ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನೊಬ್ಬ ಸಿನೆಮಾ ಕೃಷಿಕ

Last Updated 7 ಡಿಸೆಂಬರ್ 2012, 5:16 IST
ಅಕ್ಷರ ಗಾತ್ರ

ನಿರ್ದೇಶಕ ಪ್ರೇಮ್, ನಟ ಪ್ರೇಮ್ ಆಗಿ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ನಾಲ್ಕು ವರ್ಷಗಳ ಹಿಂದೆ ತಮ್ಮದೇ ನಿರ್ದೇಶನದಲ್ಲಿ `ಪ್ರೀತಿ ಏಕೆ ಭೂಮಿ ಮೇಲಿದೆ' ಚಿತ್ರದಲ್ಲಿ ನಾಯಕನ ಪಟ್ಟ ಅಲಂಕರಿಸಿದ್ದ ಅವರು,  ಮಹೇಶ್ ಬಾಬು ನಿರ್ದೇಶನದಲ್ಲಿ ನಟಿಸಿರುವ `ಪ್ರೇಮ್ ಅಡ್ಡಾ' ಈ ವಾರ ತೆರೆಕಾಣುತ್ತಿದೆ. ಇದು ತಮಿಳಿನ ಯಶಸ್ವಿ ಚಿತ್ರ `ಸುಬ್ರಮಣ್ಯಪುರಂ'ನ ರೀಮೇಕ್.

ನಾಯಕನಾಗಿ ಮೊದಲ ಚಿತ್ರದ ಸೋಲು, ನಿರ್ದೇಶಕನಾಗಿ `ರಾಜ್' ಮತ್ತು `ಜೋಗಯ್ಯ' ಚಿತ್ರಗಳ ವೈಫಲ್ಯಗಳು ಅವರ ಹಿಂದಿವೆ. ಜನರ ಮನಮುಟ್ಟುವಲ್ಲಿ ನಾನು ಸೋತಿರಬಹುದು ಆದರೆ ವ್ಯಾವಹಾರಿಕವಾಗಿ ಇದುವರೆಗೂ ಸೋತಿಲ್ಲ ಎನ್ನುವ ಪ್ರೇಮ್ `ಸಿನಿಮಾ ರಂಜನೆ'ಯೊಂದಿಗೆ ಮಾತುಗಳನ್ನು ಹಂಚಿಕೊಂಡರು.

ನಾಯಕರಾಗಿ ಒಂದು ಸೋಲು ಅನುಭವದಲ್ಲಿದೆ. ಈಗ `ಪ್ರೇಮ್ ಅಡ್ಡಾ' ಚಿತ್ರದ ಬಗ್ಗೆ ನಿರೀಕ್ಷೆ ಹೇಗಿದೆ?
ದೀರ್ಘಕಾಲದ ಬಳಿಕ ಮತ್ತೆ ನಟಿಸುತ್ತಿದ್ದೇನೆ. ನಿರೀಕ್ಷೆಗಿಂತಲೂ ಮಿಗಿಲಾಗಿ ಇರುವುದು ಜನರನ್ನು ತಲುಪುವ ಗುರಿ. ಏಕೆಂದರೆ ಇದು ಪ್ರೇಮ್ ಚಿತ್ರವಲ್ಲ. ಇಲ್ಲಿ ನಾನೊಬ್ಬ ಕಲಾವಿದ ಮಾತ್ರ. ನಿರ್ದೇಶಕ ಮಹೇಶ್‌ಬಾಬು ತಮ್ಮ ಶೈಲಿಗನುಗುಣವಾಗಿ ಸಿನಿಮಾ ಮಾಡಿದ್ದಾರೆ. ಸ್ಟಾರ್ ನಿರ್ದೇಶಕನೆಂಬ ಅಹಂ ಇಲ್ಲದೆ ಸಾಮಾನ್ಯ ಕಲಾವಿದನಾಗಿ ನಟಿಸಿದ್ದೇನೆ.

`ಪ್ರೀತಿ ಏಕೆ ಭೂಮಿ ಮೇಲಿದೆ' ಕಥೆಯೊಂದನ್ನು ರಿಯಾಲಿಸ್ಟಿಕ್ ಆಗಿ ತೆರೆ ಮೇಲೆ ತರುವ ಪ್ರಯತ್ನವಾಗಿತ್ತು. ಅಲ್ಲಿ ನಾಯಕನ ವಿಜೃಂಭಣೆ ಇರಲಿಲ್ಲ. ಬಹುಶಃ ಸೋಲಿಗೆ ಅದೂ ಒಂದು ಕಾರಣವಿರಬಹುದು. ಆದರೆ `ಪ್ರೇಮ್ ಅಡ್ಡಾ'ದಲ್ಲಿ ಪ್ರೇಕ್ಷಕನಿಗೆ ಏನು ಬೇಕೋ ಎಲ್ಲವೂ ಇದೆ. ಕಲ್ಲು ಮನಸ್ಸಿನವರಲ್ಲೂ `ಜೋಗಿ' ಚಿತ್ರ ಕಣ್ಣೀರು ತರಿಸಬಲ್ಲದು ಎಂದು ಹೇಳಿದ್ದೆ.

ಹಾಗೆಯೇ ಈ ಚಿತ್ರ ಕೂಡ ಪ್ರೇಕ್ಷಕನನ್ನು ಕಾಡುತ್ತದೆ. ತಮಿಳು ಮೂಲಚಿತ್ರಕ್ಕಿಂತ ನಮ್ಮ ನೇಟಿವಿಟಿಗೆ ತಕ್ಕಂತೆ ಸಾಕಷ್ಟು ಬದಲಾವಣೆಗಳನ್ನು ಮಾಡಿದ್ದೇವೆ. ಅದರಲ್ಲಿ ಎರಡು ಹಾಡುಗಳು ಮಾತ್ರವಿದ್ದರೆ, ಇಲ್ಲಿ ಐದು ಹಾಡು ಮತ್ತು  ಹೊಡೆದಾಟದ ಸನ್ನಿವೇಶಗಳಿವೆ. ಎರಡನೇ ಭಾಗದಲ್ಲಿ ಅನೇಕ ಬದಲಾವಣೆಗಳಿವೆ. ಹಾಡುಗಳು ಸೂಪರ್ ಹಿಟ್ ಆಗಿರುವುದರಿಂದ ಜನ ಚಿತ್ರವನ್ನು ಒಪ್ಪಿಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ. ತಮಿಳಿನಲ್ಲಿ ಯು/ಎ ಪ್ರಮಾಣಪತ್ರ ನೀಡಲಾಗಿತ್ತು. ಆದರೆ ನಮಗೆ `ಎ' ಪ್ರಮಾಣ ಪತ್ರ ಸಿಕ್ಕಿದೆ. ಅದೊಂದು ಬೇಸರವಿದೆ.

ಮತ್ತೆ ನಾಯಕರಾಗುವ ಪ್ರಯತ್ನ...?
`ಪ್ರೀತಿ ಏಕೆ...' ಚಿತ್ರದ ಬಳಿಕ ನಾಯಕನಾಗಿ ನಟಿಸುವಂತೆ ಹಲವಾರು ಕಥೆಗಳು ನನ್ನ ಬಳಿ ಬಂದವು. ದೊಡ್ಡ ದೊಡ್ಡ ನಿರ್ದೇಶಕರು ಸಹ ಕೇಳಿದರು. ಆದರೆ ಯಾವುದೂ ಇಷ್ಟವಾಗಿರಲಿಲ್ಲ. ಅಲ್ಲದೆ ಆಗ `ರಾಜ್' ಮತ್ತು `ಜೋಗಯ್ಯ' ಚಿತ್ರಗಳಿಗೆ ಕಮಿಟ್ ಆಗಿದ್ದೆ. ಹೀಗಾಗಿ ನಟಿಸಲು ಆಗಿರಲಿಲ್ಲ. ನಿರ್ಮಾಪಕ, ಸ್ನೇಹಿತ ಮುರಳಿ ಕೃಷ್ಣ `ಸುಬ್ರಮಣ್ಯಪುರಂ' ಅನ್ನು ಮಾಡೋಣ ಎಂದರು. ಸಿನಿಮಾ ನನಗೆ ಇಷ್ಟವಾಗಿತ್ತು.

ಮೂರು ವರ್ಷದ ಹಿಂದೆಯೇ ಅದರ ತಯಾರಿ ನಡೆದಿತ್ತು. ಗೆಳೆಯ ಮಹೇಶ್‌ಬಾಬು ಇದನ್ನು ನಿರ್ದೇಶಿಸಲಿ ಎಂಬುದು ನನ್ನ ಅಪೇಕ್ಷೆಯಾಗಿತ್ತು. ಅವರಿಗೂ ಈ ಬಗೆಯ ಸಿನಿಮಾ ಹೊಸತು. ಈಗ ನಟನಾಗಿ ಇನ್ನೂ ಎರಡು ಚಿತ್ರಗಳು ಕೈಯಲ್ಲಿವೆ. ಸ್ವಂತ ನಿರ್ಮಾಣದಲ್ಲಿ ಒಂದು ಚಿತ್ರ ತಯಾರಾಗುತ್ತಿದೆ. ಎಸ್.ನಾರಾಯಣ್ ಹೇಳಿದ್ದ ಕಥೆಯೊಂದು ಇಷ್ಟವಾಗಿದೆ. ಮುಂದೆ ಅದನ್ನೂ ಮಾಡುತ್ತೇನೆ. ಆದರೆ ರೀಮೇಕ್ ಸಿನಿಮಾ ಮಾಡುವುದಿಲ್ಲ.

ಶೀರ್ಷಿಕೆ ಕುರಿತ ಕಿತ್ತಾಟ ಜಾಸ್ತಿಯಾಯಿತಲ್ಲವೆ?
`ಅಡ್ಡಾ' ಮತ್ತು `ಡವ್' ಎರಡೂ ಶೀರ್ಷಿಕೆಗಳು ಒಂಬತ್ತು ವರ್ಷಗಳಿಂದ ನನ್ನ ಬಳಿ ಇದ್ದವು. `ಕರಿಯ' ಚಿತ್ರ ಮುಗಿದಾಗಲೇ ನನ್ನ ಮುಂದಿನ ಚಿತ್ರ `ಅಡ್ಡಾ' ಎಂದಾಗಿತ್ತು. ಆದರೆ ಕೆಲ ಕಾರಣಗಳಿಂದ ಅದು ಸೆಟ್ಟೇರಿರಲಿಲ್ಲ. `ಜೋಗಯ್ಯ' ಚಿತ್ರೀಕರಣದಲ್ಲಿ ಬಿಜಿಯಾಗಿದ್ದಾಗ ಶೀರ್ಷಿಕೆಯ ಹಕ್ಕನ್ನು ನವೀಕರಿಸಲು ಸಾಧ್ಯವಾಗದೆ ಬೇರೆಯವರ ಪಾಲಾಯಿತು.

ಮುಂದೆ ನಡೆದದ್ದು ರಾಜಕೀಯ. `ಪ್ರೇಮ್ ಅಡ್ಡಾ' ಎಂಬ ಶೀರ್ಷಿಕೆ ತೆಗೆದುಕೊಳ್ಳುವಾಗಲೂ, ತೆಗೆದುಕೊಂಡ ಬಳಿಕವೂ ತೊಂದರೆಗಳನ್ನು ಎದುರಿಸಬೇಕಾಯಿತು. ನನ್ನ ಹೆಸರನ್ನು ಹಾಳು ಮಾಡುವ ಪ್ರಯತ್ನ ನಡೆಯಿತು. ವಾಣಿಜ್ಯ ಮಂಡಳಿಗೆ ಹಲವು ಬಾರಿ ಸಮಸ್ಯೆ ಬಗೆಹರಿಸುವಂತೆ ಕೇಳಿಕೊಂಡರೂ ಸ್ಪಂದಿಸಿರಲಿಲ್ಲ. ಅನಿವಾರ್ಯವಾಗಿ ಕೋರ್ಟ್ ಮೆಟ್ಟಿಲು ಹತ್ತುವಂತಾಯಿತು.

ಅಂತೂ ವಾಣಿಜ್ಯ ಮಂಡಳಿ ಸಭೆ ನಡೆಸಿದಾಗ ಒಂದೇ ಗಂಟೆಯಲ್ಲಿ ಪರಿಹಾರವಾಯಿತು. ಮೊದಲೇ ಈ ಕೆಲಸ ಮಾಡಬಹುದಿತ್ತಲ್ಲವೇ? ನಂತರ ಶೀರ್ಷಿಕೆ ನೋಂದಣಿ ಕಾಯ್ದೆಯಂತೆ ದೆಹಲಿಯಲ್ಲಿ ಕಾನೂನುಬದ್ಧವಾಗಿ ಮಾಡಿಸಿಕೊಂಡಿದ್ದ `ಡವ್' ಚಿತ್ರದ ಶೀರ್ಷಿಕೆಯ ಹಕ್ಕನ್ನು ಸ್ವತಃ ನಾನೇ ನಿರ್ಮಾಪಕ ಬಿ.ಕೆ.ಶ್ರೀನಿವಾಸ್ ಅವರ ಮನೆಗೆ ಹೋಗಿ ಕೊಟ್ಟುಬಂದೆ. ನನ್ನಂಥ ನಿರ್ದೇಶಕನಿಗೇ ಈ ಗತಿಯಾದರೆ, ಹೊಸಬರ ಪಾಡೇನು?

ನಿರ್ದೇಶಕರಾಗಿ ಸತತ ಎರಡು ಚಿತ್ರಗಳ ಸೋಲು ಹಿನ್ನಡೆಯುಂಟು ಮಾಡಿದೆಯೇ?
`ಕರಿಯ', `ಎಕ್ಸ್‌ಕ್ಯೂಸ್ ಮಿ', `ಜೋಗಿ' ಚಿತ್ರಗಳು ನೂರು ದಿನ ಓಡಿದವು. ಜನರ ಮನಸ್ಸಿನೊಳಗೂ ಅವು ಪ್ರಭಾವ ಬೀರಿದವು. `ರಾಜ್' ಮತ್ತು `ಜೋಗಯ್ಯ' ಪ್ರೇಕ್ಷಕನ ಮನಗೆಲ್ಲುವಲ್ಲಿ ವಿಫಲವಾದವು. ಆದರೆ ವ್ಯಾವಹಾರಿಕವಾಗಿ ನಾನು ಎಂದಿಗೂ ಸೋತಿಲ್ಲ. ನನ್ನ ನಂಬಿದ ನಿರ್ಮಾಪಕನಿಗೆ ಎಳ್ಳಷ್ಟೂ ನಷ್ಟವಾಗಿಲ್ಲ, ಎಲ್ಲರೂ ಲಾಭವನ್ನೇ ಗಳಿಸಿದ್ದಾರೆ.

`ರಾಜ್' ಪುನೀತ್‌ರಲ್ಲಿನ ಕಲಾವಿದನನ್ನು ವಿಭಿನ್ನವಾಗಿ ತೋರಿಸುವ ಪ್ರಯತ್ನ. ಚಿತ್ರ 150 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. 100 ದಿನ ಓಡಲಿಲ್ಲ ನಿಜ. ಆದರೆ ಅಷ್ಟು ದಿನದ ಗಳಿಕೆ ಆರಂಭದಲ್ಲಿಯೇ ಸಿಕ್ಕಿದೆ. ಪ್ರೇಮ್ ಎಂದಾಗ ತಾಯಿ ಸೆಂಟಿಮೆಂಟ್ ನಿರೀಕ್ಷೆ ಸಹಜ. ಅಲ್ಲದೆ `ಜೋಗಯ್ಯ' ನೋಡುವಾಗ ಪ್ರೇಕ್ಷಕನ ಮನದಲ್ಲಿ `ಜೋಗಿ' ಇದ್ದ.

ನನ್ನ ಉದ್ದೇಶ ಇದ್ದದ್ದು ಕೆಟ್ಟಜಾಲದಲ್ಲಿ ಸಿಕ್ಕಿಬಿದ್ದ ವ್ಯಕ್ತಿಯೊಬ್ಬ ಅದರಿಂದ ಹೊರಬಂದು ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಬಲ್ಲ ಎಂಬುದನ್ನು ತೋರಿಸುವುದು. ಜನರಿಗೆ ನೀತಿ ಬೋಧನೆ, ಉಪದೇಶ ಇಷ್ಟವಾಗುವುದಿಲ್ಲ. ಹೀಗಾಗಿ ಅದು ಪರಿಣಾಮಕಾರಿಯಾಗಲಿಲ್ಲ. 249 ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ `ಜೋಗಯ್ಯ' ಮೊದಲ ವಾರದಲ್ಲಿ ಮೈಸೂರು ಒಂದರಲ್ಲೇ 1.60 ಕೋಟಿ ರೂ ಗಳಿಕೆಯಾದರೆ, ಬಿಕೆಟಿ ವಲಯದಲ್ಲಿ 5.16 ಕೋಟಿ ರೂ ಗಳಿಸಿತ್ತು.

ಪ್ರೇಮ್ ಎಂದರೆ ಮಿನಿಮಮ್ ಗ್ಯಾರಂಟಿ ಎಂಬ ಕಾರಣಕ್ಕೆ ನನ್ನ ಬಳಿ ಸಿನಿಮಾ ಮಾಡಲು ಬರುತ್ತಾರೆ. ನಾನಿಲ್ಲಿ ರೈತ. ಉತ್ತಿ, ಬಿತ್ತಿ ಫಸಲು ತೆಗೆದು ಮಾರಾಟ ಮಾಡುವ ರೈತ, ಒಳ್ಳೆ ಬೆಲೆ ಸಿಗಲಿಲ್ಲ ಎಂದು ಕೃಷಿ ಮಾಡುವುದನ್ನೇ ಬಿಡುತ್ತಾನೆಯೇ? ಮುಂದೆ ಒಳ್ಳೆ ಫಸಲು ಬರುತ್ತದೆ, ಬೆಲೆಯೂ ಸಿಗುತ್ತದೆ ಎಂಬ ನಂಬಿಕೆ ನನ್ನದು.

ನಿರ್ದೇಶಕರಾಗಿ ಮುಂದಿನ ಚಿತ್ರಗಳು?
ನಿರ್ಮಾಪಕ ಸೌಂದರ್ಯ ಜಗದೀಶ್ ಅವರಿಗೆ ಸಿನಿಮಾ ಮಾಡಿಕೊಡುವುದಾಗಿ ಮೂರೂವರೆ ವರ್ಷದ ಹಿಂದೆಯೇ ಮಾತುಕೊಟ್ಟಿದ್ದೆ. ಅದರ ಕೆಲಸಗಳು ಶುರುವಾಗಿವೆ. ಇನ್ನು ಸುದೀಪ್ ಜೊತೆಗಿನ ಹೊಸ ಚಿತ್ರ ಮಾರ್ಚ್‌ನಲ್ಲಿ ಕೈಗೆತ್ತಿಕೊಳ್ಳಲಿದ್ದೇನೆ. ಇದರ ಗುಟ್ಟು ಬಿಟ್ಟುಕೊಡುವುದಿಲ್ಲ. ಅತ್ಯಂತ ವಿಶಿಷ್ಟ ಸಿನಿಮಾ ಎಂಬುದನ್ನು ಮಾತ್ರ ಹೇಳಬಲ್ಲೆ.

ಪ್ರೇಮ್‌ಗೆ ಮತ್ತೊಂದು ಹೆಸರು ಗಿಮಿಕ್ ಎಂದಾಗಿದೆಯಲ್ಲ?
ಗಿಮಿಕ್ ಎಂದರೆ ಏನು ಎಂಬುದು ಇದುವರೆಗೂ ಅರ್ಥವಾಗಿಲ್ಲ. ಚಿತ್ರದ ಪ್ರಚಾರ ತಂತ್ರವನ್ನು ಗಿಮಿಕ್ ಎಂದು ಕರೆಯುವುದಾದರೆ, ಅಮೀರ್‌ಖಾನ್ ತಮ್ಮ ಚಿತ್ರದ ಪ್ರಚಾರಕ್ಕಾಗಿ ಅಲ್ಲವೇ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದು. ಅದನ್ನೇಕೆ ಗಿಮಿಕ್ ಎನ್ನುವುದಿಲ್ಲ. ಅವರು `ಘಜಿನಿ' ಚಿತ್ರದ ಪ್ರಚಾರಕ್ಕಾಗಿ ಶೇವಿಂಗ್ ಕೂಡ ಮಾಡಿದ್ದರು. ಅದು ಗಿಮಿಕ್ ಅಲ್ಲವೇ? ಒಂದೇ ಉತ್ಪನ್ನದ ಪ್ರಚಾರಕ್ಕಾಗಿ ನೂರಾರು ಬಗೆಯ ಜಾಹೀರಾತು ನೀಡುವುದಿಲ್ಲವೇ? ನಿಜ.

ಪ್ರಚಾರಕ್ಕಾಗಿ ವಿಭಿನ್ನ ಮಾರ್ಗಗಳನ್ನು ಅನುಸರಿಸುತ್ತೇನೆ. ಜನರನ್ನು ಸೆಳೆಯಬೇಕು. ಇಂಥ ಯೋಜನೆ ಇಲ್ಲದೆ ನಾನು ಪ್ರಚಾರಕ್ಕೆ ಕೈ ಹಾಕುವುದಿಲ್ಲ. ಜನರನ್ನು ಸೆಳೆಯಲು ಇದು ಅನಿವಾರ್ಯ. ಅದರಲ್ಲಿ ಅಶ್ಲೀಲ ಅಥವಾ ಮನಸ್ಸಿಗೆ ನೋವುಂಟು ಮಾಡುವ ಅಂಶಗಳಿದ್ದರೆ ತಪ್ಪಾಗುತ್ತದೆ. ಇದೆಲ್ಲವೂ ಪ್ರಚಾರದ ಭಾಗವೇ ಹೊರತು ಗಿಮಿಕ್ ಅಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT