ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಮಪತ್ರ ಪರಿಶೀಲನೆ; ಆಕ್ಷೇಪ, ಸ್ಪಷ್ಟನೆ

ಮಾಯಕೊಂಡ: ಶಿವಮೂರ್ತಿ, ಬಸವರಾಜ ನಾಯ್ಕ ವಿರುದ್ಧದ ಆರೋಪಕ್ಕೆ ಸಿಗದ ಮನ್ನಣೆ
Last Updated 19 ಏಪ್ರಿಲ್ 2013, 12:34 IST
ಅಕ್ಷರ ಗಾತ್ರ

ದಾವಣಗೆರೆ: ವಿಧಾನಸಭಾ ಚುನಾವಣೆಗೆ ಸಲ್ಲಿಸಲಾದ ನಾಮಪತ್ರಗಳ ಪರಿಶೀಲನೆ ಮತ್ತು ಚರ್ಚೆ ಗುರುವಾರ ನಗರದ ಉಪ ವಿಭಾಗಾಧಿಕಾರಿ ಕಚೇರಿ, ಪಾಲಿಕೆ ಕಚೇರಿಯಲ್ಲಿ ನಡೆಯಿತು.

ಮಾಯಕೊಂಡ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಇಬ್ಬರು ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತಗೊಂಡಿವೆ.

ಕಾಂಗ್ರೆಸ್‌ನಿಂದ ಬಿ-ಫಾರಂ ಇಲ್ಲದೆ ನಾಮಪತ್ರ ಸಲ್ಲಿಸಿದ್ದ ರಾಘವೇಂದ್ರ ನಾಯ್ಕ, ಅಂಬೇಡ್ಕರ್ ಜನತಾ ಪಕ್ಷದಿಂದ ನಾಮಪತ್ರ ಸಲ್ಲಿಸಿದ್ದ ಹೊನ್ನಾಳಿ ಕೆಜೆಪಿ ಅಭ್ಯರ್ಥಿ ಎಂ.ಪಿ. ರೇಣುಕಾಚಾರ್ಯ ಸಹೋದರ ಡಾ.ಎಂ.ಪಿ. ದಾರುಕೇಶ್ವರಯ್ಯ ಅವರ ಜಾತಿ ಪ್ರಮಾಣಪತ್ರ ಸಮರ್ಪಕ ಆಗಿರದ ಕಾರಣಕ್ಕೆ ತಿರಸ್ಕೃತಗೊಂಡವು.

ಉಳಿದಂತೆ ಈ ಕ್ಷೇತ್ರದಿಂದ ಸಲ್ಲಿಕೆಯಾದ 69 ನಾಮಪತ್ರಗಳ ಪೈಕಿ ಕೆಲವರು ಹೆಚ್ಚುವರಿ (ಕೆಲವು ಪಕ್ಷದ ಹೆಸರಿನಲ್ಲಿ ಹಾಗೂ ಪಕ್ಷೇತರರಾಗಿ) ಸಲ್ಲಿಸಿದ್ದ ಹಲವಾರು ನಾಮಪತ್ರಗಳನ್ನು ತಿರಸ್ಕರಿಸಲಾಯಿತು.
    
ಹೆಚ್ಚು ಸಂಖ್ಯೆಯ ಬಂಡಾಯ ಅಭ್ಯರ್ಥಿಗಳನ್ನು ಹೊಂದಿರುವ ಆಯಕಟ್ಟಿನ ಕ್ಷೇತ್ರವಾದ ಮಾಯಕೊಂಡ ವಿಧಾನಸಭಾ ಕ್ಷೇತ್ರದ ನಾಮಪತ್ರಗಳ ಪರಿಶೀಲನಾ ಸಭೆಯತ್ತಲೇ ಎಲ್ಲರ ಕಣ್ಣೂ ನೆಟ್ಟಿತ್ತು. ಕೆಜೆಪಿಯಿಂದ ಬಿ- ಫಾರಂ ಪಡೆದ ಇಬ್ಬರು ಅಭ್ಯರ್ಥಿಗಳ ಗೊಂದಲ ದೀರ್ಘಕಾಲ ಚರ್ಚೆಗೊಳಗಾಯಿತು.

- ತಾನು ಮೊದಲು ನಾಮಪತ್ರ ಸಲ್ಲಿಸಿದ್ದೇನೆ. ಯಡಿಯೂರಪ್ಪ ಅವರು ಮೊದಲು ತಮಗೆ ಬಿ- ಫಾರಂ ಕೊಟ್ಟಿದ್ದಾರೆ. ಆದ್ದರಿಂದ ಪ್ರೊ.ಲಿಂಗಣ್ಣ ಅವರ ನಾಮಪತ್ರ ಅಸಿಂಧುವಾಗುತ್ತದೆ ಎಂದು ಮೊದಲು ನಾಮಪತ್ರ ಸಲ್ಲಿಸಿದ್ದ ಎಲ್. ಕೊಟ್ರೇಶ್ ನಾಯ್ಕ ಹೇಳಿದರು.

ಕೊಟ್ರೇಶ್‌ಗೆ ಬಿ-ಫಾರಂ ಸಿಕ್ಕಿರುವುದು ನಿಜ. ಆದರೆ, ಕೊನೆಕ್ಷಣದಲ್ಲಿ ಪಕ್ಷದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ತಮ್ಮ ಹೆಸರಿಗೆ ಬಿ-ಫಾರಂನ್ನು ಪತ್ರದ ಸಹಿತ ನೀಡಿದ್ದಾರೆ. ಆದ್ದರಿಂದ ಕೆಜೆಪಿಯಿಂದ ತಾವು ಸ್ಪರ್ಧಿಸುತ್ತಿರುವುದಾಗಿ ಲಿಂಗಣ್ಣ ಉಪ ವಿಭಾಗಾಧಿಕಾರಿ ಡಾ.ನಾಗರಾಜ್ ಅವರಿಗೆ ಸ್ಪಷ್ಟಪಡಿಸಿದರು. ಕೊನೆಗೂ ಕೆಜೆಪಿ ಅಭ್ಯರ್ಥಿ ಸ್ಥಾನ ಲಿಂಗಣ್ಣ ಅವರದಾಯಿತು.

ಬಿಜೆಪಿ ಅಭ್ಯರ್ಥಿ ಎಂ. ಬಸವರಾಜ ನಾಯ್ಕ ನಾಮಪತ್ರದ ವಿರುದ್ಧ ರೈತ ಸಂಘದ ಅಭ್ಯರ್ಥಿ ಚಿನ್ನಸಮುದ್ರ ಶೇಖರ ನಾಯ್ಕ ಅವರು ಆಕ್ಷೇಪ ವ್ಯಕ್ತಪಡಿಸಿದರು.

ಶಾಸಕರ ನಿಧಿಯನ್ನು ತಮ್ಮದೇ ಶಿಕ್ಷಣ ಸಂಸ್ಥೆಗಳಿಗೆ ಬಳಸಿಕೊಂಡು ದುರುಪಯೋಗ ಮಾಡಿದ ಆರೋಪ ಶಾಸಕರ ಮೇಲಿದೆ. ಆದ್ದರಿಂದ ಅವರ ನಾಮಪತ್ರ ಅಸಿಂಧುಗೊಳಿಸಬೇಕು ಎಂದು ಹೇಳಿದರು.

ಬಸವರಾಜ ನಾಯ್ಕ ಅವರದು ಅನುದಾನಿತ ಶಿಕ್ಷಣ ಸಂಸ್ಥೆ. ಅಲ್ಲದೇ ಅದು ಸಾರ್ವಜನಿಕ ಬಳಕೆಗೆ ಸಂಬಂಧಿಸಿದೆ. ಆ ಹಣವನ್ನು ವೈಯಕ್ತಿಕ ಬಳಕೆ ಮಾಡಿಲ್ಲ. ಶಾಸಕರ ನಿಧಿ ಬಳಕೆ ಜಿಲ್ಲಾಧಿಕಾರಿ ವಿವೇಚನೆಗೆ ಸೇರಿದ್ದು. ಈ ಕುರಿತು ದೂರು ನೀಡಿದ್ದರೆ ಚುನಾವಣಾ ಆಯೋಗ ಪರಿಶೀಲಿಸುತ್ತಿತ್ತು. ಚುನಾವಣಾ ಸಂದರ್ಭದಲ್ಲಿ ಅವರನ್ನು ಸ್ಪರ್ಧೆಯಿಂದ ಅನರ್ಹಗೊಳಿಸಲು ಚುನಾವಣಾಧಿಕಾರಿಗೆ ಅವಕಾಶವಿಲ್ಲ ಎಂದು ನಾಯ್ಕ ಪರ ವಕೀಲ ಡಿ.ಪಿ. ಬಸವರಾಜ್ ವಿವರಣೆ ನೀಡಿದರು.

ಕಾಂಗ್ರೆಸ್ ಅಭ್ಯರ್ಥಿ ಶಿವಮೂರ್ತಿ ನಾಯ್ಕ ನಾಮಪತ್ರದ ಬಗ್ಗೆ ತೊಳಹುಣಸೆಯ ಓಂಕಾರ ನಾಯ್ಕ ಅವರು ಆಕ್ಷೇಪ ವ್ಯಕ್ತಪಡಿಸಿದರು.

ಶಿವಮೂರ್ತಿ ನಾಯ್ಕ ಅವರ ವಿರುದ್ಧ ಹಲವಾರು ಪ್ರಕರಣಗಳು ದಾಖಲಾಗಿವೆ. ಆದರೆ, ಅವರು ಅದನ್ನು ನಾಮಪತ್ರದಲ್ಲಿ ನಮೂದಿಸಿಲ್ಲ. ಈ ನಾಮಪತ್ರ ದೋಷಪೂರಿತವಾಗಿದೆ ಎಂದರು.

ಶಿವಮೂರ್ತಿ ನಾಯ್ಕ ಅವರ ವಕೀಲರು ಸ್ಪಷ್ಟನೆ ನೀಡಿ, ಏ. 17ರಂದು ಸಲ್ಲಿಸಲಾದ ನಾಮಪತ್ರದಲ್ಲಿ ಶಿವಮೂರ್ತಿ ವಿರುದ್ಧ ದಾಖಲಾದ ಪ್ರಕರಣಗಳ ವಿವರ ನೀಡಲಾಗಿದೆ. ಅವು ಯಾವುವೂ ಸಾಬೀತಾಗಿಲ್ಲ. ಕೆಲವು ಪ್ರಕರಣಗಳು ಈಗಾಗಲೇ ಇತ್ಯರ್ಥಗೊಂಡಿವೆ. ಕೆಲವು ವಿಚಾರಣೆ ಹಂತದಲ್ಲಿವೆ. ಇದರಿಂದ ಶಿವಮೂರ್ತಿ ಅಭ್ಯರ್ಥಿ ಸ್ಥಾನಕ್ಕೆ ಅಡ್ಡಿಯಾಗುವ ಅಂಶಗಳು ಇಲ್ಲ ಎಂದು ವಿವರಿಸಿದರು.

ನಾಮಪತ್ರ ಸಲ್ಲಿಸಿದ್ದ 36 ಅಭ್ಯರ್ಥಿಗಳು, ಅವರ ಪ್ರತಿನಿಧಿಗಳು, ವಕೀಲರು ಹಾಜರಿದ್ದರು.

ದಕ್ಷಿಣ ವಿಧಾನಸಭಾ ಕ್ಷೇತ್ರ
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿ ಪಾಲಿಕೆ ಆಯುಕ್ತರ ಕಚೇರಿಯಲ್ಲಿ ನಾಮಪತ್ರ ಪರಿಶೀಲನಾ ಸಭೆ ನಡೆಯಿತು.

ಬಿಜೆಪಿ ಅಭ್ಯರ್ಥಿ ಬಿ. ಲೋಕೇಶ್ ಅವರು ಪಾಲಿಕೆ ಸದಸ್ಯರಾಗಿದ್ದ ಅವಧಿಯಲ್ಲಿ ಗ್ಯಾಸ್ ಏಜೆನ್ಸಿ ಹೊಂದಿದ್ದರು. ಅದು ಪ್ರಜಾ ಪ್ರತಿನಿಧಿ ಕಾಯ್ದೆಗೆ ವಿರುದ್ಧವಾಗಿದೆ. ಆದ್ದರಿಂದ ಅವರ ನಾಮಪತ್ರ ಅಸಿಂಧುಗೊಳಿಸಬೇಕು ಎಂದು ಎಂ.ಜಿ. ತಿಪ್ಪೇಸ್ವಾಮಿ ಆಕ್ಷೇಪಿಸಿದರು.
ಅಭ್ಯರ್ಥಿ ಬಿ. ಲೋಕೇಶ್ ಸ್ಪಷ್ಟನೆ ನೀಡಿ, ಏಜೆನ್ಸಿ ಲಾಭದಾಯಕ ಹುದ್ದೆ ಅಲ್ಲ. ಅದು ತಮ್ಮ ಹೆಸರಿನಲ್ಲಿಯೂ ಇಲ್ಲ. ನಮ್ಮ ತಂದೆಯವರ ಹೆಸರಿನಲ್ಲಿದೆ. ಆ ಸಂಸ್ಥೆಯನ್ನು ನಡೆಸಿಕೊಂಡು ಹೋಗುತ್ತಿದ್ದೇನೆ ಅಷ್ಟೇ ಎಂದು ಸ್ಪಷ್ಟಪಡಿಸಿದರು.

ಅದಕ್ಕೆ ಪ್ರತಿಕ್ರಿಯಿಸಿದ ಚುನಾವಣಾಧಿಕಾರಿ ಸಂಜಯ್ ಶೆಟ್ಟಣ್ಣನವರ್, ಗ್ಯಾಸ್ ಏಜೆನ್ಸಿ ಕಂಪೆನಿ ಕಾಯ್ದೆಗಳ ಅಡಿಯಲ್ಲಿ ನೋಂದಣಿಯಾಗಿದೆ. ಅದನ್ನು ರದ್ದುಗೊಳಿಸುವ ಅಧಿಕಾರ ತಮ್ಮ ವ್ಯಾಪ್ತಿಯಲ್ಲಿ ಇಲ್ಲ. ಅದಕ್ಕೆ ತಾವು ಕೋರ್ಟ್ ಮೊರೆ ಹೋಗಬಹುದು ಎಂದರು.

ಕಾಂಗ್ರೆಸ್ ಅಭ್ಯರ್ಥಿ ಶಾಮನೂರು ಶಿವಶಂಕರಪ್ಪ ಅವರು ನಾಮಪತ್ರ ಸಲ್ಲಿಸುವ ವೇಳೆ ಚುನಾವಣಾಧಿಕಾರಿ ಕಚೇರಿಯೊಳಗೆ ಸುಮಾರು 10 ಜನರ ಜತೆ ಬಂದಿದ್ದಾರೆ. ನಿಯಮ ಪ್ರಕಾರ ನಾಲ್ಕು ಜನ ಬರಬಹುದು. ಇಲ್ಲಿ ನಿಯಮ ಉಲ್ಲಂಘನೆ ಆಗಿದೆ ಎಂದು ಪಕ್ಷೇತರ ಅಭ್ಯರ್ಥಿ ಸುಬಾನ್ ಖಾನ್ ಆಕ್ಷೇಪ ವ್ಯಕ್ತಪಡಿಸಿದರು.

ಶಿವಶಂಕರಪ್ಪ ಪರ ಸಭೆಗೆ ಹಾಜರಾಗಿದ್ದ ಅಥಣಿ ಎಸ್. ವೀರಣ್ಣ ಅವರು, ನಾವು ನಾಲ್ಕು ಜನ ಮಾತ್ರ ಬಂದ್ದ್ದಿದೇವೆ. ನಿಯಮ ಉಲ್ಲಂಘನೆ ಆಗಿಲ್ಲ ಎಂದು ಹೇಳಿದರು.

ಸುಬಾನ್‌ಖಾನ್ ಆಕ್ಷೇಪಕ್ಕೆ ಪ್ರತಿಕ್ರಿಯಿಸಿದ ಚುನಾವಣಾಧಿಕಾರಿ, ಇಲ್ಲಿ ನಾಮಪತ್ರಗಳ ಪರಿಶೀಲನೆ ನಡೆಯುತ್ತಿದೆ. ಅದರ ಬಗ್ಗೆ ಆಕ್ಷೇಪ ತಿಳಿಸಬಹುದು. ನಿಯಮ ಉಲ್ಲಂಘನೆ ಆಗಿದ್ದರೆ ಚುನಾವಣಾ ಆಯೋಗಕ್ಕೆ ಅಥವಾ ಕಾನೂನು- ಶಿಸ್ತು ಸಮಿತಿಗೆ ದೂರು ಸಲ್ಲಿಸಬಹುದು ಎಂದು ಹೇಳಿ ಅವರ ಆಕ್ಷೇಪವನ್ನು ತಳ್ಳಿಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT