ಟರ ಮಟ್ಟಿಗೆ ವಿಜ್ಞಾನವೋ ಅಷ್ಟೇ ಕಲೆಯೂ ಆಗಿರುವುದರಿಂದ, ನಾವು ಆರ್ಕಿಟೆಕ್ಟುಗಳಿಗೆ ಫಿಸಿಕ್ಸಿನಷ್ಟೇ ಫಿಲಾಸಫಿಯೂ ಮುಖ್ಯ­ವಾದ್ದರಿಂದ- ಹಾಗೇನೋ ಮಿಸ್ಸಾ­ಯಿತೆಂಬ ಕೊರತೆ ಕೂಡ ಕಾಡಲಿಲ್ಲ. ವಾಸ್ತವದಲ್ಲಿ, ಆರ್ಕಿಟೆಕ್ಚರಿನ ಅಕೆಡೆಮಿಕ್ ಓದಿನಲ್ಲೂ ಸಾಹಿತ್ಯದ ಅಕೆಡೆಮಿಕ್ಸಿನಲ್ಲಿ­ರುವಂತೆಯೇ- ಹತ್ತಾರು ಇಸಮುಗಳು, ಹಲವಾರು ಥಿಯರಿಗಳೂ ಇವೆ. ಇಲ್ಲಿ ನವೋದಯ, ನವ್ಯ, ನವ್ಯೋತ್ತರಗಳಿರುವಂತೆಯೇ- ಆರ್ಕಿಟೆಕ್ಚರಿ­ನಲ್ಲೂ ರಿನೈಸಾನ್ಸು, ಮಾಡರ್ನು, ಪೋಸ್ಟ್-ಮಾಡರ್ನು, ಡಿಕನ್ಸ್ಟ್ರಕ್ಷನ್... ಇತ್ಯಾದಿ ಮಣ್ಣುಮಸಿಯೂ ಇದೆ. ನಿಜಕ್ಕಾದರೆ, ಸಾಹಿತ್ಯವು ಬದುಕನ್ನು ಚಿತ್ರಿಸುತ್ತದೆ ಅನ್ನುವುದಕ್ಕಿಂತ ಹೆಚ್ಚಾಗಿ ಆರ್ಕಿಟೆಕ್ಚರು ಅದೇ ಬದುಕನ್ನು ಕಟ್ಟಿಯೂ ನಿಲ್ಲಿಸಿಬಿಡುತ್ತದೆ. ಎರಡರ ನಡುವೆ ವ್ಯತ್ಯಾಸವಿದೆಯಂತ ನನಗೆಂದೂ ಅನಿಸಿದ್ದಿಲ್ಲ.

ಇನ್ನು ಪ್ರಭಾವದ ಬಗೆಗಿನ ಮಾತು. ಇಲ್ಲೊಂದು ಪುಟ್ಟ ಸಂದರ್ಭವನ್ನು ಹೇಳಲೇಬೇಕು. ಎರಡು ಸಾವಿರದ ಎರಡನೇ ಇಸವಿಯಲ್ಲೇನೋ, ವಿಶಾಖಪಟ್ಟಣದಲ್ಲೊಂದು ಪ್ರಾಜೆಕ್ಟು ಮಾಡುತ್ತಿದ್ದೆ. ಅಲ್ಲಿಗೊಂದು ಪ್ರಯಾಣದ ಸುಮಾರಿನಲ್ಲಿ ಜಯಂತ ಕಾಯ್ಕಿಣಿಯವರ ‘ಬೊಗಸೆಯಲ್ಲಿ ಮಳೆ’ ಕೈಗೆ ಸಿಕ್ಕಿತು. ಇವೊತ್ತು ಬೆಳಿಗ್ಗೆ ಹೋಗಿ, ಮರುಮಧ್ಯಾಹ್ನ ವಾಪಸಾ­­ಗುವ ಹೊತ್ತಿಗೆಲ್ಲ, ಇವೊತ್ತಿಗೂ ನಂಬಲಿಕ್ಕಾಗು­ವುದಿಲ್ಲ, ನನ್ನ ಬೊಗಸೆ­ಯಲ್ಲೂ ಜಲವುಕ್ಕುತ್ತಿತ್ತು. ಏನೋ ಸೆಲೆ­ಯುಂಟಾಗಿತ್ತು. ಅರೆ ! ಈ ಮನುಷ್ಯ ನನ್ನ ಮನಸ್ಸಿನ ಅನ್ನೋಣ­ಗಳಿಗೆ ಮಾತು ಬರೆದಿದ್ದಾನೆ ಅಂತನಿಸಿ, ನಾನೂ ಬರೆ­ಯ­­ಬಾರದೇಕೆ ಅಂತನ್ನುವ ಉಮೇದಾಯಿತು. ಅಷ್ಟೆ; ಬರೆದೆ.

ಅವೇ ದಿನಗಳಲ್ಲಿ ಓದಿಗೆ ಸಿಕ್ಕ ವಿವೇಕ ಶಾನಭಾಗರ ‘ಕಂತು’ ಅಂತನ್ನುವ ಕತೆ. ಅದನ್ನೋದಿ ಎಷ್ಟು ಇಂಪ್ರೆಸಾಗಿಬಿಟ್ಟೆನೆಂದರೆ- ನಾನೂ ಒಂದು ಕತೆ ಬರೆದೆ.  ‘ಇನ್ನು ಫಿರ್ಯಾದುಗಳ ಗೋಜಿಲ್ಲ’  ಎನ್ನುವ ಶೀರ್ಷಿಕೆಯದ್ದು; ‘ಪ್ರಜಾವಾಣಿ’ಯೇ ಪ್ರಕಟಿಸಿತ್ತು.            
            
*ಈಗ ಪುಸ್ತಕಗಳ ಓದು ಕಡಿಮೆಯಾಗುತ್ತಿದೆ, ಪುಸ್ತಕಗಳಿಗೆ ಭವಿಷ್ಯವಿಲ್ಲ ಎಂಬ ಮಾತು ಆಗಾಗ ಕೇಳಿಬರುತ್ತಿವೆ. ಈ ಕುರಿತು ಏನನಿಸುತ್ತದೆ?

ನನಗೂ ಒಮ್ಮೊಮ್ಮೆ ಹೀಗನಿಸಿದ್ದಿದೆ. ಓದುವವರಷ್ಟೇ ಸಂಖ್ಯೆಯಲ್ಲಿ ಬರೆಯುವವರೂ ಇದ್ದೇವಾ ಅಂತ ಒಮ್ಮೊಮ್ಮೆ ಅನಿಸುತ್ತದೆ. ಬರೆಯುವುದೇ ಕ್ರಾಂತಿಯಂತನ್ನುವ ಹಾಗೆ, ಪ್ರಕಟಿಸು­ವುದಲ್ಲದೆ ಇನ್ನು ನಾಳೆಯಿಲ್ಲವೆನ್ನುವ ಹಾಗೆ, ಪುಸ್ತಕಗಳು- ಪುತಪುತನೆ ಬಿಡುಗಡೆಗೊಳ್ಳುತ್ತಿರುವ ಇವೊತ್ತಿನ ಸಂದರ್ಭದಲ್ಲಿ, ಯಾರು ಓದುತ್ತಾರೆನಿಸುವುದೂ ಇದೆ. ಅಜೀಬನಿಸುತ್ತದೆ. ಇನ್ನು, ಬರೆಯುವುದು ನನಗಾಗಿಯಷ್ಟೇ ಅನ್ನುವ ಸಮರ್ಥನೆಯಿದೆಯಲ್ಲ, ಅದಕ್ಕೆ ನಮೋ!  
                      
*ನಾನೇಕೆ ಬರೆಯುತ್ತೇನೆ ಎಂಬುದರ ಉತ್ತರ ನಾನೇಕೆ ಓದುತ್ತೇನೆ ಎಂಬುದರಲ್ಲಿದೆ ಎಂಬ ಮಾತಿದೆ. ಈ ಕುರಿತು ಏನೆನಿಸುತ್ತದೆ?

ನಾನೇಕೆ ಓದುತ್ತೇನೆ ಎಂಬುದಕ್ಕೆ ನಿಜಕ್ಕು ನನ್ನಲ್ಲಿ ಉತ್ತರವಿಲ್ಲ. ಇನ್ನು ಯಾಕೆ ಬರೆಯುತ್ತೇನೆ? ನಿಜಕ್ಕು ಗೊತ್ತಿಲ್ಲ. ಕಿಂಚಿತ್ತು ಸಂತೋಷಕ್ಕಾಗಿ ಇರಬಹುದು. ನನಗೆ ಗಾಢವಾಗಿ ಅನಿಸುವುದು, ಪ್ರಪಂಚದ ಎಲ್ಲ ಬಗೆಯ ಸೃಷ್ಟಿಕ್ರಿಯೆಯ ಹಿಂದೆಯೂ ಒಂದು ಸಂತೋಷದ ಉದ್ದೇಶವಿದೆ.

ಇನ್ನು ಓದು- ಬದುಕಿನ ಅಗತ್ಯ, ಆತ್ಮದ ಎಚ್ಚರ ಅಂತೆಲ್ಲ ಕ್ಲಿಷೆಯ ಮಾತುಗಳಿವೆಯಲ್ಲ, ಬರೇ ಸೋಗಿನವೆನಿಸುತ್ತವೆ. ನನಗೆ ಓದುವುದರಲ್ಲಿ ಸಿಗುವ ಖುಷಿಗೂ ಹೆಚ್ಚಾದ ಇನ್ನೊಂದು ಕುಸ್ತಿಪಟುವೊಬ್ಬನಿಗೆ ಪಟ್ಟು ಹಾಕುವುದರಲ್ಲಿ ದಕ್ಕಬಹುದಲ್ಲವೆ?! ಅನಗತ್ಯ ಜಾರ್ಗನನಿಸುವುದಿಲ್ಲವೆ ಇದು ?!   

*ಬೆಂಗಳೂರಿನಂತಹ ಊರಿನಲ್ಲಿರುವುದು ಮತ್ತು ನಿಮ್ಮ ಕೆಲಸ ನಿಮ್ಮ ಓದಿಗೆ ಪೂರಕವಾಗಿದೆಯೆ ? ಬೇರಿನ್ನೆಲ್ಲಾದರೂ ಇದ್ದಿದ್ದಲ್ಲಿ ನಿಮ್ಮ ಸಾಹಿತ್ಯ ಚಟುವಟಿಕೆಗಳಿಗೆ ಇನ್ನೂ ಹೆಚ್ಚಿನ ಅವಕಾಶವಿರುತ್ತೆಂದು ಎಂದಾದರೂ ಅನಿಸಿದೆಯೆ ?

ನಾನು ಕಡಿಮೆ ಓದುತ್ತೇನಂತ- ನಾನು ಆಗಿಕೊಂಡಿರುವ ಊರು ಮತ್ತು ಕೆಲಸಗಳನ್ನು ದೂರುವುದು ಸುಲಭವೆ. ಆದರೆ ನಿಜದ ವಿಷಯ ಅದಲ್ಲ. ಓದಿನ ಮಟ್ಟಿಗಾದರೆ- ನನಗೆ ನನ್ನದೇ ಒಂದು ಇತಿಮಿತಿಯಿದೆ. ಓದಲಿಕ್ಕೇನನ್ನೇ ಎತ್ತಿಕೊಂಡರೂ, ಅದನ್ನು ಒಂದೇ ಪಟ್ಟಿನಲ್ಲಿ ಓದಿ ಮುಗಿಸಬೇಕು. ಅಕಸ್ಮಾತ್ ಅರ್ಧಕ್ಕೇ ನಿಂತಿತಾದರೆ ಮತ್ತೆ ಶುರುವಿನಿಂದ ಓದಬೇಕು.

ಇದನ್ನು  ಸಮಸ್ಯೆಯೆನ್ನುವುದಾದರೆ ಸಮಸ್ಯೆಯೆ; ಅದನ್ನು ಈ ವಯಸಿನಲ್ಲಿ ನಿವಾರಿಸಿಕೊಳ್ಳಲಿಕ್ಕೆ ಆಗದ ಮಾತು. ಇನ್ನು, ಒಂದು ಓದನ್ನು ಸಂಪೂರ್ಣ ದಕ್ಕಿಸಿಕೊಳ್ಳಲಿಕ್ಕೆ ತಪಸ್ಸಿನ ಹಾಗೆ ಓದಬೇಕು. ಈ ಊರು ಮತ್ತು ಕೆಲಸದ ಜಂಜಡಗಳಲ್ಲಿ ಅದೆಲ್ಲಿ ಸಾಧ್ಯ? ’ಘಾಚರ್ ಘೋಚರ್’- ಎಂಬ ಎಂಬತ್ತು ಪುಟಗಳನ್ನು ಓದಲಿಕ್ಕೆ ನಾನು ಬರೋಬ್ಬರಿ ಮೂರು ತಿಂಗಳು ತಕ್ಕೊಂಡೆ­ನೆಂದರೆ- ನನ್ನ ಓದಿನ ಸಾಮರ್ಥ್ಯ ಅರ್ಥವಾಗ­ಬಹುದು! ಒಂದು ಭಾನುವಾರ ಅದನ್ನು ಪಟ್ಟುಹಿಡಿದು ಓದಲಿಕ್ಕೆ ಮೊದಲು, ನಾಲ್ಕಾರು ಸರ್ತಿ ಅರೆಬರೆ ಓದಿಕೊಂಡಿದ್ದೆ.

ಇನ್ನು ಬೇರೆ ಊರಿನಲ್ಲಿದ್ದಿದ್ದರೆ ಅನ್ನುವ ಮಾತು. ಆ ಕುರಿತು ಯೋಚಿಸಿಲ್ಲ. ನನ್ನ ಮಟ್ಟಿಗೆ ಬೆಂಗಳೂರಿನಲ್ಲಲ್ಲದೆ ಆರ್ಕಿಟೆಕ್ಚರು ಸಾಧ್ಯವಿಲ್ಲ. ಹಾಗೇ ಇನ್ನಾವುದರ ಬಗ್ಗೆ ಬರೆಯುವುದೂನು ! 

*ನೀವು ನೋಡಿದಂತೆ ಕಥೆ, ಶಿಶುಗೀತೆಗಳಿಗೆ ಸಂಬಂಧಿಸಿದಂತೆ ಮಕ್ಕಳ ಓದು ಹೇಗಿದೆ ? ಮಕ್ಕಳಿಗಾಗಿ ಯಾವ ಲೇಖಕ, ಪುಸ್ತಕ ಮತ್ತು ಕವಿತೆಗಳನ್ನು ಶಿಫಾರಸು ಮಾಡುತ್ತೀರಿ ?     
                                                                                                                                     
ನನ್ನ ಮಗ್ಗುಲಿನ ಇಮ್ಮೀಡಿಯೆಟ್ ಸಂದರ್ಭದಲ್ಲಿ ಕನ್ನಡವನ್ನು ಓದುವ ಮಕ್ಕಳಿಲ್ಲ. ಅವುಗಳಿಗೆ ಅಷ್ಟಿಷ್ಟು ಕನ್ನಡವನ್ನಾಡಿ ಗೊತ್ತಿದ್ದರೂ ಓದಿ ಗೊತ್ತಿಲ್ಲ. ಇನ್ನು ಮಕ್ಕಳೋದಿಗೆಂದೇ ಆದ ಪುಸ್ತಕಗಳನ್ನು ದೊಡ್ಡವರೇ ಬರೆಯಬೇಕು; ಅವನ್ನು ನಿಜಕ್ಕು ಓದುವವರೂ ದೊಡ್ಡವರೆ ! ಆದರೆ ನಮ್ಮ ನಡುವಿನ ಯಾವ ದೊಡ್ಡವರೂ ಸಂಬೋಧಿಸಿರದ ಸತ್ಯವೊಂದಿದೆ; ನಾವು ಅನುಭವಿಸಿದ ಬಾಲ್ಯಕ್ಕು, ಇವೊತ್ತಿನ ಮಕ್ಕಳು ತೆರೆದು­ಕೊಂಡಿರುವ ಜಗತ್ತಿಗೂ ಸಿಕ್ಕಾಪಟ್ಟೆ ವ್ಯತ್ಯಾಸವಿದೆಯೆನ್ನು­ವುದನ್ನು ನಾವು ದೊಡ್ಡವರು ಮನಗಾಣುತ್ತಿಲ್ಲ.

ಹಾಗೆ ಮನಗಂಡಿದ್ದರೂ, ಹಳೆಯ ಪರಿವಿಡಿ­ಗಳನ್ನಿಟ್ಟು ನೋಡುತ್ತಿದ್ದೇ­ವಲ್ಲವೆ? ಇವೊತ್ತಿನ ಮಕ್ಕಳಿಗಾಗಿ, ಹೊಸಜಗತ್ತನ್ನು ಕಟ್ಟಿಕೊಡುವ ಕೃತಿಗಳು ಬರಬೇಕಿದೆ ಅನಿಸುತ್ತದೆ. ಸಾಧ್ಯವಾದರೆ ನಾನೇ ಬರೆಯ­ಬೇಕೆಂದು­ಕೊಂಡಿದ್ದೇನೆ. ಇವೊತ್ತಿನ ಮಕ್ಕಳ ಕ್ರೇಜ಼ನ್ನು ಅಲ್ಲಗಳೆಯಲಿಕ್ಕೆ, ಹ್ಯಾರೀಪಾಟರನ್ನು ಬಗ್ಗುಬಡಿಯ­ಬಲ್ಲ ಪಂಚತಂತ್ರ ನಮ್ಮಲ್ಲಿದೆ ಅನ್ನುವ ಮಾತು ಹೇಳಲಾಗುತ್ತದೆ! ನಿಜದ ವಿಷಯವೆಂದರೆ, ಇವೊತ್ತು ನಮ್ಮಲ್ಲೊಬ್ಬರೂ ನಮ್ಮದೇ ಪಂಚತಂತ್ರಕ್ಕೆ ತಕ್ಕುದಾದ ಇನ್ನೊಂದನ್ನು ಸದ್ಯದ ಸಂದರ್ಭಕ್ಕೆ ಹೊಂದಿಸಿ ಬರೆಯದಿರುವುದು !

*ಅತಿಯಾದ ಓದು ಬರವಣಿಗೆಗೆ ಸಹಕಾರಿಯಲ್ಲ ಅನ್ನುವ ಮಾತಿದೆ. ವೈಯಕ್ತಿಕವಾಗಿ ಈ ಕುರಿತಂತೆ ನಿಮ್ಮ ಅಭಿಪ್ರಾಯವೇನು? 
ಗೊತ್ತಿಲ್ಲ ಅನ್ನುವುದು ಈ ಕ್ಷಣದ ಉತ್ತರ. ಓದುವುದರ ಬಗ್ಗೆ ನನ್ನ ಯಾವ ತಗಾದೆಯೂ ಇಲ್ಲ. ಆದರೆ, ಈ ಊರು ಮತ್ತು ಕೆಲಸ ನನ್ನನ್ನು ಹೆಚ್ಚು ಓದಗೊಡುವುದಿಲ್ಲ ಅಷ್ಟೆ. ಇನ್ನು ಪಂಪನಿಂದ ಮೊದಲುಗೊಂಡು ಓದುತ್ತ ಕುಳಿತರೆ, ನಾನು ಬರೆಯುವುದು ಯಾವಾಗ ಮತ್ತು ಹೇಗೆ? ಇದು ಯಾವತ್ತೂ ನನ್ನನ್ನು ಕಾಡಿರುವ ಸಾಹಿತ್ಯ-ಸಂದಿಗ್ಧ.                      

ಸಂದರ್ಶನ: ಸಂದೀಪ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT